ಉಡುಪಿ ಕೃಷ್ಣ ಮಠದ ನಾಮಫಲಕದಲ್ಲಿ ಮರೆಯಾದ ಕನ್ನಡ
Posted On:
01-12-2020 05:18PM
ಉಡುಪಿ: ವಿಶ್ವಪ್ರಸಿದ್ದ ಉಡುಪಿ ಶ್ರೀ ಕೃಷ್ಣ ಮಠದ ಮಹಾದ್ವಾರದಲ್ಲಿ ಇದ್ದ ಕನ್ನಡ ಫಲಕವನ್ನು ತೆಗೆದು ತುಳು ಮತ್ತು ಸಂಸ್ಕೃತದಲ್ಲಿ ಹೊಸ ನಾಮ ಫಲಕ ಅಳವಡಿಸಿದ್ದು ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಉಡುಪಿಯ ಕೃಷ್ಣ ಮಠದ ಮಹಾದ್ವಾರದಲ್ಲಿ ಈವರೆಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಫಲಕವಿದ್ದು ಅದನ್ನು ತೆಗೆದು ಈಗ ಹೊಸದಾಗಿ ತುಳು ಮತ್ತು ಸಂಸ್ಕೃತದಲ್ಲಿ ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂದು ಬರೆಯಲಾಗಿದೆ. ಪರ್ಯಾಯ ಅದಮಾರು ಮಠದಿಂದ ಫಲಕ ಬದಲಾವಣೆ ನಡೆದಿದ್ದು ಫಲಕದಲ್ಲಿ ಕನ್ನಡ ಭಾಷೆ ಏಕಿಲ್ಲ ಎನ್ನುವುದು ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿದ್ದು ಸರಿಯಾದ ಕ್ರಮವಲ್ಲ ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ.ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆಧ್ಯತೆ. ನಾಮಫಲಕ ದಲ್ಲಿ ಮೊದಲು ಕನ್ನಡ ಇರಬೇಕು ಆನಂತರ ಇತರ ಭಾಷೆ. ಒಂದು ಧಾರ್ಮಿಕ ಸಂಸ್ಥೆ ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ. ನಾಮ ಫಲಕದ ಈ ಪ್ರಕರಣ ಸರ್ಕಾರದ ಕಾನೂನಿನ ಸ್ವಷ್ಟ ಉಲ್ಲಂಘನೆಯಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿಪಡಿಸುವವರೆಗೂ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದ್ದಾರೆ.
ಮೊದಲು ಕನ್ನಡ. ಆನಂತರ ಇತರೆ ಭಾಷೆ ನಾಮಫಲಕದಲ್ಲಿಇರಲಿ ಕನ್ನಡ ಮತ್ತು ಸೋದರ ಭಾಷೆ ತುಳುವಿನ ನಡುವೆ ಕಂದಕ ನಿರ್ಮಾಣ ಮಾಡುವುದು ಸಹ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪರ್ಯಾಯ ಅದಮಾರು ಮಠ ಕೂಡ ಸ್ಪಷ್ಟನೆ ನೀಡಿದ್ದು, ಮಠ ಪುನಶ್ಚೇತನಗೊಳಿಸುವಾಗ ಪರ್ಯಾಯ ಸ್ವಾಮೀಜಿಗಳ ಅಪೇಕ್ಷೆಯಂತೆ ಅಲ್ಲಿರುವ ಪ್ಲಾಸ್ಟಿಕ್ ಬೋರ್ಡನ್ನು ತೆಗೆದು ಮರದಲ್ಲಿ ತಯಾರಾದ ಬೋರ್ಡನ್ನು ಹಾಕುವ ಯೋಜನೆ ಇತ್ತು. ಅದರಲ್ಲಿ ಮೊದಲನೇ ಬೋರ್ಡು ಕನ್ನಡ ಬಂದು ಬಳಿಕ ಸಂಸ್ಕೃತ ಮತ್ತು ತುಳು ಲಿಪಿಯ ಬೋರ್ಡ್ ಹಾಕುವ ಯೋಜನೆ ಇತ್ತು. ಅದರಂತೆ ಫಲಕ ತಯಾರಾಗುವ ವೇಳೆ ಲಕ್ಷದೀಪ ಬಂದ ಕಾರಣ ಕನ್ನಡ ಭಾಷೆಯ ಫಲಕ ತಯಾರಾಗುತ್ತಿದ್ದು, ತುಳು ಮತ್ತು ಸಂಸ್ಕೃತ ಭಾಷೆಯ ಬೋರ್ಡ್ ಹಾಕಲಾಗಿದೆ. ತುಳು ಭಾಷೆಗೂ ಗೌರವ ನೀಡಬೇಕು ಯಾಕೆಂದರೆ ಮಠದಲ್ಲಿನ ಗೃಂಥಿ ಲಿಪಿ ತುಳು ಭಾಷೆಯಲ್ಲಿದ್ದ ಕಾರಣ ತುಳು ಫಲಕ ಹಾಕಲಾಗಿದೆ. ಕನ್ನಡದ ಫಲಕ ಮೊದಲ ಭಾಗದಲ್ಲಿ ಇರಲಿದ್ದು ಬಳಿಕ ಉಳಿದ ಭಾಷೆಯ ಬೋರ್ಡ್ ಬರಲಿವೆ ಎಂದು ಮಠದ ಮ್ಯಾನೇಜರ್ ಗೋವಿಂದ್ ರಾಜ್ ಹೇಳಿದ್ದಾರೆ.