ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಯಕ್ಷ ಪ್ರತಿಭೆ ಪಡುಬಿದ್ರಿಯ ವೈಷ್ಣವಿ ರಾವ್

Posted On: 29-01-2023 01:23PM

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯ ಪಿವಿ ಜಗನ್ನಾಥ್ ರಾವ್ ಹಾಗೂ ಸುಜ್ಯೋತಿ ದಂಪತಿಯರ ಮಗಳಾದ ವೈಷ್ಣವಿ ರಾವ್ ಇವರ ಜನನ. ಬಿಕಾಂ ವಿದ್ಯಾಭ್ಯಾಸವನ್ನು ಪೂರೈಸಿ ಪ್ರಸ್ತುತ U18 ನಲ್ಲಿ M.COM ವ್ಯಾಸಂಗ ಮಾಡುತ್ತಿದ್ದಾರೆ. ಇವರ ಊರಿನಲ್ಲಿ ತುಂಬಾ ಯಕ್ಷಗಾನ ಪ್ರದರ್ಶನ ಆಗುತಿತ್ತು ಮತ್ತು ತಮ್ಮ ಮೂರನೇ ವಯಸ್ಸಿಗೆ ಭರತನಾಟ್ಯ ಕಲಿಯಲು ಆರಂಭಿಸಿದ್ದ ಇವರಿಗೆ ಯಕ್ಷಗಾನ ಕಲಿಯಬೇಕು ಅನ್ನುವ ಆಸೆ ಬಂತು ಆವಾಗ ಯಕ್ಷಗಾನಕ್ಕೆ ಸೇರಿದರು, ಹೀಗೆ ಇವರಿಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ವೈಷ್ಣವಿ ಅವರು ಹೇಳುತ್ತಾರೆ. ಪೂರ್ಣಿಮಾ ಯತೀಶ್ ರೈ ಅವರ "ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿಯಲ್ಲಿ”, ಅವರ ಮಾರ್ಗಶ್ರನದಲ್ಲಿ ಆರು ವರ್ಷಗಳಿಂದ ಮುಂಬೈ,ಚೆನ್ನೈ ಸೇರಿದಂತೆ ಬಹಳಷ್ಟು ಕಡೆ ಪ್ರದರ್ಶನ ಕೊಟ್ಟಿದ್ದಾರೆ. ಸಾಯಿಸುಮ ಮಿಥುನ್ ನಾವಡ ಇವರ "ಯಕ್ಷವಾಸ್ಯಮ್ ಕಾರಿಂಜ" ಇದರಲ್ಲೂ ಬಹಳ ಕಾರ್ಯಕ್ರಮಗಳಿಗೆ ಹೋಗಿದ್ದಾರೆ. ಇನ್ನೂ ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ವೈಷ್ಣವಿ ಅವರು ನೀಡಿರುತ್ತಾರೆ.

ಯಕ್ಷಗಾನದ ಗುರುಗಳು : ಎಂಟನೇ ವಯಸ್ಸಿಗೆ ಊರಲ್ಲಿ ಗುರುಗಳಾದ ಭಾಸ್ಕರ ಪಡುಬಿದ್ರಿ ಹಾಗೂ ರವೀಂದ್ರ ಪಡುಬಿದ್ರಿ ಇವರಲ್ಲಿ ಯಕ್ಷಗಾನ ಅಭ್ಯಾಸ ಆರಂಭಿಸಿ, ನಿತಿನ್ ಆಚಾರ್ಯ ಪಡುಬಿದ್ರಿ ಇವರಲ್ಲಿ ಅಭ್ಯಾಸ ಮಾಡಿ ನಂತರ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಇವರಲ್ಲಿ ಅಭ್ಯಾಸ ಮುಂದುವರೆಸಿ ಅವರ ಮಾರ್ಗದರ್ಶನದಲ್ಲಿ ಬಹಳಷ್ಟು ಪ್ರದರ್ಶನಗಳನ್ನು ಅವರ ತಂಡದಲ್ಲಿ ನೀಡಿದ್ದಾರೆ. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ : ಗುರುಗಳಿಂದ ಪ್ರಸಂಗದ ಸಂಪೂರ್ಣ ಮಾಹಿತಿ ಪಡೆದುಕೊಂಡು ಆಮೇಲೆ ಇವರ ಪಾತ್ರದ ನಡೆಯನ್ನು ನೋಡಿ ಕೇಳಿ ತಿಳಿದುಕೊಳುತ್ತೇನೆ. ಕೆಲವೊಮ್ಮೆ ಪುಸ್ತಕಗಳು, ಕೆಲವು ವಿಡಿಯೋಗಳಿಂದ ಕೂಡ ಸಹಾಯ ಪಡೆಯುತ್ತೇನೆ. ಶ್ರೀ ದೇವಿ ಮಹಾತ್ಮ ಬಹಳ ಇಷ್ಟದ ಪ್ರಸಂಗ, ದಕ್ಷಾಧ್ವರ, ಸುಧನ್ವಾರ್ಜುನ ಕಾಳಗ ಇವರ ನೆಚ್ಚಿನ ಪ್ರಸಂಗಗಳು. ಶ್ರೀ ದೇವಿ, ಸುಧನ್ವಾರ್ಜುನದ ಅರ್ಜುನ, ದಾಕ್ಷಾಯಿಣಿ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ : ಇತ್ತೀಚೆಗೆ ಯಕ್ಷಗಾನಕ್ಕೆ ಬಹಳಷ್ಟು ಪ್ರಸಿದ್ಧಿ ಸಿಗ್ತಿದೆ. ಅಭಿಪ್ರಾಯ ಕೊಡುವಷ್ಟು ಬೆಳೆದಿಲ್ಲ ನಾನು. ಆದರೆ ಆದಷ್ಟು ಕಲೆಯನ್ನು ಅದರ ತನದಲ್ಲೇ ಕಲಿತು ಮುಂದುವರೆಸಬೇಕು. ಹೊಸತನ ಕೊಡಲು ಹೋಗಿ ಕೆಡಿಸಬಾರದು. ಹಿರಿಯರ ಮಾರ್ಗದರ್ಶನದ ಜೊತೆಗೆ ಮುಂದುವರೆಸಬೇಕು. ಆದಷ್ಟು ಮಕ್ಕಳಿಗೆ ಪೌರಾಣಿಕ ಪ್ರಸಂಗಗಳ ಮಾಹಿತಿ ಕೊಡಬೇಕು.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ : ಪ್ರೇಕ್ಷಕರಿಂದ ಕಲಾವಿದನಿಗೆ ತುಂಬಾ ಉತ್ತೇಜನ ಸಿಗುತ್ತದೆ, ಒಳ್ಳೆಯ ಪ್ರೋತ್ಸಾಹ ಸಿಗುತ್ತಾ ಇದೆ. ಖುಷಿ ಆಗ್ತದೆ. ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ : ಇನ್ನಷ್ಟು ಅಭ್ಯಾಸ ಮಾಡಿ ಒಳ್ಳೆಯ ಕಲಾವಿದೆ ಆಗಬೇಕು. ಪ್ರಶಸ್ತಿ/ಸನ್ಮಾನ : 'ಕಲಾಭೂಷಣ' ಪ್ರಶಸ್ತಿ -2016, ಸೇರಾಕೆರ್ ಸ್ಟಾರ್ ಆಫ್ ದಿ ಇಯರ್ -2015 ಕರಾವಳಿ ಯಕ್ಷ ಮಿತ್ರರು ಬಹುಮುಖ ಪ್ರತಿಭೆಗಳ ಸಂಗಮ ಪ್ರಶಸ್ತಿ -2019, ನೃತ್ಯಸಿಂಚನ -2018, ಗಿರಿಶ್ರೀ ಭಾಸ್ಕರ ಪ್ರಶಸ್ತಿ -2018, ರೋಟರಿ ಕ್ಲಬ್ ವತಿಯಿಂದ ಯುವ ಸಾಧಕ ಪ್ರಶಸ್ತಿ-2022, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯುವ ಸಾಧಕ ಪ್ರಶಸ್ತಿ -2020 ಹೀಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ರಾಜ್ಯಮಟ್ಟದ ಯುವಜನೋತ್ಸವದಲ್ಲಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಪ್ರಸ್ತುತ ನಾಟ್ಯಮಯೂರಿ ಲಕ್ಷ್ಮೀ ಗುರುರಾಜ್ ಇವರಲ್ಲಿ ವಿದ್ವತ್ ಅನ್ನು ಮುಂದುವರಿಸುತ್ತಿದ್ದಾರೆ. ಭರತನಾಟ್ಯ, ಡ್ಯಾನ್ಸ್, ಸ್ವಿಮ್ಮಿಂಗ್, ಸಮಯ ಸಿಕ್ಕಾಗೆಲ್ಲ ಪುಸ್ತಕ ಓದುವುದು, ಕನ್ನಡ ಕಥೆಗಳನ್ನು ಕೇಳುವುದು ಇವರ ಹವ್ಯಾಸಗಳು. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು. ಶ್ರವಣ್ ಕಾರಂತ್ ಕೆ ಸುಪ್ರಭಾತ ಶಕ್ತಿನಗರ ಮಂಗಳೂರು. +91 8971275651