ಇನ್ನಂಜೆ : ಅಧಿಕಾರಿಗಳಿಂದ ಕ್ರಾಸಿಂಗ್ - ಪಾಸಿಂಗ್ ಸ್ಟೇಷನ್ ಕಾಮಗಾರಿ ಪರಿಶೀಲನೆ
Posted On:
29-11-2020 02:00PM
ಕಾಪು ತಾಲೂಕಿನ ಇನ್ನಂಜೆ ರೈಲ್ವೇ ನಿಲ್ದಾಣ ರಚನೆ ಸಹಿತವಾಗಿ ಕ್ರಾಸಿಂಗ್ ಮತ್ತು ಪಾಸಿಂಗ್ ಸ್ಟೇಷನ್ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವಾಗಿ ಮೈನ್ ಲೈನ್‌ನಿಂದ ಕ್ರಾಸಿಂಗ್ ಲೈನ್‌ಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಕೊಂಕಣ್ ರೈಲ್ವೇ ಕಾರವಾರ ರೀಜನ್ ರೀಜನಲ್ ಪ್ರಬಂಧಕ ಬಿ. ಬಿ. ನಿಕ್ಕಂ ಹೇಳಿದ್ದಾರೆ. ಇನ್ನಂಜೆ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೇ ನಿಲ್ದಾಣ ಮತ್ತು ಕ್ರಾಸಿಂಗ್-ಪಾಸಿಂಗ್ ಸ್ಟೇಷನ್ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಇನ್ನಂಜೆ ರೈಲ್ವೇ ನಿಲ್ದಾಣ ಮತ್ತು ಪಾಸಿಂಗ್ - ಕ್ರಾಸಿಂಗ್ ಸ್ಟೇಷನ್ ಕಾಮಗಾರಿಗೆ ಅಂದಾಜು ೧೨ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ನೂತನ ರೈಲ್ವೇ ನಿಲ್ದಾಣ ನಿರ್ಮಾಣ, ೬೨೦ ಮೀಟರ್ ಉದ್ದದ ಕ್ರಾಸಿಂಗ್ - ಪಾಸಿಂಗ್ ಟ್ರ‍್ಯಾಕ್, ೫೬೦ ಮೀಟರ್ ಉದ್ದದ ಫ್ಲಾಟ್ ಫಾರಂ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಮೂಲಭೂತ ಸೌಕರ್ಯಗಳ ಜೋಡಣಾ ಕಾರ್ಯಪೂರ್ಣಗೊಂಡಿದೆ ಎಂದರು.
ರೈಲ್ವೇ ನಿಲ್ದಾಣ ರಚನೆ ಕಾಮಗಾರಿಯು ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್ ೧೯ ಕಾಮಗಾರಿ ವಿಳಂಭವಾಗಿತ್ತು. ಲಾಕ್‌ಡೌನ್ ತೆರವಾದ ಬಳಿಕ ಕಾಮಗಾರಿಗೆ ಮತ್ತೆ ವೇಗ ನೀಡಲಾಗಿದ್ದು ಮುಂದೆ ನೂತನ ಟ್ರ‍್ಯಾಕ್‌ನಲ್ಲಿ ಪ್ರಾಯೋಗಿಕವಾಗಿ ರೈಲು ಓಡಿಸಲು ಸಿದ್ಧತೆಗಳು ಪೂರ್ಣಗೊಳಿಸಲಾಗಿದೆ ಎಂದರು.
ಸಾಮಾನ್ಯ ರೈಲ್ವೇ ಸ್ಟೇಷನ್, ಪಾಸಿಂಗ್ ಸ್ಟೇಷನ್‌ಗಳಲ್ಲಿ ಯಾವೆಲ್ಲಾ ವ್ಯವಸ್ಥೆಗಳು ಇರುತ್ತವೆಯೋ ಅದೇ ಮಾದರಿಯ ಎಲ್ಲಾ ವ್ಯವಸ್ಥೆಗಳನ್ನು ಇಲ್ಲಿ ಜೋಡಿಸಲಾಗಿದೆ. ವಿಶ್ರಾಂತಿ ಗೃಹ, ಕ್ಯಾಂಟಿನ್, ಟಿಕೆಟ್ ಕೌಂಟರ್ ಸಹಿತ ವಿವಿಧ ಸೌಲಭ್ಯಗಳು ದೊರಕಲಿವೆ ಎಂದರು. ರೈಲು ಓಡಾಟ ಯಾವಾಗ ಆರಂಭಗೊಳ್ಳುತ್ತದೆ ಎನ್ನುವುದರ ಬಗ್ಗೆ ರೈಲ್ವೇ ಮಂಡಳಿಯೇ ತೀರ್ಮಾನ ತೆಗೆದುಕೊಳ್ಳಲಿದೆ. ಕೊರೊನಾ ಕಾರಣದಿಂದಾಗಿ ಜಾರಿಗೆ ಬಂದ ಲಾಕ್‌ಡೌನ್‌ನಿಂದಾಗಿ ತೊಂದರೆಗೊಳಗಾದ ರೈಲ್ವೇ ಮಂಡಳಿ ಇನ್ನೂ ಚೇತರಿಕೆಯ ಹಾದಿಯನ್ನು ಕಂಡಿಲ್ಲ. ಕೆಲವೊಂದು ರೈಲುಗಳ ಓಡಾಟಕ್ಕೆ ಚಾಲನೆ ನೀಡಲಾಗಿದ್ದರೂ, ಶೇ. ೫೦ರಷ್ಟು ಮಾತ್ರಾ ಜನ ಸ್ಪಂಧನೆ ನೀಡುತ್ತಿದ್ದಾರೆ. ಇದರಿಂದಾಗಿ ಇಲಾಖೆಗೆ ಹೊರೆ ಹೆಚ್ಚುತ್ತಿದೆ. ಕೆಲವು ರಾಜ್ಯಗಳಲ್ಲಿ ಮತ್ತೆ ಕೊರೊನಾ ಎರಡನೇ ಹಂತದ ಭೀತಿ ಎದುರಾಗಿರುವುದರಿಂದ ಪೂರ್ಣ ಪ್ರಮಾಣದ ರೈಲು ಓಡಾಟ ಇನ್ನೂ ವಿಳಂಭವಾಗುವ ಸಾಧ್ಯತೆ ಇದೆ.
ರೈಲ್ವೇ ರೀಜನಲ್ ಅಧಿಕಾರಿಗಳಾದ ಆರ್.ಐ. ಪಾಟೀಲ್, ದೀಪಕ್ ಶೆಟ್ಟಿ, ಎ.ಬಿ. ಪುಲೆ, ಭಾಗ್ಯಪ್ರಕಾಶ್ ಶೆಟ್ಟಿ, ವಿನಯಕುಮಾರ್, ಚೀಪ್ ಇಂಜಿನಿಯರ್ ಗೋಪಾಲ್ ರಾಜ್, ಸೀನಿಯರ್ ಇಂಜಿನಿಯರ್ ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.