ಪಣಿಯೂರು : ಪಡುಬಿದ್ರಿ ರೈಲು ನಿಲ್ದಾಣದ ಹೆಸರು ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಮಾಲೋಚನಾ ಸಭೆ
Posted On:
07-01-2021 10:55AM
ಕಾಪು : ಬೆಳಪು ಗ್ರಾಮದ ಪಣಿಯೂರಿನಲ್ಲಿ ಇರುವ ಪಡುಬಿದ್ರಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ, ಬೆಳಪು ರೈಲು ನಿಲ್ದಾಣ ಎಂದು ಪುನರ್ ನಾಮಕರಣ ಮಾಡುವಂತೆ ಹಾಗೂ ರೈಲ್ವೇ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಜೋಡಿಸಿ ಮುಂಬಯಿ - ಬೆಂಗಳೂರು ರೈಲುಗಳಿಗೆ ನಿಲುಗಡೆಗೆ ಒತ್ತಾಯಿಸಿ ಸುತ್ತಲಿನ ಗ್ರಾಮದ ಜನರನ್ನು ಸೇರಿಸಿಕೊಂಡು ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ವಠಾರದಲ್ಲಿ ಮಂಗಳವಾರ ಸಮಾಲೋಚನಾ ಸಭೆ ನಡೆಸಲಾಯಿತು.
ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಬೆಳಪು ಗ್ರಾ.ಪಂ. ಮಾಜಿ ಸದಸ್ಯ ಕರುಣಾಕರ ಶೆಟ್ಟಿ ಪಣಿಯೂರು ಮಾತನಾಡಿ, ಬೆಳಪು ಗ್ರಾಮದಲ್ಲಿ ಇರುವ ರೈಲು ನಿಲ್ದಾಣವು ಪಡುಬಿದ್ರಿ ನಿಲ್ದಾಣ ಎಂಬ ಹೆಸರಿನೊಂದಿಗೆ ಕರೆಯಲ್ಪಡುತ್ತಿದ್ದು ಇದರೊಂದಿಗೆ ವಿವಿಧ ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗಿದೆ. ಮುಂಬಯಿಗೆ ಹೋಗುವ ರೈಲು ಆದರೂ ನಿಲುಗಡೆಯಾಗುತ್ತದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಈ ಬಗ್ಗೆ ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ನಾವೆಲ್ಲರೂ ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಇದ್ದ ರೈಲುಗಳ ನಿಲುಗಡೆಯ ಅವಕಾಶದಿಂದಲೂ ವಂಚಿತರಾಗಬೇಕಾದೀತು ಎಂದರು.
ಪತ್ರಕರ್ತ ರಾಕೇಶ್ ಕುಂಜೂರು ಬೆಳಪು ರೈಲು ನಿಲ್ದಾಣ, ರೈಲ್ವೇ ಟ್ರಾಕ್ ನ್ನು ದಾಟಿಕೊಂಡು ಹತ್ತಾರು ಕುಟುಂಬಗಳು ನಡೆದಾಡುತ್ತಿದ್ದು, ಕೃಷಿ ಕೆಲಸ ಕಾರ್ಯಗಳಿಗೂ ತೊಂದರೆಯುಂಟಾಗುತ್ತಿದೆ. ಕೊಂಕಣ ರೈಲು ಮಾರ್ಗಕ್ಕಾಗಿ ಹಲವಾರು ಕುಟುಂಬಗಳು ಭೂಮಿಯನ್ನು ಕಳೆದುಕೊಂಡಿದ್ದು, ಅವರಿಗೆ ಸರಿಯಾಗಿ ಉದ್ಯೋಗವೂ ಸಿಕ್ಕಿಲ್ಲ. ಕನಿಷ್ಟ ಪಕ್ಷ ಸ್ಥಳೀಯ ಜನರ ಬೇಡಿಕೆಯಂತೆ ಮುಂಬಯಿ - ಬೆಂಗಳೂರು ರೈಲುಗಳ ನಿಲುಗಡೆಯ ಬೇಡಿಕೆಯಾದರೂ ಈಡೇರಲಿ ಎಂಬ ಆಶಯದೊಂದಿಗೆ ನಾವು ಹೋರಾಟ ನಡೆಸಬೇಕಿದೆ ಎಂದರು.
ಬಿಜೆಪಿ ಮುಖಂಡ ಸುರೇಂದ್ರ ಪಣಿಯೂರು ಮಾತನಾಡಿ, ಬೆಳಪು ಮಾತ್ರವಲ್ಲದೇ ಸುತ್ತಲಿನ ಉಚ್ಚಿಲ, ಎರ್ಮಾಳು, ಪಡುಬಿದ್ರಿ, ಎಲ್ಲೂರು, ಮುದರಂಗಡಿ, ಮಜೂರು, ಕುತ್ಯಾರು, ಶಿರ್ವ ಆಸುಪಾಸಿನ ಗ್ರಾಮಗಳ ಜನತೆಯ ಅನುಕೂಲಕ್ಕಾಗಿ ಬೆಳಪು ರೈಲು ನಿಲ್ದಾಣ ಮೇಲ್ದರ್ಜೆಗೇರಬೇಕಿದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜೊತೆಗೆ ಮಾತುಕತೆ ನಡೆಸಲು, ವಿವಿಧ ಜನಪ್ರತಿನಿಧಿಗಳ ಬಳಿಗೆ ನಿಯೋಗ ತೆರಳುವ ಅಗತ್ಯತೆಯಿದೆ. ರೈಲು ನಿಲ್ದಾಣ ಮೇಲ್ದರ್ಜೆಗೇರುವ ಮತ್ತು ರೈಲು ನಿಲುಗಡೆಯ ಹೋರಾಟಕ್ಕೆ ನಾವೆಲ್ಲರೂ ಜೊತೆಗೂಡಿ ಕೈ ಜೋಡಸಿಸಬೇಕಿದೆ ಎಂದರು.
ಬೆಳಪು ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಮತ್ತು ಮುಂಬಯಿ-ಬೆಂಗಳೂರು ರೈಲು ನಿಲುಗಡೆಗೆ ಹಕ್ಕೊತ್ತಾಯ ಮಂಡಿಸಲು ಮುಂದಿನ ದಿನಗಳಲ್ಲಿ ಬೆಳಪು ಸುತ್ತಲಿನ ಪ್ರತೀ ಗ್ರಾಮಗಳಲ್ಲಿ ಮತ್ತು ಮುಂಬಯಿ ಮಹಾನಗರದಲ್ಲೂ ಸಭೆ ನಡೆಸಲು ತೀರ್ಮಾನಿಸಲಾಯಿತು. ಅಂಚೆ ಕಾರ್ಡ್ ಮೂಲಕ ಹಕ್ಕೊತ್ತಾಯ ಮಂಡಿಸಲು ಮತ್ತು ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಹಕ್ಕೊತ್ತಾಯ ಮಂಡನೆಗೆ ಪ್ರಮುಖರನ್ನು ಸೇರಿಸಿಕೊಂಡು ಕಾರ್ಯಕಾರಿ ಸಮಿತಿ ರಚಿಸಲು ನಿರ್ಧರಿಸಲಾಯಿತು.
ಬೆಳಪು ಗ್ರಾಮದ ಪ್ರಮುಖರಾದ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ನಿರಂಜನ್ ಶೆಟ್ಟಿ ಪಣಿಯೂರು, ಆನಂದ ಶೆಟ್ಟಿ ಕಬೇರಗುತ್ತು, ಸುಕುಮಾರ ಶೆಟ್ಟಿ ನಡಿಮನೆ, ವಸುಂಧರ್ ಶೆಟ್ಟಿ ಬುಳಿಬೆಟ್ಟುಗುತ್ತು, ದಿವಾಕರ ಶೆಟ್ಟಿ, ಶಿವ ಕುಮಾರ್, ವಸಂತ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕ ಕರುಣಾಕರ ಶೆಟ್ಟಿ ಪಣಿಯೂರುಗುತ್ತು ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು.