ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ ಬಂಟರ ಭವನದಲ್ಲಿ ಆಟಿದ ಗೌಜಿ ಕಾರ್ಯಕ್ರಮ

Posted On: 10-08-2025 09:41PM

ಪಡುಬಿದ್ರಿ : ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಪಡುಬಿದ್ರಿ, ಬಂಟರ ಮಹಿಳಾ ವಿಭಾಗ ಪಡುಬಿದ್ರಿ ಆಯೋಜನೆಯಲ್ಲಿ ಆಟಿದ ಗೌಜಿ ಕಾರ್ಯಕ್ರಮ ಪಡುಬಿದ್ರಿ ಬಂಟರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ, ಯಕ್ಷಗಾನ ಕಲಾವಿದೆ ಎಕ್ಕಾರು ದಯಾಮಣಿ ಸುಧಾಕರ ಶೆಟ್ಟಿ ಮಾತನಾಡಿ, ಆಟಿ ಅನಿಷ್ಟದ ತಿಂಗಳು ಅಲ್ಲ. ಆರೋಗ್ಯಪೂರ್ಣ ತಿಂಗಳು. ನಮ್ಮ ಪರಂಪರೆ ಋಷಿ ಮತ್ತು ಕೃಷಿ ಪರಂಪರೆಯಿಂದ ಮುಂದುವರೆದಿದೆ. ಮನಸಿನ ಹಸಿವು ತಣಿಸಿದರೆ ಸಾಲದು ಜ್ಞಾನದ ಹಸಿವನ್ನು ನೀಗಿಸುವುದು ಮುಖ್ಯ. ಸಾಗುವಳಿಯನ್ನು ಕಟ್ಟಿಕೊಂಡು ನಮ್ಮ ಭೂಮಿ ಬೇರೆಯವರ ಪಾಲಾದರೂ ಸಾಧಿಸುವ ಛಲದ ಬಂಟರು ನಾವಾದೆವು ಎಂದು ಹೇಳಿದರು. ಬಂಟ್ಸ್ ವೆಲ್ಫೇರ್ ಪಡುಬಿದ್ರಿ ಅಧ್ಯಕ್ಷರು, ಜಾನಪದ ವಿದ್ವಾಂಸ ಡಾ| ವೈ. ಎನ್. ಶೆಟ್ಟಿ ಮಾತನಾಡಿ, ಆಟಿ ಆಷಾಢವಲ್ಲ. ಆಟಿ ತುಳುವರ ಆಟಿ. ಆಟಿ ಭೂಮಿಗೆ ಚೇತನವಾಗಿ ಮಳೆಯಿಂದ ಜಲ ಸಂಗ್ರಹದ ಸಮಯ. ಆಟಿ ಒಂದು ದಿನದ ಕಾರ್ಯಕ್ರಮವಲ್ಲ ಎಂದು ಹೇಳಿದರು.

ಕೃಷಿಕ ಶಿವರಾಮ ಶೆಟ್ಟಿ ಮತ್ತು ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ವಹಿಸಿದ್ದರು.

ವೇದಿಕೆಯಲ್ಲಿ ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಭಾಸ್ಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಸಿರಿಮುಡಿ ದತ್ತಿನಿಧಿ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಯುವ ಬಂಟರ ಸಂಘದ ಅಧ್ಯಕ್ಷ ಸುಜಿತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಶ್ಮಿತಾ ಎಮ್ ಶೆಟ್ಟಿ, ಕೋಶಾಧಿಕಾರಿ ಲತಾ ಪಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಟಿ ಕಳೆಂಜ, ಕಂಗೀಲು ನೃತ್ಯದ ಜೊತೆಗೆ ಸುಮಾರು 20 ಕ್ಕೂ ಅಧಿಕ ಬಗೆಯ ಆಟಿ ಖಾದ್ಯಗಳನ್ನು ಉಣಬಡಿಸಲಾಯಿತು.