ಕಾರ್ಕಳ : ನೆತ್ತೆರ್ ಉಂಬೊಲಿ - ರಕ್ತದಾನ ಶಿಬಿರ
Posted On:
06-12-2022 05:48PM
ಕಾರ್ಕಳ : ಜೈ ತುಳುನಾಡ್(ರಿ.) ಮುಂದಾಳತ್ವದಲ್ಲಿ ರಕ್ತನಿಧಿ, ಜಿಲ್ಲಾಸ್ಪತ್ರೆ, ಉಡುಪಿ ಮತ್ತು ಹಲವು ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಕಳದ ರೋಟರಿ ಬಾಲಭವನದಲ್ಲಿ 'ನೆತ್ತೆರ್ ಉಂಬೊಲಿ' ರಕ್ತದಾನ ಶಿಬಿರ ಡಿಸೆಂಬರ್ 4 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯೋಗದೀಪಿಕ ವಿದ್ಯಾಪೀಠ, ಪಲಿಮಾರು ಇಲ್ಲಿನ ಪ್ರಾಂಶುಪಾಲರೂ, ಕಾರ್ಕಳದ ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಕಾ. ವೇ. ಶಂಕರನಾರಾಯಣ ಭಟ್ ಮಾತನಾಡಿ ಭಾಷೆ ಮತ್ತು ಲಿಪಿ ಎರಡನ್ನೂ ಹೊಂದಿರುವ ಭಾಷೆಗಳಲ್ಲಿ ತುಳು ಒಂದಾಗಿದ್ದು, ಅದರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಎಲ್ಲಾ ತುಳುವರು ಈ ಬಗ್ಗೆ ಹೆಮ್ಮೆ ಪಡಬೇಕು. ಮುನ್ನೂರು ವರ್ಷಗಳ ಹಿಂದಕ್ಕೆ ಉಡುಪಿ, ಮಂಗಳೂರು, ಕಾಸರಗೋಡು ಮತ್ತು ಉತ್ತರ ಕನ್ನಡದ ಕೆಲ ಪ್ರದೇಶಗಳಲ್ಲಿ ಭಾಷೆ ಎಂದರೆ ತುಳು, ಲಿಪಿ ಎಂದರೆ ತುಳು ಲಿಪಿ ಎಂದಾಗಿತ್ತು. ತುಳುನಾಡಿನ ಎಲ್ಲಾ ದೇವಸ್ಥಾನಗಳಲ್ಲಿಯೂ ಪೂಜಾ ಕೈಂಕರ್ಯಗಳ ವಿದ್ಯಾಭ್ಯಾಸವನ್ನು ಪಡೆಯುವವರು ತುಳು ಲಿಪಿಯನ್ನು ಕಲಿಯಬೇಕಾಗಿತ್ತು ಮತ್ತು ಅದನ್ನು ಪ್ರತಿದಿನ ದೇವಸ್ಥಾನಗಳಲ್ಲಿ ಬಳಸಬೇಕಾಗಿತ್ತು, ಈಗಲೂ ಈ ಪದ್ಧತಿ ಬಹಳಷ್ಟು ಕಡೆ ಚಾಲ್ತಿಯಲ್ಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಮತ್ತು ಆಳುಪ ವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಆದಾಯವನ್ನು ತಂದುಕೊಡುವಂತಹ ಜಿಲ್ಲೆಗಳಲ್ಲಿ ತುಳುನಾಡಿನ ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ನಮ್ಮಲ್ಲಿ ಭೂಮಾರ್ಗ, ಜಲಮಾರ್ಗ ವಾಯುಮಾರ್ಗದಂತಹ ಎಲ್ಲಾ ಸೌಕರ್ಯಗಳು ಇವೆ. ಬ್ರಿಟಿಷರ ಕಾಲದಲ್ಲಿ ಅತ್ಯಂತ ಉದ್ದದ ಭಾರತದ ರೈಲ್ವೆ ಮಾರ್ಗವನ್ನು ತುಳುನಾಡು ಹೊಂದಿತ್ತು. ಇಷ್ಟೆಲ್ಲ ಇದ್ದರೂ ಇಲ್ಲಿನ ನೆಲದ ಭಾಷೆಯಾದ ತುಳುವಿಗೆ ಕರ್ನಾಟಕ ರಾಜ್ಯದಲ್ಲಿ ಇನ್ನೂ ಕೂಡ ಆಡಳಿತ ಭಾಷಾ ಸ್ಥಾನಮಾನ ಸಿಗದಿರುವುದು ಬೇಸರದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಅವರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವ 20 ವರ್ಷಗಳ ಹಿಂದೆಯೇ ತುಳುನಾಡಿನಲ್ಲಿ ನಡೆದಂತಹ ಅಮರ ಸುಳ್ಯ ಕ್ರಾಂತಿಯನ್ನು ಪ್ರಸ್ತಾಪಿಸಿ ತುಳುನಾಡಿನ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಭೆಗೆ ನೆನಪಿಸಿದರು.
ಜೈ ತುಲುನಾಡ್(ರಿ.) ಸಂಘಟನೆಯ ಅಧ್ಯಕ್ಷರಾದಂತಹ ಅಶ್ವಥ್ ತುಳುವೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ರಕ್ತ ನಿಧಿ ಜಿಲ್ಲಾಸ್ಪತ್ರೆ, ಉಡುಪಿ ಇದರ ವೈದ್ಯಾಧಿಕಾರಿ ಆದಂತಹ ಡಾ. ವೀಣಾ ಕುಮಾರಿ ಮುಖ್ಯ ಅತಿಥಿಗಳಾಗಿ ಜೊತೆಯಲ್ಲಿದ್ದರು. ಕಾರ್ಯಕ್ರಮದ ಸಹಭಾಗಿತ್ವವನ್ನು ವಹಿಸಿಕೊಂಡ ಸಂಘ ಸಂಸ್ಥೆಗಳಾದ ಜಿ.ಎಸ್.ಬಿ ಹಿತರಕ್ಷಣಾ ವೇದಿಕೆ ಕಾರ್ಕಳ ಇದರ ಸಂಚಾಲಕರಾದ ಆರ್ ವಿವೇಕಾನಂದ ಶೆಣೈ, ಎಚ್.ಡಿ.ಎಫ್.ಸಿ ಬ್ಯಾಂಕ್ ಲಿ. ಮಂಗಳೂರು ಇದರ ಸಹ ವ್ಯವಸ್ಥಾಪಕ ನಿತೇಶ್ ಕುಮಾರ್, ಯುವ ವಾಹಿನಿ (ರಿ.) ಕಾರ್ಕಳ ಘಟಕದ ಅಧ್ಯಕ್ಷರು ತಾರಾನಾಥ ಕೋಟ್ಯಾನ್, ಸೌಹಾರ್ದ ಫ್ರೆಂಡ್ಸ್ ಕ್ಲಬ್ ಜಾರ್ಕಳ-ಮುಂಡ್ಲಿ ಇದರ ಅಧ್ಯಕ್ಷರಾದ ಪ್ರಜ್ವಲ್ ಜೈನ್, ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ಸ್ ಕಾರ್ಕಳ ಇದರ ಮಾಲಕ ಸುಧೀರ್ ಪೂಜಾರಿ, ಗೆಳೆಯರ ಬಳಗ ನೆಲ್ಲಿಗುಡ್ಡೆ ಬಜಗೋಳಿ ಅಧ್ಯಕ್ಷರು ಸುರೇಶ್ ಸಾಲಿಯಾನ್, ಛತ್ರಪತಿ ಶಿವಾಜಿ ಮಹಾರಾಜ್ ಬಳಗ ಕಾಂತರಗೋಳಿ ಇದರ ಅಧ್ಯಕ್ಷರಾದ ಸತೀಶ್ ಪೂಜಾರಿ ಕಾಂತರಗೋಳಿ ವೇದಿಕೆಯಲ್ಲಿದ್ದರು.
ಪ್ರಧಾನ ಕಾರ್ಯದರ್ಶಿಗಳಾದ ಅವಿನಾಶ್ ಮುಕ್ಕ, ಸಂಘಟನಾ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿ ತುಲುವೆ, ಕೇಂದ್ರ ಸಮಿತಿಯ ಗೀತಾ ಲಕ್ಷ್ಮೀಶ್, ವಿನಯ್ ರೈ, ಸಂಘಟನೆಯ ಸದಸ್ಯರು ಮತ್ತು ರಕ್ತ ನಿಧಿ ಜಿಲ್ಲಾ ಆಸ್ಪತ್ರೆ, ಉಡುಪಿ ಇದರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವಿವಿಧ ಸಂಸ್ಥೆಗಳ 60ಕ್ಕೂ ಹೆಚ್ಚು ಸದಸ್ಯರು ರಕ್ತದಾನ ಮಾಡುವ ಮೂಲಕ ಶಿಬಿರದಲ್ಲಿ ಪಾಲ್ಗೊಂಡರು.
ಆತ್ಮ ಕೆ. ತುಳುನಾಡಗೀತೆ ಹಾಡುವ ಮೂಲಕ ಪ್ರಾರ್ಥಿಸಿದರು. ಜೈ ತುಲುನಾಡ್ (ರಿ.) ಸಂಘಟನೆಯ ಜೊತೆ ಕಾರ್ಯದರ್ಶಿ ರಾಜೇಶ್ ತುಲುವೆ ಉಪ್ಪೂರು ಸ್ವಾಗತಿಸಿದರು. ಸ್ವರಾಜ್ ಶೆಟ್ಟಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ವಿಶು ಶ್ರೀಕೇರ ವಂದಿಸಿದರು.