ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

9 ಗಂಟೆಯಲ್ಲಿ ಸಂಪೂರ್ಣ ಕುರಾನ್ ಓದಿದ ಮುಹಮ್ಮದ್ ಮುಝಮ್ಮಿಲ್

Posted On: 29-12-2020 12:10PM

ಕಾಪು : ಕುರಾನ್ ಕಂಠಪಾಠ ಮಾಡಿದ 15ವರ್ಷದ ಬಾಲಕ ಮುಹಮ್ಮದ್ ಮುಝಮ್ಮಿಲ್ ಪವಿತ್ರ ಕುರಾನಿನ ಮೂವತ್ತು ಕಾಂಡವನ್ನು ಕೇವಲ 9 ಗಂಟೆಯಲ್ಲಿ ತನ್ನ ಉಸ್ತಾದರ ಮುಂದೆ ಓದಿ ಪೂರ್ತಿಗೊಳಿಸಿದ್ದಾರೆ. ಮೂಳೂರಿನ ಅಲ್ಇಹ್ಸಾನ್ ಹಿಫ್ಲ್ ವಿಭಾಗದ ವಿದ್ಯಾರ್ಥಿಯಾಗಿರುವ ಮುಝಮ್ಮಿಲ್, ಕೇವಲ ಒಂಬತೇ ತಿಂಗಳಲ್ಲಿ ಕುರಾನ್ (ಮೂವತ್ತು ಕಾಂಡವನ್ನು) ಸಂಪೂರ್ಣ ಕಂಠಪಾಠ ಮಾಡಿದ್ದನು. ಇತ್ತೀಚೆಗೆ ಮೂಳೂರು ಸುನ್ನೀ ಸೆಂಟರ್ನಲ್ಲಿ ನಡೆದ ವಿಶೇಷ ಮಜ್ಲಿಸ್ನಲ್ಲಿ ತನ್ನ ಗುರುಗಳಾದ ಹಾಫಿಲ್ ಹಾರಿಸ್ ಸಅದಿಯವರ ಮುಂದೆ 600 ಪುಟ, 114 ಅಧ್ಯಾಯಗಳ, 6666 ಶ್ಲೋಕಗಳಿರುವ ಕುರಾನ್ ತಪ್ಪು ಬಾರದಂತೆ ಓದಿ ಮುಗಿಸುವ ಮೂಲಕ ಗಮನಸೆಳೆದಿದ್ದಾನೆ.

ಬೆಳಿಗ್ಗೆ 6.30 ಕ್ಕೆ ಕುರಾನ್ ಪಠಣ ಆರಂಭಿಸಿದ ಮುಝಮ್ಮಿಲ್ ಊಟ, ತಿಂಡಿ ಹಾಗು ಅತ್ಯವಶ್ಯ ಕೆಲಸಕ್ಕೆ 4 ಗಂಟೆ ವಿನಿಯೋಗಿಸಿ ಸಂಜೆ 7.30ರ ವೇಳೆಗೆ ಪೂರ್ಣಗೊಳಿಸಿದ್ದಾನೆ. ಒಟ್ಟು 9ಗಂಟೆಯಲ್ಲಿ ತಾನು ಕಂಠಪಾಠ ಮಾಡಿದ ಸಂಪೂರ್ಣ ಕುರಾನನ್ನು ಪಠಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರಾರಂಭದಿಂದ ಅಂತ್ಯದವರೆಗೆ ಒಮ್ಮೆಯೂ ಕುರಾನ್ ನೋಡಲು ಅವಕಾಶವಿರಲಿಲ್ಲ. ಕೊನೆಗೆ ಉಸ್ತಾದರವರ ಹಾಗೂ ಹಿಫ್ಲ್ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಖತಮ್ ಸಮಾಪನಗೊಳಿಸಲಾಯಿತು.

ಅಸಿಸ್ಟೆಂಟ್ ಮ್ಯಾನೇಜರ್ ಸಿದ್ದೀಕ್ ಸಅದಿ ಉಸ್ತಾದ್, ದಅವ ಕಾಲೇಜು ಮುಖ್ಯಸ್ಥರಾದ ಸ್ವಾಬಿರ್ ಸಅದಿ ಉಸ್ತಾದ್, ಇತರ ಸಿಬ್ಬಂದಿಗಳಾದ ಹಾಫಿಲ್ ಹಾರಿಸ್ ಸಅದಿ, ಹಾಫಿಲ್ ರಫೀಕ್ ನಿಝಾಮಿ, ಶಫೀಕ್ ಅಹ್ಸನಿ, ಹಸೀಬ್ ಅಹ್ಸನಿ ಹಾಗೂ ಸುಮಾರು ೨೭ ರಷ್ಟು ಹಿಫ್ಲ್ ವಿದ್ಯಾರ್ಥಿಗಳು ಹಾಜರಿದ್ದರು. ಖತ್ಮುಲ್ ಕುರಾನ್ ದುಆದೊಂದಿಗೆ ವಿದ್ಯಾರ್ಥಿಗೆ ಶುಭ ಹಾರೈಸಿ ಸನ್ಮಾನಿಸಲಾಯಿತು.

ಬಡ ಕುಟುಂಬದ ವಿದ್ಯಾರ್ಥಿ: ಬೋಳಿಯಾರ್ ಗ್ರಾಮದ ರಂತಡ್ಕ ನಿವಾಸಿ ಅಬ್ದುಲ್ ಅಝೀಝ್ ಉಸ್ತಾದರ ಪುತ್ರನಾದ ಮುಝಮ್ಮಿಲ್, ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಮೂಳೂರು ಸುನ್ನೀ ಸೆಂಟರ್ ಸಂಸ್ಥೆಯ ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಅಳಕೆ ಮಜಲ್ ಮುಹಮ್ಮದ್ ಮುಸ್ಲಿಯಾರ್ ಅಲ್-ಖಾಸಿಮಿರವರು ವಿದ್ಯಾರ್ಥಿಯನ್ನು ಹಾಗೂ ಅವನೊಂದಿಗಿದ್ದ ಇಬ್ಬರು ಅಣ್ಣಂದಿರನ್ನು ಮೂಳೂರು ಸುನ್ನೀ ಸೆಂಟರ್ ಹಿಫ್ಳುಲ್ ಕುರಾನ್ ಕಾಲೇಜಿನಲ್ಲಿ ಸೇರಿಸಿದ್ದರು.