ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರಂಗವಲ್ಲಿಯಲ್ಲಿ ದೇವರ‌ ಚಿತ್ರವ ಮೂಡಿಸುವ ಕಲಾಕಾರ ಹರೀಶ್ ಶಾಂತಿ

Posted On: 15-11-2020 02:40PM

ನಾವು ಒಬ್ಬ ಕಲಾವಿದನ ಬಗ್ಗೆ ತಿಳಿಯುವ ಮುಂಚೆ ಮತ್ತು ಕಲೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಖಂಡಿತವಾಗಿ ಇದೆ. ಕಲೆಯ ಬಗ್ಗೆ ಚೊಕ್ಕದಾಗಿ ಹೇಳುವುದಾದರೆ ಮಾನವನ ವಿಶಿಷ್ಟ ಚಟುವಟಿಕೆಯನ್ನು ಕಲೆ ಅಂತ ಹೇಳಬಹುದು. ಕಲಾವಿದನೆಂದರೆ ಕಲೆಯನ್ನು ಸೃಷ್ಟಿಸುವವ, ಅಭ್ಯಾಸ ಮಾಡುವವ ಅಥವಾ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ. ಎಲ್ಲಾ ರೀತಿಯಾದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಕಲಾವಿದ ಅಂತ ಗುರುತಿಸಬಹುದು. ಮನದಿ ಮೂಡಿದ ಅಸ್ಥಿರ ಬಿಂಬಕ್ಕೆ ಸುಸ್ಥಿರ ರೂಪ ನೀಡುವವ, ಪದ ಮತ್ತು ರಾಗಕ್ಕೆ ನಿಲುಕ್ಕದ್ದನ್ನು ಬಣ್ಣಗಳ ಮೂಲಕ, ಕಂಡದ್ದನ್ನು ಕಂಡ ಹಾಗೆ ಕಾಣದ್ದನ್ನು ಕಾಣುವಹಾಗೆ ಬಿಂಬಿಸುವ, ಎಂತಹ ಮನಸ್ಸನ್ನು ಬೇಕಾದರೂ ಕೇಂದ್ರೀಕೃತ ಮಾಡಬಲ್ಲ, ಮನದಲ್ಲಿ ಭಕ್ತಿಭಾವ ಮೂಡಿಸಬಲ್ಲ ರಂಗೋಲಿ ಚಿತ್ರಕಾರ ಇವರೇ ಹರೀಶ್ ಶಾಂತಿ.

ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಮಾತಿನಂತೆ ಸ್ವಾಧಿಸಿದವರಿಗೇ ಗೊತ್ತು ಈತನ ರಂಗೋಲಿಯ ಸೊಬಗು. ಮೂಲತ: ಬಂಟ್ವಾಳದ ಪಂಜಿಕಲ್ಲು ನಿವಾಸಿಯಾದ ಇವರು ದಿವಂಗತ ವಿಶ್ವನಾಥ ಪೂಜಾರಿ ಮತ್ತು ಸುಶೀಲಾ ದಂಪತಿಗಳ ದ್ವಿತೀಯ ಪುತ್ರ. ಪ್ರಾಥಮಿಕ ವಿದ್ಯಾಭ್ಯಾಸವನ್ನು ದಡ್ಡಲಕಾಡು ಹಾಗೂ ಪ್ರೌಢಶಿಕ್ಷಣವನ್ನು ಕ್ರಿಸ್ತಜ್ಯೋತಿ ಶಾಲೆ ಅಗ್ರಾರದಲ್ಲಿ ಮುಗಿಸಿ ತದನಂತರ ತಂದೆಯ ಆಸೆಯಂತೆ ಮುಂದಿನ ವಿದ್ಯಾಭ್ಯಾಸವನ್ನು ಪೌರೋಹಿತ್ಯದೆಡೆಗೆ ಸಾಗಿಸಿದರು. ಕುದ್ರೋಳಿಯ ಗೋಕರ್ಣಾಥ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಸರ್ಟಿಫಿಕೇಟ್ ಕೋರ್ಸ್ ಇನ್ ವೇದ ತಂತ್ರಮ್ ವಿಷಯವಾಗಿ ಅಭ್ಯಸಿಸಿದರು. ನಂತರ ಕಟೀಲಿನಲ್ಲಿ ಕೂಡ ತನ್ನ ವೈದಿಕ ಅಧ್ಯಯನವನ್ನು ಮುಂದುವರಿಸಿ, ಕುದ್ರೋಳಿ ಗೋಕರ್ಣಾಥ ಕ್ಷೇತ್ರದಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿದರು. ನಂತರ ಉಡುಪಿಯ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಕೂಡ ವೃತ್ತಿಗೈದಿರುತ್ತಾರೆ. ತದನಂತರ ಲೋಕೇಶ್ ಶಾಂತಿ ಮತ್ತು ವಸಂತ್ ಶಾಂತಿ ಎಂಬುವರೊಂದಿಗೆ ಜೊತೆಗೂಡಿರುತ್ತಾರೆ.

ವೈದಿಕದ ಜೊತೆಯಲ್ಲಿ ಚಿತ್ರಕಲೆಯಲ್ಲೂ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ವೈದಿಕತೆಗೆ ಸಂಬಂಧಿಸಿದಂತಹ ರಂಗೋಲಿಯನ್ನು ಬಿಡಿಸುವ ಮುಖಾಂತರವೇ ತನ್ನ ಆಸಕ್ತಿಯ ಕಲೆಯನ್ನು ಹೊರ ಚಿಮ್ಮಿಸಿದವರು. ಇವರ ಜೀವನವು ರಂಗೋಲಿ ಆಸಕ್ತಿಗೆ ಇನ್ನೂ ಹೆಚ್ಚು ಒಲವು ಮೂಡುವಲ್ಲಿ ವಸಂತ್ ಶಾಂತಿಯವರ ಪಾತ್ರವನ್ನು ಕೂಡ ಮುಖ್ಯವೆನ್ನಬಹುದು. ವಸಂತ್ ಶಾಂತಿಯವರ ಜೊತೆ ವೃತ್ತಿಗೂಡಿದಾಗ ಸಿಕ್ಕ ಅವಕಾಶಗಳು ಮತ್ತು ವಸಂತ್ ಶಾಂತಿಯವರ ಪ್ರೋತ್ಸಾಹವೇ ಉತ್ತಮ ರಂಗೋಲಿ ಕಲಾಕಾರರನ್ನಾಗಿಸಿದ್ದು ಅಂದರೆ ತಪ್ಪಿಲ್ಲ.

ಸುಮಾರು ಹದಿನೈದು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿರುವವರು ಇದುವರೆಗೂ ಸುಮಾರು ಎರಡು ಸಾವಿರದಿಂದ ಮೂರು ಸಾವಿರದವರೆಗೆ ರಂಗೋಲಿಗಳನ್ನು ಬಿಡಿಸಿ ಜನಮನ್ನಣೆ ಗಳಿಸಿದ್ದಾರೆ. ಇವರು ಕೇವಲ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ತನ್ನ ಪ್ರತಿಭೆಯನ್ನು ಗುರುತಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ವೃತ್ತಿಯಲ್ಲಿ ಪೌರೋಹಿತ್ಯ ಆರಿಸಿಕೊಂಡ ಇವರು ಇನ್ನೊಂದು ಅದ್ಭುತವನ್ನು ಹೊಂದಿದ್ದಾರೆ. ಅದೇನೆಂದರೆ ಮಂತ್ರ ಪಠಣೆಗೆ ಕುಳಿತರೆ ಎಲ್ಲರನ್ನೂ ನಿಬ್ಬೆರಗಾಗಿಸಿ ಮಂತ್ರಮುಗ್ಧರನ್ನಾಗಿಸುವ ಸ್ವರ ಮಾಂತ್ರಿಕ ಅನ್ನಬಹುದು. ಇವರ ಇಂತಹ ಅತ್ಯದ್ಭುತ ಪ್ರತಿಭೆಗೆ ಇನ್ನಷ್ಟು ಜನ ಮನ್ನಣೆ ಸಿಗಬೇಕು. ಇನ್ನಷ್ಟು ಎತ್ತರಕ್ಕೆ ಬೆಳೆಯಲು ಇಂತಹ ಕಲಾರತ್ನಗಳಿಗೆ ನಾವೆಲ್ಲ ಪ್ರೋತ್ಸಾಹಕರಾಗಿರಬೇಕು. ನಮ್ಮ ನಾಡಿನಲ್ಲಿ ಕಲೆಯು ನಿರಂತರವಾಗಿ ಹರಿಯುವಂತಾಗಬೇಕು. ಲೇಖನ :ಸಂಧ್ಯಾ ಬಂಟ್ವಾಳ್