ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪತ್ರಿಕಾಗೋಷ್ಠಿಯಲ್ಲಿ ಹಲ್ಲೆಯ ಸತ್ಯಾಂಶ ಬಿಚ್ಚಿಟ್ಟು, ಘಟನೆಯ ಹಿಂದಿನ ವ್ಯಕ್ತಿಗಳನ್ನು ಸತ್ಯ ಪ್ರಮಾಣಕ್ಕಾಗಿ ಆಹ್ವಾನಿಸಿದ ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ

Posted On: 23-03-2021 04:54PM

ಉಡುಪಿ : ಯಾವ ತಪ್ಪು ಮಾಡದೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನನಗೆ ಹಲ್ಲೆ ಮಾಡಿದವರನ್ನು ಬಾರಕೂರು ಕಾಳಿಕಾಂಬೆ ಮತ್ತು ಅಲ್ಲಿನ ಕಲ್ಲುಕುಟ್ಟಿಗ ಸಾನಿಧ್ಯಕ್ಕೆ, ಕಟಪಾಡಿ ವಿಶ್ವನಾಥ ಕ್ಷೇತ್ರ ಹಾಗೂ ಧರ್ಮಸ್ಥಳದ ಅಣ್ಣಪ್ಪ ಕ್ಷೇತ್ರಕ್ಕೆ ಸತ್ಯ ಪ್ರಮಾಣಕ್ಕೆ ಆಹ್ವಾನಿಸುತ್ತಿದ್ದೇನೆ ಎಂದು ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ ಹೇಳಿದರು.

ಅವರು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಚ್ಚೂರು ಕಾಳಿಕಾಂಬ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಶ್ರೀಧರ ಆಚಾರಿ ವಡೇರಹೋಬಳಿ, ರವಿ ಆಚಾರಿ ಕೆರಾರ್ಕಳಬೆಟ್ಟು, ಚಂದ್ರಯ್ಯ ಆಚಾರಿ, ಸೌನ್ಯ ಸುರೇಶ್ ಆಚಾರಿ, ಪ್ರವೀಣ್ ಆಚಾರಿ ಮತ್ತು ಇತರರ ಮೇಲೆ ನಾನೇ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ, ಸಭಾಭವನದ ಗಾಜು ಒಡೆದಿದ್ದು, ಹಾಗೆಯೇ ಬ್ರಹ್ಮಕಲಶದ ಸಂದರ್ಭದಲ್ಲಿ ವಿದ್ಯುತ್ ಟ್ಯೂಬ್‍ಲೈಟ್ ಒಡೆದಿದ್ದು ಇದೆಲ್ಲವೂ ಸಭಾಭವನದ ಎದುರಿನ ಕಚ್ಚೂರು ರಸ್ತೆಯಲ್ಲಿ ನಡೆದಿದ್ದು, ದೇವಸ್ಥಾನಕ್ಕೆ ಸಂಬಂಧಪಟ್ಟ ಅಡುಗೆ ಕೋಣೆಯಲ್ಲಿ ನಡದದ್ದೇ ಅಲ್ಲವೆಂದು ತಾವು ಕಣ್ಣಾರೆ ಕಂಡಂತೆ ಸುಳ್ಳನ್ನು ಬಂಡವಾಳವಾಗಿಟ್ಟುಕೊಂಡು ಅಪರಾಧಿಗಳನ್ನು ಬಚಾವ್ ಮಾಡುವ ಉದ್ದೇಶದಿಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಿಂದುಗಳಿಗೆ ದೇವಿ ಪೂಜಾನೀಯ ಮತ್ತು ಶ್ರೇಷ್ಟ ಶಕ್ತಿ ಅಂತಹ ದೇವಿಯ ಮುಂದೆ ನಿಂತು ಪ್ರಸಾದ ಸ್ವೀಕಾರ ಮಾಡುವ ಇವರುಗಳು ತಮ್ಮ ಇನ್ನೊಬ್ಬ ಆಡಳಿತ ಮೊಕ್ತೇಸರ ಪ್ರವೀಣ್ ಆಚಾರಿ ಮತ್ತು ಅವನ ಸಹೋದರ ಪ್ರಸಾದ್ ಆಚಾರಿ ಮತ್ತಿತರ ಕುಕೃತ್ಯಕ್ಕೆ ಧರ್ಮ ಬಿಟ್ಟು ಬೆಂಬಲ ನಿಂತಿರುವುದು ದೇವಿಯ ಸಾನಿಧ್ಯದ ಅಪವಿತ್ರಕ್ಕೆ ಇವರುಗಳೂ ಕೂಡಾ ನೇರ ಹೊಣೆಯಾಗಿರುತ್ತಾರೆ. ಅಲ್ಲದೇ ನಾನೇ ದೇವಾಲಯದ ಕಿಟಕಿ ಗಾಜುಗಳನ್ನು ಒಡೆದು, ಕೋಳಿ ರಕ್ತವನ್ನು ಮೈಗೆ ಹಚ್ಚಿಕೊಂಡು ಪೊಲೀಸ್ ಕಂಪ್ಲೈಟ್ ದಾಖಲಿಸಿದ್ದೇನೆ ಎಂದು ದಿನೇಶ್ ಆಚಾರ್ಯ ಪಡುಬಿದ್ರೆಯವರು ವಿಶ್ವಕರ್ಮ ಸಮುದಾಯದ ವಾಟ್ಸಪ್ ಗ್ರೂಪ್‍ನಲ್ಲಿ ಅಪಪ್ರಚಾರ ಮಾಡಿರುತ್ತಾರೆ. ನಾನು ಮೇಲಿನ ಎಲ್ಲಾ ಆಚಾರಿ ಆಡಳಿತ ಮಂಡಳಿಯ ಪ್ರತಿನಿಧಿಗಳನ್ನು ಕಾಳಿಕಾಂಬೆ ಮತ್ತು ಅಲ್ಲಿರುವ ಕಲ್ಲುಕುಟ್ಟಿಗ ಸಾನಿಧ್ಯಕ್ಕೆ ಸತ್ಯ ಪ್ರಮಾಣಕ್ಕೆ ಆಹ್ವಾನಿಸುತ್ತಿದ್ದೇನೆ. ಮತ್ತೋರ್ವ ದೊಡ್ಡ ನಾಯಕ ಶ್ರೀ ಬಿ.ಎನ್ ಶಂಕರ ಪೂಜಾರಿ ಫೋನ್ ಸಂಭಾಷಣೆಯಲ್ಲಿ ಮತ್ತು ಸಾರ್ವಜನಿಕವಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದು ನಾನು ಖುದ್ದಾಗಿ ಬ್ಲೇಡಿನಿಂದ ಕುಯ್ದುಕೊಂಡಿದ್ದೇನೆ. ಕಲ್ಲಿನಿಂದ ಒಡೆದುಕೊಂಡಿದ್ದೇನೆ. ಹಣ ವಸೂಲಿಗಾರನಾಗಿದ್ದೇನೆ. ನಾನು 420 ಎಂದು ಈ ವ್ಯಕ್ತಿ ಮಾತನಾಡಿದ್ದು ಇವತ್ತು ತಮ್ಮ ಮೂಲಕ ಮೂರು ವಿಷಯಗಳನ್ನು ಸಮಾಜದ ಮುಂದೆ ಇಡುತ್ತೇನೆ. ಯಾರು 420 ಎಂದು ಸಮಾಜ ನಿರ್ಧಾರ ಮಾಡಲಿ. ಎರಡು ವರ್ಷ (03/02/2019 ಬ್ರಹ್ಮಾವರ) ಹಿಂದೆ ಬಿಲ್ಲವ ಸಮಾವೇಶಕ್ಕಾಗಿ ಒಂದು ಕೋಟಿಗೂ ಹೆಚ್ಚು ಧನ ಸಂಗ್ರಹಿಸಿದ್ದು ಎಲ್ಲರಿಗೂ ಎಲ್ಲರಿಗೂ ಗೊತ್ತಿರುವ ವಿಚಾರ, ಸರ್ಕಾರದಿಂದ ಮತ್ತು ಸಮಾಜ ಬಾಂಧವರಿಂದ ಸಂಗ್ರಹವಾದ ಹಣದ ಲೆಕ್ಕಾಚಾರ ಈ ವರೆಗೆ ಯಾಕೆ ನೀಡಲಿಲ್ಲ ? ಸಾರಥಿಯು ಹಣ ನುಂಗಿ ಕುದುರೆಯ ಒರೆಸುವ ಕೆಲಸ ಮಾಡುತ್ತಿರುವುದು ಯಾಕೆ ? ವಿಖ್ಯಾತಾನಂದ ಸ್ವಾಮಿ..! ಧರ್ಮಕಾರ್ಯ ಬಿಟ್ಟು ನನ್ನ ಪರ ಹೋರಾಟಕ್ಕೆ ಬಂದ ಸಮಾನ ಮನಸ್ಕರಿಗೆ ಕರೆ ಮಾಡಿ ದಾರಿ ತಪ್ಪಿಸುವ ಕಾರ್ಯ ಮಾಡಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದರು.

ಮತ್ತೊಂದು ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದು, ಬಾರ್ಕೂರು ಜೈನ ಬಸದಿಗೆ ಸಂಬಂಧಪಟ್ಟ ಸ್ಥಳವನ್ನು ಮಂಜಪ್ಪ ಪೂಜಾರಿ ಮತ್ತು ಕುಟುಂಬ ಅಕ್ರಮವಾಗಿ ಉಪಯೋಗಿಸುತ್ತಿದ್ದು ಜಿಲ್ಲಾ ಆಡಳಿತ ಆದಷ್ಟು ಬೇಗ ಆ ಸ್ಥಳವನ್ನು ಜೈನ ಸಮುದಾಯಕ್ಕೆ ನೀಡುವ ಕೆಲಸ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಅಮರಾಣಂತ ಉಪವಾಸ ಕೈಗೊಳ್ಳುತ್ತೇನೆ. ಅಪರಾಧಿಗಳಿಗೆ ನ್ಯಾಯಾಲಯ ಜಾಮೀನು ನೀಡಿರಬಹುದು. ಆದರೆ ನ್ಯಾಯದೇವತೆ ನನ್ನ ಪರವಾಗಿ ಇದ್ದಾಳೆ ಎಂಬುದು ನನ್ನ ನಂಬಿಕೆ. ನಾನು ಸಸ್ಯಹಾರಿ ಆಗಿದ್ದು, ದೇವಿಯ ನಿತ್ಯ ಪೂಜಾ ಅರ್ಚಕನಾಗಿರುವ ಕಾರಣ ನನ್ನ ಸತ್ಯಕ್ಕೆ ದೇವಿಯ ಆಶಿರ್ವಾದ ಖಂಡಿತ ನನ್ನ ಮೇಲೆ ಇದೆ ಎನ್ನುವ ನಂಬಿಕೆ ನನಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಸೂಡಾ ರವರ ವಿರುದ್ಧ ನನ್ನ ಕಾನೂನು ಹೋರಾಟ ಮುಂದುವರೆಸುತ್ತೇನೆ. ನನಗೆ ಬೆಂಬಲವಾಗಿ ನಿಂತ ಸಂಘಟನೆಯ ಪ್ರತಿನಿಧಿಗಳು, ಸಮಾಜ ಬಂಧುಗಳು, ಸ್ನೇಹಿತರು ಸಾರ್ವಜನಿಕರು, ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳು, ವಿಶೇಷವಾಗಿ ಜೈನ ಸಮುದಾಯಕ್ಕೆ ಕೂಡಾ ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದರು.

ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಶೇಖರ‌ ಹಾವಂಜೆ, ಉಡುಪಿ ಜಿಲ್ಲೆ ಆರ್ ಟಿ ಐ ಕಾರ್ಯಕರ್ತರ ಸಮಿತಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ, ಪ್ರಮೋದ್ ಉಚ್ಚಿಲ ಉಪಸ್ಥಿತರಿದ್ದರು.