ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ : ವಿಶ್ವ ಮಾನವ ದಿನಾಚರಣೆ

Posted On: 29-12-2022 08:42PM

ಉಡುಪಿ : ವಿಶ್ವ ಮಾನವ ಸಂದೇಶ ನೀಡಿದ ಕವಿ ಕುವೆಂಪು ಸದಾ ಸ್ಮರಣೀಯರು. ಅವರ ಸಾಹಿತ್ಯದಲ್ಲಿರುವ ಸಂದೇಶ ಸರ್ವ ಕಾಲಗಳಿಗೂ ಪ್ರಸ್ತುತ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್ ಹೇಳಿದರು. ಅವರು ಇಂದು ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ರಾಷ್ಟ್ರಕವಿ ಕುವೆಂಪುರವರ ಜಯಂತಿ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕವಿ ಕುವೆಂಪು ಅವರು ಮಹಾನ್ ಮಾನವತಾವಾದಿ. ಅವರ ಸಾಹಿತ್ಯ ಸಮಾಜದ ಎಲ್ಲಾ ಜನರಿಗೂ ಅತ್ಯುತ್ತಮ ಜೀವನ ಮಾದರಿಯನ್ನು ತೋರಿಸುತ್ತಿದ್ದು, ಸಾಹಿತ್ಯಗಳು ನಮ್ಮ ಜೀವನದ ದೃಷ್ಟಿಕೋನವನ್ನು ವಿಸ್ತರಿಸುತ್ತದೆ. ಸಾಹಿತ್ಯ ಲೋಕದಲ್ಲಿ ಕನ್ನಡ ನಾಡಿಗೆ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮಹಾನ್ ಸಾಹಿತಿ ಕುವೆಂಪು. ಅವರು ರಚಿಸಿದ ನಾಡಗೀತೆಯನ್ನು ಪ್ರತಿನಿತ್ಯ ಹಾಡುವುದರ ಮೂಲಕ ಅವರನ್ನು ಪ್ರತಿದಿನ ಜ್ಞಾಪಿಸಿಕೊಳ್ಳುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್ ಎಂ ಮಾತನಾಡಿ, ಯುಗದ ಕವಿ, ಜಗದ ಕವಿ ಎನಿಸಿಕೊಂಡ ಕುವೆಂಪುರವರು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಉಪದೇಶಗಳಿಂದ ಪ್ರೇರಿತರಾದವರು. ಕುವೆಂಪು ಅವರು ಅದ್ಭುತ ಪ್ರತಿಭೆ ಹೊಂದಿರುವ ಹಾಗೂ ಸಮಾಜದ ಸಾಕ್ಷಿ ಪ್ರಜ್ಞೆ ಇರುವ ಈ ನಾಡಿನ ಶ್ರೇಷ್ಠ ಕವಿ ಎಂದರು. ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್ ಮುಂಡಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಲೇಜು ಸಮನ್ವಯಾಧಿಕಾರಿ ಡಾ.ಎನ್.ಎಸ್ ಶೆಟ್ಟಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ವಿಶ್ವಾಸ್ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಉಪನ್ಯಾಸಕಿ ನಳಿನಾದೇವಿ ಎಂ ಆರ್ ನಿರೂಪಿಸಿ, ಕಾಲೇಜು ಪ್ರಾಂಶುಪಾಲ ಮಂಜುನಾಥ ಭಟ್ ವಂದಿಸಿದರು.