ದಂಡತೀರ್ಥ ವಿದ್ಯಾ ಸಂಸ್ಥೆ : ಮುದ್ದುಕೃಷ್ಣ ವೇಷ ಸ್ಪರ್ಧೆ
Posted On:
15-08-2025 01:34PM
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಮುದ್ದು ಕೃಷ್ಣ ಮತ್ತು ಮುದ್ದು ರಾಧೆ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಳೆ ವಿದ್ಯಾರ್ಥಿನಿ, ವಕೀಲೆ ಮತ್ತು ನೋಟರಿ ಅಕ್ಷತಾ ಶೆಣೈ ಕಾಪು ಇವರು ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಮುದ್ದು ಮಕ್ಕಳಿಗೆ ಇಂತಹ ಅವಕಾಶ ಶಾಲೆಯಲ್ಲಿ ದೊರೆತಾಗ ಅವರ ಪ್ರತಿಭೆ ವ್ಯಕ್ತವಾಗುತ್ತದೆ ಹಾಗೂ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ. ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಶಾಲೆ ಮತ್ತು ಶಿಕ್ಷಕರ ಮೇಲಿದೆ ಎಂಬ ಸಂದೇಶವನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ, ಪ್ರಶಾಂತ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಪನ್ನ ಪ್ರಶಾಂತ್ ಶೆಟ್ಟಿಯವರು ವಹಿಸಿ, ಎಲ್ಲಾ ಧರ್ಮೀಯರು ಸೇರಿಕೊಂಡು ಈ ಮುದ್ದು ಕೃಷ್ಣ,ರಾಧೆಯರ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಸಂತಸದಾಯಕ, ಶಾಲೆಯಲ್ಲಿ ಸರ್ವಧರ್ಮ ಸಮಭಾವದ ಈ ವಾತಾವರಣ ನಿಜಕ್ಕೂ ಪ್ರಶಂಸನೀಯ ಎಂಬ ಸಂದೇಶವನ್ನು ನೀಡಿದರು.
ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಮತ್ತು ಶಿಕ್ಷಕಿ ರಜನಿ ಪ್ರಭು ಸಾಂದರ್ಭಿಕವಾಗಿ ಮಾತನಾಡಿದರು. ಪ್ರಾಂಶುಪಾಲ ನೀಲಾನಂದ್ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್, ಶಿಕ್ಷಕ - ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ವಿವಿಧ ವಿಭಾಗಗಳ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ಹಾಗೂ ಸ್ಪರ್ಧಾಳುಗಳಿಗೆ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು.
ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್ ಸ್ವಾಗತಿಸಿ, ಶಿಕ್ಷಕಿ ವರ್ಷಾ ಆಚಾರ್ಯ ವಂದಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮೀ ರಾವ್ ನಿರೂಪಿಸಿದರು.