Updated News From Kaup
ಜಾಹಿರಾತು
Posted On: 10 Jun 2020, 07:43 AM
BakeLine ಮೂಡುಬೆಟ್ಟು, ಕಟಪಾಡಿ ಕಾಪು, ಶಿರ್ವ, ಬಂಟಕಲ್ ಉದ್ಯಾವರ ಈ ವ್ಯಾಪ್ತಿಯ ಪ್ರದೇಶಗಳಿಗೆ ಹೋಮ್ ಡೆಲಿವರಿ ಕೊಡಲಾಗುವುದು ಸಂಪರ್ಕಿಸಿ 9686433577, 9901726577
ಶೈಕ್ಷಣಿಕ ವರ್ಷದಲ್ಲಿ ಸಿಲಬಸ್ ಕಡಿಮೆ ಮಾಡಲು ಚಿಂತನೆ : ಸಚಿವ ಸುರೇಶ್ ಕುಮಾರ್
Posted On: 09 Jun 2020, 07:34 PM
ಉಡುಪಿ ಜೂನ್ 9 (ಕರ್ನಾಟಕ ವಾರ್ತೆ): ಕೋವಿಡ್-19 ಕಾರಣದಿಂದ ಈ ವರ್ಷದ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವುದು ವಿಳಂಬವಾಗಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರಸಕ್ತ ವರ್ಷದ ಶಾಲಾ ಪಠ್ಯವನ್ನು ಕಡಿಮೆ ಮಾಡಲು ಚಿಂತನೆ ಇದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಅವರು ಮಂಗಳವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಉಡುಪಿ, ಉತ್ತರ ಕನ್ನಡ ಮತ್ತು ದ.ಕನ್ನಡ ಜಿಲ್ಲೆಗಳ , ಜಿಲ್ಲಾ ಪಂಚಾಯತ್ ಸಿಇಓ ಗಳು, ಡಿಡಿಪಿಐ ಗಳು ಮತ್ತು ಬಿಇಓ ಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಪೂರ್ವ ಸಿದ್ದತೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಶಾಲಾ ಶೈಕ್ಷಣಿಕ ಅವಧಿ ಕಡಿಮೆಯಾಗಲಿದ್ದು, ಇದಕ್ಕಾಗಿ ಶಾಲಾ ಪಠ್ಯವನ್ನು ಕಡಿಮೆಗೊಳಿಸುವ ಕುರಿತಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳ ಮುಂದಿನ ತರಗತಿಗೆ ಅಗತ್ಯವಿರುವ ಪಠ್ಯದ ಕೊರತೆಯಾಗದಂತೆ , ಸೀಮಿತ ಅವಧಿಯೊಳಗೆ ಅತ್ಯಗತ್ಯ ಇರುವ ಪಠ್ಯ ಮಾತ್ರ ಒಳಗೊಳ್ಳುವಂತೆ ಪಠ್ಯವನ್ನು ಕಡಿಮೆ ಮಾಡಲು ಚಿಂತನೆ ಇದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ಕೋವಿಡ್-19 ಅವಧಿಯಲ್ಲಿ ರಾಜ್ಯದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಚಂದನ ವಾಹಿನಿಯ ಮೂಲಕ ಪರೀಕ್ಷೆಗಾಗಿ ಪಠ್ಯದ ಪುನರ್ ಮನನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ರಾಜ್ಯದಲ್ಲಿ ಶಿಕ್ಷಣ ಇಲಾಖೆಗೆ ಸಂಬಂದಿಸಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸುವ ಚಿಂತನೆ ಇದ್ದು, ಈ ಕುರಿತಂತೆ ಕೇಂದ್ರ ಸಚಿವ ಅಜಿತ್ ಜಾವೆಡ್‌ಕರ್ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು. ಕೋವಿಡ್ ಅವಧಿಯಲ್ಲಿ ರಾಜ್ಯದ ಶಿಕ್ಷಕರು ಕಾನನ ಶಾಲೆ, ವಠಾರ ಶಾಲೆ, ಓಣಿ ಶಾಲೆ, ಓದಿನ ಮನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪಾಠ ಮಾಡಿದ್ದು, ಇದು ಶಿಕ್ಷಕರಲ್ಲಿನ ಸೃಜನ ಶೀಲತೆ, ಕತೃತ್ವ ಶಕ್ತಿ ಗುಣಗಳನ್ನು ತೋರಿಸುತ್ತದೆ ಈ ಕುರಿತಂತೆ ಎಲ್ಲಾ ಶಿಕ್ಷಕರಿಗೆ ಧನ್ಯವಾದ ತಿಳಿಸುವುದಾಗಿ ಸಚಿವರು ಹೇಳಿದರು. ರಾಜ್ಯದಲ್ಲಿ ಎಸ್.ಎಎಸ್.ಎಲ್.ಸಿ ಪರೀಕ್ಷೆ ನಡೆಸಲು ಸಂಬಂದಿಸಿದಂತೆ , ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳ ಕುರಿತು ಹೈಕೋರ್ಟ್ ಗೆ ಸಲ್ಲಿಸಿರುವ ವರದಿಯಂತೆ, ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷಾ ವಿಧಾನಗಳಿಗೆ ಯಾವುದೇ ಕುಂದು ಬಾರದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಿದೆ, ಪರೀಕ್ಷೆ ಕುರಿತಂತೆ ಮಕ್ಕಳಿಗೆ ಹಿತಕರ ವಾತಾವರಣ ನಿರ್ಮಿಸಿ, ಯಾವುದೇ ಆತಂಕಕ್ಕೆ ಒಳಗಾಗದಂತೆ ಪರೀಕ್ಷೆ ಬರೆಯಲು ಶಿಕ್ಷಕರು ಪ್ರೋತ್ಸಾಹ ತುಂಬುವಂತೆ ಸಚಿವ ಸುರೇಶ್ ಕುಮಾರ್ ಹೇಳಿದರು. ರಾಜ್ಯದಲ್ಲಿ ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ನಡೆಸಲಾಗುವುದು, ಪ್ರಸಕ್ತ ವರ್ಷದಲ್ಲಿ ಶಾಲಾ ಮಕ್ಕಳ ಹಾಜರಾತಿ ಗಣನೆಗೆ ತೆಗೆದುಕೊಂಡು ಶಾಲೆಗಳಲ್ಲಿನ ಹೆಚ್ವುವರಿ ಶಿಕ್ಷಕರ ವರ್ಗಾವಣೆ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಖಾಸಗಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು, ಜಿಲ್ಲಾ ಕೇಂದ್ರಕ್ಕೆ ಆಗಮಿಸುವವರಿಗೆ, ಜಿಲ್ಲೆಯಲ್ಲಿ ಉಳಿಯಲು ಹಾಸ್ಟಲ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಸಭೆಯಲ್ಲಿ , ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಾಸಕರಾದ ರಘುಪತಿಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ,ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ದ.ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ಸೆಲ್ವಮಣಿ, ಉ.ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ರೋಶನ್ , ಉಡುಪಿ ಎಸ್‌ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.
ಸಂಗೀತಲೋಕದ ಸ್ವರ ಸಾಮ್ರಾಟ್ ಬಿರುದಾಂಕಿತ ಶುಭಕರ ಬೆಳಪು
Posted On: 07 Jun 2020, 09:28 AM
"ಬೆಳಪುವಿನಲ್ಲಿ ಉದಯಿಸಿದ ಬೆಳಕು" "ಸಂಗೀತಲೋಕದಲ್ಲಿ ಮೂಡಿತು ಹೊಳಪು" "ಸಾಕ್ಷಿ ಬೆಳೆಸಿದ ಶುಭಕರ ಬೆಳಪು" ರಂಗಭೂಮಿ ಕಲಾವಿದನಿಗೆ ತನ್ನ ಪಾತ್ರವೊಂದಕ್ಕೆ ಜೀವ ನೀಡುವಲ್ಲಿ ಒದಗಿ ಬರುವ ಪರಿಕರಗಳಲ್ಲಿ ಸಂಗೀತವು ಒಂದು. ಎಂಟ್ರಿಯಿಂದ ಹಿಡಿದು ಡೈಲಾಗ್ ವರೆಗೆ, ಪಂಚಿಂಗ್ ನಿಂದ ಎಂಡಿಂಗ್ ತನಕ, ಒಟ್ಟಾರೆ ಇಡೀ ನಾಟಕ ಪ್ರೇಕ್ಷಕನಿಗೆ ಬೋರ್ ಆಗದಂತೆ, ಕಲಾವಿದರಿಗೆ ಹುಮ್ಮಸ್ಸು ಬರುವಂತೆ, ಕಾಪಾಡಿಕೊಂಡು ಬರುವುದು ಒಬ್ಬ ಸಂಗೀತಗಾರನ ಕೈಯಲ್ಲಿದೆ. ನಾಟಕ ಆರಂಭದಿಂದ ಕೊನೆಯ ತನಕದ ದೃಶ್ಯದವರೆಗೂ ಸಂಗೀತಗಾರನ ಪಾತ್ರ ಅತೀ ಮುಖ್ಯವಾಗಿ ಇರಲೇಬೇಕು. ನಾಟಕವನ್ನು ಯಶಸ್ಸುಗೊಳಿಸುವ ಅನೇಕ ಉತ್ತಮ ಸಂಗೀತಗಾರರಿದ್ದಾರೆ. ಅಂತಹ ಸಾಧಕರಲ್ಲಿ 'ಸ್ವರ ಸಾಮ್ರಾಟ್' ಶುಭಕರ್ ಬೆಳಪು ಕೂಡ ಒಬ್ಬರು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಶ್ರೀ ಭೋಜ ಪೂಜಾರಿ ಹಾಗೂ ಶ್ರೀಮತಿ ಜಾನಕಿ ಪೂಜಾರ್ತಿಯವರ ಮೂರು ಮಂದಿ ಮಕ್ಕಳಲ್ಲಿ ಕಿರಿಯವರಾದ ಶುಭಕರ್ , ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಪದವಿ ವ್ಯಾಸಂಗ ಮಾಡಿರುತ್ತಾರೆ. ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲಾಗದೆ ಮೀನುಗಾರಿಕೆ ಹಾಗೂ ಟ್ರಾವೆಲ್ ಏಜೆನ್ಸಿ ಉದ್ಯೋಗ ಆರಿಸಿಕೊಂಡರು. "ಭಜನೆಯಿಂದ ಸಂಗೀತ. ಹಾರ್ಮೋನಿಯಂನಿಂದ ಕೀ ಬೋರ್ಡ್" ತನ್ನೊಳಗೆ ಅಡಗಿರುವ ಸಂಗೀತದ ಕಲೆಗೆ ಭಜನೆಯೇ ದಾರಿಯಾಯಿತು. "ಶ್ರೀ ರಾಮ ಭಜನಾ ಮಂದಿರ ಎರ್ಮಾಳ್ ಬಡಾ" ಇಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಶುಭಕರ್ ಅಲ್ಲಿ ನುಡಿಸುತ್ತಿದ್ದ ಹಾರ್ಮೋನಿಯಂಗೆ ಆಕರ್ಷಿತರಾದರು. ಎಲ್ಲೂರು ಸೀಮೆಗೆ ಒಳಪಟ್ಟ "ಶ್ರೀ ಧರ್ಮ ಜಾರಂದಾಯ ಭಜನಾ ಮಂದಿರ ಬೆಳಪು" ಇಲ್ಲಿ ಭಜನೆ ನಡೆಯುವಾಗ ಸ್ವತಃ ತಾನೇ ಹಾರ್ಮೋನೀಯಂ ನುಡಿಸಲು ಆರಂಭಿಸಿದರು. ಕ್ರಮೇಣ ಸಂಗೀತದ ಬಗ್ಗೆ ಅಭ್ಯಾಸ ನಡೆಸುತ್ತಾ ಒಂದು ದಿನ ಊರಿನಲ್ಲಿ ನಡೆದ ನಾಟಕಕ್ಕೆ ಸಂಗೀತ ನೀಡುವ ಭಾಗ್ಯ ಸಿಕ್ಕಿತು. "ಗುರುವಿಗೆ ನಮನ. ಸಂಗೀತಕ್ಕೆ ಗಮನ." ಶುಭಕರ್ ಬೆಳಪುರವರಲ್ಲಿ ಕಾಣುವ ಬಲು ದೊಡ್ಡ ಗುಣ ಗುರು ಭಕ್ತಿ. "ಶರತ್ ಉಚ್ಚಿಲರವರನ್ನು ತನ್ನ ಸಂಗೀತದ ಗುರುವಾಗಿ" ಪ್ರಾರ್ಥಿಸಿಕೊಳ್ಳುವ ಬೆಳಪು, ಅವರ ನಿರ್ದೇಶನದ ಮುಖಾಂತರ ಪ್ರಥಮ ಬಾರಿಗೆ "ಶ್ರೀ ನವೋದಯ ಕಲಾವಿದೇರ್ ಕುಡ್ಲ" ತಂಡದಲ್ಲಿ ಸಂಗೀತಗಾರನಾಗಿ ಸೇರ್ಪಡೆಗೊಂಡರು. ಸುನೀಲ್ ನೆಲ್ಲಿಗುಡ್ಡೆ, ರಮಾನಂದ ನಾಯಕ್ ರವರ ಸಲಹೆ, ಸಹಕಾರ, ಮಾರ್ಗದರ್ಶನದ ಮೂಲಕ ಸಂಗೀತದಲ್ಲಿ ಮತ್ತಷ್ಟು ಗಟ್ಟಿಯಾದರು. ಅನಿವಾರ್ಯ ಸಮಸ್ಯೆ ಬಿಟ್ಟು ಇಂದಿಗೂ ಸಂಗೀತ ನುಡಿಸುವ ಮೊದಲು ದೂರವಾಣಿ ಅಥವಾ ವಾಟ್ಸಪ್ ಮೂಲಕ ಗುರುವನ್ನು ಸಂಪರ್ಕಿಸಿ ಅವರ ಆಶೀರ್ವಾದ ಪಡೆದೇ ಸಂಗೀತ ಪ್ರಾರಂಭಿಸುತ್ತಾರೆ. "ಎಲ್ಲೂರು ವಿಶ್ವನಾಥನಿಂದ.. ಧರ್ಮಸ್ಥಳ ಮಂಜುನಾಥನಲ್ಲಿಗೆ" ಆರಾಧ್ಯ ದೇವರು ಎಲ್ಲೂರು ಸೀಮೆಯ ಶ್ರೀ ವಿಶ್ವನಾಥ ತನ್ನೆಲ್ಲ ಕೆಲಸ ಕಾರ್ಯಕ್ಕೆ ಅವನೇ ಒಡೆಯ ಎಂದು ಪ್ರಾರ್ಥಿಸಿಕೊಳ್ಳುವ ಬೆಳಪು ಮದುವೆ ಸಂದರ್ಭದಲ್ಲಿ ಆರ್ಥಿಕವಾಗಿ ತುಂಬಾನೇ ಸಮಸ್ಯೆಗೊಳಗಾದರು ಆಗ ಇದೇ ವಿಶ್ವನಾಥ ದಾರಿ ತೋರಿಸಿದ್ದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ. ಪರಮ ಪೂಜ್ಯ ಖಾವಂದರು ನಡೆಸುವ ಸಾಮೂಹಿಕ ವಿವಾಹದಲ್ಲಿ ಬದುಕಿನ ಭಾಗ್ಯ ದೇವತೆ ಪ್ರತಿಮಾರವರನ್ನು ಕೈ ಹಿಡಿದು ದಾಂಪತ್ಯ ಜೀವನನಕ್ಕೆ ಕಾಲಿಟ್ಟರು. "ಸ್ವರ ಸಾಮ್ರಾಟ.. ಸಾಕ್ಷಿ ತಂಡದ ಯಜಮಾನ." ಧರ್ಮಸ್ಥಳದಲ್ಲಿ ದಾಂಪತ್ಯ ಜೀವನನಕ್ಕೆ ಕಾಲಿಟ್ಟ ಸಂದರ್ಭ, ಜೀವನದಲ್ಲಿ ಸಾಧಿಸಬೇಕು ಎಂಬ ಮಾಡಿದ ಸಂಕಲ್ಪ ಬದುಕಿನ ದಿಕ್ಕನ್ನೇ ಬದಲಾವಣೆ ಮಾಡಿತ್ತು. ಇವರ ಸಂಗೀತದ ಇಂಪನ್ನು ಅರಿತ ತುಳು "ಸಂಸಾರ ಕಲಾವಿದೇರ್ ಪಣಿಯೂರು" ವಿಶ್ವ ರಂಗ ಭೂಮಿ ದಿನಾಚರಣೆಯಂದು ಸ್ವರ ಸಾಮ್ರಾಟ ಬಿರುದು ನೀಡಿ ಗೌರವಿಸಿದರು. ತನ್ನದೇ ಆದ "ಸಾಕ್ಷಿ ಕಲಾವಿದರು ಬೆಳಪು" ತಂಡವನ್ನು ಹುಟ್ಟು ಹಾಕಿ ಹಲವಾರು ಕಡೆಯಲ್ಲಿ ನಾಟಕ, ಕಾಮಿಡಿ ಕಾರ್ಯಕ್ರಮ ನೀಡಿದರು. ತಂಡ ಆರಂಭಗೊಂಡ ಎರಡೇ ವರ್ಷದಲ್ಲಿ ರವೀಂದ್ರ ಕೋಟ್ಯಾನ್, ಸತೀಶ್ ಪೂಜಾರಿಯವರ ಸಹಕಾರದಲ್ಲಿ ದುಬೈಯಲ್ಲಿ ಕಾರ್ಯಕ್ರಮ ನೀಡುವ ಸೌಭಾಗ್ಯ ಸಿಕ್ಕಿತು. ಮೂರು ಬಾರಿ ಗಲ್ಫ್ ರಾಷ್ಟ್ರಕ್ಕೆ ಹೋಗಿ ಕಾರ್ಯಕ್ರಮ ನೀಡಿರುವುದು ಇವರ ಪ್ರತಿಭೆ, ಶ್ರಮಕ್ಕೆ ಸಿಕ್ಕಿದ ಗೌರವವೇ ಆಗಿದೆ. "ಸಮಯವೇ ಭಕ್ತಿ.. ಪರಿಶ್ರಮವೇ ಶಕ್ತಿ" ಬೆಳಪುರವರು ಶ್ರಮಜೀವಿ ಯಾವುದೇ ಕಾರ್ಯಕ್ರಮ ಒಪ್ಪಿಕೊಂಡ ಮೇಲೆ ಅದು ಪೂರ್ಣಗೊಳ್ಳುವ ತನಕ ಅಭ್ಯಾಸ ನಡೆಸುತ್ತಾರೆ. ಇನ್ನೊಂದು ಅವರ ಗುಣ ಸಮಯದ ಪಾಲನೆ. ನಾಟಕ ಅಥವಾ ಇತರ ಕಾರ್ಯಕ್ರಮವೇ ಇರಲಿ ಸಮಯಕ್ಕೆ ಸರಿಯಾಗಿ ತನ್ನ ಇರುವಿಕೆಯನ್ನು ಗುರುತಿಸಿಕೊಳ್ಳುತ್ತಾರೆ. ಇದೇ ಅವರ ಯಶಸ್ಸಿನ ಗುಟ್ಟು. ಬೇರೆ ಬೇರೆ ತಂಡಗಳಲ್ಲಿ ಹಲವಾರು ನಾಟಕಗಳಿಗೆ ಸಂಗೀತ ನೀಡಿರುತ್ತಾರೆ. ಕನ್ನಡ ನಾಟಕ ತಂಡಕ್ಕೂ ಸಂಗೀತ ನೀಡಿದ ಬೆಳಪುರವರು ಸಿ.ಪಿ.ಎಲ್, ಬಲೇ ತೆಲಿಪಾಲೇ ಕಾರ್ಯಕ್ರಮದಲ್ಲಿಯೂ ಸಂಗೀತ ನೀಡಿರುತ್ತಾರೆ. ಬೆಂಗಳೂರಿನಲ್ಲಿ ನಡೆದ ಅಂತರಾಜ್ಯ ಬಹುಭಾಷಾ ನಾಟಕ ಸ್ಪರ್ಧೆಯಲ್ಲಿ ತಬುರನ ಕಥೆ ನಾಟಕಕ್ಕೆ ಎರಡನೇ ಪ್ರಶಸ್ತಿ. ಅಂತರ್ ಜಿಲ್ಲಾ ನಾಟಕ ಸ್ಪರ್ಧೆಯಲ್ಲಿ ಉತ್ತಮ ಸಂಗೀತಗಾರ ಪ್ರಶಸ್ತಿ ಲಭಿಸಿದೆ. "ದುಬೈ ಗಮ್ಮತ್ ಕಲಾವಿದರು ಮಂಗಳೂರು" ಪುರಭವನದಲ್ಲಿ ಅಭಿನಯಿಸಿದ "ಬಯ್ಯ ಮಲ್ಲಿಗೆ" ನಾಟಕಕ್ಕೆ ಪ್ರಥಮ ದಿನದ ಕಾರ್ಯಕ್ರಮದಲ್ಲಿ ಸಂಗೀತ ನೀಡಿರುತ್ತಾರೆ. ಪ್ರಸ್ತುತ "ತೆಲಿಕೆದ ಕಲಾವಿದೇರ್ ಕೊಯಿಲ ಬಂಟ್ವಾಳ" ತಂಡದಲ್ಲಿ ಸಂಗೀತಗಾರರಾಗಿದ್ದಾರೆ. "ನಾಟಕ ಸಂಗೀತ ಕಲಾವಿದರ ಒಕ್ಕೂಟದ" ನಿರ್ದೇಶಕರಾಗಿರುವ ಬೆಳಪುರವರು ದೇವರ ಅನುಗ್ರಹ, ಗುರುಭಕ್ತಿ, ಪರಿಶ್ರಮ, ಸರಳ ವ್ಯಕ್ತಿತ್ವ ಹಾಗೂ ತ್ಯಾಗ ಮನೋಭಾವನೆಯ ಮೂಲಕ ಉತ್ತಮ ಕಲಾವಿದನಾಗಲು ಸಾಧ್ಯ ಎಂದು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಮಡದಿ ಪ್ರತಿಮಾ ಮಕ್ಕಳಾದ ಸಾಕ್ಷಿ, ಸಾಹಿಲ್ ಜೊತೆ ಸುಖ ಜೀವನ ನಡೆಸುತ್ತಿರುವ ಶುಭಕರ್ ಬೆಳಪುರವರ ಕಲಾ ಜೀವನ ಇನ್ನಷ್ಟು ಎತ್ತರಕ್ಕೆ ಸಾಗಲಿ ಪ್ರಶಸ್ತಿ, ಪುರಸ್ಕಾರ, ಗೌರವ, ಸನ್ಮಾನ ಸಿಗಲಿ ಎಂದು ತಾಯಿ ಶಾರದೆಯಲ್ಲಿ ಪ್ರಾರ್ಥಿಸೋಣ. ✍️ ಕೆ ಕೆ ಬೆದ್ರ (ರಂಗಭೂಮಿ ಕಲಾವಿದ)
ಉಡುಪಿ.ಜೂ,6: ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 100 ಕೋವಿಡ್ ಪೀಡಿತರು ಡಿಸ್ಚಾರ್ಜ್
Posted On: 06 Jun 2020, 10:41 PM
ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 100 ಕೋವಿಡ್ ಪೀಡಿತರು ಡಿಸ್ಚಾರ್ಜ್ ಉಡುಪಿ ಜೂನ್ 6 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇದುವರೆಗೆ 767 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 132 ಮಂದಿ ಡಿಸ್ಚಾರ್ಜ್ ಆಗಿದ್ದು, 635 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಲ್ಲಿ ಇಂದಿನಿಂದ ಸರಾಸರಿ 100 ಮಂದಿ ಪ್ರತಿದಿನ ಗುಣಮುಖರಾಗಿ ಡಿಸ್ಚಾಜ್ ಆಗಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ದಿಶಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ 12,258 ಮಂದಿಯ ಕೋವಿಡ್ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 10992 ಮಂದಿಯ ವರದಿ ನೆಗೆಟಿವ್ ಆಗಿದ್ದು, 769 ವರದಿ ಬರಲು ಬಾಕಿ ಇದೆ, ಪಾಸಿಟಿವ್ ಪ್ರಕರಣಗಳಲ್ಲಿ ಶೇ.98 ಮಂದಿಗೆ ರೋಗ ಲಕ್ಷಣಗಳು ಇಲ್ಲ , ಪಾಸಿಟಿವ್ ಪ್ರಕರಣಗಳ ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಯಲ್ಲಿ 125, ಕಾರ್ಕಳದಲ್ಲಿ 75, ಎಸ್.ಡಿ.ಎಂ ಕಾಲೇಜಿನಲ್ಲಿ 180 ಮತ್ತು ಕೊಲ್ಲೂರುನಲ್ಲಿ 250 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೋವಿಡ್ -19 ಜಿಲ್ಲಾ ನೋಢೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ ಕಂಡು ಬಂದಿರುವ ಪಾಸಿಟಿವ್ ಪ್ರಕರಣಗಳಲ್ಲಿ ಯಾವುದೇ ರೋಗಿಗೆ ಆಕ್ಸಿಜಿನ್, ವೆಂಟಿಲೇಟರ್, ಐ.ಸಿ.ಯು ಸೇವೆ ನೀಡುವಂತಹ ಗಂಭೀರ ಪ್ರಕರಣ ಕಂಡುಬಂದಿಲ್ಲ ಎಲ್ಲರೂ ಚಿಕಿತ್ಸೆಗೆ ಶೀಘ್ರದಲ್ಲಿ ಸ್ಪಂದಿಸುತ್ತಿದ್ದು, ಆರೋಗ್ಯವಾಗಿದ್ದಾರೆ, ಕ್ವಾರಂಟೈನ್ ಕೇಂದ್ರಗಳಿಂದ ತೆರಳಿದವರಿಂದ ಅವರ ಮನೆಯವರಿಗೆ ಹಾಗೂ ಸಮುದಾಯಕ್ಕೆ ರೋಗ ಹರಡಿಲ್ಲ, ಹೋಂ ಕ್ವಾರಂಟೈನ್ ನಲ್ಲಿರುವವರ ಮನೆಗೆ ಪ್ರತಿದಿನ ಆಶಾಕಾರ್ಯಕರ್ತೆಯರು ಭೇಟಿ ನೀಡಿ , ಪರಿಶೀಲಿಸುತ್ತಿದ್ದು, ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ, ಜಿಲ್ಲೆಯ ಸರ್ಕಾರಿ ಕೋವಿಡ್ ಲ್ಯಾಬ್ 10 ದಿನದಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು. ಕೋವಿಡ್-19 ವಿರುದ್ದ ಹೋರಾಟದಲ್ಲಿ ಪ್ರತಿಯೊಬ್ಬರೂ ಸೇನಾನಿಗಳಂತೆ ಕಾರ್ಯ ನಿರ್ವಹಿಸಬೇಕಿದ್ದು, ಜಿಲ್ಲೆಯ ಎಲ್ಲಾ ಜನಪ್ರನಿಧಿಗಳು ಆರೋಗ್ಯ ಇಲಾಖೆಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲು ಬದ್ದರಿರುವುದಾಗಿ ತಿಳಿಸಿದ ಸಂಸದೆ ಶೋಭಾ ಕರಂದ್ಲಾಜೆ, ಪ್ರಸ್ತುತ ಜಿಲ್ಲೆಗೆ ಮಹಾರಾಷ್ಟ,ದಿಂದ ಬರುತ್ತಿರುವ ನಾಗರೀಕರನ್ನು ಕ್ವಾರಂಟೈನ್ ಕೇಂದ್ರಗಳಿಗೆ ತಲುಪಿಸಲು ಸೂಕ್ತ ವಾಹನ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆ ಬಗ್ಗೆ ಹೊರ ಗುತ್ತಿಗೆ ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ಜಿಲ್ಲೆಗೆ ಇನ್ನೊಂದು ಹೆಚ್ಚುವರಿ ಕೋವಿಡ್-19 ಆಸ್ಪತ್ರೆಯ ಅಗತ್ಯವಿದ್ದಲ್ಲಿ ಪ್ರಸ್ತಾವನೆ ನೀಡುವಂತೆ ತಿಳಿಸಿದರು. ರಾಷ್ಟಿಯ ಹೆದ್ದಾರಿ 169 ಎ ನಲ್ಲಿ ಪರ್ಕಳ ಸಮೀಪ ಗುಂಡಿ ಬಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದು, ಕೂಡಲೇ ಅದನ್ನು ಕಾಂಕ್ರೀಟ್ ನಿಂದ ಮುಚ್ಚುವಂತೆ ಸೂಚಿಸಿದ ಸಂಸದರು, ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಸೂಚಿಸಿದರು. ಕುಂದಾಪುರ ಶಾಸ್ತಿ ಸರ್ಕಲ್ ಕಾಮಗಾರಿ ಪ್ರಗತಿ ಬಗ್ಗೆ ಉತ್ತರಿಸಿದ ಅಧಿಕಾರಿಗಳು, ಕೋವಿಡ್ 19 ಕಾರಣದಿಂದ ಕಾರ್ಮಿಕರು ಊರಿಗೆ ತೆರಳಿದ್ದು, ಕಾರ್ಮಿಕರ ಸಮಸ್ಯೆಯಿಂದ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದ್ದು, 2 ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ತಿಳಿಸಿದರು. ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಹಾನಿಯಾದಲ್ಲಿ ಮೆಸ್ಕಾಂ ನಿಂದ ಶೀಘ್ರದಲ್ಲಿ ಪುರ್ನ ನಿರ್ಮಾಣ ಮಾಡುವಂತೆ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಸಂಸದರು ಸೂಚಿಸಿದರು, ಈಗಾಗಲೇ 140 ಮಂದಿ ಗ್ಯಾಂಗ್ ಮನ್ ನೇಮಕ ಮಾಡಿಕೊಂಡಿದ್ದು, ಇನ್ನೂ 140 ಮಂದಿ ನೇಮಕ ಮಾಡಿಕೊಳ್ಳಲಾಗುವುದು ಹಾಗೂ 3 ವಾಹನಗಳನ್ನು ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಕಡಲಕೊರೆತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಸೂಚಿಸಿದರು. ಕುಡಿಯುವ ನೀರು ಯೋಜನೆಯ ಕುರಿತಂತೆ ನಿಟ್ಟೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 90% ಸಿವಿಲ್ ಕೆಲಸಗಳು ಮುಕ್ತಾಯಗೊಂಡಿದು, ಎಲೆಕ್ಟ್ರಿಕ್ ಕೆಲಸಗಳು ಬಾಕಿ ಇದ್ದು, 2 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯ 134000 ರೈತರ ಖಾತೆಗಳಿಗೆ 94.86 ಕೋಟಿ ರೂಗಳ ಜಮೆ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಪ್ರದಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ವಿತರಿಸಲಾಗುವ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಾಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರೈಸುವಂತೆ ಸೂಚಿಸಿದ ಸಂಸದರು, ಸ್ವಚ್ಚ ಭಾರತ್ ಯೋಜನೆಯಡಿ ನಗರ ಪ್ರದೇಶದಲ್ಲಿನ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಆತ್ಮ ನಿರ್ಭರ್ ಯೋಜನೆಯಡಿ ಸಣ್ಣ ಕೈಗಾರಿಕೆಗಳಿಗೆ ನೀಡಿರುವ ಸಾಲ ಸೌಲಭ್ಯಗಳ ಅನುಷ್ಠಾನ ಕುರಿತಂತೆ , ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ ಸಂಸದರು , ಈ ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು,ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಪಂ ಸಿಇಓ ಪ್ರೀತಿ ಗೆಹಲೋತ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾದೂರು ತೈಲ ಸಂಗ್ರಹಗಾರದಿಂದ ದೇಶಕ್ಕೆ ಸಹಸ್ರ ಕೋಟಿ ರೂ ಉಳಿತಾಯ
Posted On: 05 Jun 2020, 10:57 AM
ಕಾಪು. ಜೂನ್, 5 : ಉಡುಪಿ ಜೆಲ್ಲೆಯ ಕಾಪು ತಾಲೂಕಿನ ಪಾದೂರು, ಮಂಗಳೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಭೂಗತ ತೈಲ ಸಂಗ್ರಹಗಳಿಂದ ದೇಶಕ್ಕೆ ಬರೋಬ್ಬರಿ 5000 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ. 53 ಲಕ್ಷ ಟನ್ ನಷ್ಟು ತುರ್ತು ಇಂಧನ ಸಂಗ್ರಹಕ್ಕೆ ಈ ಮೂರು ಕಡೆ ಪೆಟ್ರೋಲಿಯಂ ಸಚಿವಾಲಯ ಭೂಗತ ಸಂಗ್ರಹಗಾರ ಹೊಂದಿದೆ. ಏಪ್ರಿಲ್ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾತೈಲ ಬೆಲೆ ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಾಗ ಕೇಂದ್ರ ಸರ್ಕಾರ ಅಗ್ಗದ ಬೆಲೆಗೆ ತೈಲ ಖರಿದಿಸಿ ಈ ಮೂರು ಸಂಗ್ರಹಾಗಾರಗಳಿಗೆ ತುಂಬಿಸಿದೆ. ಈ ವೇಳೆ ಮಂಗಳೂರು ಮತ್ತು ಪಾದೂರಿನ ತೈಲ ಸಂಗ್ರಹಾಗಾರಗಳು ಅರ್ಧದಷ್ಟು ಖಾಲಿಯಾಗಿದ್ದವು, ವಿಶಾಖಪಟ್ಟಣದಲ್ಲಿ ಅಲ್ಪ ಪ್ರಮಾಣದ ಸಂಗ್ರಹಕ್ಕೆ ಜಾಗವಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ 5000 ಕೋಟಿ ರೂ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವೀಟ್ ಮಾಡಿದೆ. ಮಂಗಳೂರು, ಪಾದೂರು, ವಿಶಾಖಪಟ್ಟಣ ಪೈಕಿ ಪಾದೂರು ಘಟಕವೇ ದೊಡ್ಡದು. ಈ ಮೂರು ಘಟಕಗಳಲ್ಲಿ 53 ದಶಲಕ್ಷ ಲಕ್ಷ ಟನ್ ತೈಲ ಸಂಗ್ರಹಿಸಬಹುದು. 9.5 ದಿನ ದೇಶಕ್ಕೆ ತೈಲವನ್ನು ನೀಡಬಹುದು..
ತನ್ನದಲ್ಲದ ತಪ್ಪಿಗಾಗಿ ಕೈ ಕಳೆದುಕೊಂಡ ಸಂದೀಪ್ ಕೋಟ್ಯಾನ್ ಮುದರಂಗಡಿ
Posted On: 03 Jun 2020, 08:54 PM
ವೈದ್ಯಕೀಯ ನೆರವಿಗಾಗಿ ಮನವಿ.. ವಿಧಿ ಬಡವರ ವಿಚಾರದಲ್ಲಿ ಕೆಲವೊಂದು ಬಾರಿ ತುಂಬಾ ಕ್ರೂರಿ ಆಗುತ್ತಾನೆ. ಕಷ್ಟಗಳನ್ನು ಕೊಟ್ಟವರಿಗೆ ಮತ್ತೇ ಕಷ್ಟಗಳನ್ನು ನೀಡುತ್ತಾನೆ. ಮುದರಂಗಡಿಯ ಬಡತನದಲ್ಲಿರುವ ಪುಟ್ಟ ಸಂಸಾರದ ಕಣ್ಣೀರಿನ ಕಥೆ ಕೇಳಿದರೆ ಎಂತಹ ನಿಷ್ಠರುಣಿಗೂ ಕಣ್ಣೀರು ಸ್ಫುರಿಸೀತು. ಹೌದು ಗೆಳೆಯರೇ, ಸಂದೀಪ್ ಕೋಟ್ಯಾನ್ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಸಂತಸದಿಂದ ಇರುವಾಗಲೇ ವಿಧಿ ಕ್ಯಾಂಟರ್ ವಾಹನದ ರೂಪದಲ್ಲಿ ಬಂದು ಸಂದೀಪ್ ನ ಬದುಕಿನ ಅಸ್ತಿತ್ವಕ್ಕೆ ಪೆಟ್ಟು ನೀಡಿದೆ. 2020ರ ಮಾರ್ಚ್ ತಿಂಗಳ 18ನೇ ತಾರೀಖು ಕೆಲಸದ ನಡುವೆ ತನ್ನ ಸ್ನೇಹಿತನೊಂದಿಗೆ ಮಧ್ಯಾಹ್ನದ ಊಟಕ್ಕೆ ತೆರಳಿದ್ದ. ಊಟ ಮುಗಿಸಿ ಕೆಲವೇ ದೂರ ಬೈಕ್ ನಲ್ಲಿ ಬರುವಾಗಲೇ ಹಿಂದಿನಿಂದ ಅತೀ ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಈತನ ಸ್ನೇಹಿತ ರಸ್ತೆ ಬದಿಯಲ್ಲಿ ಬಿದ್ದಿದ್ದ.ರಸ್ತೆಯಲ್ಲಿ ಬಿದ್ದಿದ್ದ ಸಂದೀಪ್ ಕೋಟ್ಯಾನ್ ನ ಬಲಗೈ ಅಂಗೈ ಮೇಲೆ ಇನ್ನೊಂದು ಟ್ಯಾಂಕರ್ ಸಾಗಿತ್ತು. ಹೊಟೇಲ್ ನವರ ಮತ್ತು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಬಲಗೈ ಅಂಗೈ ಸಂಪೂರ್ಣ ಜಜ್ಜಿ ಹೋಗಿದ್ದರಿಂದ ವೈದ್ಯರು ಬಲಗೈ ಅಂಗೈ ಗಿಂತ ಸ್ವಲ್ಪ ಮೇಲೆ ಕೈ ಕತ್ತರಿಸಿದರು. 22 ವರ್ಷ ವಯಸ್ಸಿನ ಸಂದೀಪ್ ಬದುಕಿನ ಬಗ್ಗೆ ಅಪಾರವಾದ ಸಾಧನೆಯ ಕನಸ್ಸನ್ನು ಕಟ್ಟಿದ್ದ. ಆತನ ತಂದೆ ತಾಯಿ ಇಲ್ಲಿಯ ತನಕ ಸುಮಾರು 3.5ಲಕ್ಷ ರೂಪಾಯಿ ಈಗಾಗಲೇ ಅವರಿವರಿಂದ ಸಾಲ ಮಾಡಿ ಆಸ್ಪತ್ರೆಗೆ ಖರ್ಚು ಮಾಡಿರುತ್ತಾರೆ. ವೈದ್ಯರು ಬಲಗೈ ಅಂಗೈ ಸರಿ ಮಾಡಲು ಇನ್ನೂ 8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಎದ್ದಾಗ ತನ್ನ ಕೈ ನೋಡಿ ಕಣ್ಣೀರು ಸುರಿಸುವುದನ್ನು ಕಂಡಾಗ ಹೃದಯ ಮರುಗುತ್ತದೆ. ಸಂದೀಪ್ ನ ತಂದೆ ಲೂನಾದಲ್ಲಿ ಚಹಾ ಮಾರಿ ಸಂಸಾರ ಸಾಗಿಸುತ್ತಿದ್ದಾರೆ. ಮನೆಗೆ ಆಸರೆಯಾಗ ಬೇಕಿದ್ದ ಮನೆ ಮಗ ಕೈ ಕಳೆದುಕೊಂಡು ಹಾಸಿಗೆಯಲ್ಲಿದ್ದಾನೆ. ಆತ್ಮೀಯರೇ, ಕಷ್ಟದಿಂದ ತತ್ತರಿಸಿರುವ ಸಂದೀಪ್ ಕೋಟ್ಯಾನ್ ನ ವೈದ್ಯಕೀಯ ಚಿಕಿತ್ಸೆ ಗೆ ನೆರವಾಗೋಣ. ಹನಿ ಹನಿ ಸೇರಿದರೆ ಹಳ್ಳ ಎನ್ನುವ ಹಾಗೆ ನಾವೆಲ್ಲ ಮನಸ್ಪೂರ್ತಿಯಿಂದ ನೀಡುವ ಆರ್ಥಿಕ ಸಹಾಯ ಸಂದೀಪ್ ನ ಕಣ್ಣೀರು ಒರೆಸಲು ನೆರವಾಗುತ್ತದೆ. ದಯವಿಟ್ಟು ಸಹಕರಿಸಿ.. Contact number : Kotian sandeep 8971173082 ಸಂದೀಪ್ ಕೋಟ್ಯಾನ್ ನ ಬ್ಯಾಂಕ್ ಖಾತೆ ವಿವರ.. Bank Details Account no -0638101011991 IFSC-CNRB0000638 CANARA BANK MUDARANGADI BRANCH ಸಹಾಯ ಹಸ್ತ ಚಾಚಿ ಸಂದೀಪ್ ಕೋಟ್ಯಾನ್ ನ ಹಸ್ತ ಉಳಿಸೋಣ.
ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್
Posted On: 03 Jun 2020, 07:52 PM
ಉಡುಪಿ ಜೂನ್ 3 (ಕರ್ನಾಟಕ ವಾರ್ತೆ): ಜಿಲ್ಲೆಗೆ ಹೊರಜಿಲ್ಲೆಯಿಂದ ಆಗಮಿಸುವವರು ಕ್ವಾರಂಟೈನ್ ಗೆ ತೆರಳುವ ಮುನ್ನ ತಪ್ಪು ವಿಳಾಸ , ದೂರವಾಣಿ ಸಂಖ್ಯೆ ನೀಡಿದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆಪ್ ನಲ್ಲಿ ನೊಂದಣಿ ಮಾಡಿಕೊಂಡಿರಬೇಕು. ರಸ್ತೆ ಮಾರ್ಗದಲ್ಲಿ ಆಗಮಿಸುವವರು , ರಾಜ್ಯದ ಗಡಿಯಲ್ಲಿರುವ ಸ್ವೀಕಾರ (BRC - BORDER RECEIVE CENTER) ಕೇಂದ್ರದಲ್ಲಿ ಸೂಚಿಸುವ , ತಮ್ಮ ಜಿಲ್ಲೆಯಲ್ಲಿನ, ಸ್ವೀಕಾರ ಕೇಂದ್ರ (DRC - DISTRICT RECEIVE CENTER) ಗೆ ಹಾಜರಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕ್ವಾರಂಟೈನ್ ಗೆ ಒಳಪಡಬೇಕು, ಮಹಾರಾಷ್ಠçದಿಂದ ಆಗಮಿಸುವವರು 7 ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು, ಇತರೆ ರಾಜ್ಯದಿಂದ ಆಗಮಿಸುವವರು 14 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು. ರೈಲಿನಲ್ಲಿ ಬರುವವರಿಗೆ ಅವರು ಇಳಿಯುವ ರೈಲ್ವೆ ನಿಲ್ದಾಣದಲ್ಲಿನ, ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೊಂದಾಯಿಸಬೇಕು. ನೊಂದಾಯಿಸಿದ ಸ್ಥಳಕ್ಕೆ ತೆರಳದೇ ಮಾರ್ಗಮಧ್ಯೆ ತಪ್ಪಿಸಿಕೊಂಡಲ್ಲಿ ಅಂತಹವರ ವಿರುದ್ದ ಕೂಡಲೇ ಎಫ್.ಐ.ಆರ್ ದಾಖಲಿಸಿ , ಕ್ರ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸೂಚಿಸಿದ ಜಿಲ್ಲಾಧಿಕಾರಿಗಳು, ಕ್ವಾರಂಟೈನ್ ಕೇಂದ್ರಗಳಿಗೆ ತಮ್ಮದೇ ವೆಚ್ಚದಲ್ಲಿ ತೆರಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ನೊಂದಣಿಯಾದ ಎಲ್ಲರಿಗೂ ಸೀಲ್ ಹಾಕಿ, ಸಂಬoದಪಟ್ಟ ತಾಲೂಕಿನ ಗ್ರಾಮಗಳಿಗೆ ಕಳುಹಿಸಬೇಕು, ಗ್ರಾಮಗಳಿಗೆ ಆಗಮಿಸುವ ಹೊರರಾಜ್ಯದ ಜನತೆಗೆ ಗ್ರಾಮದಲ್ಲಿ ಕ್ವಾರಂಟೈನ್ ಗೆ ಒಳಪಡಿಸಲು , ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ತೆರಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ತಾಲೂಕಿನ ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತ್ ಗಳಲ್ಲಿನ ಕ್ವಾರಂಟೈನ್ ಕೇಂಧ್ರಗಳಿಗೆ ಊಟೋಪಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡುವಂತೆ ಹಾಗೂ ಪ್ರತಿನಿತ್ಯ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಹೊರರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ ಆರೋಗ್ಯ ಸೇತು, ಕ್ವಾರಂಟೈನ್ ವಾಚ್ ಮತ್ತು ಆಪ್ತಮಿತ್ರ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿರುವOತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಶೀಘ್ರದಲ್ಲಿ ಸರ್ಕಾರಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭ- ಡಾ.ಸುಧಾಕರ್
Posted On: 03 Jun 2020, 07:23 PM
ಉಡುಪಿ ಜೂನ್ 3 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯಂತ ಶೀಘ್ರದಲ್ಲಿ ಸರ್ಕಾರಿ ಕೋವಿಡ್ -19 ಪರೀಕ್ಷಾ ಲ್ಯಾಬ್ ಆರಂಭಗೊಳ್ಳಲಿದ್ದು, ಈ ಕುರಿತಂತೆ ನೂತನ ಲ್ಯಾಬ್ ನಿರ್ಮಾಣ ಕಾಮಗಾರಿಗಳು ಅಂತಮ ಹಂತದಲ್ಲಿವೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು. ಅವರು ಬುಧವಾರ, ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ನಾಗರೀಕರ ಕೋವಿಡ್ ಪರೀಕ್ಷೆಯನ್ನು ಶೀಘ್ರದಲ್ಲಿ ನಡೆಸುವ ಅಗತ್ಯವಿದ್ದು, ಈಗಾಗಲೇ ಮಣಿಪಾಲದ ಕೆಎಂಸಿ ಯಲ್ಲಿ ಇರುವ ಲ್ಯಾಬ್ ನ ಜೊತೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನೂತನ ಲ್ಯಾಬ್ ಆರಂಭದ ಕುರಿತಂತೆ , ಲ್ಯಾಬ್ ನ ಸಿವಿಲ್ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲಿ ಅಗತ್ಯ ಯಂತ್ರೋಪಕರಣಗಳನ್ನು ಒದಗಿಸುವುದಾಗಿ ತಿಳಿಸಿದ ಸಚಿವರು , ಮುಂದಿನ 10 ದಿನದಲ್ಲಿ ಈ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದರು. ಜಿಲ್ಲೆಗೆ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವವರನ್ನು ಸಾಂಸ್ಥಿಕ ಕ್ವಾರಂಟೈನ್ ಬದಲು ಅವರ ಮನೆಯನ್ನೇ ಸೀಲ್ ಡೌನ್ ಮಾಡಿ ಅಲ್ಲಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತಂತೆ ಜಿಲ್ಲೆಯ ಶಾಸಕರು ನೀಡಿದ ಸಲಹೆಯ ಕುರಿತಂತೆ , ಪರಿಶೀಲಿಸುವುದಾಗಿ ತಿಳಿಸಿದ ಸಚಿವರು, ಕೋವಿಡ್ 19 ನಿಯಂತ್ರಣಕ್ಕೆ ಗ್ರಾಮಮಟ್ಟದಿಂದ ಜಿಲ್ಲಾ ಕೇಂದ್ರದಲ್ಲಿನ ವಾರ್ಡ್ ಗಳ ವರೆಗೂ ಕಾರ್ಯಪಡೆ ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಕೋವಿಡ್-19 ರ ಈ ಅವಧಿಯಲ್ಲಿ ಎಲ್ಲಾ ಖಾಸಗಿ ನರ್ಸಿಂಗ್ ಹೋಂ ಗಳು ಮತ್ತು ಕ್ಲಿನಿಕ್ ಗಳ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುತ್ತಿರುವ ಬಗ್ಗ ಪರಿಶೀಲಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಡಾ. ಕೆ.ಸುಧಾಕರ್, ಕೋವಿಡ್ ಲ್ಯಾಬ್ ಗೆ ಅಗ್ಯವಿರುವ ಸಿಬ್ಬಂದಿ ಮತ್ತು ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ಪಡೆಯುವಂತೆ ಸೂಚಿಸಿದರು. ಜಿಲ್ಲೆಗೆ ಅಗತ್ಯವಿರುವ 2000 ಪಿಪಿಇ ಕಿಟ್ ಗಳನ್ನು ಕೂಡಲೇ ಸರಬರಾಜು ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಇದುವರೆಗೆ 13542 ಜನರನ್ನು ಕ್ವಾರಂಟೈನ್ ಮಾಡಿದ್ದು, ಜಿಲ್ಲೆಗೆ ಮೇ ತಿಂಗಳಲ್ಲಿ 8624 ಮಂದಿ ಆಗಮಿಸಿದ್ದು, ಅದರಲ್ಲಿ 152 ಮಂದಿ ವಿದೇಶದಿಂದ ಮತ್ತು 8472 ಮಂದಿ ಇತರೆ ರಾಜ್ಯಗಳಿಂದ ಆಗಮಿಸಿದ್ದು, ಇದರಲ್ಲಿ 7697 ಮಂದಿ ಮಹಾರಾಷ್ಟ್ರದಿಂದ ಬಂದಿದ್ದಾರೆ, ಜಿಲ್ಲೆಯಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 539 ಮಂದಿಗೆ ಪರೀಕ್ಷೆ ಮಾಡಲಾಗಿದೆ, ಇದುವರೆಗೆ 12504 ಮಾದರಿ ಸಂಗ್ರಹಿಸಲಾಗಿದೆ , ಒಟ್ಟು 410 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, 64 ಬಿಡುಗಡೆಯಾಗಿದ್ದು, 345 ಸಕ್ರಿಯ ಪ್ರಕರಣಗಳಿವೆ, ಒಂದು ಸಾವು ಸಂಭವಿಸಿದೆ. ಪ್ರಕರಣ ಕಂಡು ಬಂದಿರುವಲ್ಲಿ ಶೇ.98% ಅಂದರೆ 400 ಮಂದಿಗೆ ರೋಗ ಲಕ್ಷಣಗಳಿಲ್ಲ , ಒಟ್ಟು 63 ಕಂಟೈನ್ ಮೆಂಟ್ ಝೋನ್ ರಚಿಸಲಾಗಿದ್ದು, ಪ್ರಸ್ತುತ 61 ಕಂಟೈನ್ ಮೆಂಟ್ ಝೋನ್ ಗಳಿವೆ ಎಂದು ಕೋವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ಮಾಹಿತಿ ನೀಡಿದರು. ಸಭೆಯಲ್ಲಿ ಮುಜರಾಯಿ , ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್, ರಘುಪತಿ ಭಟ್, ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಹಾಗೂ ಆರೋಗ್ಯ ಇಲಾಖೆಯ ಮತ್ತು ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ದೀನರಿಗೆ, ದಿಕ್ಕು ದೆಸೆಯಿಲ್ಲದ ಹೋಟೆಲ್ ಕಾರ್ಮಿಕರಿಗೆ ಆಶ್ರಯದಾತರಾದವರ ಕಥೆಯಿದು
Posted On: 03 Jun 2020, 02:16 PM
ಮಹಾರಾಷ್ಟ್ರದ ಮಣ್ಣಿನಲ್ಲಿ ಹಸಿದವರಿಗೆ ಅನ್ನ ನೀಡಿದ "ಅನ್ನದಾತ" , ಮನುಷ್ಯತ್ವದ ರಾಯಬಾರಿ ಎನಿಸಿಕೊಂಡ ಮುಂಬೈ ಉದ್ಯಮಿಯೊಬ್ಬರ ಪರೋಪಕಾರದ ಪರಿಚಯವಿದು.. ಹೌದು ಅಲ್ಲಿ ಮೌನ ಹೆಪ್ಪುಗಟ್ಟಿದೆ. ಕಣ್ಣೀರು ಸಹ ಅನಾಥವಾಗಿದೆ.ಕಳೆಗುಂದಿದ ಮುಖ, ನಿಸ್ತೇಜಗೊಂಡ ಕಣ್ಣುಗಳು,ಏಳು ಸುತ್ತಿನ ಕೋಟೆಯಲ್ಲಿ ಬಂದಿ ನಾನಾದೆ ಎಂಬ ಬಾವ, ದುಡಿದು ತಿಂದ ಕೈಗಳಿಗೆ ಬೇಡಿ ತಿನ್ನಲು ಸ್ವಾಭಿಮಾನ ಅಡ್ಡ ಬರುತ್ತೆ.. ಈ ವರ್ಷ ಮುರುಕಲು ಮನೆಯನ್ನು ದುರಸ್ತಿ ಮಾಡಿ ಹಂಚನ್ನು ಹಾಕೋಣ. ಬರುವ ಸಲ ತಂಗಿಗೆ ಗಂಡು ಹುಡುಕೋಣ. ಪೋರೆಯಿಂದ ಮಂಜಾದ ನಿನ್ನ ಕಣ್ಣಿನ ಸರ್ಜರಿ ಮಾಡಿಸಬೇಕು ಅಮ್ಮ.. ನೀವು ಇನ್ಮುಂದೆ ಕೂಲಿಗೆ ಹೋಗಿದ್ದು ಸಾಕು ಮನೆಯಲ್ಲೇ ಆರಾಮಾಗಿರಿ ಅಪ್ಪಾ. ಅಂದ ಹುಡುಗನೊಬ್ಬ ತನ್ನೆಲ್ಲಾ ಕನಸುಗಳನ್ನು ನನಸು ಮಾಡಿಕೊಳ್ಳಲು ಎಂದೂ ಮಲಗದ ಈ ಮಾಯನಗರಿಯಲ್ಲಿ ಹಗಲಿರುಳೆನ್ನದೆ ರಕ್ತ ಬೆವರನ್ನು ಒಂದು ಮಾಡಿಕೊಂಡು ದುಡಿಯತೊಡಗುತ್ತಾನೆ.ಆದರೆ ಕೋರೋನ ಎನ್ನುವ ಮಹಾಮಾರಿ ಆತನ ಕನಸುಗಳನ್ನೆಲ್ಲ ಹಿಂಡಿ ಹಿಪ್ಪೆ ಮಾಡಿ ಹಾಕಿದೆ. ತನ್ನವರ ಬದುಕನ್ನು ಬಿಡಿ,ತನ್ನೊಬ್ಬನ ಜೀವನವನ್ನು ರಕ್ಷಿಸಿಕೊಳ್ಳಲು ಹೆಣಗಾಡುವ ದುಸ್ಥಿತಿ ಅವನಿಗೆ ಎದುರಾಗಿದೆ.ಅನೇಕ ತುಳು ಕನ್ನಡಿಗರ ಬದುಕು ಇಲ್ಲಿ ಡೋಲಾಯಮಾನವಾಗಿದೆ..ಅವರ ಕೂಗು ಅರಣ್ಯ ರೋದನವಾಗಿದೆ. ಇಂತಹ ಸಮಯದಲ್ಲಿ ಇವರ ನೆರವಿಗೆ ಧಾವಿಸಿ ಬಂದು ಸಹಾಯಕ್ಕೆ ನಿಂತವರೆ "ಮಾತೃ ಹೃದಯಿ" ಬಂಟರ ಸಂಘದ ವಸಾಯಿ - ಡಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರಾದ ಶ್ರೀ ಶಶಿಧರ್ ಕೆ ಶೆಟ್ಟಿಯವರು.. ಸಾಲಿನಲ್ಲಿ ಬರೆದಷ್ಟು ಸುಲಭವಲ್ಲಾ ಶಶಿಧರ್ ಶೆಟ್ಟಿಯವರ ಸಾಗರದಷ್ಟು ವಿಸ್ತಾರವಾದ ವ್ಯಕ್ತಿತ್ವವನ್ನು ವರ್ಣಿಸುವುದು.. ಶ್ರೇಷ್ಠ ಜನನಾಯಕ,ಸಂಘಟಕ, ಯಶಸ್ವೀ ಹೋಟೆಲ್ ಉದ್ಯಮಿ,ಕಲಾರಾಧಕ, ಸಮಾಜಮುಖಿ ಕಳಕಳಿಯ ಧೀಮಂತ ವ್ಯಕ್ತಿ ಎಲ್ಲಕಿಂತ ಮಿಗಿಲಾಗಿ ಇವರೊಬ್ಬ ಹೃದಯವಂತ ಮನುಷ್ಯ.. ಉಡುಪಿ ಜಿಲ್ಲೆಯ ಇನ್ನಂಜೆಯ ಮಂಡೇಡಿ ಇವರ ಊರು.ತಂದೆ ಮಂಡೆಡಿ ರಾಜನ್ ಮನೆ ಕಾಳು ಶೆಟ್ಟಿ, ತಾಯಿ ಮಂಡೆಡಿ ಕುಂಜಾರಬೆಟ್ಟು ಶಾರದಾ ಶೆಟ್ಟಿ. ದೇಶದ ಪ್ರತಿಷ್ಠಿತ ಕಂಪನಿಗಳೊಂದಾದ ಗೋದ್ರೆಜ್ ಕಂಪನಿಯ ಮುಂಬೈ ವಿಭಾಗದ ಶಾಖೆಯಲ್ಲಿ ಕ್ಯಾಂಟೀನ್ ನ ಮುಖ್ಯ ಬಾಣಸಿಗರಾಗಿ ಕಾಳು ಶೆಟ್ಟಿಯವರು ಕಾರ್ಯನಿರ್ವಹಿಸುತ್ತಿದ್ದರು. ಇವರ ಸಂಸಾರ ಮುಂಬೈಯ ಹೃದಯ ಬಾಗವಾದ ಲೋವರ್ ಪರೆಲ್ ನಲ್ಲಿ ವಾಸಿಸುತಿತ್ತು. ಎಲ್ಲರ ನೋವಿಗೂ ಸ್ಪಂದಿಸುವ ಕರುಣಾಮಯಿ ಈ ಕಾಳು ಶೆಟ್ಟಿಯವರ ಮನಸ್ಸು. ದಾರಿಹೋಕರಾದ ಬಿಕ್ಷುಕರು ಬಿಕ್ಷೆ ಬೇಡಲು ಬಂದರೆ ಅವರನ್ನು ಮನೆಯೊಳಗೆ ಕುಳ್ಳಿರಿಸಿ ಊಟ ಹಾಕಿ ಕಳಿಸುತ್ತಿದ್ದ ಕರುಣಾಮಯಿ. ಹೆತ್ತವರ ಇಂತಹ ಪರೋಪಕಾರದ ಗುಣಗಳು ಮಕ್ಕಳ ಮನಸ್ಸಿನ ಮೇಲೂ ಪ್ರಭಾವ ಬೀರತೊಡಗಿದವು.ವರ್ಲಿಯ ಮುನ್ಸಿಪಲ್ ಕನ್ನಡ ಮಾದ್ಯಮ ಶಾಲೆಯಲ್ಲಿ ಶಶಿಧರ್ ಶೆಟ್ಟಿ ಯವರು ವಿದ್ಯಾರ್ಥಿಯಾಗಿ ಸೇರಿಕೊಂಡರು.ಎಲ್ಲವೂ ಸುಖಕರವಾಗಿ ಸಾಗುತ್ತಿರುವಾಗ ಕಾಳು ಶೆಟ್ಟಿ ಯವರ ಸಾವು ಬರಸಿಡಿಲಂತೆ ಬಂದಪ್ಪಳಿಸಿತು. ಆಗ ಶಶಿಧರ ಶೆಟ್ಟಿಯವರ ಪ್ರಾಯ ಹನ್ನೊಂದು.ಐದನೇ ತರಗತಿಯ ವಿದ್ಯಾರ್ಥಿ.ಮನೆಯ ಆದಾರವೆ ಕುಸಿದು ಬಿದ್ದಾಗ ಕಂಗಾಲಾದ ಇವರೆಲ್ಲಾ ತಾಯಿಯೊಂದಿಗೆ ಪುನಃ ಹುಟ್ಟೂರಾದ ಇನ್ನಂಜೆಯ ಕಂಜಾರಬೆಟ್ಟುಗೆ ಬರಬೇಕಾಯಿತು.ಊರಲ್ಲಿ ಇವರದ್ದು ಅವಿಭಕ್ತ ಕುಟುಂಬ.ವ್ಯವಸಾಯ ಭೂಮಿಯೂ ಅಷ್ಟೇ ಪ್ರಮಾಣದಲ್ಲಿತ್ತು.ಇಲ್ಲಿ ಶಶಿಧರ್ ಶೆಟ್ಟರು ತನ್ನ ಶಿಕ್ಷಣವನ್ನು ಮುಂದುವರೆಸಿದರು.ಆದರೆ ಇವರ ಮನಸ್ಸು ಮುಂಬೈಗೆ ಮರಳಿ ಬರಲು ಕನವರಿಸುತಿತ್ತು.ತನ್ನ ಹದಿನೇಳನೇ ವರ್ಷದಲ್ಲಿ ಪುನಃ ಮುಂಬೈಯತ್ತ ಪ್ರಯಾಣ ಬೆಳೆಸಿದರು.ಬಂದವರೇ ಸಂಬಂಧಿಯೊಬ್ಬರ ಹೋಟೆಲಿನಲ್ಲಿ ಕೆಲಸ ಮಾಡತೊಡಗಿದರು. ಈ ಮಹಾರಾಷ್ಟ್ರದ ಮಣ್ಣಿನಲ್ಲಿ ಸಾಧನೆಯ ದಿವಿಗೆಯನ್ನು ಹಚ್ಚುವ, ತನ್ಮೂಲಕ ಬದುಕಿನಲಿ ಉನ್ನತಿಯನ್ನು ಹೊಂದುವ, ಮಹತ್ವಾಕಾಂಕ್ಷೆ ಇವರಲ್ಲಿ ತುಡಿತವಾಗಿ ಮಾರ್ಪಟ್ಟಿತ್ತು. ಕಾಲಕ್ರಮೇಣ ಉದ್ಯೋಗಿ ಆಗಿದ್ದವರು ಉದ್ಯಮಿಯಾಗಿ ಬೆಳೆದರು. ಈ ನಡುವಿನ ಇವರ ಹೊರಟ ನಿಜಕ್ಕೂ ಅದ್ಭುತ ಹಾಗೂ ಅವಿಸ್ಮರಣೀಯ.. ಶಶಿಧರ್ ಶೆಟ್ಟಿಯವರ ಧರ್ಮಪತ್ನಿ ಶಶಿಕಲಾ ಶೆಟ್ಟಿ. ಶ್ರೀಯುತರ ಬದುಕಿನ ಪಥವನ್ನೆ ಬದಲಿಸಿದಾಕೆ. ಮೂಲತಃ ಕಾರ್ಕಳದ ಹೆಬ್ರಿಯವರು. "ಕನಸು ಗುರಿಯಾಗಬೇಕು,ಗುರಿಯೇ ಕನಸಾಗಬಾರದು" ಅನ್ನುವುದು ಶಶಿಕಲಾರ ಮನದ ಇಂಗಿತ.. ಇವರ ದಾಂಪತ್ಯದ ಸಾಕ್ಷಿ ಎಂಬಂತೆ ಮನೆಯ ಲಕ್ಷ್ಮಿ ಯಾಗಿ ಮಗಳು ಸೃಷ್ಟಿ ಜನಿಸಿದಳು.. ನಾಲಾಸೋಪರ ಪರಿಸರದ ಯಶಸ್ವಿ ಹೋಟೆಲ್ ಉದ್ಯಮಿ ಅನ್ನಿಸಿಕೊಂಡರು.ಅನೇಕ ಹೆಸರಾಂತ ಹೋಟೆಲುಗಳ ಮಾಲಕ ಹಾಗೂ ಪಾಲುದಾರರೇನಿಕೊಂಡರು. ಅದರಲ್ಲೂ ನಾಲಸೋಪರ ದ "ಗ್ಯಾಲಕ್ಸಿ ಫ್ಯಾಮಿಲಿ ರೆಸ್ಟೋರೆಂಟ್" ಪ್ರಸಿದ್ಧವಾದುದು."ನಿನ್ನ ಸಾಧನೆಯ ದೀಪವನ್ನು ನೀನೇ ಹಚ್ಚಬೇಕು.ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ.ಆದರೆ ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ.ಆದ್ದರಿಂದ ನಾವು ಕಷ್ಟಗಳನ್ನು ಎದುರಿಸಿ ಮುಂದ ಡಿಯಿಟ್ಟಾಗ ಮಾತ್ರ ಜೀವನದಲ್ಲಿ ಸುಟ್ಟ ಇಟ್ಟಿಗೆಯಂತೆ ಗಟ್ಟಿ ಆಗುತ್ತೇವೆ" ಅನ್ನುವುದು ಶಶಿಧರ್ ಶೆಟ್ಟರ ಮಾತು.. ಲಾಕ್ ಡೌನ್ ನಿಂದಾಗಿ ಊರಿನಲ್ಲಿದ್ದು, ಮುಂಬೈಗೆ ಬರಲಾಗದಿದ್ದರೂ ಅಲ್ಲಿಂದಲೇ ಹತ್ತಾರು ಲಕ್ಷದ ದಿನಸಿ ಸಾಮಾನುಗಳನ್ನು ,ಬಂಟರ ಸಂಘ ಮುಂಬೈ, ವಸಾಯಿ- ದಾಹಣು ಪ್ರಾದೇಶಿಕ ಸಮಿತಿ,ಶ್ರೀದೇವಿ ಯಕ್ಷಕಲಾ ನಿಲಯ,ತುಳುಕೂಟ ಫೌಂಡೇಶನ್ ಇವರ ಮೂಲಕ ಲಾಕ್ ಡೌನ್ ನಿಂದ ತೊಂದರೆಗಿಡಾದ ಜನರಿಗೆ ಅದರಲ್ಲೂ ಮುಖ್ಯವಾಗಿ ಹೋಟೆಲ್ ಕಾರ್ಮಿಕರಿಗೆ, ಹಾಗೂ ತುಳು ಕನ್ನಡಿಗರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಕಾರ್ಯ ಆರಂಭಿಸಿದರು.ಈಗಾಗಲೇ 2500ಕ್ಕೂ ಮಿಕ್ಕಿ ಕುಟುಂಬಗಳಿಗೆ ಸುಮಾರು 15 ಲಕ್ಷ ರೂಪಾಯಿ ಮೊತ್ತದ ಆಹಾರ ಪೊಟ್ಟಣ ಕೊಡಲಾಗಿದ್ದು,ಕೆಲವರಿಗೆ ನಗದನ್ನು ನೀಡಿ ಸಹಕರಿಸಿದ್ದಾರೆ...ಇವರ ಈ ಸೇವಾ ಕಾರ್ಯದಲ್ಲಿ ಅನೇಕ ವ್ಯಕ್ತಿಗಳು ಕೈ ಜೋಡಿಸಿದ್ದಾರೆ. ಶಶಿಧರ್ ಶೆಟ್ಟಿಯವರ ಮನಸ್ಸು ಯಾವಾಗ್ಲೂ ಸಮಾಜಮುಖಿಯಾಗಿ ಯೋಚಿಸುತ್ತಿರುತ್ತದೆ.ಎಷ್ಟೇ ಚಿಕ್ಕವರಾಗಿರಲಿ ತುಂಬಾ ಸರಳ ಸಜ್ಜನಿಕೆಯಿಂದ ಮಾತಾಡುವ ಇವರು ನಯವಿನಯಕ್ಕೆ ಪರ್ಯಾಯ ನಾಮ.ಇದಕ್ಕೆಲ್ಲ ಕಾರಣ ಅವರ ಬಾಲ್ಯದ ದಿನಗಳು. ಆಗೆಲ್ಲಾ ಹಲವು ರೀತಿಯ ಅಗ್ನಿ ದಿವ್ಯಗಳನ್ನು ಎದುರಿಸಿದ್ದಿರಿ.ಹಲವು ಬಗೆಯ ಸಂಸ್ಕಾರಕ್ಕೆ ಒಳಗಾದಿರಿ.ಅಪ್ಪಟ ಚಿನ್ನಾವಾದಿರಿ.ಕಲ್ಲು ಸಕ್ಕರೆ ಯಂತ ನಿಮ್ಮ ತುಳು ಬಾಷೆ .ತಿಳಿನೀರ ಮನಸುಳ್ಳ ಸಹೃದಯಿ.ಅದಕ್ಕೆ ನೀವು ಮನೆಯವರ ಊರವರ ಪ್ರೀತಿ ಪಾತ್ರರಾದೀರಿ.ಲಕ್ಷಾಂತರ ತುಳುವರಿಗೆ ಮತ್ತು ಕನ್ನಡಿಗರಿಗೆ ಪರಿಚಿತ ಮುಖವಾದಿರಿ.ಕೆಲಸಗಾರರಿಗೆ ಪ್ರೀತಿಯ ಅಣ್ಣನಾದಿರಿ... "ನೀರು ತಾನು ಹರಿಯುವಾಗ ಎದುರಿಗೆ ಬರುವ ಕಸ ಕಡ್ಡಿ ಕಲ್ಲು ಮುಳ್ಳುಗಳನ್ನು ಹೊತ್ತುಕೊಂಡು ಹರಿದು ತನ್ನ ಗುರಿ ತಲುಪುತ್ತದೆ.ನೀವು ಅಷ್ಟೇ ಜೀವನದಲ್ಲಿ ಎದುರಾಗುವ ಅವಮಾನ,ತಿರಸ್ಕಾರ, ಕೊಂಕು ನುಡಿಗಳನ್ನು ಎದುರಿಸುತ್ತಾ ಸಾಧನೆಯ ಶಿಖರ ಮುಟ್ಟಿದ್ದಿರಿ." ಹಸಿವೆಯಿಂದ ಬಳಲಿ ಕಂಗಾಲಾಗಿದ್ದ ಸಾವಿರಾರು ಜನರ ಬಳಿ ಧಾವಿಸಿ ಬಂದ ನೀವು ಅವರೆಲ್ಲರ ಪಾಲಿಗೆ ಅನ್ನದಾತರಾದಿರಿ."ಎನಿತು ಜನರಿಗೆ,ಎನಿತು ಜನ್ಮಗಳಿಗೆ ತಾನೂ ಎನಿತು ಋಣಿಯೋ? ಹಾಗೆ ನೋಡಿದರೆ ಈ ಜೀವನವೆಂಬುದು ಒಂದು ಋಣದ ಗಣಿಯಂತೆ..ಹಾಗಾಗಿ ಸಮಾಜದ ಋಣಬಾರವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ದಲ್ಲಿ ಅಶಕ್ತರು ಹಾಗೂ ಹಸಿದವರ ಕಣ್ಣೀರನ್ನು ಒರೆಸುವ ನಿಮ್ಮ ಬಾಗವತ್ಕರ್ಯ ನಿತ್ಯ ನಿರಂತರ ನಡೆಯುತ್ತಿರಲಿ. ಆ ಶಕ್ತಿಯನ್ನು ಶ್ರೀ ದೇವರು ನಿಮಗೆ ಇನ್ನಷ್ಟು ಅನುಗ್ರಹಿಸಿ ಕಾಪಾಡಲಿ.. ಬರಹ ✍️ ಉದಯ್ ಪೂಜಾರಿ
ಇನ್ಮುಂದೆ ಉಡುಪಿಯಲ್ಲಿ ಮಂಗಳವಾರದ ಬದಲಾಗಿ ಆದಿತ್ಯವಾರ ಸೆಲೂನ್ ಬಂದ್
Posted On: 02 Jun 2020, 10:07 PM
ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಪದಾಧಿಕಾರಿಗಳು ಹಾಗೂ ಏಳು ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಸೆಲೂನ್ಗಳಿಗೆ ಆದಿತ್ಯವಾರ ಹೆಚ್ಚು ಗ್ರಾಹಕರು ಬರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ವೃತ್ತಿ ನಿರತರಿಗೆ ನಿಯಮಾವಳಿಗಳನ್ನು ಪಾಲಿಸಲು ಕಷ್ಟ ಸಾಧ್ಯವಾಗಿರುವುದರಿಂದ ಅಲ್ಲದೆ ಮುಂದಿನ ದಿನಗಳಲ್ಲಿ ಕೂಡಾ ಕಡ್ಡಾಯವಾಗಿ ಉಡುಪಿ ಜಿಲ್ಲೆಯಾದ್ಯಂತ ಸೆಲೂನ್ ಗಳನ್ನು ಆದಿತ್ಯವಾರ ಬಂದ್ ಮಾಡಿ ಮಂಗಳವಾರ ತೆರೆಯಲು ಸರ್ವಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಗಿದೆ, ಎಂದು ಜಿಲ್ಲಾ ಸವಿತಾ ಸಮಾಜದ ಸಭೆಯಲ್ಲಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಭಾಸ್ಕರ್ ಭಂಡಾರಿ ಗುಡ್ಡೆಯಂಗಡಿ ಹಾಗೂ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಕೋಶಧಿಕಾರಿ ಶೇಖರ್ ಸಾಲ್ಯಾನ್ ರಾಜ್ಯ ಪ್ರತಿನಿಧಿ ವಿಶ್ವನಾಥ್ ಭಂಡಾರಿ ನಿಂಜೂರು ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಸವಿತಾ ಸಹಕಾರಿಯ ಅಧ್ಯಕ್ಷ ನವೀನ್ಚಂದ್ರ ಭಂಡಾರಿ ತಿಳಿಸಿದ್ದಾರೆ.
