ದೇವಸ್ಥಾನ, ದೈವಸ್ಥಾನ, ಚಾವಡಿ, ಮನೆ ಹೆಸರನ್ನು ತುಳುವಿನಲ್ಲಿ ಬರೆಯೋಣ...
Posted On:
07-11-2020 10:32AM
ತುಳು ಭಾಷೆಯ ಲಿಪಿಯನ್ನು ಆಸಕ್ತಿಯಿಂದ ಗಮನಿಸುವ , ಕಲಿಯುವ ,ಬರೆಯುವ ,ಬರೆಯಿಸುವ ಒಂದು ಅಭಿಯಾನ ಆರಂಭವಾಗಿದೆ. ನಾವು ಮಾತನಾಡುವ ಭಾಷೆಯನ್ನು ಅದೇ ಭಾಷೆಯ ಲಿಪಿಯಲ್ಲಿ ಬರೆಯುವ ಅವಕಾಶವಿದೆ - ಅವಕಾಶವಿತ್ತು ; ಆದರೆ ನಾವದನ್ನು ಶತಮಾನಗಳಷ್ಟು ಹಿಂದೆಯೇ ಮರೆತಿದ್ದೆವು ಅಥವಾ ಕಲಿಯುವ ಕುರಿತು ನಿರ್ಲಕ್ಷ್ಯ ತಾಳಿದ್ದೆವೋ ಗೊತ್ತಿಲ್ಲ .ಅಂತೂ ತುಳುಲಿಪಿ ಬಳಕೆಯಿಂದ ಮರೆಯಾಗಿತ್ತು. ಆದರೆ ಇತ್ತೀಚೆಗೆ ಬಹಳಷ್ಟು ಯುವಕರು ಸ್ವತಃ ತುಳುಲಿಪಿ ಕಲಿತು ಅದನ್ನು ತಮ್ಮ ವ್ಯಾಪ್ತಿಯಲ್ಲಿ ಮಕ್ಕಳಿಗೆ ಕಲಿಸುವ ಕೆಲಸವನ್ನು ಆರಂಭಿಸಿದ್ದಾರೆ . ಕೆಲವು ಸಂಘಟನೆಗಳೂ ಬರೆಯುವ - ಕಲಿಸುವ ಕಾರ್ಯದಲ್ಲಿ ತೊಡಗಿರುವುದನ್ನು ಕಾಣುತ್ತೇವೆ . ಈ ಬೆಳವಣಿಗೆ ಸಂತೋಷದ ಸಂಗತಿ .
ತುಳುವಿನಲ್ಲಿ ಒಂದು ಗಾದೆ ಇದೆ :
"ಉಡಲ್ ಡ್ ಪುಟ್ಟೊಡು ಬುದ್ಧಿ ,ಕಡಲ್ ಡ್ ಪುಟ್ಟೊಡು ಗಾಳಿ". 'ಮನಸ್ಸಿನಲ್ಲಿ ಬುದ್ಧಿ ಹುಟ್ಟಬೇಕು (ಬರಬೇಕು) ,ಕಡಲಿನಲ್ಲಿ ಗಾಳಿ ಹುಟ್ಟಬೇಕು' . ಹೀಗೆ ಸಹಜವಾಗಿ ತುಳುಭಾಷೆಯ ಮೇಲಿನ ಅಭಿಮಾನ ತುಳುವರ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ , ಕಲಿಯಲೇ ಬೇಕೆಂಬ ಹಠದಿಂದ ನಮ್ಮ ಯುವಕರು ಕಲಿತು ಮಕ್ಕಳಿಗೆ ಕಲಿಸುತ್ತಿದ್ದಾರೆ .ಈ ಅಭಿಯಾನ ತನ್ನಿಂದತಾನೆ ಆರಂಭವಾದದ್ದು , ಮನಃಪೂರ್ವಕ ತೊಡಗಿದ್ದು .ಇದು ಖಂಡಿತ ಮುಂದುವರಿಯುತ್ತದೆ . ನಾವು ಪ್ರೋತ್ಸಾಹಿಸೋಣ .ಯುವಕರು ,ಮಕ್ಕಳು ಹೆಚ್ಚಿನ ಪ್ರಯತ್ನಗಳಿಲ್ಲದೆ ಕಲಿಯುತ್ತಾರೆ .
ಅವರು ಕಲಿಯುವ ಬದುಕಿನ ಅವಧಿಯಲ್ಲಿ ಈ ಉಮೇದು ಹುಟ್ಟಿಕೊಂಡಿದೆ .ಆದರೆ ಹಿರಿಯರು ,ಹಿರಿಯ ನಾಗರಿಕರು ತುಳುಲಿಪಿಯನ್ನು ಸುಲಭವಾಗಿ ಕಲಿಯಲಾಗದು .ಅದಕ್ಕೆ ಮಕ್ಕಳೊಟ್ಟಿಗೆ ಕುಳಿತು ತಮ್ಮ ತಮ್ಮ ಹೆಸರನ್ನಾದರೂ ಬರೆಯಲು ಕಲಿಯಬೇಕು .ಹಿರಿಯರು ಇಷ್ಟು ಬರೆಯಲಾರಂಭಿಸುವಾಗ ನಿಮ್ಮ ಮನೆ ಯುವಕರು ,ಮಕ್ಕಳು ತುಳುಲಿಪಿಯನ್ನು ಕನ್ನಡ ,ಇಂಗ್ಲೀಷ್ ,ಹಿಂದಿಯಂತೆಯೇ ಸರಾಗವಾಗಿ ಬರೆಯುತ್ತಾರೆ . ಮುಂದೊಂದು ದಿನ ತುಳುಲಿಪಿಯಲ್ಲಿ ಕವನ , ಕತೆ , ನಾಟಕ ಹೀಗೆ ವಿವಿಧ ಪ್ರಕಾರದ ತುಳು ಸಾಹಿತ್ಯ ಸೃಷ್ಟಿಯಾಗುತ್ತದೆ .ಆಗ ಅದನ್ನು ಓದುವವರೂ ಇರುತ್ತಾರೆ .ಇದು ಈಗ ಆರಂಭವಾದ ಈ ಅಭಿಯಾನದ ಭವಿಷ್ಯ .
ಹಿರಿಯರು ,ಹಿರಿಯ ನಾಗರಿಕರು ಸೇರಿ ನಿಮ್ಮ ಹೆಸರು ಬರೆಯಲು ಕಲಿಯಿರಿ. ಇದರೊಂದಿಗೆ ಊರಿನ ದೇವಸ್ಥಾನಗಳ ,ದೈವ - ಬೂತ ಸ್ಥಾನಗಳ , ಚಾವಡಿಗಳ , ಮನೆಗಳ , ಸಂಘ - ಸಂಸ್ಥೆಗಳ , ರಸ್ತೆಗಳ ಹೆಸರನ್ನು ತುಳುಲಿಪಿಯಲ್ಲಿ ಬರೆಯಿಸಿರಿ . ಕನ್ನಡದ ನಾಮಫಲಕದ ಬಳಿಯಲ್ಲೆ ಹಾಕಿರಿ . ಆಗ ಆಸಕ್ತಿ , ಕುತೂಹಲ ಮೂಡುತ್ತದೆ ,ಇದು ಏನು ಮಲಯಾಳವಾ ......ಹೀಗೆ ಹತ್ತಾರು
ಪ್ರಶ್ನೆಗಳು ಕೇಳಿಸುತ್ತವೆ . ಆಗ "ಇದು ನಾವು ಮಾತನಾಡುವ ಭಾಷೆ" ಆ ಭಾಷೆಯಲ್ಲಿಯೇ ಬರೆದದ್ದು ಎಂಬ ವಿವರಣೆ ಕೊಡುವ . ಇದು ತುಳುಲಿಪಿಯನ್ನು ಜನಮಾನಸದಲ್ಲಿ ಸ್ಥಾಪಿಸುವ ಪ್ರಯತ್ನವಾಗುತ್ತದೆ .ಇದು ನಾಮಫಲಕಕ್ಕೆ ಅಷ್ಟೆ ಸೀಮಿತವಾಗದು . ಏಕೆಂದರೆ ನಮ್ಮ ಯುವಕರು ,ಮಕ್ಕಳು ತುಳು ಕಲಿಯಲು ಆರಂಭಿಸಿದ್ದಾರೆ .ತುಳುವಿನಲ್ಲಿ ಬರೆದ ಕತೆಗಳಿವೆ , ಕಾವ್ಯಗಳಿವೆ , ಪುರಾಣಗಳಿವೆ , ಮಂತ್ರಗಳಿವೆ ,ವೈದಿಕವಿಧಿಯಾಚರಣೆಯ ಪ್ರಯೋಗ ವಿಧಾನಗಳಿರುವ ತಾಳೆಗರಿ - ಪುಸ್ತಕಗಳಿವೆ , ಜಾತಕಗಳಿವೆ , ಮನೆಮನೆಗಳಲ್ಲಿ ತಾಳೆಗರಿಯಲ್ಲಿ ಬರೆದ ಅಮೂಲ್ಯ ಸಾಹಿತ್ಯಗಳಿವೆ ಇವೆಲ್ಲ ಕಾಲ ಗರ್ಭಸೇರುತ್ತಿವೆ ,ಗೆದ್ದಲು ತಿಂದು ನಾಶವಾಗುತ್ತವೆ . ತುಳುಲಿಪಿ ಕಲಿಯುವ - ಕಲಿಸುವ ಅಭಿಯಾನದಿಂದ ನಮ್ಮಲ್ಲಿ ಇದ್ದು ,ಅವಗಣಿಸಲ್ಪಟ್ಟು ಮನೆಯಂಗಳದ ತೆಂಗಿನ ಮರದಬುಡ ಅಥವಾ ಗೊಬ್ಬರದ ಗುಂಡಿ ಸೇರುವ ಮೊದಲು ಇಂತಹ ತುಳುಲಿಪಿಯ ತಾಳೆಗರಿಗಳ ಕಟ್ಟು ಅಥವಾ ಪುಸ್ತಕಗಳು ಖಂಡಿತಾ ಕಾಪಿಡಲ್ಪಡುತ್ತವೆ .
ಸುಮಾರು ಒಂದುಸಾವಿರ ವರ್ಷಗಳಷ್ಟು ಹಿಂದೆಯೇ ಆಳುಪ ಅರಸರು ಬರೆಯಿಸಿದ ತುಳು ಶಾಸನ ಸಿಗುತ್ತದೆ .ಹನ್ನೊಂದನೇ ಶತಮಾನದ ಶಾಸನ ಲಭ್ಯವಿದ್ದು ಓದಲಾಗಿದೆ .ಹನ್ನೆರಡನೇ ಶತಮಾನದ ಶಾಸನ ಇವೇ ಮುಂತಾದುವು ಪ್ರಾಚೀನ ಶಾಸನಗಳು .ಹೀಗೆ 50-60 ಸಂಖ್ಯೆಯ ತುಳು ಶಾಸನಗಳು ಸಿಕ್ಕಿವೆ.ಇವುಗಳಲ್ಲಿ ಗೋಸಾಡ, ಕಿದೂರು, ಅನಂತಪುರ, ಅನಂತಾಡಿ, ಕೊಡಂಗಳ, ಕೊಳನಕೋಡು, ಕುಲಶೇಖರಗಳಲ್ಲಿ ದೊರೆತ ತುಳು ಲಿಪಿಯ ಪ್ರಾಚೀನ ಶಾಸನಗಳು ಮುಖ್ಯವಾಗುತ್ತವೆ ಎಂದು ಅವುಗಳನ್ನು ಓದಿದ ತುಳುಲಿಪಿ ಸಂಶೋಧಕ ಸುಬಾಸ್ ನಾಯಕ್ ವಿವರ ನೀಡುತ್ತಾರೆ .
ಹದಿಮೂರನೇ ಶತಮಾನದಲ್ಲಿ ಆಚಾರ್ಯಮಧ್ವರು ಹೇಳಿದ ಅವರ ಶಿಷ್ಯ ಹೃಷೀಕೇಶ ತೀರ್ಥರು ಬರೆದ ಅಮೂಲ್ಯ ಸರ್ವಮೂಲ ಗ್ರಂಥ ತುಳುಲಿಪಿಯಲ್ಲಿದೆ . ಅಷ್ಟು ಸುಂದರವಾದ ತುಳುಲಿಪಿಯನ್ನು ತಾನು ಕಂಡಿಲ್ಲ ಎಂದು ನೂರಾರು ತುಳುಲಿಪಿಯ ಗ್ರಂಥಗಳನ್ನು ಸಂಪಾದಿಸಿದ ಗೋವಿಂದಾಚಾರ್ಯರು ಹೇಳುತ್ತಾರೆ .ಉಡುಪಿಯ ಮಠಗಳಲ್ಲಿ ತುಳುಲಿಪಿಯ ಗ್ರಂಥಗಳಿವೆ ಎಂದು ಇನ್ನೂರು ವರ್ಷಗಳಷ್ಟು ಹಿಂದೆಯೇ ಕರ್ನಲ್ ಕಾಲಸ್ ಮೆಕೆಂಜಿ ಸಂಗ್ರಹಿಸಿದ ಕಫಿಯತ್ತುಗಳಿಂದ ಮಾಹಿತಿ ಸಿಗುತ್ತವೆ .ಆದರೆ ಈ ವಿವರ ಇವತ್ತಿಗೂ ಪ್ರಚಾರವಾಗಲೇ ಇಲ್ಲ . ಲಿಪಿಯ ಕುರಿತಾದ ಅಧ್ಯಯನಕ್ಕೆ ಈ ಸಂಗ್ರಹ ಉಪಯುಕ್ತವಾದೀತು .ಹತ್ತೊಂಬತ್ತನೇ ಶತಮಾನದಲ್ಲಿ ಬರ್ನರ್ ಕೊಟ್ಟ ತುಳುಲಿಪಿಯೂ ಪರಿಗಣಿಸಲೇ ಬೇಕು. ಮಂತ್ರವಾದರೆ ಏನು ತುಳುಲಿಪಿ ಎಂಬುದು ಮುಖ್ಯವಾಗಬೇಕು. ಯಾರಲ್ಲಿದೆ ಎನ್ನುವುದಕ್ಕಿಂತಲೂ ಇರುವುದು ತುಳುಲಿಪಿಯ ಬರೆಹ ಎಂಬ ಹೃದಯವಂತಿಕೆ ಬೇಕು . ಈಗಲೂ ಹಿರಿಯ ವೈದಿಕರು ತುಳುಲಿಪಿಯಲ್ಲೆ ಬರೆಯುತ್ತಾರೆ ,ಓದುತ್ತಾರೆ. ಅವರು ವೈದಿಕರು ಎನ್ನುವುದಕ್ಕಿಂತಲೂ ಅವರು ತುಳುಲಿಪಿ ಬಲ್ಲವರು ,ಅವರು ನಮ್ಮವರು ಎಂಬ ಭಾವನೆ ಆಸಕ್ತರಿಗೆ , ಅಧ್ಯಯನಕಾರರಿಗೆ ಅಗತ್ಯ .ಲಿಪಿಯಲ್ಲಿರುವ ಪಾಠಾಂತರಗಳನ್ನು ಗಮನಿಸಿ ಲಿಪಿಯ ವಿನ್ಯಾಸ ಸ್ಥಿರೀಕರಣಕ್ಕೆ ಯತ್ನಿಸುವ ಕೆಲಸಕ್ಕೆ ಲಭ್ಯ ಲಿಪಿಗಳ ವಿಸ್ತೃತ ಅವಲೋಕನ ಬೇಕು . .ಕಳೆದ ಶತಮಾನದಲ್ಲಿ ವೆಂಕಟರಾಜ ಪುಣಿಂಚತ್ತಾಯರು ಸಂಶೋಧಿಸಿದ ತುಳುಲಿಪಿಯ ಕಾವ್ಯಗಳನ್ನು ಹಾಗೂ ಅಕ್ಷರಗಳನ್ನು ನೆನಪಿಸಿಕೊಳ್ಳಬೇಡವೇ . ಇಲ್ಲಿ ಪುಣಿಂಚತ್ತಾಯರು ಮುಖ್ಯವಲ್ಲ ,ಅವರು ಮಾಡಿದ ತುಳುವಿನ ಕೆಲಸ ಮುಖ್ಯ . ಒಂದು ರಾಜಾಜ್ಞೆ , ಆಜ್ಞೆ ,ಯಾವುದೋ ಒಂದು ಘಟನೆಯನ್ನು , ವೀರರಕಲ್ಲುಗಳನ್ನು ಶಾಸನವಾಗಿ ಹಾಕುವಾಗ ,ಅದರ ಉದ್ದೇಶ ಪ್ರಚಾರವೇ ತಾನೆ .ಪ್ರಚಾರ ಎಂದರೆ ಬಹುತೇಕ ಜನಮಂದಿಗೆ ತಿಳಿಯಲು ತಾನೆ .ಹಾಗಾಗಿ ಓದಲು ಬರುತ್ತಿದ್ದ ಜನ ಇದ್ದರು ಎಂಬುದು ಸ್ಪಷ್ಟವಾಗದೆ . ಲಿಪಿ ಕೇವಲ ವೈದಿಕರಿಗೆ ಸೀಮಿತವಾಗಿತ್ತು ಎಂಬುದು ಒಪ್ಪಲಾಗದು .ಸಮಾಜದ ಸಂವಹನ ಮಾಧ್ಯಮವಾಗಿದ್ದ ಭಾಷೆಯಲ್ಲವೆ ? ಸಮಾಜದ ಶೇ.40 ಮಂದಿಗಾದರೂ ಗೊತ್ತಿದ್ದಿರಲೇ ಬೇಕು .ಇದು ನನ್ನ ವಿವರಣೆ .ಸರಿಯಾಗಿರಬೇಕೆಂದಿಲ್ಲ . ಇತಿಹಾಸ ಸಂಶೋಧಕರು ತುಳುಲಿಪಿಯ ಶಾಸನಗಳನ್ನು ಹುಡುಕಿ ಓದಿದ್ದಾರೆ , ಕಾಲ ನಿರ್ಣಯಿಸಿದ್ದಾರೆ . ಭಿನ್ನವಾದ ತುಳುವಿನ ಅಕ್ಷರ ವಿನ್ಯಾಸವನ್ನು ಗುರುತಿಸಿದ್ದಾರೆ .ಈ ಮಾಹಿತಿಯು ಲಿಪಿಯ ಸ್ವರೂಪದ ನಿರ್ಧಾರಕ್ಕೆ ಪೂರಕವಾದುದು .ಅಂತೂ ತುಳುಲಿಪಿ ಜನಪ್ರಿಯವಾಗಲಿ , ಎಲ್ಲರೂ ಬರೆಯುವ - ಓದುವ ದಿನಗಳು ಬರಲಿ .
ಇತ್ತೀಚೆಗೆ ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಒಳಾಂಗಣ ಪ್ರವೇಶ ದ್ವಾರದಲ್ಲಿ ಎತ್ತರದಲ್ಲಿ 'ಅಪ್ಪೆ ಉಲ್ಲಾಲ್ತಿ' ,"ಶ್ರೀ ದುರ್ಗಾ ದೇವಸ್ಥಾನ ಕುಂಜೂರು" ಎಂದು ತುಳು ಲಿಪಿಯಲ್ಲಿ ಬರೆದಿರುವ ಫಲಕವನ್ನು ಅಳವಡಿಸಲಾಗಿತ್ತು . ನವರಾತ್ರಿಯ ಒಂಬತ್ತು ದಿನಗಳಲ್ಲಿ ಒಂದು ಶ್ರೀ ಕೃಷ್ಣಾಪುರ ಮಠಾಧೀಶರು ದುರ್ಗೆಯ ಸಂದರ್ಶನಕ್ಕೆ ಬರುವುದು ವಾಡಿಕೆ .ಅಂತೆಯೇ ಕಳೆದ ನವರಾತ್ರಿ ಕಾಲದಲ್ಲೂ ಆಗಮಿಸಿದರು . ದೇವಳ ಪ್ರವೇಶಿಸುತ್ತಿರುವಂತೆ ಪ್ರವೇಶ ದ್ವಾರದ ಮೇಲಿನ ಫಲಕವನ್ನು "ಅಪ್ಪೆ ಉಲ್ಲಾಲ್ತಿ , ಶ್ರೀ ದುರ್ಗಾ ದೇವಸ್ಥಾನ ಕುಂಜೂರು" ಎಂದು ಓದುತ್ತಾ ಮುಂದುವರಿದರು .ಫಲಕ ಅಳವಡಿಸಿದವರು ಸಂತೋಷಪಟ್ಟರು. ತುಳು ಲಿಪಿಯಲ್ಲಿ ಬರೆಯೋಣ , ಓದುವವರು ಇದ್ದಾರೆ . ಮುಂದೆ ಓದುವವರು ಬರುತ್ತಾರೆ .
ಲೇಖನ : ಕೆ.ಎಲ್.ಕುಂಡಂತಾಯ.