Updated News From Kaup

ಬಿಲ್ಲವಾಸ್ ದುಬೈ & ನಾರ್ದರ್ನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾನ್ವಿತರಿಗೆ ಸನ್ಮಾನ, ವೈದ್ಯಕೀಯ ನೆರವು ಹಸ್ತಾಂತರ

Thumbnail
Posted On: 11 Aug 2026, 08:44 AM

ಮಂಗಳೂರು : ಬಿಲ್ಲವಾಸ್ ದುಬೈ & ನಾರ್ದರ್ನ್ ಎಮಿರೇಟ್ಸ್ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ಶ್ರೀಗುರು ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾನ್ವಿತರಿಗೆ ಸನ್ಮಾನ ಮತ್ತು ವೈದ್ಯಕೀಯ ನೆರವು ಹಸ್ತಾಂತರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್‌.ಸೋಮಸುಂದರಂ ಉದ್ಘಾಟಿಸಿ ಮಾತನಾಡಿ,ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ಒದಗಿಸುವುದು ಪುಣ್ಯದ ಕೆಲಸ. ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಶ್ರೀಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಮಾಜಿ ಡೀನ್ ಡಾ.ಉಮ್ಮಪ್ಪ ಪೂಜಾರಿ ಪಿ.ಮಾತನಾಡಿ, ಬಿಲ್ಲವಾಸ್ ದುಬೈ ಆ್ಯಂಡ್ ನಾರ್ದರ್ನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್ ಕಷ್ಟದಲ್ಲಿರುವವರಿಗೆ ನೆರವಾಗುವ ವಿಚಾರದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿವೆ. ವಿದ್ಯಾರ್ಥಿಗಳು ಕೇವಲ ಅಂಕ ಪಡೆಯುವತ್ತ ಗಮನಹರಿಸದೆ, ತಮ್ಮ ಪ್ರತಿಭೆ, ಕೌಶಲ್ಯ ಬೆಳೆಸುವತ್ತ ಕೂಡ ಗಮನ ಹರಿಸಬೇಕು. ಗುರು ಹಿರಿಯರನ್ನು ಗೌರವಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಲ್ಲವಾಸ್ ಫ್ಯಾಮಿಲಿ ದುಬೈ ಅಧ್ಯಕ್ಷ ದೀಪಕ್ ಎಸ್.ಪಿ. ಮಾತನಾಡಿ, ಕೊಲ್ಲಿ ರಾಷ್ಟ್ರಗಳಲ್ಲಿ ಈಗ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದನ್ನು ನಿಲ್ಲಿಸ ಬಾರದೆಂದು ನಿರ್ಧರಿಸಿ ಈ ವರ್ಷ ಕೂಡಾ ವಿದ್ಯಾರ್ಥಿ ವೇತನ ವಿತರಿಸಿದ್ದೇವೆ. ಈ ಕಾರ್ಯಕ್ರಮ ನಿರಂತರವಾಗಿ ಮುಂದುವರಿಸುವ ಉದ್ದೇಶ ನಮ್ಮದು. ಕುದ್ರೋಳಿ ಕ್ಷೇತ್ರದಲ್ಲಿ ಇದುವರೆಗೆ ವಿದ್ಯಾರ್ಥಿವೇತನ ಸಹಿತ ವಿವಿಧ ಉದ್ದೇಶಗಳಿಗಾಗಿ ಒಟ್ಟು 2 ಕೋಟಿ 30 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ವಿತರಿಸಿದ್ದೇವೆ ಎಂದರು.

ಕುದ್ರೋಳಿ ಕ್ಷೇತ್ರದ ಟ್ರಸ್ಟಿ ಕೃತಿನ್ ಡಿ. ಅಮೀನ್, ಶ್ರೀ ಗುರು ಚಾರಿಟೇಬಲ್‌ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಎಚ್‌. ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 

ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ,ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ 11 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
 
ಸಾಧಕಿ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ಬಹುಮುಖ ಪ್ರತಿಭೆ ಶ್ರೀಜಾ ಸಿ.ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಅಶಕ್ತರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.
    

ಕಾಪು‌ : ಯುವವಾಹಿನಿ ಟ್ರೋಫಿ 2026 ಚೆಸ್ ಪಂದ್ಯಾವಳಿ ಉದ್ಘಾಟನೆ

Thumbnail
Posted On: 10 Aug 2026, 12:02 PM

ಕಾಪು : ಯುವಕರಲ್ಲಿ ಬೌದ್ಧಿಕ ಸಾಮರ್ಥ್ಯ, ಏಕಾಗ್ರತೆ ಹಾಗೂ ಕ್ರೀಡಾ ಮನೋಭಾವ ಬೆಳೆಸುವಲ್ಲಿ ಚೆಸ್ ಸಹಕಾರಿಯಾಗಲಿದೆ ಎಂದು ಮಂಗಳೂರು ಸಿಎಆರ್ ಡೆಪ್ಯೂಟಿ ಕಮಿಶನರ್ ಆಫ್ ಪೊಲೀಸರಾದ ಉಮೇಶ್ ಪಿ. ಹೇಳಿದರು. ‌

ಅವರು ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ
ಯುವವಾಹಿನಿ ಕಾಪು ಘಟಕದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್‌ ಸಹಯೋಗದಲ್ಲಿ ಆಯೋಜಿಸಿರುವ ‘ಯುವವಾಹಿನಿ ಟ್ರೋಫಿ–2026’ ಓಪನ್ ಹಾಗೂ ವಯೋಮಿತಿ ಚೆಸ್ ಪಂದ್ಯಾವಳಿಯಲ್ಲಿ ಚೆಸ್ ಕಾಯಿ ಮುನ್ನಡೆಸಿ, ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ ಮಾತನಾಡಿ, ಗ್ರಾಮೀಣ ಪ್ರದೇಶದ ಚೆಸ್ ಪ್ರತಿಭೆಗಳನ್ನು ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಲು ಈ ಪಂದ್ಯಾಟ‌ ಸಹಕಾರಿ ಎಂದರು.

ಯುವವಾಹಿನಿ ಕೇಂದ್ರ‌ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ‌ ಸ್ಪರ್ಧಾತ್ಮಕ ಯುಗದಲ್ಲಿ ಮೊಬೈಲ್, ಟಿವಿ ಮತ್ತು‌ ಸಾಮಾಜಿಕ‌ ಜಾಲತಾಣಗಳಿಗೆ ಚೆಸ್ ಕ್ರೀಡೆ ಪರ್ಯಾಯವಾಗಲಿದೆ. ಈ ಮೂಲಕ ಕೇಂದ್ರ ಸಮಿತಿ‌ ಅಧೀನದ 35 ಘಟಕಗಳಲ್ಲಿ ಕಾಪು ಯುವವಾಹಿನಿ ಘಟಕವು ಮಾದರಿ ಸಂಸ್ಥೆಯಾಗಿ ಮೂಡಿ‌ಬಂದಿದೆ ಎಂದರು.

ಕಾಪು ಬಿಲ್ಲವ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ‌ ಕಾಪು, ಕಾಪು ಸಿಎ ಬ್ಯಾಂಕ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಉದ್ಯಮಿ ಪ್ರಭಾಕರ ಪೂಜಾರಿ ಕೈಪುಂಜಾಲು, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಉಮಾನಾಥ್ ಕಾಪು, ಯುವವಾಹಿನಿ ಕಾಪು ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಉಪಸ್ಥಿತರಿದ್ದರು.

ಯುವವಾಹಿನಿ ಕಾಪು ಘಟಕದ ನಿರ್ದೇಶಕ ರಾಕೇಶ್ ಕುಂಜೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾ‌‌ನ ಕಾರ್ಯದರ್ಶಿ ಸುನೀಲ್ ಪೂಜಾರಿ ವಂದಿಸಿದರು. ಉಪನ್ಯಾಸಕ ರಾಕೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಜಿಲ್ಲೆಯಿಂದ ಮತ್ತು ವಿವಿಧ ರಾಜ್ಯಗಳಿಂದ
ಸುಮಾರು 250 ಕ್ಕೂ ಅಧಿಕ‌ ಸ್ಪರ್ಧಾಳುಗಳು  ಭಾಗವಹಿಸಿದ್ದರು. 

ಮುದರಂಗಡಿ ಲಯನ್ಸ್–ಲಿಯೋ ಕ್ಲಬ್ ಪದಗ್ರಹಣ ಸಮಾರಂಭ

Thumbnail
Posted On: 05 Aug 2026, 07:44 PM

ಮುದರಂಗಡಿ : ಲಯನ್ಸ್ ಮತ್ತು ಲಿಯೋ ಕ್ಲಬ್ ಮುದರಂಗಡಿಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಉಡುಪಿ ಜಿಲ್ಲೆ 317 C ಯ ಪ್ರಥಮ ಉಪ ಜಿಲ್ಲಾ ಗವರ್ನರ್ PMJF ಲಯನ್ ಹರಿಪ್ರಸಾದ್ ರೈ ಪದಗ್ರಹಣ ನೆರವೇರಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಲ. ಅಂತೋನಿ      ವಿನ್ಸೆಂಟ್ ಡಿಸೋಜ ದುರ್ಗದಕಟ್ಟೆ, ಕಾರ್ಯದರ್ಶಿಯಾಗಿ ಲ.ಲಾರೆನ್ಸ್ ಡಿಸೋಜ, ಖಜಾಂಚಿಯಾಗಿ ಲ.ಫೆಲಿಕ್ಸ್ ಡಿಸೋಜ ಹಾಗೂ ಲಿಯೋ ಕ್ಲಬ್ ಅಧ್ಯಕ್ಷರಾಗಿ ಲಿಯೋ. ರಿಯಾನ್ ಶಾನ್ ಕೋರ್ಡಾ, ಕಾರ್ಯದರ್ಶಿಯಾಗಿ ಲಿ.ಅನ್ವೇಶ್ ಡಿಸೋಜ, ಖಜಾಂಚಿಯಾಗಿ ಲಿ.ಅಡ್ರೀನಾ ಮೆಂಡೋನ್ಸಾ ಅಧಿಕಾರ ಸ್ವೀಕರಿಸಿದರು.

ನಿಕಟಪೂರ್ವ ಪ್ರಾಂತ್ಯಾದಕ್ಷಾರದ
MJF ಲಯನ್ ಗುರು ಪ್ರಸಾದ್ ಶೆಟ್ಟಿ ಯವರು ನೂತನ ಸದಸ್ಯರ ಸೇರ್ಪಡೆ ನಡೆಸಿದರು. 

ನೂತನ ಸದಸ್ಯರಾಗಿ ಲ.ಆನಂದ್ ಡಿಸೋಜ, ಲ.ಉಮೇಶ್ ಮೂಲ್ಯ, ಮತ್ತು ಲ.ವೀರಾ ಕಾರ್ಡೊಜ ರವರು  ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ  ಸ್ಥಳಿಯ ಸರಕಾರಿ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ಹಾಗೂ ದ್ವಿತೀಯಾ ಪಿ ಯು ಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಬಿ.ಕಾಮ್  ನಲ್ಲಿ  ಅಧಿಕ ಅಂಕ ಪಡೆದ ವಿದ್ಯಾರ್ಥಿನಿ ಓರ್ವಳನ್ನು ಒಳಗೊಂಡು ಒಟ್ಟು ಹತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅರ್ಥಿಕವಾಗಿ  ಹಿಂದುಳಿದ ಇಬ್ಬರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಯಿತು.

ಸಮಾರಂಭದಲ್ಲಿ ಪ್ರಾಂತ್ಯಾಧ್ಯಕ್ಷರಾದ ಲ. ಥಾಮಸ್ ಲೂಕೋಸ್, ವಲಯಾದಕ್ಷರಾದ  ಲ. ಡಾ. ಮನೋಜ್ ಕುಮಾರ್ ಶೆಟ್ಟಿ, ಪ್ರಾಂತೀಯ ಕಾರ್ಯದರ್ಶಿ ದಿನೇಶ್ ಕುಮಾರ್ ಹಾಗೂ ಮುದರಂಗಡಿ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಧರ್ಮಗುರುಗಳು ವಂ. ಫಾ. ವಿನ್ಸೆಂಟ್ ಕೊಯೆಲ್ಹೊ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಕ್ಲಬ್‌ನ ಮುಂದಿನ ಸೇವಾ ಚಟುವಟಿಕೆಗಳಿಗೆ ಶುಭಕೋರಿದರು.

ನಿರ್ಗಮಿತ ಅಧ್ಯಕ್ಷ ಲ. ರಿಯಾಜ್ ನಜೀರ್ ಸಾಹೇಬ್, ಕಾರ್ಯದರ್ಶಿ ಲ. ಶರೀನ್ ಸ್ಟೆಲ್ಮಾ ಕ್ರಾಸ್ತಾ, ಖಜಾಂಚಿ ಲ. ಲಾರೆನ್ಸ್ ಡಿಸೋಜ, ಲಿಯೋ ಅಧ್ಯಕ್ಷೆ ಲಿಯೋ ಕೈರಾ ಶೈನಾ ಡಿಸೋಜ, ಕಾರ್ಯದರ್ಶಿ ಲಿ. ರಿಯಾ ಕೋರ್ಡಾ ಹಾಗೂ ಖಜಾಂಚಿ ಲಿ. ಅಯ್ಶಲ್ ಮರಿಯಾ ಮಥಾಯಸ್ ಸೇರಿದಂತೆ ಲಯನ್ಸ್ ಮತ್ತು ಲಿಯೋ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

    

ಮನರಂಜನೆಯ ಜೊತೆಗೆ ಜೀವನಮೌಲ್ಯಗಳನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಯಕ್ಷಗಾನದ ಕೊಡುಗೆ ಅನನ್ಯ : ಬಿ.ಪುಂಡಲೀಕ ಮರಾಠೆ

Thumbnail
Posted On: 05 Aug 2026, 06:54 PM

ಶಿರ್ವ : ಕರಾವಳಿ ಜಿಲ್ಲೆಗಳ  ಗಂಡುಕಲೆ ಎಂದೇ ಕರೆಯಲ್ಪಟುವ ಯಕ್ಷಗಾನಕ್ಕೆ ಪುರಾತನ ಇತಿಹಾಸವಿದ್ದು,  ಅವಿದ್ಯಾವಂತರಲ್ಲೂ  ಭಾರತೀಯ ಸನಾತನ  ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆ ಧಾರ್ಮಿಕ ಪ್ರಜ್ಞೆ, ನೈತಿಕ ಜೀವನ ಮೌಲ್ಯಗಳನ್ನು ಜಾಗೃತಗೊಳಿಸುವಲ್ಲಿ  ಯಕ್ಷಗಾನದ ಕೊಡುಗೆ ಅನನ್ಯ ಎಂದು  ನಿವೃತ್ತ ಶಿಕ್ಷಕ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ನುಡಿದರು.
ಅವರು ರವಿವಾರ ಶಂಕರಪುರ ಸಮೀಪದ ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ  ಟ್ರಸ್ಟ್ ನಡೆಸುತ್ತಿರುವ "ಕೃಷ್ಣವೇಣಿ ಆಶ್ರಯ ಧಾಮ"ದಲ್ಲಿ ಹಿರಿಯ ನಾಗರಿಕರಿಗಾಗಿ ಪ್ರಪ್ರಥಮ ಬಾರಿಗೆ  ಶ್ರೀಮಹಾಗಣಪತಿ-ಮಹಾಕಾಳಿ ಯಕ್ಷಗಾನ ಮಂಡಳಿ ಹಿರಿಯಡ್ಕ ಇವರಿಂದ  "ರಾಮಚರಿತ" ಯಕ್ಷಗಾನ ಪ್ರದರ್ಶನಕ್ಕೆ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡಿದರು.

 ಅಧ್ಯಕ್ಷತೆ ವಹಿಸಿದ ಆಶ್ರಯಧಾಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಐ.ರಮೇಶ್ ಮಿತ್ತಾಂತಾಯ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು.  

ಸಾಲ್ಮರ ಗೋವಿಂದ ಭಟ್ ಕುಟುಂಬದ ಹಿರಿಯರಾದ  ನಿವೃತ್ತ ಶಿಕ್ಷಕಿ ಶಾರದಾ ಹೆಬ್ಬಾರ್ ವೇದಿಕೆಯಲ್ಲಿದ್ದರು. 

ಯಕ್ಷಗಾನ ಪ್ರದರ್ಶನಕ್ಕೆ ಸರ್ವರೀತಿಯಿಂದಲೂ ಸಹಕರಿಸಿದ ನ್ಯಾಯವಾದಿ ಪ್ರಸಾದ್ ಉಡುಪಿ ಮತ್ತು ಮಮತಾ ಪ್ರಸಾದ್ ಇವರನ್ನು ಸನ್ಮಾನಿಸಲಾಯಿತು.

 ಕಾಲಮಿತಿಯ ಈ ಯಕ್ಷಗಾನದಲ್ಲಿ  ಭಾಗವತರಾಗಿ ಚಂದ್ರಯ್ಯ ಆಚಾರ್ಯ ಬಿದ್ಕಲ್ಕಟ್ಟೆ, ಮದ್ದಲೆ-ರಾಹುಲ್ ಅಮೀನ್ ತೆಕ್ಕಟ್ಟೆ, ಚಂಡೆ- ದೀಪಕ್ ಪೂಜಾರಿ ಸಾಸ್ತಾನ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಕೃಷ್ಣ - ಶಾಂತಿ ವನ ಜತ್ತನ್ನ, ಸತ್ರಾಜಿತ-ಸುಶೀಲಾ ಪೂಜಾರ್ತಿ, ಜಾಂಬವಂತ-ರಾಘವೇಂದ್ರ ಗಿಳಿಯಾರು, ಬಲರಾಮ-ಗಣೇಶ ಆಚಾರ್ಯ ಬೈಕಾಡಿ, ಪ್ರಸೇನ-ಪ್ರಜ್ವಲ್ ಪೂಜಾರಿ ಸಾಸ್ತಾನ, ಜಾಂಬವತಿ-ಉಲ್ಲಾಸ್ ಕಾಂಚನ್ ಕೋಟ, ಗೋಪಿಕೆ -ಪ್ರಜ್ವಲ್ ಪಡುಕೆರೆ ಅಭಿನಯಿಸಿದ್ದರು. 

ಕನ್ನಡ ಮತ್ತು ತುಳು ಸಂಭಾಷಣೆಯಲ್ಲಿ ಪ್ರದರ್ಶನಗೊಂಡ ಈ ಯಕ್ಷಗಾನ ಪ್ರದರ್ಶನ ಹಿರಿಯನಾಗರಿಕರನ್ನು ಮನಸೂರೆಗೊಳಿಸುವಲ್ಲಿ ಯಶಸ್ವಿಯಾಯಿತು.
    

ಆ. 7 : ಜೇಸಿಐ ಕಾಪು ವತಿಯಿಂದ ಆಟಿದ ತಮ್ಮನ ಕಾರ್ಯಕ್ರಮ

Thumbnail
Posted On: 05 Aug 2026, 06:21 PM

ಕಾಪು : ಜೇಸಿಐ ಕಾಪು ವತಿಯಿಂದ ಆಟಿದ ತಮ್ಮನ ಕಾರ್ಯಕ್ರಮವು ಆಗಸ್ಟ್ 7, ಶುಕ್ರವಾರ ಸಂಜೆ 7 ಗಂಟೆಗೆ ಕಾಪು ಜೇಸಿ ಭವನದಲ್ಲಿ ಜರಗಲಿದೆ. 
ಕಾಪು ಜೇಸಿಐ ಅಧ್ಯಕ್ಷರಾದ ಜೆಎಫ್ಎಮ್ ವಿಕ್ಕಿ ಪೂಜಾರಿ ಮಡುಂಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 
ಮುಖ್ಯ ಅತಿಥಿಯಾಗಿ ಜೆಸಿಐ ಭಾರತದ ವಲಯ 15 ರ ಅಧ್ಯಕ್ಷರಾದ ಜೆಎಫ್ಎಸ್ ಸಂತೋಷ್ ಶೆಟ್ಟಿ ಬಾಗವಹಿಸಲಿದ್ದಾರೆ.
ಆಟಿದ ತಮ್ಮನ ಕಾರ್ಯಕ್ರಮದಲ್ಲಿ 31 ಬಗೆಯ ಆಟಿಯ ಖಾದ್ಯ ವೈವಿಧ್ಯಗಳು ಜೊತೆಗೆ ತುಳುನಾಡಿನ ವಿಚಾರವಾಗಿ ರಸಪ್ರಶ್ನೆಗೆ ಉತ್ತರಿಸಿ ಬಹುಮಾನ ಗೆಲ್ಲುವ ಅವಕಾಶವಿದೆ ಎಂದು  ಕಾಪು ಜೇಸಿಐ ಅಧ್ಯಕ್ಷರಾದ ಜೆಎಫ್ಎಮ್ ವಿಕ್ಕಿ ಪೂಜಾರಿ ಮಡುಂಬು ಮತ್ತು ಸಂಸ್ಥೆಯ ಪ್ರಮುಖರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    

ಕಟಪಾಡಿ ಎಸ್ವಿಎಸ್ ಹಳೆ ವಿದ್ಯಾರ್ಥಿ ಸಂಘ : ಆಟಿದ ಅಟ್ಟಣೆ ಕಾರ್ಯಕ್ರಮ

Thumbnail
Posted On: 05 Aug 2026, 05:52 PM

ಕಾಪು : ತುಳುನಾಡಿನಲ್ಲಿ ಆಟಿ ತಿಂಗಳೆಂದರೆ ನಂಬಿಕೆಯ ತಿಂಗಳಾಗಿದೆ. ನಮ್ಮ ಹಿರಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ತಿಂಗಳು ಆಟಿ. ಹಾಗಾಗಿ ಪ್ರಕೃತಿದತ್ತವಾದ ಔಷಧೀಯ ಗುಣವುಳ್ಳ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನನು ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದರು ಎಂದು ಜಾನಪದ ವಿದ್ವಾಂಸ ದಯಾನಂದ ಕೆ.ಶೆಟ್ಟಿ ದೆಂದೂರು ತಿಳಿಸಿದ್ದಾರೆ.
ಅವರು ಕಟಪಾಡಿ ಎಸ್ವಿಎಸ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಎಸ್ವಿಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ಆಟಿದ ಅಟ್ಟಣೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.

ಕಟಪಾಡಿಯ ವೈದ್ಯ ಡಾ.ಯು.ಕೆ.ಶೆಟ್ಟಿ ಅವರು ಹಿರಿಯರಿಗೆ ಆಟಿಯ ಅಡುಗೆ ಬಡಿಸಿ, ತುಡರ್ ಹಚ್ಚಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟಿ ಆಡಂಬರದ ತಿಂಗಳಲ್ಲ. ಕೃಷಿಕಾಯಕದಿಂದ ನೊಂದು ಬೆಂದ ಜೀವಗಳಿಗೆ ವಿಶ್ರಾಂತಿಯ ಸಮಯವಾಗಿತ್ತು. ಜೀವನವನ್ನು ಸಂಭ್ರಮಿಸುವ ಕಾಲ ಆಟಿಯಾಗಿರಲಿಲ್ಲ. ಕಾಯಿಲೆ ಕಸಾಲೆಗಳಿಂದ ಬಳಲುತ್ತಿದ್ದ ಕಾಲವಾಗಿತ್ತು. ಆಟಿದ ಕೂಟಗಳಂತಹ ಸಂಭ್ರಮದ ವಾತಾವರಣ ನಿಜವಾದ ಆಟಿ ತಿಂಗಳ ಆಚರಣೆಯಲ್ಲಿಲ್ಲ ಎಂದರು.

ಕಟಪಾಡಿ ಎಸ್ವಿಎಸ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. 
ಪ್ರಧಾನ ಕಾರ್ಯದರ್ಶಿ ಪ್ರಭಾ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಕಾಮತ್, ಕಲಾ ಕಾರ್ಯದರ್ಶಿ ಪ್ರಶಾಂತ್ ಆರ್.ಎಸ್, ನಿಕಟಪೂರ್ವ ಕೋಶಾಧಿಕಾರಿ ಮಹೇಶ್ ಎನ್.ಅಂಚನ್, ನಾಟಕ ಕಲಾವಿದ ನಾಗೇಶ್ ಕಾಮತ್ ಕಟಪಾಡಿ ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿ ಸಂಘದ ಸದಸ್ಯ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಎನ್.ಜಿ.ಸುಕುಮಾರ್ ವಂದಿಸಿದರು.  

ಹಳೆವಿದ್ಯಾರ್ಥಿಗಳು ತಯಾರಿಸಿರುವ 40ಕ್ಕೂ ಅಧಿಕ ಬಗೆಯ ಆಟಿಯ ತಿಂಡಿ ತಿನಸುಗಳ ಖಾದ್ಯ ವೈವಿಧ್ಯ ಪ್ರದರ್ಶನ, ಸಹಭೋಜನ, ಔಷಧೀಯ ಸಸ್ಯಗಳ ಪ್ರದರ್ಶನ, ವಿವಿಧ ಮನೋರಂಜನಾ ಜನಪದ ಆಟೋಟ ಸ್ಪರ್ಧೆಗಳು ನಡೆದವು
    

ಅಮೇರಿಕಾದ ಬಾನಾ (ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ) 47ನೇ ವಾರ್ಷಿಕೋತ್ಸವದ 25ನೇ ಸಮ್ಮೇಳನ "ದಿಬ್ಬಣ" - ಮಹಾ ಅಧಿವೇಶನ

Thumbnail
Posted On: 05 Aug 2026, 05:48 PM

ಕಾಪು : ಅಮೇರಿಕಾದ ಬಾನಾ (ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ) 47ನೇ ವಾರ್ಷಿಕೋತ್ಸವದ 25ನೇ ಸಮ್ಮೇಳನ ‘ದಿಬ್ಬಣ’ - ಮಹಾ ಅಧಿವೇಶನ ಜು. 30 ರಿಂದ ಅಗಸ್ಟ್ 2ರವರೆಗೆ ನಾಲ್ಕು ದಿನಗಳ ಪರ್ಯಂತ ಅಮೇರಿಕಾದಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿಯವರು ದೇವಳದ ದ್ವಿತೀಯ ಹಂತದ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾಪು ನಗರ ಸಹಿತವಾಗಿ ಪ್ರತಿಯೊಂದು ಗ್ರಾಮಗಳು ಅಭಿವೃದ್ಧಿಯಾಗಬೇಕು, ಪೂರಕವಾಗಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರಕಾರ ಯೋಜನೆಯನ್ನು ರೂಪಿಸುತ್ತಿದೆ. ಅಮೇರಿಕಾದಲ್ಲಿ ನೆಲೆಸಿರುವ ನಿಮ್ಮಲ್ಲಿ ಯಾರಾದರೂ ಕಾಪುವಿನಲ್ಲಿ ರೆಸಾರ್ಟ್, ಹೋಮ್ ಸ್ಟೇ, ಹೋಟೆಲ್ ಅಥವಾ ಕೈಗಾರಿಕೆಗಳಿಗೆ ಹೂಡಿಕೆ ಮಾಡುವುದಿದ್ದರೆ ಕಾಪು ಚಾರಿಟೇಬಲ್ ಟ್ರಸ್ಟ್ ಸಹಕಾರವನ್ನು ನೀಡುತ್ತದೆ ಎಂದು ಹೇಳಿದರು. 
ನವದುರ್ಗಾ ಲೇಖನ ಯಜ್ಞದ ಪುಸ್ತಕದೊಂದಿಗೆ ಶ್ರೀ ದೇವಿಯ ಪ್ರಸಾದವನ್ನು ಒಂಬತ್ತು ಜನರಿಗೆ ನೀಡಿ ಅವರನ್ನು ಯು.ಎಸ್.ಎ ಸಿಯಾಟಲ್ ನ ಕಾಪು ಕ್ಷೇತ್ರ ಮಾತೃ ವೈಭವ - ಸೇವಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಪ್ರಥಮವಾಗಿ ಕಾಪು ಕ್ಷೇತ್ರ ಮಾತೃ ವೈಭವ ಸೇವಾ ಸಮಿತಿಗೆ ಚಾಲನೆ ನೀಡಲಾಯಿತು. ಭಾಸ್ಕರ್ ಶೇರಿಗಾರ್ ಬೋಸ್ಟನ್ ನೇತೃತ್ವದಲ್ಲಿ ಈಗಾಗಲೇ ಇರುವ ಸಮಿತಿಯನ್ನು ಕಾಪು ಕ್ಷೇತ್ರ ಮಾತೃ ವೈಭವ ಸೇವಾ ಸಮಿತಿ - ಅಮೇರಿಕಾ ಘಟಕ ಎಂದು ಮರುನಾಮಕರಣಗೊಳಿಸಲಾಯಿತು.

ಸಮಾರಂಭದಲ್ಲಿ ದಿ ಅಸೋಸಿಯೇಷನ್ ಆಫ್ ಕನ್ನಡ ಕೂಟಸ್ ಆಫ್ ಅಮೇರಿಕಾದ ಅಧ್ಯಕ್ಷ ಅಮರ್ ನಾಥ್ ಗೌಡ, ಅಲ್ ಅಮೇರಿಕಾ ತುಳು ಅಸೋಸಿಯೇಷನ್ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಬೋಸ್ಟನ್, ಹೆರಂಭ ಇಂಡಸ್ಟ್ರೀಸ್ ಪ್ರೈ. ಲಿ. ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ದುಬೈ ಫಾರ್ಚ್ಯುನ್ ಗ್ರೂಪ್ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಆಸ್ಟ್ರೇಲಿಯಾ ಸಿಡ್ನಿಯ ಒಮೆಗಾ ಇಂಡಸ್ಟ್ರಿಸ್ ಪ್ರೈ. ಲಿ ಆಡಳಿತ ನಿರ್ದೇಶಕರಾದ ಕೆ. ಶಿವರಾಮ ಶೆಟ್ಟಿ, ಬೆಲ್ಲೆವ್ಯೂ ಗೌರವಾನ್ವಿತ ಉಪ ಮೇಯರ್ ಡೇವ್  ಹ್ಯಾಮಿಲ್ಟನ್, ಗೌರವಾನ್ವಿತ ವಾಷಿಂಗ್ಟನ್ ಸ್ಟೇಟ್ ಸೆನೆಟರ್ ಮಂಕ ಧಿಂಗ್ರಾ, ಸಿಯಾಟಲ್ ನ ಭಾರತದ ಗೌರವಾನ್ವಿತ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ, ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ಥ್ ಅಮೇರಿಕಾ ಇದರ ಅಧ್ಯಕ್ಷರಾದ ಮಂಜುನಾಥ್ ಆರ್. ಶೆಟ್ಟಿ, ಉಪಾಧ್ಯಕ್ಷರಾದ ಹಿತೇಶ್ ಶೆಟ್ಟಿ, ಸದಸ್ಯರಾದ ಸುಮನಾ ನಟರಾಜ್ ಶೆಟ್ಟಿ, ಉಪಾಧ್ಯಕ್ಷರಾದ ರಘು ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಮಿತ ಶೆಟ್ಟಿ, ಸದಸ್ಯರಾದ ಶಾಮ ಶೆಟ್ಟಿ, ಉಪಾಧ್ಯಕ್ಷರಾದ ಸೀಮಾ ಶೆಟ್ಟಿ, ಕಾಪು ದೇವಿಪ್ರಸಾದ್ ಕನ್ಸ್ಟ್ರಕ್ಷನ್ ಪ್ರೈ. ಲಿ ಆಡಳಿತ ನಿರ್ದೇಶಕರಾದ ಬೀನಾ ವಿ. ಶೆಟ್ಟಿ, ಅನನ್ಯ ಶೆಟ್ಟಿ, ಲಕ್ಷ್ಮಿ ಶೆಟ್ಟಿ, ಪವಿತ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.  

ಸಮಾರಂಭದಲ್ಲಿ ಸುಮಾರು 250 ಬಂಟ ಕುಟುಂಬಗಳ 600ಕ್ಕೂ ಅಧಿಕ ಸದಸ್ಯರು ಭಾಗಿಯಾಗಿದ್ದರು.
    

ಆ.9 :ಕಾಪುವಿನಲ್ಲಿ ಯುವವಾಹಿನಿ ಟ್ರೋಫಿ ಚೆಸ್ ಪಂದ್ಯಾವಳಿ

Thumbnail
Posted On: 04 Aug 2026, 01:53 PM

ಕಾಪು: ಯುವವಾಹಿನಿ (ರಿ.) ಕಾಪು ಘಟಕದ ನೇತೃತ್ವದಲ್ಲಿ ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಕಾಪು ಮತ್ತು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಜಂಟಿ ಸಹಯೋಗದೊಂದಿಗೆ ಆ. 9ರಂದು ಕಾಪು ಶ್ರೀ ಹಳೆ ಮಾರಿಯಮ್ಮ ಸಭಾಭವನದಲ್ಲಿ ಯುವವಾಹಿನಿ ಟ್ರೋಫಿ–2026' ಮುಕ್ತ ಹಾಗೂ ವಯೋಮಿತಿ ವಿಭಾಗದ ರ‍್ಯಾಪಿಡ್ ಚೆಸ್ ಪಂದ್ಯಾವಳಿ ನಡೆಯಲಿದೆ.

ಪಂದ್ಯಾವಳಿಯಲ್ಲಿ ಒಟ್ಟು 30,303 ರೂ. ನಗದು ಬಹುಮಾನ ಹಾಗೂ 128 ಟ್ರೋಫಿಗಳನ್ನು ವಿಜೇತರಿಗೆ ವಿತರಿಸಲಾಗುವುದು. ಓಪನ್ ಹಾಗೂ ವಿವಿಧ ವಯೋಮಿತಿ ವಿಭಾಗಗಳಲ್ಲಿ ತಲಾ 20 ಬಹುಮಾನಗಳನ್ನು ಘೋಷಿಸಲಾಗಿದೆ. ಸ್ಪರ್ಧಾಳುಗಳು ಹಾಗೂ ಅವರ ಪೋಷಕರಿಗೆ ಉಚಿತ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಚದುರಂಗ ಕ್ರೀಡೆಯನ್ನು ಉತ್ತೇಜಿಸುವ ಹಾಗೂ ಪ್ರತಿಭಾವಂತ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. 
ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ರಾಜ್ಯದ ವಿವಿಧೆಡೆಗಳಿಂದ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಆಸಕ್ತರು https://www.chessfee.com ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಕ್ಕಳಿಗೆ ಸ್ಪರ್ಧಾತ್ಮಕ ಅನುಭವ ಹಾಗೂ ಪ್ರತಿಭೆ ಪ್ರದರ್ಶಿಸಲು ಇದು ಉತ್ತಮ ಅವಕಾಶವಾಗಿದ್ದು, ಶೀಘ್ರ ನೋಂದಣಿ ಮಾಡಿಕೊಳ್ಳುವಂತೆ ಯುವವಾಹಿನಿ ಕಾಪು ಘಟಕದ ಪ್ರಕಟಣೆ ತಿಳಿಸಿದೆ.
    

ತುಳುವ ಮಹಾಸಭೆ ಇಂಟರ್ನ್ಯಾಷನಲ್ – ಒಮಾನ್ ಘಟಕದ ಅಧ್ಯಕ್ಷರಾಗಿ ಮಲ್ಲಾರ್ ಶಶಿಧರ ಶೆಟ್ಟಿ ನೇಮಕ

Thumbnail
Posted On: 29 Jul 2026, 07:31 PM

ಕಾಪು : ತುಳು-ಕನ್ನಡ ಭಾಷೆ, ಸಂಸ್ಕೃತಿ ಮತ್ತು ಭಾರತೀಯ ಮೌಲ್ಯಗಳ ಪ್ರಸಾರಕ್ಕೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ಮಲ್ಲಾರ್ ಶಶಿಧರ ಶೆಟ್ಟಿಯವರನ್ನು ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಒಮಾನ್ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.

ಕಾಪು ತಾಲೂಕಿನ ಮಲ್ಲಾರ್ ಗ್ರಾಮದ ಮೂಲದ  ಮಲ್ಲಾರ್ ಶಶಿಧರ ಶೆಟ್ಟಿ ಅವರು ಖ್ಯಾತ ಉದ್ಯಮಿ, ಸಮಾಜಸೇವಕ ಹಾಗೂ ಭಾರತೀಯ ಸಂಸ್ಕೃತಿಯ ಪ್ರಚಾರಕರಾಗಿದ್ದಾರೆ. ವಾಣಿಜ್ಯ ಪದವೀಧರರಾಗಿರುವ ಅವರು ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದು, ಒಮಾನ್‌ನ Abeer Group of Companies ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ಐದು ದಶಕಗಳಿಂದ ಸಮಾಜಸೇವೆ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಹಾದೇವಿ ಕಲ್ಚರಲ್ ಕ್ಲಬ್, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ – ಮಸ್ಕತ್, ಅಧ್ಯಾತ್ಮಿಕ ಸಮಿತಿ, ಬಾಲಭಾರತಿ ಸ್ಟಡಿ ಸೆಂಟರ್ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಭಾರತೀಯ ಪ್ರವಾಸಿ ಮಂಚ್–ಕರ್ನಾಟಕ ಘಟಕದ ಅಧ್ಯಕ್ಷರು, ಒಮಾನ್ ಬಂಟ್ಸ್ ಸಂಘದ ಸಂಸ್ಥಾಪಕ ಸದಸ್ಯರು, ತುಳು ಕೂಟ ಮಸ್ಕತ್‌ನ ಸಂಸ್ಥಾಪಕ ಸದಸ್ಯರು ಹಾಗೂ ಒಮಾನ್‌ನಲ್ಲಿ ತುಳು ಲಿಪಿಯ ಪ್ರಚಾರ ಮತ್ತು ಬೋಧನೆಗೆ ಮಾರ್ಗದರ್ಶಕರಾಗಿದ್ದಾರೆ.

ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವು, ಮೃತ ಭಾರತೀಯರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆ, ನಿರುದ್ಯೋಗಿಗಳಿಗೆ ಸಹಾಯ, ಶಿಕ್ಷಣ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಉದಾರ ಕೊಡುಗೆ ನೀಡುವ ಮೂಲಕ ಅವರು ಅಪೂರ್ವ ಸಮಾಜಸೇವೆ ಸಲ್ಲಿಸಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಮಾಜಕ್ಕೆ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ಅವರಿಗೆ "ವಿಶ್ವ ಮಾನ್ಯ ಕನ್ನಡಿಗ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀಹರಿನಾರಾಯಣ ದಾಸ್ ಅಸ್ರಣ್ಣ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆಯ ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ ಮತ್ತು ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಅಧ್ಯಕ್ಷರಾದ ಮಲ್ಲಾರ್ ಶಶಿಧರ ಶೆಟ್ಟಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.

   

ರಾಹುಲ್ ಗಾಂಧಿ ಅವಹೇಳನ : ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು

Thumbnail
Posted On: 29 Jul 2026, 07:27 PM

ಪಡುಬಿದ್ರಿ : ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಝ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಪಡುಬಿದ್ರಿ ಪೊಲೀಸ್ ಠಾಣೆಗೆ ತೆರಳಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ವಿರುದ್ಧ ದೂರು ಸಲ್ಲಿಸಿದರು.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ಅವಹೇಳನಕಾರಿ ಹಾಗೂ ದ್ವೇಷಭಾಷಣ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಬಾಬರಿ ಮಸೀದಿಯ ಧ್ವಂಸದ ಉದಾಹರಣೆ ನೀಡಿ, ರಾಹುಲ್ ಗಾಂಧಿಯವರ ವಂಶವನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿರುವುದು ಸಮಾಜದಲ್ಲಿ ದ್ವೇಷ ಮತ್ತು ಉದ್ವಿಗ್ನತೆ ಸೃಷ್ಟಿಸುವ ಹೇಳಿಕೆಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸೂಕ್ತ ಪ್ರಕರಣ ದಾಖಲಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೈನ್, ಕಾಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಚರಿತಾ ಅಮೀನ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಶ್ವಿನ್ ಕೋಟ್ಯಾನ್, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವ್ ಸಿ. ಸಾಲ್ಯಾನ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರ್ಫಾಜ್ ಎಂ.ಎಸ್., ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ತಸ್ಲೀನ್ ಅರಾ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಕುಮಾರ್, ದಾವೂದ್ ಹಕೀಮ್, ರಿಯಾಂ ಕೆರಿ, ಶಫೀಕ್, ಮಥೀಸ್ , ಮಾಜಿ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯ ಶಫಿ ಎಂ.ಎಸ್., ಮಾಜಿ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯೆ ಜ್ಯೋತಿ ಮೆನನ್, ಮಾಜಿ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಕೋಟ್ಯಾನ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ, ಮಾಜಿ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯೆ ಮುಬೀನಾ ಬೇಗಂ, ಪಡುಬಿದ್ರಿ ಎಸ್‌ಸಿ/ಎಸ್‌ಟಿ ಘಟಕದ ಅಧ್ಯಕ್ಷ ವಿಠಲ್ ಮಾಸ್ಟರ್, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶ್ರೇಯಸ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಉಪಾಧ್ಯಕ್ಷ ಬುಡಾನ್ ಸಾಹೆಬ್ , ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಜಾಕ್, ಪಕ್ಷದ ಪ್ರಮುಖರಾದ ಅಯಾಜ್, ಕಬೀರ್ ಮತ್ತಿತರರು  ಉಪಸ್ಥಿತರಿದ್ದರು.