ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡೆದ ಡಿಗ್ರಿಯೊಂದಿಗೆ ಸಾಮಾನ್ಯ ಜ್ಞಾನವೂ ಅವಶ್ಯಕ : ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ

Posted On: 27-11-2022 07:03PM

ಬಂಟಕಲ್ಲು : ಪ್ರತಿಯೊಬ್ಬ ವ್ಯಕ್ತಿಗೂ ಜ್ಞಾನದ ಅವಶ್ಯಕತೆಯಿದೆ. ಇದರ ಜೊತೆಗೆ ಸಾಮಾನ್ಯ ಜ್ಞಾನದ ಅವಶ್ಯಕತೆಯೂ ಇದೆ. ಪಡೆದ ಡಿಗ್ರಿ ಮುಖ್ಯವಲ್ಲ. ಸಾಮಾನ್ಯ ಜ್ಞಾನ ಹೊಂದಿದರೆ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ. ಅಧ್ಯಯನ ಘಟ್ಟದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿ ಎಂದು ಉಡುಪಿ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಅವರು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಅಂಡ್ ಮ್ಯಾನೇಜ್ಮೆಂಟ್ ಬಂಟಕಲ್ಲು ಇಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗಾಗಿ ನಡೆದ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರಿನ ಏಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಾಮದಾಸ್ ಮಡ್ಮಣ್ಣಾಯ ಮಾತನಾಡಿ ತಂದೆ ತಾಯಿಗಳು ಮಕ್ಕಳ ಅಭ್ಯುದಯಕ್ಕೆ ನಾಂದಿ ಹಾಡಬೇಕು. ದೃಢ ಸಂಕಲ್ಪ, ಹಠ ನಮ್ಮನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ. ಮಕ್ಕಳ ಭವಿಷ್ಯದ ಆಸೆಗೆ ಹೆತ್ತವರು ಮಾರ್ಗದರ್ಶನ ನೀಡಬೇಕು. ವಿದ್ಯೆ ಜೊತೆ ನಾಯಕತ್ವ ಗುಣ ಬೆಳೆಸಬೇಕು. ಕೇವಲ ಮಾಕ್೯ ಮುಖ್ಯವಲ್ಲ ಅದೊಂದು ಸಾಧನದಂತೆ. ಕಲಿಕೆಯ ವಿಷಯದ ಮೂಲಭೂತ ಜ್ಞಾನವಿರಬೇಕು. ಅಹಂಕಾರ ವಿದ್ಯಾರ್ಥಿಗಳಲ್ಲಿ ಇರಬಾರದು. ನಿಸ್ವಾರ್ಥದ ಜೀವನ ನಮ್ಮದಾಗಬೇಕು ಎಂದರು.

ಸಾಧನೆಗೈದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಗೌರವ, ದಾನಿಗಳಿಂದ ಪ್ರೋತ್ಸಾಹಕವಾಗಿ ನೀಡಲ್ಪಟ್ಟ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ವಹಿಸಿದ್ದರು.

ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಪ್ರಾಂಶುಪಾಲರಾದ ಡಾ| ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲರಾದ ಡಾ| ಗಣೇಶ್ ಐತಾಳ್, ಆಡಳಿತ ಮಂಡಳಿ ಸದಸ್ಯ ಹರೀಶ್ ಬೆಳ್ಮಣ್, ಉಪನ್ಯಾಸಕ ರವೀಂದ್ರ ಎಚ್ ಜೆ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ| ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕಿ ಡಾ| ಲೊಲಿಟ ಪ್ರಿಯ ಕ್ಯಾಸ್ಟಲಿನೊ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಉಪನ್ಯಾಸಕರಾದ ಲಹರಿ ವೈದ್ಯ ಮತ್ತು ಸಚಿನ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲರಾದ ಡಾ| ಗಣೇಶ್ ಐತಾಳ್ ವಂದಿಸಿದರು.