ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುತ್ಯಾರು ಸೂರ್ಯ ಚೈತನ್ಯ ಶಾಲೆಯಲ್ಲಿ ಪೋಷಕರ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮ

Posted On: 12-11-2022 09:44PM

ಕಾಪು : ಆನೆಗುಂದಿ ಶ್ರೀ ಸರಸ್ವತೀ ಎಜುಕೇಷನಲ್ ಟ್ರಸ್ಟ್ (ಅಸೆಟ್) ನ ಅಧೀನದಲ್ಲಿರುವ ಕುತ್ಯಾರು ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲಿನಲ್ಲಿ ನವೆಂಬರ್ 12 ರಂದು ಪೋಷಕರ ಸಭೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ , ವಾಗ್ಮಿ ಅಶ್ವತ್ಥ ಭಾರದ್ವಾಜ್ ಕೆ. ಮಾತನಾಡಿ , ವಿದ್ಯಾರ್ಥಿಗಳಲ್ಲಿ ತಮ್ಮ ಮೇಲೆ ದೃಢವಾದ ನಂಬಿಕೆ ಮತ್ತು ಶ್ರದ್ಧೆಯಿದ್ದರೆ ಗುರಿಸಾಧನೆ ಸಾಧ್ಯ. ಮಕ್ಕಳಿಗೆ ಪೋಷಕರು ಕಥೆಗಳ ಮೂಲಕ ಜೀವನ ಮೌಲ್ಯಗಳನ್ನು ಕಲಿಸಬೇಕು. ವಿದ್ಯಾರ್ಥಿಗಳ ಕೌಟುಂಬಿಕ ಪರಿಸರ ಶಿಕ್ಷಣಕ್ಕೆ ಪೂರಕವಾಗಿರಬೇಕು. ಹಿರಿಯರು ಮಾರ್ಗದರ್ಶಕರಾಗಿ ಕಿರಿಯರಿಗೆ ಸಂಸ್ಕಾರಯುತ ಜೀವನವನ್ನು ನೀಡಬೇಕು. ಮನಸ್ಸು ಜಾಗೃತಗೊಂಡರೆ ಕಲಿಸಿದ ಶಿಕ್ಷಣವು ಸಾರ್ಥಕವಾಗುತ್ತದೆ ಎಂದು ಹೇಳಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು ಶುಭ ಹಾರೈಸಿದರು. ಗೌರವ ಸಲಹೆಗಾರ ವಿದ್ವಾನ್ ಶಂಭುದಾಸ ಗುರೂಜಿ, ಟ್ರಸ್ಟ್ ನ ಉಪಾಧ್ಯಕ್ಷ ವಿವೇಕ್ ಆಚಾರ್ಯ ಶಿರ್ವ , ಪ್ರಧಾನ ಕಾರ್ಯದರ್ಶಿ ಗುರುರಾಜ ಆಚಾರ್ಯ , ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೀಪಕ್ ಕಾಮತ್ ಉಪಸ್ಥಿತರಿದ್ದರು.

ಉಪಪ್ರಾಂಶುಪಾಲೆ ಸಂಗೀತಾ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಪ್ರಾಂಶುಪಾಲ ಗುರುದತ್ ಸೋಮಯಾಜಿ ಸ್ವಾಗತಿಸಿ ಪ್ರಸ್ತಾವನೆಗೈದರು. ಮಂಜುನಾಥ್ ಶೇಟ್ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕ ಸುಧೀರ್ ಕೈರಬೆಟ್ಟು ನಿರೂಪಿಸಿ ರಶ್ಮಿ ಗಣೇಶ್ ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಯಿತು.