ಕಾಪು : ಕುತ್ಯಾರಿನ ಆನೆಗುಂದಿ ಸರಸ್ವತಿ ಪೀಠ ಸೂರ್ಯಚೈತನ್ಯ ಹೈಸ್ಕೂಲ್ ವಾರ್ಷಿಕೋತ್ಸವ
Posted On:
31-12-2022 11:24PM
ಕಾಪು : ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ ಇದರ ಆಡಳಿತಕ್ಕೊಳಪಟ್ಟ ಕುತ್ಯಾರಿನ ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲಿನ ವಾರ್ಷಿಕೋತ್ಸವವು ಡಿಸೆಂಬರ್ 31 ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಪೀಠಾಧೀಶ್ವರರಾದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಶುಭಾಶೀರ್ವಚನವಿತ್ತರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಮಾತನಾಡಿ, ಪೋಷಕರು ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ಮೀಸಲಿಡಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಪರಸ್ಪರ ಸಂವಹನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಸೆಟ್ ನ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ವಿವೇಕ್ ಆಚಾರ್ಯ ಶಿರ್ವ, ಪ್ರಧಾನ ಕಾರ್ಯದರ್ಶಿ ಗುರುರಾಜ ಆಚಾರ್ಯ, ಗೌರವ ಸಲಹೆಗಾರ ವಿದ್ವಾನ್ ಶಂಭುದಾಸ್ ಗುರೂಜಿ, ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದೀಪಕ್ ಕಾಮತ್, ಶಾರದಾ ಕುತ್ಯಾರು ಉಪಸ್ಥಿತರಿದ್ದರು.
ಗುರುರಾಜ್ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕ ಗುರುದತ್ತ ಸೋಮಯಾಜಿ ವರದಿ ವಾಚಿಸಿದರು. ಸಂಸ್ಕೃತ ಶಿಕ್ಷಕ ಸಂದೀಪ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ಶ್ರುತಿ ಆಚಾರ್ಯ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.