ಜಲಜೀವನ್ ಮಿಷನ್ ಯಶಸ್ವಿ ಅನುಷ್ಠಾನ ನಮ್ಮೆಲ್ಲರ ಗುರಿ: ನವೀನ್ ಭಂಡಾರಿ
Posted On:
29-01-2021 08:30PM
ಪುತ್ತೂರು : ಪ್ರತಿ ಮನೆಗೆ, ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಜನಜೀವನ್ ಮಿಷನ್ನಿನ ಮುಖ್ಯ ಗುರಿಯಾಗಿದೆ ಎಂದು ಪುತ್ತೂರು ತಾಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್ ಭಂಡಾರಿ ಹೇಳಿದರು.
ಪುತ್ತೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ಪುತ್ತೂರು ತಾ.ಪಂ.ನಲ್ಲಿ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಕಾರ್ಯತ್ಮಕ ನಳ ಸಂಪರ್ಕ, ಕುಡಿಯುವ ನೀರು ಪೂರೈಕೆ ಜಲಜೀವನ್ ಮಿಷನ್ ಯೋಜನೆ ಉದ್ದೇಶವಷ್ಟೇ ಅಲ್ಲದೇ ಅಂತರ್ಜಲ ಮರುಪೂರಣವೂ ಆಗಿದೆ. ಈಗಾಗಲೇ ತಾಲೂಕಿನಲ್ಲಿ ಇಂಗುಗುಂಡಿಗಳ ನಿರ್ಮಾಣ ಬಹುತೇಕ ಯಶಸ್ವಿ ಕಂಡಿದೆ ಎಂದವರು ಹೇಳಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಭರತ್ ಅವರು ಮಾತನಾಡಿದ ಜಲಜೀವನ್ ಮಿಷನ್ ಕಾರ್ಯನುಷ್ಠಾನ ಮತ್ತು ತಾಂತ್ರಿಕ ಅಡೆತಡೆಗಳ ಬಗೆಹರಿಸುವಿಕೆ ಕುರಿತು ಸ್ಪಷ್ಟ ಮಾಹಿತಿ ನೀಡಿದರು. ನೀರು ಪರೀಕ್ಷಾ ವಿಧಾನದ ಕುರಿತು ತಜ್ಞರಾದ ಕೃಷ್ಣ ಅವರು ಪ್ರಾತ್ಯಕ್ಷಿಕೆ ಮಾಡಿದರು.
ಜಲಜೀವನ್ ಮಿಷನ್ ದ್ಯೇಯೋದ್ದೇಶಗಳ ಕುರಿತು ಜೆಜೆಎಮ್ ಜಿಲ್ಲಾ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಮಾತನಾಡಿದರು. ಸ್ವಚ್ಛ ಭಾರತ್ ಇದರ ಜಿಲ್ಲಾ ಐಇಸಿ ಡೊಂಬಯ್ಯ ಅವರು ತ್ಯಾಜ್ಯ ವಿಂಗಡನೆ ಬಗ್ಗೆ ಅರಿವು ಮೂಡಿಸಿದರು. ಜಲಜೀವನ್ ಮಿಷನ್ ಅಡಿಯಲ್ಲಿ ಹಮ್ಮಿಕೊಂಡ ಚಟುವಟಿಕೆಗಳ ಕುರಿತು ಡಬ್ಲ್ಯೂಎಸ್.ಇ ಎಂಜಿನಿಯರ್ ಅಶ್ವಿನ್ ಕುಮಾರ್ ಮತ್ತು ಜಿಲ್ಲಾ ಐಇಸಿ ಮಹಾಂತೇಶ್ ಹಿರೇಮಠ್ ತಿಳಿಸಿದರು. ಜೆಜೆಎಮ್ ಸಿಬ್ಬಂದಿಗಳಾದ ದಯಾನಂದ ಮಯ್ಯಾಳ ಮತ್ತು ಈಶ್ವರ್ ಅವರು ಸಹಕರಿಸಿದರು.ದ.ಕ ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾ.ಕು.ನೀ,ನೈ ಇಲಾಖೆ, ಪುತ್ತೂರು ತಾಲೂಕು ಪಂಚಾಯತ್ ಮತ್ತು ಸಮುದಾಯ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತರಬೇತಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಸುಮಾರು 150 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.