ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಂಕರ್ ಶಾಂತಿ ಪ್ರಕರಣಕ್ಕೆ ನ್ಯಾಯ ಸಿಗದಿದ್ದಲ್ಲಿ ಮಕ್ಕಳೊಂದಿಗೆ ಉಪವಾಸ ಸತ್ಯಾಗ್ರಹ : ಪೂರ್ಣಿಮ ಶಂಕರ್ ಶಾಂತಿ

Posted On: 11-03-2021 07:15PM

ಉಡುಪಿ : ಶಂಕರ್ ಶಾಂತಿಯವರು ಜನಸಾಮಾನ್ಯರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟಗಳನ್ನು ರೂಪಿಸುತ್ತಾ ಕಾನೂನು, ನಿಯಮ ಪಾಲನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನನ್ನ ಗಂಡನ ಮೇಲೆ ದಿನಾಂಕ 20-02-2021, ಆದಿತ್ಯವಾರದಂದು ಮನೆಯ ಸಮೀಪದ ಕಾಳಿಕಾಂಬ ದೇವಾಲಯ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ, ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅದೇ ಸಮಯಕ್ಕೆ ಬೊಬ್ಬೆ ಕೇಳಿ ನಾನು ಸ್ಥಳಕ್ಕಾಗಮಿಸಿದಾಗ ನನ್ನ ಗಂಡ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಅವರನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದೆ. RTI ಕಾರ್ಯಕರ್ತನಾಗಿ ಸಾಮಾಜಿಕ ನೆಲೆಯಲ್ಲಿ ತನ್ನ ಊರಿನಲ್ಲಿ ಹಾಗೂ ಸುತ್ತಮುತ್ತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದವರು ನನ್ನ ಗಂಡ. ರಸ್ತೆ ಸಾರಿಗೆ ಸುರಕ್ಷತೆ ವಿಷಯ, ಕಾಂಕ್ರೀಟ್ ರಸ್ತೆ ಕಳಪೆ ವಿಷಯ, ಬಾರ್ಕೂರು ಜೈನ ಬಸದಿ ಅತಿಕ್ರಮಣ ತೆರವು, ಬಾರ್ಕೂರು ಗ್ರಾ. ಪಂ. ಅವ್ಯವಹಾರ, ಹೊಸಾಳ ಗರಡಿಯಲ್ಲಿ ವೈದಿಕನೋರ್ವನ ಅನಾಚಾರ ಪ್ರಶ್ನಿಸುವಿಕೆ, ಇಂತಹದ್ದೆ ಅನೇಕ ಜನಪರ ಸೇವೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರು ನನ್ನ ಗಂಡ ಶಂಕರ ಶಾಂತಿ.

ಜೈನ್ ಬಸದಿ ಅತಿಕ್ರಮಣ ತೆರವು ಮತ್ತು ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರ ಕುರಿತು ನನ್ನ ಗಂಡ ಕ್ರಮ ಕೈಗೊಂಡಿದ್ದರಿಂದ ದುಷ್ಕರ್ಮಿಗಳಾದ ಪ್ರವೀಣ ಆಚಾರ್ಯ, ಪ್ರಸಾದ್ ಆಚಾರ್ಯ, ಶಾಂತರಾಮ ಶೆಟ್ಟಿ, ಮಂಜಪ್ಪ ಪೂಜಾರಿ, ದಿವಾಕರ ಒಟ್ಟು ಸೇರಿ ಕಬ್ಬಿಣದ ರಾಡ್‌ನಿಂದ ಕೊಲೆಯತ್ನ ನಡೆಸಿರುವುದು ದುಷ್ಟಕೂಟದ ರಾಜಕೀಯ ಪ್ರೇರಿತ ದುಷ್ಟಕೃತಕ್ಕೆ ಈ ಹಲ್ಲೆ ಕಾರಣವಾಗಿದೆ. ಮನುಷ್ಯತ್ವವಿಲ್ಲದ ವರ್ತನೆಯಾಗಿದ್ದು ಇದರಲ್ಲಿ ನನ್ನ ಗಂಡನ ಸಂಬಂದಿಯಾದ ಮಂಜಪ್ಪ ಪೂಜಾರಿ ಇತರರ ಜೊತೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ನನ್ನ ಗಂಡನ ಬೊಬ್ಬೆ ಕೇಳಿ ನಾನು ಬಾರದೆ ಹೋದಲ್ಲಿ ನನ್ನ ಗಂಡ ಶಿವನ ಪಾದ ಸೇರುತ್ತಿದ್ದರೇನೋ? ನಾನು ಈ ಪ್ರಕರಣ ದಾಖಲಿಸುವ ಮೊದಲೇ ನನ್ನ ಗಂಡನ ಸಂಬಂದಿಯಾದ ಮಂಜಪ್ಪ ಪೂಜಾರಿ ನನ್ನ ಗಂಡನೇ ದೇವಾಲಯದ ಕಿಟಕಿ ಗಾಜನ್ನು ಒಡೆದು ಇತರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಿಸಿದ್ದು ವಿಪರ್ಯಾಸವೇ ಸರಿ. ಅದೇ ದಿನ ನಾನು ಪ್ರವೀಣ ಆಚಾರ್ಯ, ಪ್ರಸಾದ್ ಆಚಾರ್ಯ, ಶಾಂತರಾಮ ಶೆಟ್ಟಿ, ಮಂಜಪ್ಪ ಪೂಜಾರಿ, ದಿವಾಕರ ಮೇಲೆ ಹಲ್ಲೆ ಪ್ರಕರಣವನ್ನು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. 5ಜನ ಆರೋಪಿಗಳ ಮೇಲೆ ಅಪರಾಧ ಕ್ರಮಾಂಕ 27/2021 ಕಲಂ: 143, 147, 148, 341, 323, 324, 326, 307, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾರಣಾಂತಿಕವಾಗಿ ಹಲ್ಲೆಗೊಳಗಾದ ಬಾರಕೂರಿನ ಆರ್ ಟಿ ಐ ಕಾರ್ಯಕರ್ತ ನನ್ನ ಗಂಡ ಶಂಕರ ಶಾಂತಿಯವರು‌‌ ಈಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಮತ್ತು ಪದಾಧಿಕಾರಿಗಳ ಜೊತೆಗೆ ನಾನು ತೆರಳಿ ದಿನಾಂಕ 25/02/2020 ರಂದು ಮನವಿ ಸಲ್ಲಿಸಿದ್ದೇವೆ. ತದನಂತರ ಉಡುಪಿ ಬನ್ನಂಜೆ ಬಿಲ್ಲವ ಸಂಘದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು, ಪ್ರತಿಭಟನೆಯಲ್ಲಿ ಜೈನ್ ಸಮುದಾಯದ ಆಕಾಶ್ ರಾಜ್ ಜೈನ್ ರವರು ಸಹ ಭಾಗಿಯಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ದ.ಸಂ.ಸ.ಕ ರಾಜ್ಯಾಧ್ಯಕ್ಷರಾದ ಶೇಖರ್ ಹಾವಂಜೆ, ಅ.ಭಾ.ಹಿಂ.ಮ.ಸ ಸಹ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು, ಹೋರಾಟದ ಮಾರನೇ ದಿನ ಹಲ್ಲೆಯ ಪ್ರಮುಖ ಆರೋಪಿ ಪ್ರವೀಣ್ ಆಚಾರ್ಯನನ್ನು ಬಂಧಿಸಿದ್ದಾರೆ.

ದಿನಾಂಕ 04/03/2021 ರಂದು ಬ್ರಹ್ಮವಾರ ಠಾಣೆ ಎದುರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹಲವು ಬಿಲ್ಲವ ಸಂಘಟನೆ ಮುಖಂಡರು, ದ.ಸಂ.ಸ.ಕ, ಜೈನ್ ಸಮುದಾಯದ ಪ್ರಮುಖರೂ ಜೊತೆಗೆ ನಾನು ಮತ್ತು ನನ್ನ ಮಕ್ಕಳು ಹಾಗೂ ಪರಿವಾರ ಸದಸ್ಯರು ಸೇರಿ ಪ್ರತಿಭಟನೆ ಮಾಡಿದ್ದೆವು ನಂತರ ಮತ್ತೆ ಹಲ್ಲೆಗೆ ಸಂಬಂಧಿಸಿದ ಮೂವರು ಆರೋಪಿಗಳ ಬಂಧನವಾಗಿದೆ. ಆದರೂ ಈ ಹಲ್ಲೆ ಸಂಬಂಧಿಸಿದ ಪ್ರಮುಖ 4 ಜನ ಆರೋಪಿಗಳಾದ ಮಂಜಪ್ಪ ಪೂಜಾರಿ, ಶಾಂತರಾಮ್ ಶೆಟ್ಟಿ, ಪ್ರಸಾದ್ ಆಚಾರ್ಯ ಮತ್ತು ದಿವಾಕರ ಆಚಾರ್ಯರವರ ಬಂಧನ ಇನ್ನು ಆಗಿಲ್ಲ. ನನ್ನ ಗಂಡನ ಮೇಲೆ ಹಲ್ಲೆ ನಡೆದ್ದು ಇಂದಿಗೆ 19 ದಿನಗಳು ಕಳೆದರು ಪ್ರಮುಖ ಆರೋಪಿಗಳ ಬಂಧನವಾಗದೆ ಇರುವುದು ವಿಷಾದನೀಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ವ್ಯಕ್ತಿಗಳು, ರಾಜಕೀಯ ಪ್ರೇರಿತ ಶಕ್ತಿಗಳು ಪೊಲೀಸ್ ಇಲಾಖೆಯ ಕಾರ್ಯಚರಣೆ ಅಡ್ಡಿ ಪಡಿಸುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಮೂಲಕ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಹಿಂದುಳಿದ ಜಾತಿ ಸಚಿವರು ಮತ್ತು ಉಡುಪಿ ಜಿಲ್ಲೆ ಎಲ್ಲ ಶಾಸಕರಲ್ಲಿ ನನ್ನ ಗಂಡನಿಗೆ ಆದ ಅನ್ಯಾಯಕ್ಕೆ, ನ್ಯಾಯ ದೊರಕಿಸಿ ಕೊಡಬೇಕು ಮತ್ತು ಕೂಡಲೇ ಪ್ರಮುಖ ಆರೋಪಿಗಳನ್ನು ಬಂಧಿಸಬೇಕೆಂದು ವಿನಂತಿಸುತ್ತೇನೆ. ಆದಿತ್ಯವಾರದೊಳಗೆ ಪ್ರಮುಖ ಆರೋಪಿಗಳ ಬಂಧನವಾಗದಿದ್ದಲ್ಲಿ ದಿನಾಂಕ 15-03-2021ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಾನು ಮತ್ತು ನನ್ನ ಮಕ್ಕಳು ಜೊತೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತೇನೆ ಮತ್ತು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಮತ್ತು ಎಲ್ಲಾ ಇತರ ಸಂಘಟನೆಗಳ ಮುಖಂಡರ ಬೆಂಬಲದೊಂದಿಗೆ ಪ್ರತಿಭಟನೆ ನಡೆಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.