ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕನಾ೯ಟಕ ರಾಜ್ಯೋತ್ಸವ ನಮ್ಮ ಮನೆ ಮನದಲ್ಲಿ ದಿನಂಪ್ರತಿ ನಡೆಯಲಿ

Posted On: 01-11-2020 10:26AM

ಈ ದಿನ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾದ ಸಂದರ್ಭಒದಗಿ ಬಂದಿದೆ. ಆದರೇನಾಗಿದೆ? ರಾಜ್ಯೋತ್ಸವವೆನ್ನುವುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ಸರಿಯಲ್ಲ. ನವೆಂಬರ್ ತಿಂಗಳು ಮುಗಿದ ಬಳಿಕ ಕನ್ನಡ- ನಾಡು ನುಡಿಯ ಕುರಿತು ನಾವ್ಯಾರೂ ತಲೆಕೆಡಿಸಿಕೊಳ್ಳಲು ಹೋಗದಿರುವುದು ದುರದೃಷ್ಟಕರ. ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ನಡೆಯಲಿ, ಅದಕ್ಕೆ ಯಾರದೂ ತಕರಾರಿಲ್ಲ. ಆದರೆ ಕನ್ನಡ ನಾಡು- ನುಡಿ ಕುರಿತ ಎಚ್ಚರ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಅದು ವರ್ಷ ಪೂರ್ತಿ ಎಚ್ಚರವಾಗಿರಲಿ. ಕನ್ನಡ ಕುರಿತ ಕಾಳಜಿ, ಕಳವಳ ಹೀಗೆ ನಿರಂತರವಾಗಿ ನಮ್ಮೆದೆಯೊಳಗಿದ್ದರೆ ನಮ್ಮ ನಾಡು- ನುಡಿಗೆ ಈ ರೀತಿಯ ಸ್ಥಿತಿ ಒದಗುವ ಸಾಧ್ಯತೆ ಖಂಡಿತಾ ಬರಲಾರದು.

ಕನ್ನಡ ಭಾಷೆಯ ಉಳಿವಿಗಾಗಿ ಇಂದು ಬೀದಿ ಹೋರಾಟ, ಮುಖಕ್ಕೆ ಮಸಿ ಬಳಿಯುವ ಹೋರಾಟ ನಡೆಸಬೇಕಾಗಿ ಬಂದಿರುವುದಕ್ಕೆ ಹೊಣೆ ಯಾರು? ಅನ್ಯ ಭಾಷಿಕರು ಖಂಡಿತ ಅಲ್ಲ. ಈ ಕುರಿತು ಪ್ರಾಮಾಣಿಕವಾಗಿ ಆಲೋಚಿಸಿದರೆ ಹೊಳೆಯುವ ಸತ್ಯಸಂಗತಿ ಏನೆಂದರೆ ಕನ್ನಡದ ಅಳಿವಿಗೆ , ಕನ್ನಡ ಮೂಲೆಗುಂಪಾಗುತ್ತಿರುವುದಕ್ಕೆ ಕನ್ನಡಿಗರೇ ಕಾರಣ. ನಾವು ಮಾತ್ರ ಸುಮ್ಮಸುಮ್ಮನೆ ಅನ್ಯರನ್ನು ನಿಂದಿಸುತ್ತಲೇ ರಾಜ್ಯೋತ್ಸವವನ್ನು ಆಚರಿಸುತ್ತಿರುತ್ತೇವೆ. ನಮ್ಮ ಜನರು ಪ್ರಾಮಾಣಿಕವಾಗಿ ಕನ್ನಡದ ಬಗ್ಗೆ ಕಾಳಜಿ ಹೊಂದಿದ್ದಾರೆಯೆ? ಜನ ಮನಸ್ಸು ಮಾಡಿದರೆ ಕನ್ನಡ ಭಾಷೆಯ ಅಭಿವೃದ್ಧಿ, ಕನ್ನಡ ಪುಸ್ತಕಗಳ ಮಾರಾಟದ ಭರಾಟೆಗೆ ವೇಗೋತ್ಕರ್ಷ ತಂದುಕೊಡಲು ಸಾಧ್ಯವಿಲ್ಲವೆ? ಹೆಚ್ಚಿನ ಕನ್ನಡಿಗರು ಕನ್ನಡವೂ ಅಲ್ಲದ ಇತ್ತ ಇಂಗ್ಲಿಷ್ ಕೂಡ ಅಲ್ಲದ `ಕಂಗ್ಲಿಷ್ ‘ ಭಾಷೆಗೆ ಮೊರೆ ಹೋಗಿರುವುದು ಯಾವ ಪುರುಷಾರ್ಥಕ್ಕಾಗಿ? ನಮ್ಮ ನಮ್ಮ ಮನೆಗಳಲ್ಲಿ ದಿನ ಬೆಳಗಾದರೆ ಕೇಳಿಬರುವ ಭಾಷೆಯ ಇಂಪು ಯಾವುದು? ಅದು ಕನ್ನಡದ ಕಂಪನ್ನು ಹೊರಸೂಸುತ್ತಿದೆಯೆ? ನಾವೆಲ್ಲರೂ ಯೋಚನೆ ಮಾಡಬೇಕಾದ ಸಂಗತಿಯಾಗಿದೆ. ಅಪ್ಪ, ಅಮ್ಮ, ಅಣ್ಣತಂಗಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ ಅತ್ತಿಗೆ, ಅತ್ತೆ, ಮಾವ , ಭಾವ, ನಾದಿನಿ, ಮೈದುನ,ಅಜ್ಜ ಅಜ್ಜಿ, ದೊಡ್ಡಪ್ಪ , ಮೊಮ್ಮಗ, ಷಡ್ಕ ಮುಂತಾದ ಅಪ್ಪಟ ಕನ್ನಡದ ಮನುಷ್ಯ ಸಂಬಂಧವನ್ನು ಗುರುತಿಸುವ ಪದಗಳು ಈಗಿನ ಹೊಸ ಪೀಳಿಗೆಗೆ ಅಪರಿಚಿತ ಶಬ್ದಗಳಾಗಿರುವುದಕ್ಕೆ ಯಾರು ಹೊಣೆ? ಡ್ಯಾಡಿ, ಮಮ್ಮಿ (ಈಗ ಅದು ಡ್ಯಾಡ್, ಮಾಮ್) ಅಂಕಲ್, ಆಂಟಿ, ಕಸಿನ್ , ಗ್ರ್ಯಾಂಡ್‌ಪಾ, ಕೋ-ಬ್ರದರ್ , ಫಾದರ್ ಇನ್ ಲಾ, ಸಿಸ್ಟರ್ ಇನ್ ಲಾ, ನೀಸ್ ಶಬ್ದಗಳು ನಮ್ಮ ಮನೆಯನ್ನು ಆಕ್ರಮಿಸಿಕೊಳ್ಳಿದೆ.

ಆಂಗ್ಲ ಭಾಷೆ ಯನ್ನು ಭಾಷೆಯನ್ನಾಗಿ ಕಲಿಯಬೇಕು ಆದರೆ ಕನ್ನಡ ಮರೆಯದಿರಿ :- ಇಂಗ್ಲಿಷ್ ಬೇಡವೇ ಬೇಡ ಎಂದಲ್ಲ. ಇಂಗ್ಲಿಷನ್ನು ದ್ವೇಷಿಸಬೇಕು ಎಂದೂ ಅಲ್ಲ. ಇಂಗ್ಲಿಷನ್ನು ಕಲಿಯೋಣ. ಜಗತ್ತಿನ ಜ್ಞಾನ- ವಿಜ್ಞಾನಗಳನ್ನು ಅರಗಿಸಿಕೊಳ್ಳಲು, ನಮ್ಮದಾಗಿಸಿಕೊಳ್ಳಲು ಇಂಗ್ಲಿಷ್ ಒಂದು ಬೆಳಕಿಂಡಿಯಿದ್ದಂತೆ . ಆದರೆ ಇಂಗ್ಲಿಷ್ ಎಲ್ಲಿ ಅವಶ್ಯಕವೋ ಅಲ್ಲಿ ಮಾತ್ರ ಬಳಸೋಣ. ಅದಕ್ಕೊಂದು ಪರಿ ಹಾಕೋಣ.

ಕನ್ನಡದ ದಾಸವರೇಣ್ಯರಾದ ಪುರಂದರದಾಸರು, ಕನಕದಾಸರು ಭಕ್ತಿಪಂಥದ ಮೂಲಕ, ತಮ್ಮ ಕೀರ್ತನೆಗಳ ಮೂಲಕ ಅದ್ಭುತವಾದ ಕ್ರಾಂತಿ ಮಾಡಿದರು. ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಖಂಡಿತ ಸರಿಯಲ್ಲ. ಭಾರತದಂಹ ವಿಶಾಲ ದೇಶದಲ್ಲಿ ರಾಜ್ಯಕ್ಕೊಂದು ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ ಹಲವು ಭಾಷೆಗಳ ವೈವಿದ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಹಲವಾರು ಬಗೆಗಳಿವೆ. ಬೆಂಗಳೂರು ಕಂಗ್ಲಿಷ್‌ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡುಕನ್ನಡ, ದಕ್ಷಿಣಕನ್ನದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲೆಯಾಳಿ ಕನ್ನಡ, ಹೈದಾರಾಬಾದ್‌ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ – ಹೀಗೆ ಹತ್ತು ಹಲವು ತರ. ಅಸ್ಸಾಂ ರಾಜ್ಯದಲ್ಲಂತೂ ಜಿಲ್ಲೆಗೊಂದು ಭಾಷೆ ಇದೆ. ಅದಕ್ಕೇ ಅದನ್ನೂ ಅಸಮ ಯಾವುದರಲ್ಲೂ ಸಮಾನತೆ ಇಲ್ಲ ಎಂಬ ಹೆಸರು ಬಂದಿದೆ. ಇವೆಲ್ಲವನ್ನೂ ಮನಗಂಡೇ ರಾಷ್ಟ್ರಕವಿ ಕುವೆಂಪು ತಮ್ಮ ಕವನದಲ್ಲಿ ಹೇಳಿರೋದು – ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ: ಭಾರತಾಂಬೆಯ ಪುತ್ರಿ ಕರ್ನಾಟಕ ಮಾತೆ . ಭಾರತವೇ ತಾಯಿ- ಆಕೆಯ ಪುತ್ರಿ ಕರ್ನಾಟಕ ಮಾತ್ರ ಕನ್ನಡಾಂಬೆ. ತಾಯಿ ಭಾರತಾಂಬೆಗೆ ಕನ್ನಡಾಂಬೆ ಹೇಗೆ ಮಗಳೋ ಅದೇ ರೀತಿ ತೆಲುಗು,ತಮಿಳು, ಮಲಯಾಳಂ, ಮರಾಠಿ, ಅಸ್ಸಾಂ, ಹಿಂದಿ, ಬೆಂಗಾಲಿ , ಒರಿಯಾ,ಬಿಹಾರಿ, ಗುಜರಾತಿ, ಭೋಜ್‌ಪುರಿ ಎಲ್ಲ ಭಾಷೆಗಳು ಮಕ್ಕಳು. ನಮಗೆ ಅವೆಲ್ಲಾ ಸೋದರ ಭಾಷೆಗಳು. ಕರ್ನಾಟಕ ಹಿತ ರಕ್ಷಣೆ ಪ್ರಶ್ನೆ ಬಂದಾಗ ನಾವು ಸ್ವಾಭಿಮಾನವನ್ನು ಪ್ರಕಟಿಸುವುದರ ಜತೆಗೆ ನಾವು ಭಾರತಾಂಬೆಯ ಮಕ್ಕಳು, ಆಕೆಯ ಸತ್ಪುತ್ರರು ಎಂಬುದನ್ನು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿದೆ. ಹಾಗೆ ನೆನಪಿಟ್ಟುಕೊಂಡರೆ, ನಮ್ಮ ಮನದಲ್ಲಿ ಆ ವಿಶಾಲ ಭಾವನೆಯಿದ್ದರೆ ಯಾವುದೇ ಸಂಘರ್ಷಕ್ಕೆ ಅವಕಾಶ ಇರುವುದಿಲ್ಲ. ಈಗ ಬೇಕಾಗಿರುವುದು ಸಂಘರ್ಷವಲ್ಲ, ಸಾಮರಸ್ಯ. ಇಡೀ ಭಾರತದಲ್ಲಿ ಕೋಮುಸಾಮರಸ್ಯ , ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ರಾಜ್ಯಹಿತ ರಕ್ಷಣೆಯ ಜೊತೆಗೆ ರಾಷ್ಟ್ರಹಿತದ ರಕ್ಷಣೆಯೂ ಆಗುತ್ತದೆ. ಕನ್ನಡಕ್ಕಾಗಿ ಕೈಯೆತ್ತೋಣ ಅದು ಕಲ್ಪವೃಕ್ಷವಾಗಲಿ, ಕಾಮಧೇನುವಾಗಲಿ ಕನ್ನಡಕ್ಕಾಗಿ ಕೈಯೆತ್ತೋಣ ✍️ ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ