ಉಡುಪಿಯ ಕರಂಬಳ್ಳಿ ಗ್ರಾಮದ ನಿವಾಸಿಯಾಗಿರುವ ಸುನೀತಾ ಹುಟ್ಟಿನಿಂದಲೇ ಸೌಂದರ್ಯವತಿಯಾಗಿದ್ದರೂ ಪೋಲಿಯೋ ಎಂಬ ಮಹಾಮಾರಿ ಆಕೆಯ ಎರಡೂ ಕಾಲುಗಳನ್ನ ಕಿತ್ತುಕೊಂಡಿತ್ತು. ಈ ಅಂಗವೈಕಲ್ಯತೆ ಆಕೆಯ ನೆಮ್ಮದಿ ಹಾಳುಮಾಡಿತ್ತು. ಪಿಯುಸಿವರೆಗೆ ಓದಿಕೊಂಡು ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡಾ ನಿರಾಧಾರವಾಗುತ್ತೆ ಎಂದು ಖಿನ್ನತೆಗೆ ಜಾರಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಈಕೆಯ ಭಾಗ್ಯದ ಬಾಗಿಲು ತೆರೆದಿದ್ದಾರೆ. ದುಬೈನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ ಮಂಗಳೂರಿನ ನಿವಾಸಿ ಸಂದೀಪ್ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ.
ಮನೆಯವರ ಒಪ್ಪಿಗೆಯಂತೆ ನಿನ್ನೆ ಈ ಅಪರೂಪದ ಮದುವೆಗೆ ಉಡುಪಿಯ ಕಂಬಳ್ಳಿ ದೇವಸ್ಥಾನ ಸಾಕ್ಷಿಯಾಯ್ತು. ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಉಡುಪಿಯ ಕರಂಬಳ್ಳಿಯಲ್ಲಿ ನಡೆದ ಈ ಆದರ್ಶ ಮದುವೆಯೇ ಸಾಕ್ಷಿ. ಈಗಿನ ಕಾಲದಲ್ಲಿ ದೇಹದಲ್ಲಿ ಒಂದು ಸಣ್ಣ ವೈಕಲ್ಯತೆ ಕಂಡರೂ ಹುಡುಗಿ ನನಗೆ ಬೇಡ ಅನ್ನುವವರೆ ಜಾಸ್ತಿ. ಆದರೆ, ದುಬೈನಂತಹ ಸಿರಿತನದ ನಾಡಿನಲ್ಲಿ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸದಲ್ಲಿರುವ ಯುವಕ ಕಾಲಿಲ್ಲದ ಯುವತಿಗೆ ಬಾಳುಕೊಡುವ ನಿರ್ಧಾರ ಮಾಡಿ ಸುನಿತಾಳ ಕೈಹಿಡಿದಿರೋದು ಮಾನವೀಯತೆಗೆ ಹಿಡಿದ ಕೈಗನ್ಬಡಿ ಅಂದರೆ ತಪ್ಪಾಗಲ್ಲ.