ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಯಕ್ಷರಂಗದಲ್ಲಿ ಅರಳಬೇಕಾದ ಪ್ರತಿಭೆಗೆ ಕಾಡುತ್ತಿದೆ ಅನಾರೋಗ್ಯ ಸಮಸ್ಯೆ - ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ ಈ ಕುಟುಂಬ

Posted On: 16-01-2021 07:23PM

ಮಂಗಳೂರು : ಶೈಕ್ಷಣಿಕ ಮತ್ತು ಯಕ್ಷಗಾನ ರಂಗದಲ್ಲಿ ಬೆಳೆಯುತ್ತಾ ಬರುತ್ತಿರುವ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿ ಕೇರಳ ಮೂಲದ ಜಿತೇಶ್ ಕುಮಾರ್ ರೈ ಮೂತ್ರ ಪಿಂಡಗಳ ಸಮರ್ಪಕ ಬೆಳವಣಿಗೆಯಿಲ್ಲದೇ ಆಪತ್ತಿಗೆ ಸಿಲುಕಿದ್ದಾರೆ. ತನ್ನ ಗಾಂಭೀರ್ಯದ ವೇಷಗಳಿಂದ ರಂಗದಲ್ಲಿ ಇತರರನ್ನು ರಂಜಿಸುತ್ತಿದ್ದ ಬಾಲಕ ಈಗ ತನ್ನ ಜೀವಕ್ಕಾರು ಆಸರೆ ಎಂಬ ಆತಂಕಕ್ಕೆ ಸಿಲುಕಿ, ಆಸ್ಪತ್ರೆಯಲ್ಲಿ ಮಲಗಿದ್ದು, ಮಗನನ್ನು ಹಠಾತ್ ಆಗಿ ಕಾಡಿದ ಅನಾರೋಗ್ಯದ ಚಿಕಿತ್ಸೆಗಾಗಿ ಹಣ ಹೊಂದಿಸಿಕೊಳ್ಳಲು ಆತನ ಮನೆಯವರು ಪರದಾಡುವಂತಾಗಿದೆ.

ಮಂಜೇಶ್ವರ ತಾಲೂಕಿನ ಕಾಟುಕುಕ್ಕೆ ದಂಬೆಕ್ಕಾನ ನಿವಾಸಿ ವಿಶ್ವನಾಥ ರೈ ಮತ್ತು ಪುಷ್ಪಾವತಿ ದಂಪತಿಯ ಪುತ್ರ, ಪುತ್ತೂರು ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ನಡೆಸುತ್ತಿದ್ದ ಜಿತೇಶ್ ಕುಮಾರ್ ರೈ ಅನಾರೋಗ್ಯದಿಂದ ಬಳಲುತ್ತಿರುವ ಬಾಲಕ.  ಏಳನೇ ತರಗತಿಯಿಂದಲೇ ಯಕ್ಷಗಾನ ಕಲೆಯತ್ತ ತಿರುಗಿದ ಜಿತೇಶ್ ಕುಮಾರ್ ಬಾಲ ಕಲಾವಿದರ ಮೇಳದಲ್ಲಿ ಪ್ರಬುದ್ಧ ಕಲಾವಿದನಾಗಿ ಮೆರೆಯುತ್ತಾ ಬಂದಿದ್ದು, ಯಕ್ಷ ಕಲಾವಿದನಾಗಿ ಸುಬ್ರಹ್ಮಣ್ಯ, ಕೃಷ್ಣ, ವಿಷ್ಣು, ಚಂಡ-ಮುಂಡ ಸಹಿತ ವಿವಿಧ ವೇಷಗಳನ್ನು ಧರಿಸುತ್ತಾ ಆ ಪಾತ್ರಗಳಿಗೆ ಜೀವ ತುಂಬುತ್ತಾ ಬರುತ್ತಿದ್ದನು. ಪ್ರಬುದ್ಧ ಕಲಾವಿದನಾಗಿ ಬೆಳೆಯುತ್ತಿರುವ ಹಂತದಲ್ಲೇ ಅನಾರೋಗ್ಯದ ಬರಸಿಡಿಲು ಬಡಿದಿದ್ದು, ಪಿಯುಸಿ ಶಿಕ್ಷಣವನ್ನೂ ಅರ್ಧಕ್ಕೇ ಮೊಟಕುಗೊಳಿಸುವಂತಾಗಿದೆ.

ಮೂತ್ರ ಪಿಂಡ ಬೆಳವಣಿಗೆಯಿಲ್ಲದೇ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿ ಜಿತೇಶ್ ಕುಮಾರ್ ರೈ ಅವರಿಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ನಡೆಸ ಬೇಕಿದ್ದು, ತಿಂಗಳಿಗೆ ಕನಿಷ್ಟ 30 ಸಾವಿರ ರೂಪಾಯಿ ಖರ್ಚಾಗುತ್ತದೆ. ಡಯಾಲಿಸಿಸ್‌ಗೆ ವರ್ಷಕ್ಕೆ 3 ಲಕ್ಷ ರೂ. ಖರ್ಚಾಗಲಿದೆ. ಕಿಡ್ನಿ ಟ್ರಾನ್ಸ್‌ಫರ್‌ಗೆ 6 ಲಕ್ಷ ರೂ.ವರೆಗೆ ಖರ್ಚು ಅಂದಾಜಿಸಲಾಗಿದೆ. ಪ್ರಸ್ತುತ ಮಂಗಳೂರಿನ ಯೇನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಕುಟುಂಬದ ಪರಿಸ್ಥಿತಿಯು ತೀರಾ ಹದಗೆಟ್ಟು ಹೋಗಿದ್ದು, ಅವನ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೇ ಕಂಗಾಲಾಗಿದ್ದಾರೆ. ಆರ್ಥಿಕವಾಗಿ ಸಧೃಢವಲ್ಲದ ಜಿತೇಶ್ ಕುಮಾರ್‌ನ ಅನಾರೋಗ್ಯ ಮತ್ತು ಕುಟುಂಬದ ಪರಿಸ್ಥಿತಿಯನ್ನು ಗಮನಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಮತ್ತು ಆಡಳಿತ ಸಿಬಂದಿ ವರ್ಗ ಈಗಾಗಲೇ ಒಂದು ಲಕ್ಷ ರೂ. ಸಹಾಯಧನವನ್ನು ಸಂಗ್ರಹಿಸಿ, ಆತನ ಮನೆಯವರಿಗೆ ನೀಡಿದೆ. ಆದರೆ ಜಿತೇಶ್ ಕುಮಾರ್‌ನ ಪೂರ್ಣ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣಕಾಸಿನ ನೆರವಿನ ಅಗತ್ಯವಿದ್ದು, ಸಹೃದಯಿಗಳು ಹಣಕಾಸಿನ ನೆರವನ್ನು ನೀಡುವ ಮೂಲಕ ಆತನ ಪ್ರಾಣ ಉಳಿಸುವ ಕಾರ್ಯದಲ್ಲಿ ಕೈ ಜೋಡಿಸುವಂತೆ ಹೆತ್ತವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕಲಿಕೆಯಲ್ಲಿ ಡಿಸ್ಟ್ರಿಂಕ್ಷನ್ ವಿದ್ಯಾರ್ಥಿಯಾಗಿರುವ ಜಿತೇಶ್ ಕುಮಾರ್ ಕಾಲೇಜಿನ ಅಧ್ಯಾಪಕ ವೃಂದದವರ ಅಚ್ಚು ಮೆಚ್ಚಿನ ವಿದ್ಯಾರ್ಥಿ. ಸಹಪಾಠಿಗಳಿಗೆ ಪ್ರಿಯನೂ ಹೌದು. ಕಲಿಕೆಯೊಂದಿಗೆ ಯಕ್ಷಗಾನ ಕ್ಷೇತ್ರದಲ್ಲೂ ಬಾಲ ಕಲಾವಿದನಾಗಿ ಮಿಂಚುತ್ತಾ ಸಾಗಿ ಬಂದಿರುವ ಜಿತೇಶ್ ಕುಮಾರ್‌ನ ಚಿಕಿತ್ಸೆಗೆ ನೆರವಾಗುವ ಸಹೃದಯಿ ದಾನಿಗಳು, ಜಿತೇಶ್ ಕುಮಾರ್ ಬ್ಯಾಂಕ್ ಆಫ್ ಬರೋಡಾ, ಕಾಟುಕುಕ್ಕೆ ಶಾಖೆ, ಖಾತೆ ಸಂಖ್ಯೆ : 68710100004325, IFSC : BARB0VJKTKE ಅಥವಾ ವಿಶ್ವನಾಥ ರೈ, ಬ್ಯಾಂಕ್ ಆಫ್ ಬರೋಡಾ, ಕಾಟುಕುಕ್ಕೆ ಶಾಖೆ, ಖಾತೆ ಸಂಖ್ಯೆ : 68710100002731, IFSC : BARB0VJKTKE ಇಲ್ಲಿಗೆ ತಮ್ಮ ಹಣಕಾಸಿನ ನೆರವನ್ನು ರವಾನಿಸಬಹುದು. ಅಥವಾ ವಿಶ್ವನಾಥ್ ರೈ ಅವರ ದೂರವಾಣಿ ಸಂಖ್ಯೆ : 09447295345 ಇವರನ್ನು ಸಂಪರ್ಕಿಸ ಬಹುದಾಗಿದೆ.