ಹಿರಿಯರೆಡೆಗೆ ನಮ್ಮ ನಡಿಗೆ - ಪಡುಬಿದ್ರಿಯ ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದರಿಗೆ ಸನ್ಮಾನ
Posted On:
03-11-2022 08:56PM
ಪಡುಬಿದ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 9ನೇ ವರ್ಷದ ಸಂಪದ 2022 ತಿಂಗಳ ಸಡಗರ ಕಾರ್ಯಕ್ರಮದ ಅಂಗವಾಗಿ ಕಾಪು ತಾಲೂಕು ಘಟಕದ ವತಿಯಿಂದ ನವಂಬರ್ 3ರಂದು ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ಅಂಗವಾಗಿ ಪಡುಬಿದ್ರಿಯ ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಕೆ. ಸದಾನಂದ
ಕೃಷಿಯ ಜೊತೆಗೆ ಮೂರ್ತೆದಾರಿಕೆ, ಹೈನುಗಾರಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ. ನಮ್ಮ ಹಿರಿಯರ ಅನುಭವದ ಪಾಠಗಳು ನಮಗೆ ದಾರಿ ದೀಪವಾಗಿದೆ. ರೈತ ಸಂಘದ ಮೂಲಕ ಹಳ್ಳಿಗಳಲ್ಲಿ ಭೂ ಮಸೂದೆಯ ಬಗ್ಗೆ ಜನರಿಗೆ ತಿಳಿಸುವ ಕಾರ್ಯ, ಮೂರ್ತೆದಾರರ ಸಂಘಟನೆ, ಇತ್ಯಾದಿ ಕಾರ್ಯಗಳಲ್ಲಿ ಭಾಗವಹಿಸಿ,
ಸಾಮಾಜಿಕ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆ ಮೂಲಕ ಹಿಂದಿನಿಂದ ಬಹಳಷ್ಟು ಶ್ರಮವಹಿಸಿ ಕೃಷಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಹಿಂದಿನ ಪೀಳಿಗೆಯ ಅನುಭವಗಳು, ಕಾರ್ಯಗಳು, ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ನಶಿಸಿಹೋಗುತ್ತಿರುವ ಕೃಷಿಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿರುವ ಪಿ. ಕೆ. ಸದಾನಂದರು ನಮಗೆಲ್ಲರಿಗೂ ಆದರ್ಶರು. ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ಪೀಳಿಗೆಗೆ ಇಂತಹ ಸಾಧಕರನ್ನು ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದರು.
ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರಾಮಚಂದ್ರ ಅಚಾರ್ಯ ಇವರನ್ನು ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ,
ಬೆಂಗಳೂರು ತುಳು ಕೂಟ ಅಧ್ಯಕ್ಷ ದಿನೇಶ್ ಹೆಗ್ಡೆ,
ವಿಶು ಕುಮಾರ್ ಶೆಟ್ಟಿ, ಪತ್ರಕರ್ತ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳ್, ಗುರುರಾಜ್ ಪೂಜಾರಿ, ಸುಗಂಧಿ ಶ್ಯಾಮ್, ಕೇಶವ ಅಮೀನ್, ನವೀನ್ ಪೂಜಾರಿ, ಪ್ರಾಣೇಶ್ ಹೆಜಮಾಡಿ, ಭಾಸ್ಕರ, ನೀಲಾನಂದ ನಾಯ್ಕ್, ರಾಜೇಶ್, ಸುಂದರ್, ಸಂಘಟನಾ ಕಾರ್ಯದರ್ಶಿಗಳಾದ ದೀಪಕ್ ಬೀರ, ಕೆ.ಆರ್. ಪಾಟ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ ಸ್ವಾಗತಿಸಿದರು.
ಗೌರವ ಕೋಶಾಧ್ಯಕ್ಷರಾದ ವಿದ್ಯಾಧರ ಪುರಾಣಿಕ್ ವಂದಿಸಿದರು.