ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆ : ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದಿಂದ ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮ

Posted On: 25-11-2022 06:28PM

ಕಾಪು : ಯಾವುದೇ ಪ್ರದೇಶದ ಸಾಂಸ್ಕೃತಿಕ ಹಿನ್ನೆಲೆಯ ಚಲನಚಿತ್ರ ವೀಕ್ಷಿಸಿದಾಗ ಅಲ್ಲಿಯ ಚಿತ್ರಣ ನಮ್ಮ ಮುಂದೆ ಹೇಗೆ ಬರುತ್ತದೆಯೋ ಹಾಗೆ ಸಾಹಿತ್ಯದ ಓದುವಿಕೆಯಿಂದ ಕವಿ, ಲೇಖಕರ ಓದು, ಹಿನ್ನೆಲೆ, ಪರಿಸರ ಇತ್ಯಾದಿ ತಿಳಿಯಲು ಸಾಧ್ಯ. ಬರೆಯಲು ಪ್ರತಿಯಬ್ಬರಿಗೂ ಸಾಧ್ಯ. ಪ್ರಯತ್ನ ಪಡದೆ ಯಾವುದೇ ಕಾರ್ಯ ಸಾಧ್ಯವಾಗದು. ಯಾವುದೇ ವಿಷಯವನ್ನು ಬರೆದು, ಓದಿದಾಗ ನಮ್ಮಲ್ಲಿ ಉಳಿಯಲು ಸಾಧ್ಯ. ನಮ್ಮನ್ನು ನಾವು ಪ್ರಯೋಗಕ್ಕೆ ಒಡ್ಡಿದಾಗ ಯಾವುದೇ ಕಾರ್ಯ ಸಾಧ್ಯ. ಮೊದಲ ಅಕ್ಷರದಿಂದ ಯಾರು ಸಾಹಿತಿ ಆಗಿಲ್ಲ. ಓದು, ಬರವಣಿಗೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಬಹುದು. ಸಾಹಿತ್ಯದ ಬಗೆಗಿನ ಒಲವನ್ನು ನಾವೆಲ್ಲರೂ ಬೆಳೆಸೋಣ ಎಂದು ಕಟಪಾಡಿಯ ತೃಷಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ಹೇಳಿದರು.

ಅವರು ಕಾಪು ದಂಡ ತೀರ್ಥ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ಆಯೋಜಿಸಿದ್ದ ಕನ್ನಡ ಮಾಸಾಚರಣೆ - ನವೆಂಬರ್ ತಿಂಗಳ ಸಡಗರ 'ಸಂಪದ - ೨೦೨೨' ಕಾರ್ಯಕ್ರಮದಲ್ಲಿ 'ಶಾಲೆಯತ್ತ ಸಾಹಿತ್ಯ' ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪುಂಡಲಿಕ ಮರಾಠೆ ವಹಿಸಿದ್ದರು. ಈ ಸಂದರ್ಭ ಕಾಪು ತಾಲೂಕು ಘಟಕದ ಕಾರ್ಯದರ್ಶಿ ನೀಲಾನಂದ ನಾಯಕ್, ಕ.ಸಾ.ಪ ಜಿಲ್ಲಾ ಸಮಿತಿಯ ಸದಸ್ಯ ಮಧುಕರ್ ಎಸ್, ಕಾಪು ತಾಲೂಕು ಕ.ಸಾ.ಪ ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ, ದಂಡತೀರ್ಥ ಸಂಸ್ಥೆಯ ಪ್ರಾಂಶುಪಾಲೆ ಮರೀನಾ ಸರೋಜಾ ಸೋನ್ಸ್, ದಂಡ ತೀರ್ಥ ಸಮೂಹ ವಿದ್ಯಾ ಸಂಸ್ಥೆಯ ಶಿಕ್ಷಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ.ಸಾ.ಪ ಕಾಪು ತಾಲೂಕು ಘಟಕದ ಕಾರ್ಯದರ್ಶಿ ನೀಲಾನಂದ ನಾಯಕ್ ಪ್ರಸ್ತಾವಿಸಿ, ಸ್ವಾಗತಿಸಿದರು. ಕ.ಸಾ.ಪ ಕಾಪು ತಾಲೂಕು ಘಟಕದ ಖಜಾಂಚಿ ವಿದ್ಯಾಧರ್ ಪುರಾಣಿಕ್ ನಿರೂಪಿಸಿದರು. ಕ.ಸಾ.ಪ ಜಿಲ್ಲಾ ಸಮಿತಿಯ ಸದಸ್ಯ ಮಧುಕರ್ ಎಸ್ ವಂದಿಸಿದರು.