ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿವರಾತ್ರಿ : ಶಿವಸ್ಮರಣೆ - ಜಗವು ಶಿವನೊಳಗುಂಟು ಜಗದೊಳು ಶಿವನಿಲ್ಲ ...!

Posted On: 11-03-2021 09:54AM

{ ಮಾಘ ಮಾಸದಲ್ಲಿ‌ ಸನ್ನಿಹಿತವಾಗುವ ಬಹುಳ ಚತುರ್ದಶಿಯಂದು "ಶಿವರಾತ್ರಿ" . ಇದು ಹಬ್ಬವಲ್ಲ ವ್ರತ. ಅಭಿಷೇಕ - ಅರ್ಚನೆಗಳೇ ಪ್ರಧಾನವಾಗಿರುವ ಆರಾಧನೆ. ಉಪವಾಸದ ಶ್ರದ್ಧೆ , ದಿನಪೂರ್ತಿ ಮಹೇಶ್ವರನ ಸನ್ನಿಧಾನದಲ್ಲಿ ಕಾಲಕಳೆಯುವ ವ್ರತ ನಿಷ್ಠೆಗಳ ಸಂಕಲ್ಪ .ಇದೇ ಶಿವರಾತ್ರಿ.} ಸೃಷ್ಟಿ ಕರ್ತನಾದ ಬ್ರಹ್ಮನ ಸತ್ಯಲೋಕ ಎಲ್ಲಿದೆ ,ಪಾಲನಾ ಕರ್ತನಾದ ನಾರಾಯಣನ ವೈಕುಂಠ ಎಲ್ಲಿದೆ,ಇಂದ್ರನ ಸ್ವರ್ಗ ಎಲ್ಲಿದೆ, ಯಮನ ಶೈಮಿನಿ ಎಲ್ಲಿದೆ . ಇವೆಲ್ಲ ಪುರಾಣದ ವರ್ಣನೆಗಳಿಂದ ಋಷಿ ವಾಕ್ಯಗಳಿಂದ ಕಲ್ಪನೆಯಲ್ಲಿ ಸಂಭವಿಸುವ ಅಥವಾ ಅರ್ಥೈಸಿಕೊಳ್ಳಬಹುದಾದ ಲೋಕಗಳು.ಆದರೆ ಲಯಾಧಿಕಾರಿಯಾದ ಮಹಾದೇವನ ವಾಸಸ್ಥಾನ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಸರಳ .ಅದು ಭರತವರ್ಷದ ಉತ್ತರದಲ್ಲಿರುವ ಬೆಳ್ಳಿಬೆಟ್ಟ ,ಗೌರಿಶಂಕರ ಅಥವಾ ಕೈಲಾಸ.ಈ ನೆಲೆಯನ್ನು ಕಲ್ಪಿಸಬೇಕಾಗಿಲ್ಲ , ಭೂಮಿಯಲ್ಲಿ ಬದುಕುವ ಪ್ರತಿಯೊಬ್ಬನೂ ಆಲೋಚಿಸಿ ನಿರ್ಧರಿಸಬಹುದಾದ ನೆಲೆಯಾಗಿದೆ ಮಹಾದೇವನ ವಾಸಸ್ಥಾನ.‌ಆದುದರಿಂದಲೇ ಮಹಾರುದ್ರದೇವರು ಸುಲಭ ಗ್ರಾಹ್ಯರು, ಜನಮಾನಸಕ್ಕೆ ಸಮೀಪದ ದೇವರು. ಜನಪದರ ಆರಾಧ್ಯ ಮೂರ್ತಿ, ಶಿಷ್ಟ ಚಿಂತನೆಯಲ್ಲಿ 'ಅಧ್ಯಾತ್ಮದ ಒಂದು ಬೆರಗು'. ಜಗತ್ತಿಗೆ ಮಾತೃ - ಪಿತೃ ಸ್ಥಾನದಲ್ಲಿರುವ ಪಾರ್ವತಿ ಸಮೇತನಾದ ಮಹೇಶ್ವರ ; ಇವರ ದಾಂಪತ್ಯ ಆದರ್ಶ ಎಂದೇ ಮನುಕುಲ‌ ಸ್ವೀಕರಿಸಿದೆ.

• ಪಾರ್ವತಿಯ ಶಿವತಪಸ್ಸು , ಶಿವಭಕ್ತ ಮಾರ್ಕಾಂಡೇಯ ,ಬೇಡರ ಕಣ್ಣಪ್ಪ , ಶ್ವೇತಕುಮಾರ ಮುಂತಾದ ಪುರಾಣ ಹೇಳುವ ಶಿವಭಕ್ತರ ಕಥೆಗಳು ಜನಜನಿತ . ಸರಳ - ಸಹಜ ಭಕ್ತಿಗೆ ಒಲಿಯುವ ಶಿವ ಕಪಟವರಿಯದ ಮುಗ್ಧನೆಂದೂ ಭಸ್ಮಾಸುರನ ಪ್ರಕರಣವನ್ನು ಉಲ್ಲೇಖಿಸಿ ವಿಮರ್ಶಕರು ವ್ಯಾಖ್ಯಾನಿಸುತ್ತಾರೆ. • ರಾಕ್ಷಸರಿಗೆ ವರ ಕೊಡುವಲ್ಲಿ ಶಿವನ ಹೃದಯವಂತಿಕೆ ಮಿಡಿಯುವ ಕ್ರಮ ಗಮನಸೆಳೆಯುತ್ತದೆ .ಭವಿಷ್ಯದ ಯೋಚನೆ ಇಲ್ಲದೆ 'ತಪಸ್ಸು ,ತಾನು ಒಲಿಯಬೇಕು' ಎಂಬ ಮುಗ್ಧತೆ ಮಾತ್ರ ಪ್ರಧಾನವಾಗುವ ಮಹಾದೇವನ ಚರ್ಯೆ ಬಹುತೇಕ ಮನುಷ್ಯ ಸಹಜವಾಗಿಯೇ ವ್ಯಕ್ತವಾಗುತ್ತದೆ . • ಶಿವ ಶರಣರು , ದಾಸರು ಶಿವನನ್ನು ಕಂಡ ಬಗೆಯೂ ವಿಶಿಷ್ಟ. - 'ಜಗವು ಶಿವನೊಳಗುಂಟು ಜಗದೊಳು ಶಿವನಿಲ್ಲ ಜಗವು ಶಿವನಿಂದ ಬೇರಿಲ್ಲ ಈ ಬೆಡಗ ಅಘಹರನೇ ಬಲ್ಲ ಸರ್ವಜ್ಞ' 'ತ್ರಿಪದಿ ಕವಿ ಸರ್ವಜ್ಞನ ನಿರೂಪಣೆಯಂತೆ ಜಗವು ಶಿವನಿಂದ ಬೇರಿಲ್ಲ'. ‌‌‌ - 'ರಾತ್ರಿಯೊಳು ಶಿವರಾತ್ರಿ' ಎಂದೂ ಸರ್ವಜ್ಞ ಉದ್ಗರಿಸಿದ್ದಿದೆ . - ಶಿವರಾತ್ರಿಯ ಜಾಗರಣೆಯಲ್ಲಿ ತನಗೆ ಶಿವ ದರ್ಶನವಾದುದನ್ನು ದಾಸವರೇಣ್ಯ ಪುರಂದರದಾಸರು ಹಾಡುತ್ತಾರೆ . - ಭಕ್ತಿ ಭಂಡಾರಿ ಬಸವಣ್ಣನವರಿಗೆ ಶಿವ ಎಲ್ಲೆಲ್ಲೂ ಕಾಣುತ್ತಾನೆ ,ವಿಶ್ವವೇ ಶಿವಮಯವಾಗಿ ಭಾಸವಾಗುತ್ತದೆ . ತ್ರಿನಯನನ ಕಣ್ಣಿನ ಕಾಂತಿಯ ಬೆಳಕಿನಿಂದಲೇ ಓಡಾಡುತ್ತಾರೆ ಬಸವಣ್ಣನವರು. - 'ಚೆನ್ನಮಲ್ಲಿಕಾರ್ಜುನಯ್ಯ ,ಆತ್ಮ ಸಂಗಾತಕ್ಕೆ ನೀನೆನಗುಂಟು', ಎನ್ನುತ್ತಾ ಸಂಸಾರ ತ್ಯಾಗ ಮಾಡಿ ಹೊರಟಳು ಮಹಾಶಿವಶರಣೆ ಅಕ್ಕಮಹಾದೇವಿ. • ನಮ್ಮ ದೈವ - ಬೂತಗಳ ನಡುವಣ ಲೋಕದಲ್ಲಿ ಅಬ್ಬರಿಸುವ ಸತ್ಯಗಳ ಕಥೆಗಳು ರೋಚಕ. - ಪಂಜುರ್ಲಿ ಪಾಡ್ದನವು ಶಿವನು ಹೇಗೆ ಈ ದೈವೀಶಕ್ತಿ ಪ್ರಕಟಗೊಳ್ಳುವಂತೆ ಮಾಡಿ ಭೂಮಿಗೆ ಕಳುಹಿಸಿದನೆಂಬ ಕಥೆಯನ್ನು ವಿವರಿಸುತ್ತದೆ . - ಮುಂಡತ್ತಾಯ ದೈವವು ಶಿವ ದೇವರ ಹಣೆಯಿಂದ ಜನಿಸಿತಂತೆ . - ಜೋಗಿ ಪುರುಷರಿಗೆ ಸಂಬಂಧಿಸಿದ ಕೆಲವು ಪಾಡ್ದನಗಳು ಕದಿರೆಯ ಮಂಜುನಾಥ ದೇವರನ್ನು ಉಲ್ಲೇಖಿಸಿವೆ . - ಗುಳಿಗ ದೈವವು ಶಿವಾಂಶವೆಂಬ ವರ್ಣನೆ ಇದೆ . - ಗಣಪತಿಯ ಜನನದ ಕುರಿತಾದ ಜಾನಪದ ಪಾಡ್ದನವೊಂದರಲ್ಲಿ‌ ಶಿವನ ಪ್ರೇಮ ವಿಲಾಸದ ವರ್ಣನೆ ಇದೆ .ಬಾಮಕುಮಾರನೆ ಗಣಪತಿ . - ಶಿವಪಾರ್ವತಿಯರು ಬೇಡರಾಗಿಯೋ , ಕೊರವಂಜಿಗಳಾಗಿಯೋ 'ಮೇಗಿ' ಲೋಕದಿಂದ ಭೂಲೋಕಕ್ಕೆ ಇಳಿಯುವಂತಹ ಕಥಾನಕಗಳಿವೆ . - ಶಿವ - ಪಾರ್ವತಿಯರ ಭೂಲೋಕ ಸಂಚಾರದ ಕತೆಗಳು ಮತ್ತು ಆ ಸಂದರ್ಭಗಳ‌ಲ್ಲಿ ಸಂಭವಿಸಿದ ಘಟನೆಗಳಿಂದ ಕೆಲವೊಂದು ಕ್ಷೇತ್ರಗಳು ನಿರ್ಮಾಣವಾಗುವುದನ್ನು ಕೇಳಬಹುದು - ನೋಡಬಹುದು. ಈ ಮೇಲಿನ ವಿವರಣೆಗಳಿಂದ ಶಿವ ಮನುಷ್ಯನ ಬದುಕಿಗೆ ಸಮೀಪದ ದೇವರಾಗಿ ಒಮ್ಮೆ ನಮ್ಮೊಂದಿಗೆ ನಮ್ಮವನಾಗಿ ನಮ್ಮಂತೆಯೇ ನಮ್ಮ ಕಷ್ಟಸುಖ ವಿಚಾರಿಸುವ; ಮತ್ತೊಮ್ಮೆ ದೇವತ್ವದ ತುತ್ತತುದಿಗೇರುತ್ತಾ ಮಹನೀಯನಾಗುವ ಆ ಮೂಲಕ ಭವ ಬಂಧನದಿಂದ ಮುಕ್ತಿಕೊಡುವ ಮಹಾದೇವನಾಗಿ ಅನಾವರಣಗೊಳ್ಳುತ್ತಾನೆ . ಈ ದೇಶದಲ್ಲಿ ಶಿವನು ಆದಿಮದಿಂದ ವೈದಿಕ ಸಂಸ್ಕೃತಿಯ ವರೆಗೆ ವಿವಿಧ ರೂಪಗಳಿಂದ ,ಅನುಸಂಧಾನ ವಿಧಾನಗಳಿಂದ , ಸ್ವೀರಿಸಲ್ಪಟ್ಟ ದೇವರು. ತುಳುನಾಡಿನಲ್ಲಂತೂ ಬಹುಪುರಾತನದಿಂದ ಪೂಜೆಗೊಂಡ ದೇವರು.

ವಿರಕ್ತಿ - ಅನುರಕ್ತಿ : ಸದಾ ಧ್ಯಾನಾಸಕ್ತನಾಗಿರುವ ಶಿವನು ಎಷ್ಟು ವಿರಕ್ತನೋ ಅಷ್ಟೇ ಅನುರಕ್ತನು. ಸರ್ವಸಂಗ ಪರಿತ್ಯಾಗದಂತಹ ನಿವೃತ್ತಿಯು ಎಷ್ಟು ಗಾಢವಾಗಿದೆಯೋ ಅಷ್ಟೆ ತೀವ್ರವಾದ ಪ್ರವೃತ್ತಿಯು ಶಂಕರನಲ್ಲಿ ಕಾಣಬಹುದು . ಗೊಂದಲಗಳ ಗೂಡಾಗಿ ಕಾಣುವ , ವಿರೋಧಾಭಾಸಗಳ ಕೇಂದ್ರವೇ ಆಗಿರುವ ಶಿವ - ಶಿವ ಪರಿವಾರ ಸ್ವತಃ ದೇವದೇವನೇ ಮಾನವಕೋಟಿಗೆ ಒಂದು ಆದರ್ಶದ ಸಂದೇಶವನ್ನು ನೀಡುವಂತಿದೆ .ಕಾಮನನ್ನು ದಹಿಸಿ ಕಾಮಿನಿಯನ್ನು ವರಿಸುವ ಶಿವ ನಮಗೆ ಹತ್ತಿರದವನೇ ಆಗುತ್ತಾನೆ. ಮನುಕುಲ ಸಹಜವಾಗಿ ಸಾಧಿಸಬೇಕಾದುದನ್ನು ಬೋಧಿಸುವಂತಿದೆ ಭಗವಾನ್ ಭರ್ಗನ ಪರಿಕಲ್ಪನೆ, ಅನುಸಂಧಾನ ,ಸ್ತುತಿ ಇತ್ಯಾದಿ. ಶಿವರಾತ್ರಿ : ಸ್ವಯಂಭುವಾಗಿ ಲಿಂಗರೂಪದಲ್ಲಿ ಉದ್ಭವಿಸಿದ ದಿನ. ಹಾಲಾಹಲ ವಿಷ ಪ್ರಾಶನ ಮಾಡಿದ ಸುಂದರ್ಭ , ತಾಂಡವವಾಡಿದ ಸುದಿನವೇ ಶಿವರಾತ್ರಿ ಪರ್ವಕಾಲ ; ಹೀಗೆ ಹಲವು ನಿರೂಪಣೆಗಳಿವೆ . ರುದ್ರ - ಪರ್ಜನ್ಯ : ವೇದವು ವಿದ್ಯೆಗಳಲ್ಲಿ ಶ್ರೇಷ್ಠ ವಾದುದು . ವೇದದಲ್ಲಿ ಹನ್ನೊಂದು ಅನುವಾಕಗಳಿರುವ 'ರುದ್ರನಮಕ'ವು ಉತ್ಕ್ರಷ್ಟವಾದುದು .ಅದರಲ್ಲಿರುವ ಮಂತ್ರಗಳಲ್ಲಿ 'ನಮಃ ಶಿವಾಯ ಶಿವ ತರಾಯಚ' ಎಂಬ ವಾಕ್ಯವಿದೆ . ಇದರಿಂದ ಆಯ್ದ ಮಂತ್ರ ಪಂಚಾಕ್ಷರೀ. ಆದುದರಿಂದ ಪಂಚಾಕ್ಷರೀ ವೇದೋಕ್ತ ಮಂತ್ರ ಎಂಬುದು ವಿದ್ವಾಂಸರ ಅಭಿಪ್ರಾಯ .ಶಿವ ಶಬ್ದವು ಶುಭ ಕಲ್ಯಾಣ ,ಮಂಗಳ ಮುಂತಾದ ಅರ್ಥಗಳನ್ನು ಧ್ವನಿಸುತ್ತದೆ .'ಅಚ್' ಪ್ರತ್ಯಯವು ಸೇರಿ ಕಲ್ಯಾಣ ಗುಣಗಳುಳ್ಳವ ಎಂಬ ಅರ್ಥದಲ್ಲಿ ನಿಷ್ಪನ್ನವಾಗುತ್ತದೆ .

ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನ ಸಂಭವಃ | ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಭವಃ|| ಅನ್ನ - ಜೀವರಾಶಿ ,ಅನ್ನ- ಮಳೆ , ಮಳೆ - ಯಜ್ಞ ಈ ಸಂಬಂಧವನ್ನು ವಿವರಿಸುವ ಈ ಶ್ಲೋಕವು ಯಜ್ಞದ ಪರಮ ಲಕ್ಷ್ಯವನ್ನು ಹೇಳುತ್ತದೆ . ಸಕಾಲಿಕ ಮಳೆಗೆ ಯಜ್ಞಕರ್ಮವೇ ಪೂರಕ ವೈದಿಕ ಪ್ರಕ್ರಿಯೆ ಎಂದು ದೃಢೀಕರಿಸುತ್ತದೆ . ಶಿವ ,ಸದಾಶಿವ , ಪರಶಿವ , ಇವು ಪರಮಾತ್ಮನ ಮನೋಜ್ಞ ಹೆಸರುಗಳು .ಇವನು ರುದ್ರನೂ ಹೌದು .ಮಳೆ ಸುರಿಸಿ ನೀರುಕೊಡುವವನು ಅಧಿಕ ಶಬ್ದ ಮಾಡುತ್ತಾ ನೀರನ್ನು ಕೊಡುವವನು‌ ಎಂಬುದು 'ರುದ್ರ' ಶಬ್ದಕ್ಕೆ ಯಾಸ್ಕಾಚಾರ್ಯರು ನೀಡುವ ಅರ್ಥ. ಮಳೆ ಸುರಿಸುವ ಶಿವ ,ಮಳೆಗೆ ಪೂರಕವಾದ ಯಜ್ಞ ಕರ್ಮ : ಈ ಎರಡು ಸಿದ್ಧಾಂತಗಳಿಂದ ರುದ್ರ ದೇವರನ್ನು ಅಗ್ನಿ‌ ಮುಖದಿಂದ ಆರಾಧಿಸಿದರೆ ಮಳೆಯಾಗುತ್ತದೆ .ಮಳೆಯಿಂದ ಬೆಳೆ ,ಬೆಳೆಯಿಂದ ಸಮೃದ್ಧಿ ತಾನೆ? ಲೋಕ ಸುಭಿಕ್ಷಗೆ ರುದ್ರದೇವರನ್ನು ಆರಾಧಿಸುವುದು ,ಆಮೂಲಕ‌ ಕ್ಷೋಭೆಗಳಿಲ್ಲದ ,ನಿರ್ಭಯದಿಂದ ಬದುಕುವ ಪರಿಸರ ನಿರ್ಮಾಣದ ನಿರೀಕ್ಷೆ ಋಜುಮಾರ್ಗದ ಸಂಕಲ್ಪವಲ್ಲವೆ . ಮಂಗಳಕರ ಮಹಾದೇವನನ್ನು‌ ಶಿವರಾತ್ರಿ ಪರ್ವದಿನದಂದು ಸ್ಮರಿಸುತ್ತಾ ಬಿಲ್ವ ದಳವನ್ನು ಅರ್ಪಿಸುತ್ತಾ ಲೋಕಶಾಂತಿಯನ್ನು ಹಾರೈಸೋಣ . (ಓದಿದ್ದು ,ಕೇಳಿದ್ದು) ಲೇಖನ : ಕೆ.ಎಲ್.ಕುಂಡಂತಾಯ