ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜ.30 ರಂದು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಪೈಲಟ್ ಕಾರ್ಯಕ್ರಮ : ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

Posted On: 28-01-2021 12:42PM

ಉಡುಪಿ : ಜನವರಿ 30 ರಂದು ಬ್ರಹ್ಮಾವರ ತಾಲೂಕಿನ ನೆಂಚೂರು ಮತ್ತು ನಾಲ್ಕೂರು ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ, ವಾಸ್ತವ್ಯ ಮಾಡಿ, ಸದ್ರಿ ಗ್ರಾಮಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಪರಿಹಾರ ಒದಗಿಸಲಿದ್ದಾರೆ, ಇಡೀ ರಾಜ್ಯದಲ್ಲಿ ಇದು ಪ್ರಥಮ ಪೈಲಟ್ ಕಾರ್ಯಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಗ್ರಾಮ ವಾಸ್ತವ್ಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು, ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನವರಿ 30 ರಂದು ಗ್ರಾಮ ವಾಸ್ತವ್ಯ ನಡೆಯುವ ನೆಂಚೂರು ಮತ್ತು ನಾಲ್ಕೂರು ಗ್ರಾಮಗಳ ಸಾರ್ವಜನಿಕರ ಕುಂದು ಕೊರತೆಗಳ ಕುರಿತಂತೆ ಸಂಬAದಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು 3 ದಿನಗಳ ಮುಂಚಿತವಾಗಿಯೇ ಅರ್ಜಿಗಳನ್ನು ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳಿ. ಸದ್ರಿ ಗ್ರಾಮ ವಾಸ್ತವ್ಯದ ದಿನ ಫಲಾನುಭವಿಗಳಿಗೆ ಅರ್ಜಿಗೆ ಸಂಬAಧಿಸಿAತೆ ಸೂಕ್ತ ಸೌಲಭ್ಯ ಒದಗಿಸುವ ಕುರಿತು ಕ್ರಮ ಕೈಗೊಳ್ಳಿ. ಸಂಬಂದಪಟ್ಟ ತಾಲೂಕಿನ ತಹಸೀಲ್ದಾರ್‌ಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಎಲ್ಲಾ ಅಧಿಕಾರಿಗಳು ವಾಸ್ತವ್ಯ ಕಾರ್ಯಕ್ರಮದಲ್ಲಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.

ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು ಮತ್ತು ಆಕಾರ್ ಬಂದ್ ತಾಳೆ ಹೊಂದುವ ಕುರಿತು ಖಚಿತಪಡಿಸಿಕೊಳ್ಳಬೇಕು. ಪೌತಿ ಹೊಂದಿದ ಖಾತೆದಾರರ ಹೆಸರನ್ನು, ನೈಜ ವಾರಿಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮದ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ದೊರೆಯುತ್ತಿರುವ ಬಗ್ಗೆ ಪರಿಶೀಲನೆ, ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವುದು, ಗ್ರಾಮದಲ್ಲಿನ ಸ್ಮಶಾನ ಲಭ್ಯತೆ ಬಗ್ಗೆ ಪರಿಶೀಲನೆ, ಆಶ್ರಯ ಯೋಜನೆಗೆ ಸಂಬAಧಿಸಿದAತೆ ಅಗತ್ಯ ಜಮೀನು ಕಾದಿರಿಸಲು ಕ್ರಮ ಕೈಗೊಳ್ಳುವುದು, ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ತೆರವು, ಆಧಾರ್ ಕಾರ್ಡ್ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಮತದಾರರ ಪಟ್ಟಿ ಪರಿಷ್ಕರಣೆ, ಅತಿವೃಷ್ಠಿ/ಅನಾವೃಷ್ಠಿ ಎದುರಿಸಲು ಮುಂಜಾಗ್ರತಾ ಕ್ರಮಗಳು, ಬರ/ಪ್ರವಾಹ ಇದ್ದಲ್ಲಿ ಪರಿಹಾರ, ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ, ಆಹಾರ, ಕಲಿಕಾ ಕ್ರಮಗಳ ಬಗ್ಗೆ ಪರಿಶೀಲನೆ, ಗ್ರಾಮದಲ್ಲಿನ ವಸತಿ ನಿಲಯಗಳಿಗೆ ಭೇಟಿ ನೀಡಿ, ಸುಸ್ಥಿತಿಯಲ್ಲಿರುವ ಕುರಿತು ಪರಿಶೀಲನೆ, ಗ್ರಾಮದ ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿ.ಪಿ.ಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳುವುದು, ಗುಡಿಸಲು ಇರುವ ವಾಸದ ಮನೆಗಳನ್ನು ಪತ್ತೆ ಹಚ್ಚಿ ಸರ್ಕಾರದ ವಿವಿಧ ಯೋಜನೆಯಡಿ ಮನೆ ಕಟ್ಟಲು ಅನುದಾನ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದು ಹಾಗೂ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸದಾಶಿವ ಪ್ರಭು ತಿಳಿಸಿದರು.

ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸಂಬಂದಪಟ್ಟ ಗ್ರಾಮದ ಪಿಡಿಓಗಳು ಮತ್ತು ಪಂಚಾಯತ್‌ಗಳ ಆಡಳಿತಾಧಿಕಾರಿಗಳು, ಕಂದಾಯ ಸಿಬ್ಬಂದಿ ಕಡ್ಡಾಯವಾಗಿ ಸ್ಥಳದಲ್ಲಿ ಹಾಜರಿರಬೇಕು. ಸಾರ್ವಜನಿಕರು ತಮ್ಮ ಕುಟುಂಬದ ವ್ಯಕ್ತಿ ಮರಣ ಹೊಂದಿದ್ದಲ್ಲಿ ಸಂಬಂದಪಟ್ಟ ಇಲಾಖೆಯಿಂದ ಮರಣ ಪ್ರಮಾಣ ಪತ್ರ ಪಡೆದು, ಪೌತಿ ಖಾತೆ ಬದಲಾವಣೆ ಮಾಡಿಕೊಳ್ಳಬೇಕು. ಸಾಮಾಜಿಕ ಭದ್ರತಾ ಯೋಜನೆಯಗಳಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಲ್ಲಿ ಕೂಡಲೇ ಮಾಹಿತಿ ನೀಡಿ, ಅನವಶ್ಯಕವಾಗಿ ಪಿಂಚಣಿ ಹಣ ಅನರ್ಹರಿಗೆ ತಲುಪಿ ದುರುಪಯೋಗವಾಗದಂತೆ ಎಚ್ಚರವಹಿಸಬೇಕು, ಇಲ್ಲವಾದಲ್ಲಿ ಮೃತರ ಹೆಸರಿನಲ್ಲಿ ಪಿಂಚಣಿ ಪಡೆದವರಿಂದಲೇ ಮೊತ್ತವನ್ನು ವಸೂಲಿ ಮಾಡಲಾಗುವುದು ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಚ್ಚರಿಸಿದರು. ಪ್ರತೀ ತಿಂಗಳ 3 ನೇ ಶನಿವಾರ ಜಿಲ್ಲಾಧಿಕಾರಿಗಳು, ಭೂ ದಾಖಲೆಗಳ ಉಪ ನಿರ್ದೇಶಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪ ವಿಭಾಗದ ಸಹಾಯಕ ಆಯುಕ್ತರು, ಸಂಬಂದಪಟ್ಟ ತಹಸೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರೊಂದಿಗೆ ಗ್ರಾಮ ವಾಸ್ತವ್ಯ ನಡೆಯಲಿದ್ದು, ಜಿಲ್ಲಾಧಿಕಾರಿ ಭೇಟಿ ನೀಡುವ ತಾಲೂಕಿನ ತಹಸೀಲ್ದಾರ್ ಹೊರತುಪಡಿಸಿ, ಉಳಿದ ತಾಲೂಕುಗಳ ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಲಿದ್ದು, ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ವಾಸ್ತವ್ಯ ಮಾಡಲಿದ್ದಾರೆ ಎಂದರು. ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.