ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಕಾಂತಾರ ಸಿನೆಮಾದಂತೆ ಕಾರ್ಣಿಕ ತೋರಿದ ದೈವ

Posted On: 07-01-2023 12:06PM

ಪಡುಬಿದ್ರಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯ ಪಡುಹಿತ್ಲುವಿನಲ್ಲಿ ಸುಮಾರು 500 ವರ್ಷಗಳ ಇತಿಹಾಸವುಳ್ಳ ಊರ ದೈವವಾಗಿ ಕಾಲಕಾಲಕ್ಕೆ ತಂಬಿಲ, ನೇಮಾದಿ ಕಾರ್ಯಗಳು ನಡೆಯುತ್ತಿದ್ದ ಜಾರಂದಾಯ ಬಂಟ ದೈವಸ್ಥಾನದಲ್ಲಿ ಇದೀಗ ಅಧಿಕಾರದ ವ್ಯಾಮೋಹದಿಂದ ಒಂದು ವಾರ್ಷಿಕ ನೇಮೋತ್ಸವ ಆಗುವಲ್ಲಿ ಎರಡು ನೇಮವೇ ಎಂಬಂತಾಗಿದೆ.

ಈಗಾಗಲೇ ಊರಿನ ಹತ್ತು ಸಮಸ್ತರ ಸಮ್ಮುಖದಲ್ಲಿ ಸಮಿತಿಯಿದ್ದು ಅದರ ಅಧ್ಯಕ್ಷರಾಗಿದ್ದ ಪ್ರಕಾಶ್ ಶೆಟ್ಟಿ ಅಧಿಕಾರ ಅವಧಿ ಮುಗಿದಿತ್ತು. ಆದರೆ ಅಧಿಕಾರ ಅವಧಿ ಮುಗಿದ ಕೂಡಲೇ ಟ್ರಸ್ಟ್ ಮಾಡುವ ಇರಾದೆಯಿಂದ ಸಾನದ ಮನೆಯ ಗುರಿಕಾರ ಜಯ ಪೂಜಾರಿಯವರನ್ನು ಅಧ್ಯಕ್ಷರನ್ನಾಗಿಸಿಕೊಂಡು ಒಟ್ಟು 5 ಮಂದಿಯ ಟ್ರಸ್ಟ್ ರಚನೆಯಾಗುತ್ತದೆ. ಆ ಮೂಲಕ ದೈವಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗುತ್ತದೆ. ಜನವರಿ 7ರಂದು ನೇಮದ ದಿನ ನಿಗದಿಯಾಗುತ್ತಿದ್ದಂತೆ ಟ್ರಸ್ಟ್ ತಂಡವು ಕೋಟ್೯ ಮೊರೆ ಹೋಗಿ ಡಿಸೆಂಬರ್ 23 ರಂದು ತಡೆಯಾಜ್ಞೆ ತರುತ್ತದೆ. ಮರುದಿನ ಡಿಸೆಂಬರ್ 24ರಂದು ಟ್ರಸ್ಟ್ ಸದಸ್ಯರೋರ್ವರ ಮನೆಯ ದೈವಸ್ಥಾನದಲ್ಲಿ ತಂಬಿಲದಂದು ಜಯಪೂಜಾರಿ ಎಲ್ಲರ ಎದುರು ಹಠತ್ತಾಗಿ ಕುಸಿದು ಸಾವನ್ನಪ್ಪುತ್ತಾರೆ. ಇದು ದೈವ ಕಾರ್ಣಿಕ ಎಂದು ಜನರು ಆಡುವಂತಾಗಿದೆ. ಇತ್ತ ಊರಿನ ಸಮಿತಿ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಸಫಲರಾಗುತ್ತಾರೆ.

ಏತನ್ಮಧ್ಯೆ ಜಯ ಪೂಜಾರಿ ಮರಣದಿಂದ ಊರಿನವರ ತೀರ್ಮಾನದಂತೆ ನೇಮ ಮುಂದೂಡಲಾಗುತ್ತದೆ. ನೇಮ ಮುಂದೂಡಿಕೆಯ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ನೀಡಲಾಗುತ್ತದೆ. ಆದರೆ ಟ್ರಸ್ಟ್ ತಂಡ ಮಾತ್ರ ಸುಮ್ಮನಿರದೆ ಜಯ ಪೂಜಾರಿ ಉತ್ತರಕ್ರಿಯೆಯ ದಿನವಾದ ಜನವರಿ 7ರಂದು ನೇಮ ಮಾಡಿಯೇ ಸಿದ್ಧ ಎಂಬ ಹಟಕ್ಕೆ ಬಿದ್ದಂತಿದೆ. ಇತ್ತ ಊರಿನವರು ಜನವರಿ 13ರಂದು ನೇಮ ಮಾಡುವುದೆಂದು ತೀರ್ಮಾನಿಸಿದ್ದಾರೆ.

ಇನ್ನೊಂದೆಡೆ ದೈವ ನರ್ತಕರಾದ ಭಾಸ್ಕರ ‌ಎಂಬುವವರಿಗೆ ಟ್ರಸ್ಟ್ ತಂಡವು ಬೆದರಿಕೆಯನ್ನು ಹಾಕಿದೆ ಎಂದು ಸ್ವತಃ ಭಾಸ್ಕರ್ ‌ಮಾಧ್ಯಮದವರ ಮುಂದೆ ಹೇಳಿದ್ದಾರೆ. ಅಪಾರ ಕಾರ್ಣಿಕ ಕ್ಷೇತ್ರವಾದ ದೈವಸ್ಥಾನದಲ್ಲಿ ಇಂತಹ ಘಟನೆಗಳು ಭಕ್ತರಿಗೆ ನೋವುಂಟು ಮಾಡಿದರೂ ಭಕ್ತರು ದೈವದ ಕಾರ್ಣಿಕಕ್ಕಾಗಿ ಕಾದಿದ್ದಾರೆ.