ಶತಮಾನೋತ್ಸವದ ಸಂಭ್ರಮದಲ್ಲಿ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಹಿ.ಪ್ರಾ.ಶಾಲೆ.
Posted On:
11-08-2025 06:16PM
ಶಿರ್ವ : ಊರಿಗೊಂದು ದೇವಾಲಯ ಮತ್ತು ವಿದ್ಯಾಲಯ ಮನುಷ್ಯನ ಬದುಕಿನ ಸಂಸ್ಕಾರ ಕೇಂದ್ರಗಳಾಗಿವೆ. ಜನ್ಮ ನೀಡಿದ ತಾಯಿ ತಂದೆಯ ಋಣ, ಬಾಲ್ಯದ ಶಿಕ್ಷಣ ನೀಡಿದ ಶಾಲೆ ಹಾಗೂ ಗುರುಗಳ ಋಣ ಇದೆ. ನಮ್ಮ ಬದುಕನ್ನು ರೂಪಿಸಲು ಸ್ವಾತಂತ್ರ್ಯ ಹಾಗೂ ಭದ್ರ ಬುನಾದಿ ಹಾಕಿದ ಜ್ಞಾನದೇಗುಲವೇ ಪ್ರಾಥಮಿಕ ಶಾಲೆ, ಈ ವಿದ್ಯಾಲಯದ ಶತಮಾನೋತ್ಸವದ ಹೊಸ್ತಿಲ್ಲಿ ಋಣ ಮುಕ್ತರಾಗಲು ಒಂದೊಳ್ಳೆಯ ಅವಕಾಶ ಸಿಕ್ಕಿದೆ. ಹಳೆವಿದ್ಯಾರ್ಥಿಗಳೇ ಶಾಲೆಯ ಆಸ್ತಿ, ಶಾಲಾ ಶತಮಾನೋತ್ಸವವು ಹಬ್ಬದ ರೀತಿಯಲ್ಲಿ ಆಚರಣೆ ಆಗಬೇಕು ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನುಡಿದರು.
ಅವರು ರವಿವಾರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ, ಶಾಲಾ ಶತಮಾನೋತ್ಸವ
ದ ವರ್ಷಾಚರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಶತಮಾನೋತ್ಸವ ಮನವಿ ಪತ್ರ ಬಿಡುಗಡೆ ಮತ್ತು ಶಾಲೆಗೆ ನೂತನ ವಾಹನ ಹಸ್ತಾಂತರ ಪ್ರಕ್ರಿಯೆಯನ್ನು ಶಾಲಾ ಸಂಚಾಲಕ ರಾಮದಾಸ್ ಪ್ರಭು ಹಾಗೂ ಮುಖ್ಯ ಶಿಕ್ಷಕಿ ಸಂಗೀತ ಆರ್.ಪಾಟ್ಕರ್ ಇವರಿಗೆ ವಾಹನದ ಕೀ ಹಸ್ತಾಂತರಿಸಿ ಮಾತನಾಡಿದರು.
ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಇವರು ದೀಪ ಪ್ರಜ್ವಲನದ ಮೂಲಕ ಶತಮಾನೋತ್ಸವ ವೇದಿಕೆಯನ್ನು ಅನಾವರಣಗೊಳಿಸಿ ಶತಮಾನೋತ್ಸವ ಸಮಿತಿಗೆ ಅಭಿನಂದಿಸಿ ಶುಭ ಹಾರೈಸಿದರು. ಪಾಂಬೂರು ಹೋಲಿಕ್ರಾಸ್ ಚರ್ಚ್ನ ಧರ್ಮಗುರುಗಳಾದ ರೆ.ಫಾ. ರೋಶನ್ ಡಿಸೋಜ ಇವರು ಶತಮಾನೋತ್ಸವ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಶುಭ ಕೋರಿದರು.
ಶಾಲಾ ಹಳೆವಿದ್ಯಾರ್ಥಿ ಮಾನಿಪಾಡಿ ರತ್ನಾಕರ ಶೆಟ್ಟಿ ನೂತನ ಶಾಲಾ ಪೀಠೋಪಕರಣಗಳಾದ ಹಸ್ತಾಂತರಿಸಿ ಹಿಂದಿನ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿ ಶುಭ ಕೋರಿದರು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಪೂಜಾರಿ ಇವರು ಶಾಲಾ ಆವರಣದಲ್ಲಿ ಕರುವಿನೊಂದಿಗಿನ ಕಾಮಧೇನು ಪ್ರತಿಮೆ ಅನಾವರಣ ಮಾಡಿದರು. ಬಂಟಕಲ್ಲು ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕ್ಕಣ್ಣಾಯ ವಿದ್ಯಾರ್ಥಿಗಳಿಗೆ ಗುರುಚೀಟಿ ವಿತರಿಸಿ ಶುಭ ಕೋರಿದರು. ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ತಲಾ ಮೂರು ಸಾವಿರ ರೂ.ಮೌಲ್ಯದ ನಿರಖುಠೇವಣಿ ಪತ್ರ ನೀಡಿ ಶುಭ ಕೋರಿದರು. ಕಟಪಾಡಿ ಶ್ರೀಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಳದ 3ನೇ ಮೊಕ್ತೇಸರ ಗಂಗಾಧರ ಆಚಾರ್ಯ ದಿಂಡಿಬೆಟ್ಟು ಇವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಶತಮಾನೋತ್ಸದ ಪ್ರಯುಕ್ತ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಈ ಶಾಲೆಯ ಹಿರಿಯ ವಿದ್ಯಾರ್ಥಿ 89ರ ಹರೆದ ನಿವೃತ್ತ ಮುಖ್ಯ ಶಿಕ್ಷಕ ಕೋಡುಗುಡ್ಡೆ ನಾರಾಯಣ ಪ್ರಭು ಸಹಿತ 75 ವರ್ಷ ದಾಟಿದ ಹಳೆವಿದ್ಯಾರ್ಥಿಗಳನ್ನು, ದಾನಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ಬಂಟಕಲ್ಲು ವಹಿಸಿದ್ದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಸಮಿತಿಯ ಪದಾಧಿಕಾರಿಗಳಾದ ಭಾಸ್ಕರ ಶೆಟ್ಟಿ ಸಡಂಬೈಲು, ರಾಮಚಂದ್ರ ನಾಯಕ್ ಪಡುಬೆಳ್ಳೆ, ಲೂವಿಸ್ ಮಾರ್ಟಿಸ್ ಬಂಟಕಲ್ಲು, ಎಸ್.ಎಸ್.ಪ್ರಸಾದ್, ದಾಮೋದರ ಆಚಾರ್ಯ, ಅನಂತರಾಮ ವಾಗ್ಲೆ, ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ದಿನೇಶ್ ದೇವಾಡಿಗ ಸ್ವಾಗತಿಸಿದರು. ಶಿಕ್ಷಕ ದೇವದಾಸ್ ಪಾಟ್ಕರ್ ನಿರೂಪಿಸಿದರು. ಶಿಕ್ಷಕಿ ವಿದ್ಯಾ ಆಚಾರ್ಯ ಪ್ರಾರ್ಥಿಸಿದರು. ಅಂಗನವಾಡಿ ಶಿಕ್ಷಕಿ ವಿನಯಾ ವಂದಿಸಿದರು.