ಶಾಲೆಗಳು ಕಾರ್ಖಾನೆಯಾಗಬಾರದು : ವಿಶ್ವವಲ್ಲಭ ತೀರ್ಥ ಸ್ವಾಮೀಜಿ
Posted On:
04-01-2023 10:27AM
ಕಾಪು : ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣ ಅನಿವಾರ್ಯ. ರಿಯಾಲಿಟಿ ಷೊಗಳನ್ನು ತೋರಿಸುವ ಮೂಲಕ ಮಕ್ಕಳಿಗೆ ಒತ್ತಡ ಹಾಕಿ ಅವರಂತಾಗಬೇಕು ಇವರಂತಾಗ ಬೇಕೆನ್ನುವುದು ತಪ್ಪು. ಮಕ್ಕಳ ನೈಜ ಪ್ರತಿಭೆ ಗುರುತಿಸುವುದು ಶಿಕ್ಷಣ ಸಂಸ್ಥೆಗಳ ಕಾರ್ಯ. ಮಕ್ಕಳು ಒತ್ತಡದಲ್ಲಿಯೆ ಬದುಕುವವರೆಗೆ ತಲುಪಿದೆ ಇಂದಿನ ಶಿಕ್ಷಣ. ಶಾಲೆಗಳು ಕಾರ್ಖಾನೆಯಾಗಬಾರದು. ವಿಶ್ವೇಂದ್ರ ತೀರ್ಥರ ದೂರದೃಷ್ಟಿಯಲ್ಲಿ ಸ್ಥಾಪನೆಯಾದ ಇನ್ನಂಜೆ ಸಂಸ್ಥೆ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ. ಕರ್ನಾಟಕದಲ್ಲಿ ಮೊತ್ತ ಮೊದಲು ಬಿಸಿ ಊಟ ನೀಡಿದ ಶಾಲೆ ಇನ್ನಂಜೆ ಎಂದು ಸೋದೆ ವಾದಿರಾಜ ಮಠದ ಯತಿವರ್ಯ ಮತ್ತು
ಎಸ್ ವಿ ಎಚ್ ಶಿಕ್ಷಣ ಸಂಸ್ಥೆಗಳ ವಿಶ್ವಸ್ತ ಮಂಡಳಿಯ ಅಧ್ಯಕ್ಷರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಎಸ್ ವಿ ಎಚ್ ಆಂಗ್ಲ ಮಾಧ್ಯಮ ಶಾಲೆ, ಎಸ್ ವಿ ಎಚ್ ಆಂಗ್ಲ ಮಾಧ್ಯಮ ನರ್ಸರಿ ಮತ್ತು ಹೈಯರ್ ಪ್ರೈಮರಿ ಶಾಲೆ ಇನ್ನಂಜೆಯ ವಿಶ್ವೋತ್ತಮ ರಂಗಮಂಟಪದಲ್ಲಿ ಜರಗಿದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಕೆನಡಾದ ಸರ್ಜಿಕಲ್ ಸೈನ್ಸ್ ಇನ್ನೊವೆಷನ್ ಸಲಹೆಗಾರರಾದ ಡಾ. ಅಶ್ವತ್ ವಿನಾಯಕ್ ಕುಲಕರ್ಣಿ, ಉಡುಪಿಯ ಐಡಿಯಲ್ ಮೆಡಿಕಲ್ ಸಪ್ಲೈಸ್ ಆಡಳಿತ ನಿರ್ದೇಶಕ ವಿ.ಜಿ. ಶೆಟ್ಟಿ, ಎಸ್ ವಿ ಎಚ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಆಚಾರ್ಯ, ಆಡಳಿತಾಧಿಕಾರಿ ಅನಂತ ಮೂಡಿತ್ತಾಯ, ಶಾಲಾ ಮುಖ್ಯಶಿಕ್ಷಕಿಯರಾದ ಮಮತ ಮತ್ತು ಸುಷ್ಮ ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ಅನಂತ ಮೂಡಿತ್ತಾಯ ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕಿಯರಾದ ಮಮತ ಮತ್ತು ಸುಷ್ಮ ವರದಿ ವಾಚಿಸಿದರು. ಶಿಕ್ಷಕಿ ಲವೀನ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಶಮಿಕ ಮತ್ತು ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು.