ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ ಮೇಲೆ ಮಾರಣಾಂತಿಕ ಹಲ್ಲೆ

Posted On: 23-02-2021 10:25PM

ಬಾರ್ಕೂರು : ಜನಸಾಮಾನ್ಯರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟಗಳನ್ನು ರೂಪಿಸುತ್ತಾ ಕಾನೂನು, ನಿಯಮ ಪಾಲನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಶಂಕರ ಶಾಂತಿಯವರ ಮೇಲೆ ದಿನಾಂಕ ಫೆಬ್ರವರಿ 20, ಆದಿತ್ಯವಾರದಂದು ಮನೆಯ ಸಮೀಪದ ಸಭಾಭವನದ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ, ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅದೇ ಸಮಯಕ್ಕೆ ಬೊಬ್ಬೆ ಕೇಳಿ ಸ್ಥಳಕ್ಕಾಗಮಿಸಿದ ಶಂಕರ ಶಾಂತಿಯವರ ಹೆಂಡತಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಗಂಡನನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದಾರೆ.

RTI ಕಾರ್ಯಕರ್ತನಾಗಿ ಸಾಮಾಜಿಕ ನೆಲೆಯಲ್ಲಿ ತನ್ನ ಊರಿನಲ್ಲಿ ಹಾಗೂ ಸುತ್ತಮುತ್ತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದವರು ಶಂಕರ ಶಾಂತಿ. ರಸ್ತೆ ಸಾರಿಗೆ ಸುರಕ್ಷತೆ ವಿಷಯ, ಕಾಂಕ್ರೀಟ್ ರಸ್ತೆ ಕಳಪೆ ವಿಷಯ, ಬಾರ್ಕೂರು ಜೈನ ಬಸದಿ ಆಕ್ರಮಣ ತೆರವು, ಹೊಸಾಳ ಗರಡಿಯಲ್ಲಿ ವೈದಿಕನೋರ್ವನ ಅನಾಚಾರ ಪ್ರಶ್ನಿಸುವಿಕೆ, ಇಂತಹದ್ದೆ ಅನೇಕ ಜನಪರ ಸೇವೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರು ಶಂಕರ ಶಾಂತಿ.

ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರ ಕುರಿತು ಕ್ರಮ ಕೈಗೊಂಡಿದ್ದರಿಂದ ದುಷ್ಕರ್ಮಿಗಳಾದ ಪ್ರವೀಣ ಆಚಾರ್ಯ, ಪ್ರಸಾದ್ ಆಚಾರ್ಯ, ಶಾಂತರಾಮ ಶೆಟ್ಟಿ, ಮಂಜಪ್ಪ ಪೂಜಾರಿ, ದಿವಾಕರ ಒಟ್ಟು ಸೇರಿ ಕಬ್ಬಿಣದ ರಾಡ್‌ನಿಂದ ಕೊಲೆಯತ್ನ ನಡೆಸಿರುವುದು ದುಷ್ಟಕೂಟದ ರಾಜಕೀಯ ಪ್ರೇರಿತ ದುಷ್ಟಕೃತಕ್ಕೆ ಈ ಪ್ರಕರಣ ಪುರಾವೆ ಒದಾಗಿಸಿದೆ. ಮನುಷ್ಯತ್ವವಿಲ್ಲದ ವರ್ತನೆಯಾಗಿದೆ ಇದರಲ್ಲಿ ಅವರ ಸಂಬಂಧಿಯಾದ ಮಂಜಪ್ಪ ಪೂಜಾರಿ ಇತರರ ಜೊತೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಶಂಕರ ಶಾಂತಿಯವರ ಹೆಂಡತಿಯವರು ಬಾರದೆ ಹೋದಲ್ಲಿ ಶಂಕರ ಶಾಂತಿ ಶಿವನ ಪಾದ ಸೇರುತ್ತಿದ್ದರೇನೋ? ಸಾಧ್ಯ ಶಂಕರ ಶಾಂತಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದು, ಈ ಹಲ್ಲೆ ಪ್ರಕರಣ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 143, 147, 148, 341, 323, 324, 326, 307, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಸ್ವಾರ್ಥ ಸಾಧನೆಯಿಂದ ತಪ್ಪು ಯಾರೇ ಮಾಡಿರಲಿ ಅದಕ್ಕೆ ಶಿಕ್ಷೆಯಾಗಲಿ ಎನ್ನುವುದೇ ನಮ್ಮ ಇರಾದೆ. ತಪ್ಪುಗಳನ್ನು, ಸಾರ್ವಜನಿಕ ಅನ್ಯಾಯಗಳನ್ನು ಪ್ರಶ್ನಿಸಿದಾಕ್ಷಣ ಕೊಲೆ ಮಾಡುವ ಮಟ್ಟಕ್ಕೆ ತಲುಪಿರುವುದು ಈ ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವೆ ಸರಿ. ಇದೀಗ ಅಗರ್ಭ ಶ್ರೀಮಂತಿಕೆಯ ಮತ್ತು ರಾಜಕೀಯ ಪ್ರಭಾವ ಬಳಸಿ ತಪ್ಪಿತಸ್ಥರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಇವರನ್ನು ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕು. ಇಂತಹ ಸಮಾಜ ದ್ರೋಹಿ ಕೆಲಸಮಾಡುವವರನ್ನು ಸುಮ್ಮನೆ ಬಿಟ್ಟರೆ ಮುಂದೆ ಇನ್ನಷ್ಟು ಲೋಕಕಂಠಕರಾಗಿ ಅದೆಷ್ಟೋ ಪಾಪದವರ ಮನೆ ಹಾಳುಮಾಡಲು ಹಿಂಜರಿಯುವುದಿಲ್ಲ‌. ಸಮಾಜಸೇವಕ, ಬಿಲ್ಲವ ಸಮಾಜದ ಹೋರಾಟಗಾರ ಬಾರ್ಕೂರು ಶಂಕರ ಶಾಂತಿಯ ಮೇಲಾದ ಮಾರಣಾಂತಿಕ ಹಲ್ಲೆ ಖಂಡನೀಯ. ಈ ದುಷ್ಕೃತ್ಯವೆಸಗಿದ ಎಲ್ಲಾ ಆರೋಪಿಗಳಿಗೂ ಶಿಕ್ಷೆಯಾಗಲಿ. ಪೋಲಿಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಶಂಕರ ಶಾಂತಿಗೆ ನ್ಯಾಯ ಒದಗಿಸುವಂತಾಗಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.