ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಹಿಳೆಯರು ಸ್ವಾವಲಂಬಿಗಳಾಗಬೇಕು : ಡಾ.ಪ್ರತಿಭಾ .ಆರ್.

Posted On: 07-08-2025 10:24PM

ಕಾಪು : ಮಹಿಳೆ ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಲವಾರು. ಆದರೆ ಸಮಸ್ಯೆಗಳು ಬಂದಾಗ ಅಂಜದೇ ಅಳುಕದೇ ಧೈರ್ಯದಿಂದ ಅವುಗಳನ್ನು ಎದುರಿಸುವ ಛಲವನ್ನು ಪ್ರತಿಯೊಬ್ಬ ಹೆಣ್ಣು ಹೊಂದಿರಬೇಕು. ಪ್ರಸಕ್ತ ಪರಿಸ್ಥಿತಿಯಲ್ಲಿ ಮಹಿಳೆ ತಮ್ಮ ರಕ್ಷಣೆಯನ್ನು ತಾನೇ ಮಾಡಿಕೊಳ್ಳಲು ತನ್ನನ್ನು ತಾನು ಸಿದ್ಧಗೊಳಿಸಬೇಕಿದೆ. ಆದ್ದರಿಂದ ಮೊದಲು ವಿದ್ಯಾವಂತರಾಗಿ ಸ್ವಾವಲಂಬನೆಯಿಂದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಮಹಿಳೆ ಮುಂದಾಗಬೇಕು ಎಂಬುದಾಗಿ ಕಾಪು ತಾಲೂಕು ದಂಡಾಧಿಕಾರಿ ಡಾ.ಪ್ರತಿಭಾ .ಆರ್.ಹೇಳಿದರು. ಅವರು ಕಾಪು ತಾಲೂಕಿನ ಇನ್ನಂಜೆ ಮಹಿಳಾ ಮಂಡಳಿಯ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಯುವ ನ್ಯಾಯವಾದಿ, ವಾಗ್ಮಿ ಕು.ಸಹನಾ ಕುಂದರ್ ಅವರು ತಮ್ಮ ಭಾಷಣದಲ್ಲಿ ಮಹಿಳೆಯರು ತಮ್ಮ ಸಹಜ ದೌರ್ಬಲ್ಯಗಳಾದ ಮತ್ಸರ, ದ್ವೇಷ, ಅಸೂಯೆ, ಚಾಡಿ ಮಾತುಗಳನ್ನು ಬದಿಗಿಟ್ಟು ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಅನುಭವಿಸಿದ್ದ ಕಷ್ಟಕಾರ್ಪಣ್ಯಗಳು, ಪಟ್ಟಿರುವ ಶ್ರಮದ ಬಗ್ಗೆ ತಮ್ಮ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಿದಲ್ಲಿ ಉತ್ತಮ ಸಮಾಜದ ನಿರ್ಮಾಣ ಖಂಡಿತಾ ಸಾಧ್ಯವಿದೆ ಎಂದರು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಧ್ಯಾಪಕಿ ಹಾಗೂ ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿ.ಪಿ.ಶೆಟ್ಟಿ ಅವರು ಮಾತನಾಡಿ, ಇಂತಹ ಸಂಘ ಸಂಸ್ಥೆಗಳು ನಮ್ಮಲ್ಲಿ ಕೂಡಿ ಬಾಳುವ, ಸೌಹಾರ್ದತೆಯಿಂದ ಬದುಕುವ ಅವಕಾಶವನ್ನು ಕಲ್ಪಿಸಿ ಕೊಡುತ್ತವೆ. ನಮ್ಮೊಳಗೆ ಸುಪ್ತವಾಗಿರುವ ಪ್ರತಿಭೆಯನ್ನು ಹೊರಗೆಡಹಲು ವೇದಿಕೆಯನ್ನು ಕಲ್ಪಿಸಿ ಕೊಡುತ್ತವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ನಿವೃತ್ತ ಆರೋಗ್ಯ ಸಹಾಯಕಿ ವಿಜಯಾ ಕುಮಾರಿ, ನಿವೃತ್ತ ಆಶಾ ಕಾರ್ಯಕರ್ತೆ ಉಷಾ ಭಟ್, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಮಾಲತಿ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಇನ್ನಂಜೆ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ವೇತಾ.ಎಲ್.ಶೆಟ್ಟಿ ಅವರು ಪ್ರಾಸ್ತಾವನೆಗೈದು, ಸ್ವಾಗತಿಸಿದರು. ಅನಿತಾ ಮಥಾಯಸ್ ಆಟಿ ತಿಂಗಳ ವಿಶೇಷ ತಿನಿಸುಗಳನ್ನು ತಯಾರಿಸಿದವರ ಪಟ್ಟಿಯನ್ನು ವಾಚಿಸಿದರು. ಪುಷ್ಪಾ ರವೀಂದ್ರ ಶೆಟ್ಟಿ,ಟ್ರೀಜಾ ಮಚಾದೋ ಹಾಗೂ ರೇಖಾ .ಆರ್.ಶೆಟ್ಟಿ ಅವರು ಸನ್ಮಾನಿತರ ನ್ನು ಪರಿಚಯಿಸಿದರು. ಮಹಿಳಾ ಮಂಡಳಿಯ ಕಾರ್ಯದರ್ಶಿ ಸಿಲ್ವಿಯಾ ಕ್ಯಾಸ್ತಲಿನೋ ವಂದಿಸಿ, ಸೀಮಾ ಮಾರ್ಗರೇಟ್ ಡಿ'ಸೋಜ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷರಾದ ಗೀತಾ ವಾಗ್ಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಆಟಿ ತಿಂಗಳ ವಿಶಿಷ್ಟ ಹಾಗೂ ಸಾಂಪ್ರದಾಯಿಕ ತಿನಿಸುಗಳನ್ನು ಉಣಬಡಿಸಲಾಯಿತು.