ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಕಾಲಾವಧಿ ಸುಗ್ಗಿ ಮಾರಿಪೂಜೆ. ಕಾಪುವಿನ ಮೂರು ಮಾರಿ ಗುಡಿಗಳು ಜನಾಕರ್ಷಣೆಯ, ವಿದ್ಯುದೀಪಾಲಂಕೃತದಿಂದ, ಪುಷ್ಪಾಲಂಕಾರದಿಂದ ಎಲ್ಲರ ಕಣ್ಮನ ಸೆಳೆಯುತ್ತಿದ್ದು, ಕಾಪು ಶ್ರೀ ಹಳೆ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೆಯ ಮಾರಿಗುಡಿ (ಕಲ್ಯ) ದೇವಸ್ಥಾನಗಳು ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ಲಕ್ಷಾಂತರ ಭಕ್ತರು ಜಿಲ್ಲೆ, ಹೊರಜಿಲ್ಲೆಗಳಿಂದ ಆಗಮಿಸಿ ಗದ್ದುಗೆಯಿಂದ ಅಲಂಕೃತಳಾದ ದೇವಿಯ ಕಂಡು ವಿವಿಧ ಸೇವೆಗಳನ್ನು ಸಮರ್ಪಿಸಿ ಪುನೀತರಾಗಿದ್ದಾರೆ.
ಕೋಮು ಸೌಹಾರ್ದತೆ ಎಂಬಂತೆ ಮತ್ತು ಎಲ್ಲಾ ಜಾತಿ, ಧರ್ಮದವರು ನನ್ನ ಮಕ್ಕಳು ಎಂಬಂತೆ ದೇವಿಗೆ ಸಮರ್ಪಿಸುವ ದೇವಿಗೆ ಅತಿಪ್ರಿಯವಾದ ಶಂಕರಪುರ ಮಲ್ಲಿಗೆ ಹಾಗೂ ರಕ್ತಾಹಾರ ಬೇಕೆಂಬ ದೇವಿಯ ಪ್ರೇರಣೆಯ ಕುರಿ, ಆಡು,ಕೋಳಿಗಳ ಮಾರಾಟದಲ್ಲಿಯೂ ಮುಸ್ಲಿಮ್ ಬಾಂಧವರೇ ಹೆಚ್ಚಾಗಿ ಕಂಡು ಬಂದಿದ್ದು ಒಟ್ಟಿನಲ್ಲಿ ನಮ್ಮ ಕಾಪು ಸುಗ್ಗಿ ಮಾರಿಪೂಜೆಯು ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.