ಜನವರಿ 9 : CITU -ಮಂಗಳೂರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ
Posted On:
08-01-2023 04:03PM
ಮಂಗಳೂರು : ಅವಿಭಜಿತ ದ.ಕ. ಜಿಲ್ಲೆ ಸೇರಿದಂತೆ ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕಣ್ಣೋಟವನ್ನು ಮುಂದಿಟ್ಟುಕೊಂಡು ಕೃಷಿರಂಗಕ್ಕೆ ಪ್ರೋತ್ಸಾಹ, ಪರಿಸರಸ್ನೇಹಿ ಕೈಗಾರಿಕೆಗಳ ಸ್ಥಾಪನೆ,ಸ್ಥಳೀಯ ಯುವಜನರಿಗೆ ಉದ್ಯೋಗ, ಭವಿಷ್ಯದ ಯೋಜನೆಗಾಗಿ ಜನವರಿ 9, ಸೋಮವಾರ ಬೆಳಿಗ್ಗೆ 10ಕ್ಕೆ ಮಂಗಳೂರು ಪುರಭವನದಲ್ಲಿ ಕರಾವಳಿ ಕರ್ನಾಟಕ ; ಕೃಷಿ ಕೈಗಾರಿಕೆ ಉದ್ಯೋಗ ಜನಪರ ಪರ್ಯಾಯ ನೀತಿಗಳು ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
CITU ರಾಷ್ಟ್ರ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿರುವ ಇಂತಹ ಮಹತ್ವಪೂರ್ಣ ವಿಚಾರ ಸಂಕಿರಣವನ್ನು ಕರ್ನಾಟಕ ರಾಜ್ಯ ಯೋಜನಾ ಆಯೋಗದ ಮಾಜಿ ಸದಸ್ಯರು ಹಾಗೂ ನಾಡಿನ ಖ್ಯಾತ ಆರ್ಥಿಕ ತಜ್ಞರಾದ ಡಾ. ಟಿ. ಆರ್. ಚಂದ್ರಶೇಖರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ.ಚಂದ್ರ ಪೂಜಾರಿ, CITU ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಯಶವಂತ ಮರೋಳಿಯವರು ವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಜಿಲ್ಲೆಯ ಖ್ಯಾತ ಗಾಯಕರಾದ ಮೇಘನಾ ಕುಂದಾಪುರ, ಹುಸೈನ್ ಕಾಟಿಪಳ್ಳ, ಹೇಮಾ ಪಚ್ಚನಾಡಿ, ಇಸ್ಮಾಯಿಲ್ ಉಳ್ಳಾಲ ಇವರಿಂದ ಸೌಹಾರ್ದ ಗೀತಗಾಯನ ಕಾರ್ಯಕ್ರಮ ಜರುಗಲಿದೆ.
ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ನಡೆಯುವ ಈ ವಿಚಾರ ಸಂಕಿರಣದಲ್ಲಿ ಜಿಲ್ಲೆಯ ಪ್ರಜ್ಞಾವಂತರು,ವಿದ್ಯಾರ್ಥಿ ಯುವಜನರು ಮಹಿಳೆಯರು, ಮಧ್ಯಮ ವರ್ಗದ ಜನತೆ ಸೇರಿದಂತೆ ಸರ್ವ ವಿಭಾಗದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.