Updated News From Kaup
34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕ ಗೋಪಾಲಕೃಷ್ಣ ಭಟ್ ವಯೋ ನಿವೃತ್ತಿ
Posted On: 31 May 2020, 09:15 PM
ಭವಿಷ್ಯದ ಬದುಕಿಗೆ ಅಕ್ಷರ ಕಲಿಸಿ ನಿವೃತ್ತಿ ಹೊಂದಿದ ನಮ್ಮೂರಿನ ಲೆಕ್ಕ ಮಾಸ್ಟರ್.. ಕಾಪು: ಕಾಪು ಕಳತ್ತೂರಿನ ಪಿ.ಕೆ ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರು ಶ್ರೀ ಗೋಪಾಲಕೃಷ್ಣ ಭಟ್ ಕೆ.ಎಂ.. ಕಳೆದ ೨೭ ವರ್ಷಗಳ ಕಾಲ ಸಹಶಿಕ್ಷಕರಾಗಿ,ಏಳು ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ 31/05/2020 ರಂದು ವಯೋನಿವೃತ್ತಿ ಹೊಂದಿರುವ ಶ್ರೀ ಗೋಪಾಲಕೃಷ್ಣ ಭಟ್ ಕೆ ಎಂ ಇವರು ಹಲವು ವರ್ಷದಿಂದ SSLC ಪರೀಕ್ಷೆಯಲ್ಲಿ ಗಣಿತ ಶಾಸ್ತ್ರದಲ್ಲಿ ಶೇಕಡಾ ನೂರು ಫಲಿತಾಂಶ ಹಾಗೂ ಕಳೆದ ಎರಡು ವರ್ಷಗಳಿಂದ ಗಣಿತ ಶಾಸ್ತ್ರದಲ್ಲಿ ಉಡುಪಿ ಜಿಲ್ಲಾ ಸಾಧಕ ಪ್ರಶಸ್ತಿ ಪಡೆದು ಸಾಧನೆ ಮಾಡಿರುವರು ಹಾಗೂ ಸಂಸ್ಥೆಯ NCC ಘಟಕದ ಅಫೀಸರ್ ಆಗಿಯೂ ಸೇವೆ ಸಲ್ಲಿಸಿರುತ್ತಾರೆ.. ವಿದ್ಯಾರ್ಥಿಗಳಲ್ಲಿ ಉಜ್ವಲ ಭವಿಷ್ಯ ತುಂಬಿ ಇದೀಗ ವಯೋನಿವೃತ್ತಿ ಹೊಂದಿದ ತಮ್ಮ ನಿವೃತ್ತಿ ಜೀವನ ಸುಖಮಯವಾಗಿರಲಿ.. ✍
ಕಾಲನ ಹೊಡೆತಕ್ಕೆ ಸಿಕ್ಕ ಮೈಂದಡಿ ದೈವಸ್ಥಾನ ಮತ್ತು ಗರಡಿ
Posted On: 29 May 2020, 10:56 AM
ತುಳುನಾಡು ಎಂದಕ್ಷಣ ಕಣ್ಣಿಗೆ ಕಾಣುವುದು ದೈವಾರಾಧನೆ. ತುಳುವರ ರಕ್ತದಲ್ಲಿ ದೈವಾರಾಧನೆ ಬೆರೆತು ಹೋಗಿದೆ. ಏನೇ ಕಷ್ಟ ಬಂದರು ಮೊರೆ ಹೋಗುವುದು ದೈವಗಳ ಕಾಲ ಬುಡಕ್ಕೆ. ನಂಬಿದವರನ್ನು ಯಾವತ್ತು ಕೈಬಿಟ್ಟವರಲ್ಲ ಈ ಅತಿಮಾನುಷ ಶಕ್ತಿಗಳಾದ ದೈವಗಳು. ಅದೆಷ್ಟೋ ಕಾಲದ ಹೊಡೆತಕ್ಕೆ ಮಣ್ಣಿನಡಿಗೆ ಸೇರಿದ ದೈವಸ್ಥಾನಗಳು ಕೂಡ ಕಾಲ ಬಂದಾಗ ತಮ್ಮ ಇರುವಿಕೆಯನ್ನು ತೋರಿಸಿ ತಮಗೆ ಬೇಕಾದ ಸ್ಥಾನಮಾನಗಳನ್ನು ಕಟ್ಟಿಸಿಕೊಂಡು ನಂಬಿದವರಿಗೆ ಇಂಬುಕೊಟ್ಟವರು. ಇಂತಹ ದೈವಾರಾಧನೆಯಲ್ಲಿ ಗರಡಿಗಳು ಕೂಡ ಕಾಯ ಬಿಟ್ಟು ಮಾಯ ಸೇರಿದ ಅವಳಿ ಕಾರಣೀಕ ಪುರುಷರ ಆರಾಧನ ಕೇಂದ್ರ. ಪ್ರಸ್ಥುತ 250 ಮಿಕ್ಕಿ ಗರಡಿಗಳು ಇದ್ದರು ಕೂಡ ಕೆಲವು ಗರಡಿಗಳು ಮಣ್ಣಿನ ಅಡಿಯಲ್ಲಿ ಜೀರ್ಣಾವಸ್ಥೆಯಲ್ಲಿ ಇದೆ. ಹೆಸರಿಗೆ ಮಾತ್ರ ಲೆಕ್ಕದಲ್ಲಿ ಇದೆ. ಅಂತಹುದೇ ಗರಡಿಗಳಲ್ಲಿ ಮೈಂದಡಿ ಗರಡಿಯು ಒಂದು. ಶ್ರೀ ಕ್ಷೇತ್ರ ಕಟೀಲಿಗೆ ಹೋಗುವ ದಾರಿಯಲ್ಲಿ ಸಿಗುವ ನಿಡ್ಡೋಡಿ ಎಂಬ ಗ್ರಾಮದಲ್ಲಿ ಮೈಂದಡಿ ಎನ್ನುವ ಪುಟ್ಟ ಊರು. ಹಸಿರು ಕಾಂತಿಯಿಂದ ಈ ಹಳ್ಳಿ ಕಂಗೊಳಿಸುತ್ತಾ ಇದ್ದು ಎಲ್ಲರು ನೆಮ್ಮದಿಯಿಂದ ಒಟ್ಟಾಗಿ ಜೀವಿಸುತ್ತಿರುವ ಊರು. ಕಾಲದ ಹೊಡೆತಕ್ಕೆ ಸಿಕ್ಕಿ ಈ ಹಿಂದೆ ವಿಜೃಂಭಣೆಯಿಂದ ನಡೆಯುತ್ತಿದ್ದ ಗರಡಿ ಜಾತ್ರೆ ಕಾಲಗರ್ಭದಲ್ಲಿ ಹುದುಗಿ ಹೋಗಿದೆ. 66 ಗರಡಿ 33 ತಾವುಗಳೆಂಬ ನಾಣ್ಣುಡಿಯಂತೆ ಈ ಗರಡಿಯು ಕೂಡ 66 ಗರಡಿಯಲ್ಲಿ ಸೇರಿರಬಹುದೆಂಬ ನಂಬಿಕೆಯಿದೆ. ಇಲ್ಲಿ ಅಳಿದು ಉಳಿದಿರುವ ಶಕ್ತಿ ಕಲ್ಲು, ದಂಬೆ ಕಲ್ಲು, ಆಯದ ಕಲ್ಲು, ತೀರ್ಥ ಬಾವಿ ಇವೆಲ್ಲ ಇದಕ್ಕೆ ಸಾಕ್ಷಿಯೆಂಬಂತೆ ಇದೆ. ಸುಮಾರು 150 ವರ್ಪಗಳ ಹಿಂದೆ ಬಹು ಸಡಗರದಿಂದ ನಡೆಯುತ್ತಿದ್ದ ನೇಮೋತ್ಸವವು ಯಾಕಾಗಿ ನಿಂತಿದೆ ಎನ್ನುವ ಮಾಹಿತಿ ಯಾರಿಗೂ ಇಲ್ಲ. ನೋಡಿದ ಕೇಳಿದ ಜನರು ಇರಲು ಸಾಧ್ಯವಿಲ್ಲ. ಆದರೆ 5 ಕಡೆಗಳಿಂದ ದೈವಗಳು ಮತ್ತು ಬೈದೇರುಗಳ ಭಂಡಾರ ಬಂದು ನೇಮೋತ್ಸವ ಆಗುತ್ತಿದ್ದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿಯಿದೆ. ಭಾವದ ಮನೆಯಿಂದ ಕೊಡಮಂದಾಯ ದೈವದ ಭಂಡಾರ, ಪಾತ್ರಬೈಲು ಮನೆಯಿಂದ ಸರಳ ಜುಮಾದಿ ಭಂಡಾರ, ಮಚ್ಚಾರು ಮನೆಯಿಂದ ಬೈದೇರುಗಳ ಭಂಡಾರ, ನಂದೊಟ್ಟು ಮನೆಯಿಂದ ಕಾಂತೇರ್ ಜುಮಾದಿ ಭಂಡಾರ ಮತ್ತು ಇನ್ನೊಂದು ಕಡೆಯಿಂದ ಜಾರಂದಾಯನ ಭಂಡಾರ ಮೈಂದಡಿ ಎನ್ನುವ ಸ್ಥಳದಲ್ಲಿ ಇರುವ ದೈವಸ್ಥಾನಕ್ಕೆ ಮತ್ತು ಗರಡಿಗೆ ಒಟ್ಟಾಗಿ ಬಂದು ಧ್ವಜಾರೋಹಣ ಆಗಿ ನೇಮೋತ್ಸವ ಆಗುತ್ತಿತ್ತಂತೆ. ಇಡೀ ಊರಿಗೆ ಇದು ಜಾತ್ರೆ. ಗ್ರಾಮಸ್ಥರು ಎಲ್ಲರು ಒಟ್ಟಾಗಿ ದೈವಗಳ ಮತ್ತು ಬೈದೇರುಗಳ ಭಂಡಾರ ಮನೆಯವರ ಮುಂದಾಳತ್ವದಲ್ಲಿ ನಡೆಸುತ್ತಿದ್ದರಂತೆ. ಆದರೆ ಯಾವುದೋ ಒಂದು ವಿಷ ಗಳಿಗೆಯಲ್ಲಿ ಎಲ್ಲವು ನಿಂತು ಹೋಗಿ ಮೈಂದಡಿಯಲ್ಲಿರುವ ದೈವಸ್ಥಾನ ಮತ್ತು ಗರಡಿ ಧರಶಾಹಿಯಾಗಿದೆ. ಈ ಬಗ್ಗೆ ಊರಿನ ಸಂಬಂಧಪಟ್ಟವರಿಂದ ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿದ್ದು ಅತೀ ಬೇಗನೆ ಆಗಬಹುದೆಂಬ ನಂಬಿಕೆಯಿದೆ. ಒಂದಂತು ಸತ್ಯ ಯಾವ ಕಾಲಕ್ಕೆ ಯಾವುದು ಆಗಬೇಕೆನ್ನುವುದು ದೈವ ನಿರ್ಣಯ. ದೈವಗಳ ಮತ್ತು ಬೈದೇರುಗಳ ನಿರ್ಣಯ ಯಾವ ರೀತಿ ಇದೆಯೆಂಬುದು ಯಾರಿಗೂ ತಿಳಿದಿಲ್ಲ. ಆದರೆ ಆಗುತ್ತೆ ಎನ್ನುವುದು ಸಾರ್ವಕಾಲಿಕ ಸತ್ಯ. ಗ್ರಾಮಸ್ಥರೆಲ್ಲ ಈ ಬಗ್ಗೆ ಉತ್ಸುಕತೆಯಿಂದ ಕಾಯುತ್ತಿದ್ದು ಎಲ್ಲರು ಒಂದು ಕಡೆ ಸೇರಿ ಈ ಬಗ್ಗೆ ಚರ್ಚಿಸಲು ಮಾತ್ರ ಬಾಕಿಯಿರುತ್ತದೆ. ಇಲ್ಲಿನ ಪಳೆಯುಳಿಕೆಗಳಾದ ದೈವಗಳ ದೈವಸ್ಥಾನ, ಬೈದೇರುಗಳ ಗರಡಿ, ದಂಬೆಕಲ್ಲು, ಶಕ್ತಿಕಲ್ಲು, ಆಯದ ಕಲ್ಲು, ತೀರ್ಥ ಬಾವಿ ಹೊರಗಿನಿಂದ ಅಲ್ಪಸ್ವಲ್ಪ ಕಾಣುತ್ತಿದ್ದು ಚಿತ್ರಣವನ್ನು ನೋಡುವಾಗ ಮೈ ರೋಮಾಂಚಣಗೊಳ್ಳುತ್ತದೆ. ಇಂದಿಗೂ ಅಲ್ಲಿರುವ ಶಕ್ತಿಗಳು ಭಕ್ತರ ಬರುವಿಕೆಗೆ ಕಾದಿದೆಯೋ ಎನ್ನುವಂತೆ ಭಾಸವಾಗುತ್ತಿದೆ.
ಕಾಪು , ಮೇ. 27 : ಸರಕಾರದಿಂದ ಕೊರೊನ ಸೋಂಕಿತ ವ್ಯಕ್ತಿ ಡಿಸ್ಚಾರ್ಜ್ ಬಗ್ಗೆ ಹೊಸ ಮಾರ್ಗಸೂಚಿ
Posted On: 27 May 2020, 11:21 PM
ಕಾಪು, ಮೇ 27: ಕೊರೋನ ಪರೀಕ್ಷಾ ವರದಿಯಲ್ಲಿನ ತಾಂತ್ರಿಕ ಗೊಂದಲದಿಂದ ಸೋಂಕಿತ ಉಡುಪಿ ಜಿಪಂ ಸ್ವಚ್ಛತಾ ಅಭಿಯಾನ ವಿಭಾಗದ ಸಿಬ್ಬಂದಿ, ಕಟಪಾಡಿ ಸರಕಾರಿಗುಡ್ಡೆಯ 30ರ ಹರೆಯದ ಯುವಕನನ್ನು ವರದಿ ಬಂದ ಎರಡು ದಿನಗಳ ಬಳಿಕ ಇಂದು ಮಧ್ಯಾಹ್ನ ವೇಳೆಗೆ ಉದ್ಯಾವರ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮೇ 17ರಂದು ರೋಗದ ಲಕ್ಷ್ಮಣಗಳು ಕಂಡುಬಂದಿದ್ದು, ಮೇ 19ಕ್ಕೆ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮೇ 24ರಂದು ಇವರ ವರದಿ ಪಾಸಿಟಿವ್ ಎಂಬುದಾಗಿ ಬಂದಿತ್ತು. ಆದರೆ ಫಲಿತಾಂಶ ಬರುವ ಸಮಯದಲ್ಲಿ ಇವರಲ್ಲಿ ಯಾವುದೇ ರೋಗದ ಲಕ್ಷ್ಮಣಗಳು ಇರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಟ್ರೂನಟ್ ಯಂತ್ರದ ಮೂಲಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ ನೆಗೆಟಿವ್ ಎಂಬುದಾಗಿ ವರದಿ ಬಂದಿತ್ತು. ಈ ತಾಂತ್ರಿಕ ಗೊಂದಲ ಮತ್ತು ಆ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿದರೆ ಸೋಂಕು ತಗಲಬಹುದು ಎಂಬ ಕಾರಣಕ್ಕಾಗಿ ಅವರನ್ನು ಮನೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಮೇ 27ರಂದು ಮತ್ತೊಮ್ಮೆ ಅವರ ಗಂಟಲು ದ್ರವದ ಪರೀಕ್ಷೆಯನ್ನು ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯನ್ನು ನಿರೀಕ್ಷಿಸ ಲಾಗುತ್ತಿದೆ. ವರದಿಯಲ್ಲಿ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ದಾಖಲಿಸ ಲಾಗುವುದು ಮತ್ತು ನೆಗೆಟಿವ್ ಬಂದರೆ ಮನೆಗೆ ಕಳುಹಿಸಲಾಗು ವುದು ಎಂದು ಕೋವಿಡ್-19 ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ. ಈ ಮಧ್ಯೆ ಈ ವ್ಯಕ್ತಿ ಈಗಾಗಲೇ ಸೋಂಕಿತ ಎಂಬುದಾಗಿ ಗುರುತಿಸಿ ಕೊಂಡಿರುವುದರಿಂದ ಸ್ಥಳೀಯರು ಆತಂಕ ಪಡಬಾರದು ಎಂಬ ಕಾರಣಕ್ಕೆ ಇಂದು ಮಧ್ಯಾಹ್ನ ವೇಳೆ ಅವರನ್ನು ಕೋವಿಡ್ ಆಸ್ಪತ್ರೆಯ ಬದಲು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತದ ಆದೇಶ ದಂತೆ ಸರಕಾರಿಗುಡ್ಡೆಯಲ್ಲಿ ಕಂಟೈನ್‌ಮೆಂಟ್ ವಲಯದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಸಂಬಂಧ ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಡಿಸ್ಚಾರ್ಜ್ ಬಗ್ಗೆ ಹೊಸ ಮಾರ್ಗಸೂಚಿ ಮೇ 26ರಂದು ಸರಕಾರದಿಂದ ಬಂದ ಹೊಸ ಮಾರ್ಗಸೂಚಿ ಪ್ರಕಾರ, ಯಾವುದೇ ರೋಗದ ಲಕ್ಷ್ಮಣಗಳಿಲ್ಲದೆ ಪಾಸಿಟಿವ್ ಬಂದ ವ್ಯಕ್ತಿಯನ್ನು ಏಳನೇ ದಿನಕ್ಕೆ ಮತ್ತೆ ಪರೀಕ್ಷಿಸಿದಾಗ ನೆಗೆಟಿವ್ ಬಂದರೆ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ. ಅದೇ ರೀತಿ ರೋಗದ ಲಕ್ಷ್ಮಣಗಳೊಂದಿಗೆ ಪಾಸಿಟಿವ್ ಬಂದ ವ್ಯಕ್ತಿಯಲ್ಲಿ ಏಳನೇ ದಿನಕ್ಕೆ ಯಾವುದೇ ರೋಗದ ಲಕ್ಷ್ಮಣ ಗಳು ಇಲ್ಲದಿದ್ದರೆ, 10ನೆ ದಿನಕ್ಕೆ ಪರೀಕ್ಷಿಸಿ, ನೆಗೆಟಿವ್ ಬಂದರೆ ಅಂತವರನ್ನು ಸಹ ಬಿಡುಗಡೆ ಮಾಡಬಹುದಾಗಿದೆ. ಒಂದು ವೇಳೆ ಸರಕಾರಿಗುಡ್ಡೆ ವ್ಯಕ್ತಿಯ ಈಗ ಕಳುಹಿಸಿರುವ ವರದಿ ನೆಗೆಟಿವ್ ಬಂದರೆ, ಮನೆಗೆ ಕಳುಹಿಸಲು ಈ ಹೊಸ ಮಾರ್ಗಸೂಚಿಯಂತೆ ಅವಕಾಶ ಇದೆ ಎಂದು ಕೋವಿಡ್-19 ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಜೂನ್ 1 ರಿಂದ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನದ ಅವಕಾಶವಿದೆ
Posted On: 27 May 2020, 01:14 AM
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಆಗಿರುವ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ಜೂನ್ 1ರಿಂದಲೇ ಆರಂಭಗೊಳ್ಳಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ರಾಜ್ಯದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿರುವ ಸುಮಾರು 36,000 ದೇವಾಲಯಗಳು ಸೋಮವಾರದಿಂದ ಬಾಗಿಲು ತೆರೆಯಲಿವೆ. ಎಲ್ಲಾ ದೇವಾಲಯಗಳಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಭಕ್ತರಿಗೆ ದೇವರ ದರ್ಶನ ಹಾಗೂ ಸೇವೆಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ದೇವಸ್ಥಾನಗಳನ್ನು ತೆರೆಯುವಂತೆ ಭಕ್ತರಿಂದ ಒತ್ತಡ ಬಂದಿತ್ತು. ಈ ಕುರಿತು ಮುಖ್ಯಮಂತ್ರಿಗಳಲ್ಲಿ ಚರ್ಚಿಸಿದಾಗ ಅವರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲೀಗ ದೇವಸ್ಥಾನಗಳನ್ನು ತೆರೆಯಲಾಗುತ್ತಿದೆ. ಆದರೆ ದೇವಸ್ಥಾನಗಳಲ್ಲಿ ಜಾತ್ರೆ ಹಾಗೂ ಸಮಾರಂಭಗಳನ್ನು ನಡೆಸುವುದಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ. ಇನ್ನು ಭಕ್ತರ ಅನುಕೂಲಕ್ಕಾಗಿ ರಾಜ್ಯದ 52 ದೇವಸ್ಥಾನಗಳಲ್ಲಿ ಆನ್ ಲೈನ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಭಕ್ತರು ತಮ್ಮ ಸೇವೆಗಳನ್ನು ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದ್ದು, ಇದರಿಂದಾಗಿ ಭಕ್ತರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ನಾಳೆಯಿಂದಲೇ ಆನ್ ಲೈನ್ ಬುಕ್ಕಿಂಗ್ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಕಾಪು : ನಾಳೆಯಿಂದ ತಾಲೂಕಿನ ಎಲ್ಲಾ ಸೆಲೂನ್'ಗಳು ಕಾರ್ಯ ನಿರ್ವಹಿಸಲಿವೆ
Posted On: 26 May 2020, 10:14 PM
ಕೊರೊನಾ ಸೋಂಕಿತ ಜಿಲ್ಲಾ ಪಂಚಾಯತ್ ಸಿಬ್ಬಂದಿ ಕಟಪಾಡಿಯ ಸೆಲೂನ್ ಗೆ ಹೋಗಿದ್ದರಿಂದ ಸಾರ್ವಜನಿಕರು ಆತಂಕಗೊಂಡ ಹಿನ್ನಲೆಯಲ್ಲಿ ಕಾಪು ವಲಯದ ಸೆಲೂನ್ ಗಳು ಮೇ 26 ರಂದು ಬಂದ್ ಮಾಡಲಾಗಿತ್ತು ಮತ್ತೆ ವೈದ್ಯರ ಸಲಹೆಯ ಮೇರೆಗೆ ಮೇ 27ರಿಂದ ತೆರಯಲು ನಿರ್ಧರಿಸಿದ್ದಾರೆ ಕೊರೊನಾ ಸೋಂಕಿತಾ ಜಿಲ್ಲಾ ಪಂಚಾಯತ್ ಸಿಬ್ಬಂದಿ ಕಟಪಾಡಿಯ ಸೆಲೂನ್ ಒಂದರ ಸಂಪರ್ಕಕ್ಕೆ ಬಂದಿದ್ದು ಸಾರ್ವಜನಿಕರು ಆತಂಕ ಗೊಂಡಿದ್ದರು. ಈ ಹಿನ್ನೆಲೆ ಸೆಲೂನ್ ಗಳನ್ನು ಬಂದ್ ಮಾಡಲು ಕಾಪು ಸವಿತಾ ಸಮಾಜ ನಿರ್ಧರಿಸಿತ್ತು. ನಿನ್ನೆ ಸಂಜೆ ಸಭೆ ನಡೆಸಿ ಸೆಲೂನ್ ಗಳನ್ನು ಬಂದ್ ಮಾಡಲು ತೀರ್ಮಾನಿಸಿದ್ದರು. ಇಂದು ಕಾಪು ತಾಲೂಕಿನ ಎಲ್ಲ ಸೆಲೂನ್ ಗಳನ್ನು ಬಂದ್ ಮಾಡಿದ್ದು ಈ ಕುರಿತು ವೈದ್ಯರ ಸಲಹೆಯ ಮೇರೆಗೆ ಸವಿತಾ ಸಮಾಜದ ಮುಖಂಡರು ಸೆಲೂನ್ ಗಳನ್ನು ಮತ್ತೆ ತೆರೆಯಲು ತೀರ್ಮಾನಿಸಿದ್ದಾರೆ
ಮಾಡೆಲಿಂಗ್ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಪ್ರತಿಭೆ ಕಾವ್ಯ ಅಂಚನ್ ಕಾಪು
Posted On: 25 May 2020, 09:34 AM
ಯಾಕೋ ಬಹಳ ದಿನಗಳ ನಂತರ ನಮ್ಮೂರಿನ ಪ್ರತಿಭೆಯನ್ನು ಗುರುತಿಸೋಣ ಅಂತ ಅನಿಸ್ತು ಅದಕ್ಕಾಗಿ ನಾನಿವತ್ತು ಒಂದು ಪ್ರತಿಭೆಯ ಬಗ್ಗೆ ಬರೆಯಲಿಕ್ಕೆ ಹೊರಟಿದ್ದೇನೆ. ಅಂದಹಾಗೆ ಈ ಪ್ರತಿಭೆಯ ಬಗ್ಗೆ ಕೆಲವರು ಕೇಳಿರಬಹುದು ಇನ್ನು ಕೆಲವರು ಕೇಳದೆ ಇರಬಹುದು. ಇತ್ತೀಚಿನ ದಿನಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ನಮ್ಮೂರಿನ ಹೆಮ್ಮೆಯ ಪ್ರತಿಭೆ ಕಾವ್ಯ ಅಂಚನ್ ಕಾಪು. ದಿವಂಗತ ವಿಜಯ ಬಿ ಅಂಚನ್ ಮತ್ತು ಶಕುಂತಲಾ ವಿ ಅಂಚನ್ ದಂಪತಿಗಳ ಎರಡು ಪುತ್ರಿಯರಲ್ಲಿ ಕಾವ್ಯ ಅಂಚನ್ ಮೊದಲಿಗರು ಹಾಗೂ ವೃಂದ ಅಂಚನ್ ಎರಡನೆಯವರು, ಇವರು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾವ್ಯ ಅಂಚನ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ದಂಡತೀರ್ಥ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಉಳಿಯಾರಗೋಳಿ ಕಾಪು ಮತ್ತು ಪ್ರೌಢಶಿಕ್ಷಣವನ್ನು ವಿದ್ಯಾವರ್ಧಕ ಪ್ರೌಢಶಾಲೆ ಪಾಂಗಾಳ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿ ಪೂರ್ಣಗೊಳಿಸಿದರು. ಪ್ರಸ್ತುತ ಕೆನರಾ ಕಾಲೇಜು ಮಂಗಳೂರು ಇಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಕಾವ್ಯ ಅಂಚನ್ ಇವರು ಇದುವರೆಗೂ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅವರು ಪಡೆದ ಪ್ರಶಸ್ತಿಗಳು.. ಸುದೀಕ್ಷಾ ಕಿರಣ್ ಸುವರ್ಣ ಇವರು ನಡೆಸಿದ, ಬಿರುವೆರ್ ಕುಡ್ಲ ಹಾಗೂ ಎನ್, ಬಿ ಮಾಡೆಲ್ ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆದ ಮಿಸ್ ಬಿಲ್ಲವ 2019 ವಿಜೇತೆ. ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ ಫಸ್ಟ್ ರನ್ನರ್, ಬೆಂಗಳೂರಿನಲ್ಲಿ ವಿಜಯಕರ್ನಾಟಕದ ನೇತೃತ್ವದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಕರ್ನಾಟಕದ ಎಲ್ಲಾ ಜಿಲ್ಲೆಗಳ ಒಟ್ಟು 36 ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದರು, ಆಯ್ಕೆಯಾದ 36 ಸ್ಪರ್ಧಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲು ಕಾವ್ಯ ಅಂಚನ್ ಕೂಡ ಒಬ್ಬರಾಗಿದ್ದರು, ಸ್ಪರ್ಧೆಯ ದ್ವಿತೀಯ ಬಹುಮಾನವನ್ನು ಸ್ಯಾಂಡಲ್ವುಡ್ ಸ್ಟಾರ್ ನಟರಾದ ಶ್ರೀಮುರಳಿ, ರಿಷಬ್ ಶೆಟ್ಟಿ, ಅನುಪ್ ಭಂಡಾರಿ, ಹಾಗೂ ರಾಗಿಣಿ ಇವರಿಂದ ವಿಜಯ ಕರ್ನಾಟಕ ನವತಾರೆ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಗ್ರಾವಿಟಿ ಡ್ಯಾನ್ಸ್ ಕ್ರಿವ್ ಕಾಪು ಇದರ ಸದಸ್ಯೆಯಾಗಿದ್ದು ಹತ್ತು ಹಲವಾರು ಕಡೆಗಳಲ್ಲಿ ನಡೆದ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಡೆಲ್ಲಿ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ನೃತ್ಯ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿರುವ ಇವರು ನೃತ್ಯ ನಿರ್ದೇಶನವನ್ನು ಕೂಡ ಮಾಡುತ್ತಾರೆ. ಕಳೆದ ಐದಾರು ವರ್ಷಗಳಿಂದ ಹಲವಾರು ಶಾಲೆಯ ಮಕ್ಕಳಿಗೆ ನೃತ್ಯ ತರಬೇತಿ ಮತ್ತು ನೃತ್ಯ ನಿರ್ದೇಶನವನ್ನು ಮಾಡುತ್ತಿದ್ದಾರೆ. ಕಾಪು ಹೊಸ ಮಾರಿಗುಡಿ ಹತ್ತಿರದಲ್ಲಿ ಇವರ ಮನೆ ಇರುವುದರಿಂದ, ಕಾಪು ಮಾರಿಯಮ್ಮನನ್ನು ಆರಾಧ್ಯ ದೇವರಾಗಿ ಪೂಜಿಸುತ್ತಾರೆ, ಇನ್ನು ಯಾವುದೇ ಕೆಲಸ ಮಾಡಬೇಕಾದರೂ ಮೊದಲು ಕೊರಗಜ್ಜನಿಗೆ ಭಕ್ತಿಯಿಂದ ಕೈ ಮುಗಿಯುತ್ತಾರೆ, ಕುಲದೇವರಾದ ಬೆರ್ಮೆರ್ ಬೈದೆರ್ಲು ಆಶೀರ್ವಾದವು ಸದಾ ಅವರ ಮೇಲಿದೆ ಅನ್ನುತ್ತಾರೆ.. ಇನ್ನು ಇವರು ಮಾಡಿರುವ ಸಾಧನೆ ಬಗ್ಗೆ ಕೇಳಿದರೆ, ಗುರುಹಿರಿಯರ ದೈವ-ದೇವರ ಭಯಭಕ್ತಿಯಿಂದ ಮತ್ತು ನಾವು ಮಾಡುವ ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯ ಅನ್ನುತ್ತಾರೆ, ದೈವ ದೇವರ ಅನುಗ್ರಹದಿಂದ ಗುರು-ಹಿರಿಯರ ಆಶೀರ್ವಾದದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರ ಬೆಳೆಯಲಿ ಎಂದು ಆಶಿಸುತ್ತೇನೆ. ಬರಹ : ✍ ವಿಕ್ಕಿ ಪೂಜಾರಿ ಮಡುಂಬು
ಎಲ್ಲೂರಿನ ಶಿಕ್ಷಕ ವೈ. ವಿ .ಸುಬ್ಬರಾವ್ ಇನ್ನಿಲ್ಲ
Posted On: 25 May 2020, 08:07 AM
ಎಲ್ಲೂರು , ಮೇ 24 : ಎಲ್ಲೂರಿನ ನಿತ್ಯ ಸಹಾಯ ಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಅವಧಿಗೆ ಶಿಕ್ಷಕರಾಗಿ , ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿದ್ದ ಜನಾನುರಾಗಿ ಶಿಕ್ಷಕ ವೈ.ವಿ .ಸುಬ್ಬರಾವ್ (83) ಅವರು ಮೇ 23 ರಂದು ಅಲ್ಪಕಾಲದ ಅಸೌಖ್ಯದಿಂದ ಎಲ್ಲೂರಿನ ಸ್ವಗೃಹ 'ಧವಳ'ದಲ್ಲಿ ನಿಧನರಾದರು . ಅವರು ಪತ್ನಿ , ಓರ್ವ ಪುತ್ರಿ , ಇಬ್ಬರು ಪುತ್ರರನ್ನು ಹಾಗೂ ಬಹು ಸಂಖ್ಯೆಯ ಶಿಷ್ಯರನ್ನು ಅಗಲಿದ್ದಾರೆ . ಐವತ್ತೆಂಟು ವರ್ಷಗಳಷ್ಟು ಹಿಂದೆ ಪ್ರಾರಂಭವಾಗಿದ್ದು ಈ ಪರಿಸರದಲ್ಲಿ ರಚನಾತ್ಮಕ ಕೆಲಸಗಳಿಂದ ಹಾಗೂ ಮಾದರಿ ಕಾರ್ಯವೈಖರಿಗಳಿಂದ ಪ್ರಸಿದ್ಧವಾಗಿದ್ದ ,ಹಲವು ಸಾಧಕರನ್ನು - ಪ್ರತಿಭಾನ್ವಿತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದ ಎಲ್ಲೂರು ಯುವಕ ಮಂಡಲದ ಸ್ಥಾಪಕ ಪದಾಧಿಕಾರಿಗಳಲ್ಲೊಬ್ಬರಾಗಿದ್ದ ಸುಬ್ರಾಯರು ಮಂಡಲದಲ್ಲಿ ಹಲವು ಜವಾಬ್ದಾರಿಯ ಹುದ್ದೆಗಳನ್ನು ನಿರ್ವಹಿಸಿದ್ದರು . ಯುವಕ ಮಂಡಲದ ಸಹ ಸಂಸ್ಥೆಯಾಗಿ 1972ರಲ್ಲಿ ಸಂಘಟಿತವಾದ ಪಂಚಾಕ್ಷರೀ ಯಕ್ಷಗಾನ ಮಂಡಳಿಯ ಕಲ್ಪನೆ ಮತ್ತು ಉಪಕ್ರಮದಲ್ಲಿ ಶ್ರಮಿಸಿದವರು. ಸ್ಥಳೀಯ ಹವ್ಯಾಸಿ ಕಲಾವಿದರಿಗೆ ಮಾದರಿ ಹಿರಿಯ ಕಲಾವಿದರಾಗಿದ್ದರು. ಸುಬ್ರಾಯರು ಎಲ್ಲೂರಿನ ವಿಶ್ವೇಶ್ವರ ದೇವಳದಲ್ಲಿ ಆಕಾಲದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಪ್ರಸಿದ್ಧ ಅರ್ಥವಾದಿ ಪೊಲ್ಯ ದೇಜಪ್ಪ ಶೆಟ್ಟಿಯವರ ಗರಡಿಯಲ್ಲಿ ಪಳಗಿದ್ದ ಸಾಂಪ್ರದಾಯಿಕ ಶೈಲಿಯ ಅರ್ಥವಾದಿಯಾಗಿ ಹೆಸರುವಾಸಿಯಾಗಿದ್ದರು . ಪಂಚಾಕ್ಷರೀ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿಯೂ ಪರಿಶ್ರಮ ಸಾಧಿಸಿದ್ದರು .ಪಂಚಾಕ್ಷರೀ ಮಕ್ಕಳ ಮೇಳಕ್ಕೂ ಪ್ರೋತ್ಸಾಹ ಕೊಡುತ್ತಿದ್ದರು . ಸುಬ್ರಾಯರ ನಿಧನಕ್ಕೆ ಎಲ್ಲೂರಿನ ಯುವಕ ಮಂಡಲ , ಪಂಚಾಕ್ಷರಿ ಯಕ್ಷಗಾನ ಮಂಡಳಿ ಮತ್ತು ಮಕ್ಕಳ ಮೇಳಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ .
ಪತ್ತನಾಜೆಯ ಸಂದರ್ಭದಲ್ಲಿ ಕೆ ಎಲ್ ಕುಂಡಂತಾಯರಿಂದ ಕೃಷಿ ಸಂಸ್ಕೃತಿಯ ಪರಿಚಯ
Posted On: 24 May 2020, 11:41 AM
"ಪತ್ತನಾಜೆ' ಪೂರ್ವೋತ್ತರ" 'ಪೃಥ್ವೀ ಗಂಧವತೀ' 'ಪತ್ತನಾಜೆ' ಎಂದರೆ ಆಟ. ಕೋಲ, ಬಲಿ, ಅಂಕ, ಆಯನಗಳಿಗೆ ಅಲ್ಪವಿರಾಮ ಎಂಬ ನಂಬಿಕೆ ಸರಿಯಾದುದೇ . ಆದರೆ ಸಾಕು ಸಂಭ್ರಮ - ಗೌಜಿ ಗದ್ದಲ , ಉತ್ಸವಗಳ ಗುಂಗಿನಿಂದ ಹೊರಗೆ ಬಾ.....ತೊಡಗು... ಕೃಷಿಗೆ ಎಂಬ ಎಚ್ಚರಿಕೆಯೂ 'ಪತ್ತನಾಜೆ'ಯ ನೆನಪಿನಲ್ಲಿದೆ . ಆಚರಣೆಗಳಿಲ್ಲದಿದ್ದರೂ ಜೀವನಾಧಾರವಾದ ಬೇಸಾಯಕ್ಕೆ ಪ್ರವೃತ್ತನಾಗು ಎಂಬ ನಿರ್ದೇಶನ ಪತ್ತನಾಜೆ ಒದಗಿ ಬರುವ ಸಂದರ್ಭದಲ್ಲಿ ನಿಚ್ಚಳ . ತುಳುವರ ಬೇಶ ತಿಂಗಳ ಹತ್ತನೇ ದಿನವೇ ಪತ್ತನಾಜೆ .ಸೌರ ಪದ್ಧತಿಯ ಎರಡನೇ ತಿಂಗಳು ವೃಷಭ .ವೃಷಭ ಎಂದರೆ ಬೇಶ . 'ಬೇಶ' ತಿಂಗಳು ತನ್ನ ವಿಶೇಷಗಳಿಂದ , ಪುರಾತನ ಒಪ್ಪಿಗೆಗಳೊಂದಿಗೆ ಬಹಳ ಮುಖ್ಯ ತಿಂಗಳು . 'ಬೇಶದ ತನು - ಬೇಶದ ತಂಬಿಲ' ತುಳುವರಿಗೆ ಆಚರಣೆಗಳ ಪರ್ವಕಾಲ .'ಬೆನ್ನಿ' ಅಥವಾ 'ಬೇಸಾಯ'ಕ್ಕೆ ತೊಡಗುವ ಮುನ್ನ ತಮ್ಮ ಮೂಲಸ್ಥಾನಗಳಿಗೆ ಹೋಗಿ ಭೂಮಿ ಪುತ್ರನಾದ ಈ ನೆಲದ ಸರ್ವಾಧಿಕಾರಿ 'ನಾಗನಿಗೆ' - ತನು ಮಯಿಪಾದ್ ತಂಬಿಲಕಟ್ಟಾದ್ , ದೈವಗಳಿಗೆ ಭೋಗ ಕೊಟ್ಟು ಬಂದು ಬೇಸಾಯಕ್ಕೆ ಆರಂಭಿಸುವ ಸಂಪ್ರದಾಯ ತುಳುವರದ್ದಾಗಿತ್ತು. ಈಗ ಕಾಲ ಬದಲಾಗಿದೆ , ಮನಸ್ಸು ಬಂದಾಗ 'ಮೂಲತಾನ'ಗಳಿಗೆ ಹೋಗಿ 'ನಾಗ - ದೈವ'ಗಳಿಗೆ ಸೇವೆ ಸಲ್ಲಿಸುವ ಆರ್ಥಿಕ ಸಬಲತೆ ಇದೆ - ಸ್ವಂತ ವಾಹನ ಸೌಲಭ್ಯಗಳಿವೆ . ಬದಲಾಗುತ್ತಿರುವ ಕಾಲ - ಸಂದರ್ಭ - ಮನೋಧರ್ಮಗಳಿಂದಾಗಿ ತಮ್ಮ ಮೂಲಸ್ಥಾನ ತೊರೆದು ಬದುಕುಕಟ್ಟುವ ಉದ್ದೇಶದಿಂದ ಬೇಸಾಯದ ಅವಕಾಶ ಬಯಸಿ ದೂರದ ಪ್ರದೇಶಗಳಿಗೆ ಹೋಗಿ ಬೇಸಾಯದ ಜೀವನ ಆರಂಭಿಸಿದ್ದ ಮಾನವ ಮನೋಧರ್ಮಕ್ಕೆ ಶತಮಾನಗಳೇ ಸಂದು ಹೋದುವು. ಈ ಪರಿಸ್ಥಿತಿಯಲ್ಲೂ ಬೇಸಾಯಕ್ಕೆ ಆರಂಭಿಸುವ ಮುನ್ನ ಮೂಲಕ್ಕೆ ಹೋಗುವುದು ಶಿಷ್ಟಾಚಾರವಾಯಿತು . ವರ್ಷಕ್ಕೆ ಒಂದೆರಡು ಬಾರಿಯಾದರೂ ಮೂಲಕ್ಕೆ ಸಂದರ್ಶನ ನೀಡುವ ಆಸ್ತಿಕರು ಬೇಶದಲ್ಲಿ ಖಂಡಿತ ಹೋಗುತ್ತಾರೆ . ಅದು ಪತ್ತನಾಜೆಯ ಆಸುಪಾಸಿನಲ್ಲಿರುತ್ತದೆ . ಮಕರ - ಪುಯಿಂತೆಲ್ ತಿಂಗಳ ಕೊನೆಯ ಮೂರು ದಿನಗಳ "ಕೆಡ್ಡಸ" ಆಚರಣೆಯಲ್ಲಿ ಭೂಮಿದೇವಿ ಪುಷ್ಪವತಿಯಾದಳು ಎಂಬ ನಂಬಿಕೆ ನಮ್ಮದು .ಅಂದರೆ ನಿಸರ್ಗದಲ್ಲಿ ಅದ್ಭುತ ಬದಲಾವಣೆಯಾಗುವ ಕಾಲವದು .ಹೆಣ್ಣು ಮಗಳು 'ಪುಷ್ಪವತಿ' ಯಾದಳೆಂದರೆ 'ಫಲವತಿ'ಯಾಗಲು ಸಿದ್ಧಳಾದಳು ಎಂದಲ್ಲವೇ ಅರ್ಥ . ಪುಯಿಂತೆಲ್ - ಮಕರ ತಿಂಗಳಲ್ಲೆ ಪ್ರಕೃತಿ ಬದಲಾಗಲು ತೊಡಗುತ್ತದೆ , ಕೃಷಿಯ ಸಣ್ಣ ಪುಟ್ಟ ತಯಾರಿ ನಡೆಯಲಾರಂಭವಾಗುತ್ತದೆ . 'ಮಾಯಿ - ಕುಂಭ' ತಿಂಗಳು ಮುಗಿಯುತ್ತಿರುವಂತೆ 'ಸುಗ್ಗಿ - ಮೀನ' ತಿಂಗಳು . ಬೆಳೆದ ಗೆಣಸು ಮುಂತಾದುಗಳನ್ನು ಅಗೆದು ತೆಗೆಯದಿದ್ದರೆ ಅವು 'ಮಾಯಿ ತಿಂಗಳಲ್ಲಿ ಮಾಯವಾಗುತ್ತವಂತೆ" . ಹೀಗೊಂದು ಒಡಂಬಡಿಕೆ . ಮುಂದೆ ಹಂತಹಂತವಾಗಿ ಬೇಸಾಯಕ್ಕೆ ಅಣಿಯಾಗುವ ರೈತ ಸುಗ್ಗಿ ತಿಂಗಳು ಮುಗಿದು ಪಗ್ಗು ತಿಂಗಳ 'ಮೊದಲ ದಿನ - ತಿಂಗೊಡೆ' ಮೊದಲ ಹಬ್ಬ ಯುಗಾದಿ ಅಥವಾ ಇಗಾದಿ - ವಿಷು ಆಚರಿಸುತ್ತಾನೆ .ಇಗಾದಿ ಆಚರಣೆ ಸರಳವಾದುದು ,ಚೌತಿ , ದೀಪಾವಳಿಗಳಂತೆ ಸಂಭ್ರಮಗಳಿಲ್ಲ .ಆದರೆ ಕೃಷಿಕನಿಗೆ "ಪುಂಡಿಬಿತ್ತ್ ಪಾಡುನ - ನಾಲೆರು ಮಾದಾವುನ" ಕೃಷಿ ಚಕ್ರವನ್ನು ಮತ್ತೆ ಆರಂಭಿಸುವ ಕ್ರಮವಿದೆ . ಮುಂದೆ 'ಪಗ್ಗು ತಿಂಗಳ ಹದಿನೆಂಟು ಹೋಗುವ ದಿನ' ತನ್ನ ಕೃಷಿ ಭೂಮಿಗೆ ಬೇಕಾಗುವಷ್ಟು 'ನೇಜಿ' ಹಾಕುವ ಸಾಂಪ್ರದಾಯಿಕ ಕ್ರಮವಿತ್ತು . ಕೃತ್ತಿಕಾ ಮಳೆಯ ಕಾಲ ಆರಂಭವಾಗುತ್ತದೆ. ಈ ಮಳೆ ಬರಬಾರದು "ಕಿರ್ತಿಕೆ ಕಾಯೊಡು"- ಕೃತ್ತಿಕೆಯ ಬಿಸಿಲಿಗೆ ಭೂಮಿ ಸುಡಬೇಕು - ಬಿಸಿಗೆ ಭೂಮಿ 'ಬಿರಿಯ' ಬೇಕು. ಭಾಗೀರಥೀ ಜನ್ಮದಿನ' ಒದಗಿಬರುತ್ತದೆ. ಮಳೆಬಂದಾಗ ಭೂಮಿ ತನ್ನೊಳಗೆ ಮಳೆ ನೀರು ಇಳಿಸಿಕೊಂಡು - ಹಾಕುವ ಗೊಬ್ಬರ ಮತ್ತು ಸಿದ್ಧಗೊಳಿಸಿದ ಸುಡುಮಣ್ಣುಗಳಿಂದಾಗಿ ( ತೂಟಾನ್ - ತೂಂಟಾನ್) ಫಲವತ್ತಾದ ಕ್ಷೇತ್ರವಾಗುತ್ತದೆ , ಮುಂದೆ ಬೀಜಾಂಕುರವಾದಾಗ ಭೂಮಿದೇವಿ ತನ್ನ ಫಲವಂತಿಕೆಯನ್ನು ವ್ಯಕ್ತಗೊಳಿಸುತ್ತಾಳೆ . ಬಿಸಿಲ ಬೇಗೆಗೆ ಸುಟ್ಟ ಗದ್ದೆಗೆ ಮೊದಲ ಮಳೆ ನೀರು ಬಿದ್ದಾಗ ಒಂದು ಅಪೂರ್ವ ಪರಿಮಳ ಭೂಗರ್ಭದಿಂದ ಹೊರಬರುತ್ತದೆ . ಅದಕ್ಕಲ್ಲವೇ "ಪೃಥ್ವೀ ಗಂಧವತೀ" ಎಂದರು ನಮ್ಮ ಪೂರ್ವಸೂರಿಗಳು .ಇದು ಮಣ್ಣಿನ ಪರಿಮಳ ,ಇದೇ ಕಾರಣವಾಗಿ ಬೆನ್ನಿ - ಬೇಸಾಯ ಸಮೃದ್ಧವಾಗಿತ್ತು ಒಂದು ಕಾಲದಲ್ಲಿ . ಈಗ ಮಣ್ಣಿಗೆ ಅಥವಾ ಪೃಥ್ವಿಗೆ ಗಂಧವಿದೆಯಾ ...ಅದು ಅಷ್ಟು ಸುವಾಸನೆಯುಳ್ಳದ್ದಾ ...ಎಂದು ಕೇಳುವವರಿದ್ದಾರೆ . ಆದರೆ ಬೇಸಾಯವೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಣ್ಣಿನ ಪರಿಮಳ ಗ್ರಹಿಸುತ್ತಿದ್ದ ಮಾನವ .ಆಗ ಅದೇ ಸುಗಂಧವಾಗಿತ್ತು , ಏಕೆಂದರೆ ಭೂಮಿ ತಾಯಿಯಾಗಿದ್ದಳು .ಜಡವಾದ ಭೂಮಿಯೊಂದಿಗೆ ಎಂತಹ ಭಾವನಾತ್ಮಕ ಸಂಬಂಧ. ಹಾಗೆ ಬಂದಿರಬೇಕು "ಮಣ್ಣ್ ಡ್ ಪೊಂರ್ಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊಂರ್ಬಿನಾಯೆ ಮಣ್ಣ್ ತಿನುವೆ" ಎಂಬ ಗಾದೆ . ಪತ್ತನಾಜೆ ಮುಗಿಸಿ ಬೇಸಾಯಕ್ಕೆ ಹೊರಡುವ ಸಂದರ್ಭ ಭೂಮಿ ,ಬೇಸಾಯ , ನಮ್ಮ - ಮಣ್ಣಿನ ಸಂಬಂಧ ಮಣ್ಣಿನ ಸತ್ಯದ ದರ್ಶನವಾಗಲು ಅಥವಾ 'ಸತ್ಯ ನೆಗತ್ತ್ ದ್' ತೋಜೊಡ್ಡ ' ಪತ್ತನಾಜೆ ಪರ್ವಕಾಲ , ಸುಸಂದರ್ಭ . ಇನ್ನು ನಮಗೆ "ಬೆನ್ನಿದ ಮಗೆ" - ಬೇಸಾಯಗಾರ ಸಿಗುವುದು ಆಟಿ ತಿಂಗಳಲ್ಲಿ . ಬಳಿಕ ಅಷ್ಟಮಿ ,ಚೌತಿ ಆಚರಣೆಗಳಲ್ಲಿ . ಅನಂತರ ತೆನೆಕಟ್ಟುವ ಸಂಭ್ರಮದಲ್ಲಿ , ನವರಾತ್ರಿಯ ವೇಳೆ .ಆದರೆ ನಗುಮೊಗದಿಂದ ಬೇಸಾಯಗಾರ ಮುಖಾಮುಖಿಯಾಗುವುದು ದೀಪಾವಳಿಯ ಗೌಜಿ ಗದ್ದಲದಲ್ಲಿ ಬೆಳಗುವ ಸೊಡರಿನಲ್ಲಿ ,ಆಗ ಧಾನ್ಯಲಕ್ಷ್ಮೀ ಮನೆ ತುಂಬಿರುತ್ತಾಳೆ .ಆತ ಸಂತೃಪ್ತನಾಗಿರುತ್ತಾನೆ ."ಕೃಷಿಯಿದ್ದಲ್ಲಿ ದುರ್ಭಿಕ್ಷೆ ಇಲ್ಲವಂತೆ" ಪತ್ತನಾಜೆ ಎಂದು ಆರಂಭಿಸಿ ದೀಪಾವಳಿಯವರೆಗೆ ಹೋಗ ಬೇಕಾಯಿತು . ಭೂಮಿ ,ಕೃಷಿ ಈ ಸಂಬಂಧ ಮತ್ತೆ ಗಾಢವಾಗಬೇಕೆಂಬುದೇ ಆಶಯ .ಹಾಗೆ ಎಲ್ಲಿಂದಲೋ ಹೊರಟು ಬೇಸಾಯಗಾರನಲ್ಲಿ ಮಾತನಾಡಿ ,ನಿಸರ್ಗದ ವಿಸ್ಮಯಗಳನ್ನು ಅವಲೋಕಿಸುತ್ತಾ , ಮಳೆಯ ಅನಿವಾರ್ಯತೆಯನ್ನು ಹೇಳುತ್ತಾ 'ಕೃಷಿ ಸಂಸ್ಕೃತಿ"ಯನ್ನು ಪರಿಚಯಿಸುವ ಪ್ರಯತ್ನಮಾಡಿದೆ . ಬರಹ : ✍️ ಕೆ.ಎಲ್ .ಕುಂಡಂತಾಯ
ಕೋವಿಡ್-19 ಪ್ರಕರಣಗಳನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜು
Posted On: 23 May 2020, 03:35 PM
ಉಡುಪಿ ಮೇ 23 (ಕರ್ನಾಟಕ ವಾರ್ತೆ) ಉಡುಪಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಇದುವರೆಗೆ 8010 ಮಂದಿ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಂಡುಬರುವ ಕೋವಿಡ್ -19 ಪಾಸಿಟಿವ್ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಗೆ ಇದುವರೆಗೆ , ಮಹಾರಾಷ್ಟçದಿಂದ 7226, ತಮಿಳುನಾಡು ನಿಂದ 74, ತೆಲಂಗಾಣದಿAದ 425, ಆಂಧ್ರಪ್ರದೇಶದಿAದ 43, ಗೋವಾದಿಂದ 53, ಗುಜರಾತ್ ನಿಂದ 42, ಮಧ್ಯಪ್ರದೇಶದಿಂದ 1, ದೆಹಲಿಯಿಂದ 26, ಹರಿಯಾಣದಿಂದ 1, ಚಂಡೀಗಢದಿAದ 1, ಒರಿಸ್ಸಾದಿಂದ 1, ಪಶ್ಚಿಮ ಬಂಗಾಳ 6, ರಾಜಾಸ್ಥಾನ 6, ಪಂಜಾಬ್ 12 , ಕೇರಳ 93 ಸೇರಿದಂತೆ ಒಟ್ಟು 8010 ಮಂದಿ ಅಗಮಿಸಿದ್ದು, ಇವರೆಲ್ಲರನ್ನೂ ಕ್ವಾರಂಟೈನ್ ಮಾಡಿದ್ದು, ಜಿಲ್ಲೆಯ ಬಹುತೇಕ ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗಿವೆ ಎಂದು ಡಿಸಿ ತಿಳಿಸಿದರು. ಕ್ವಾರಂಟೈನ್ ಕೇಂದ್ರದಲ್ಲಿರುವವರ ಗಂಟಲು ದ್ರವದ ಮಾದರಿಯನ್ನು, ಪರೀಕ್ಷೆಗೆ ಕಳುಹಿಸಬೇಕಿದ್ದು, ಪರೀಕ್ಷಾ ವರದಿ ಬರುವವರೆಗೂ, 14 ದಿನದ ಅವಧಿ ಮುಗಿದಿದ್ದರೂ ಸಹ ಯಾರನ್ನೂ ಕೇಂದ್ರದಿAದ ಬಿಡುಗಡೆಗೊಳಿಸುವುದಿಲ್ಲ ಎಂದು ಡಿಸಿ ಜಿ.ಜಗದೀಶ್ ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾದ್ಯತೆಯಿದ್ದು, ಇದಕ್ಕಾಗಿ ಈಗಾಗಲೇ ಇರುವ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಜೊತೆಯಲ್ಲಿ ತಾಲೂಕು ಆಸ್ಪತ್ರೆ ಕುಂದಾಪುರದಲ್ಲಿ 125 ಹಾಸಿಗೆಗಳ ಕೋವಿಡ್ ಪ್ರತ್ಯೇಕ ಬ್ಕಾಲ್ ಆರಂಬಿಸಲಾಗಿದ್ದು, ತಾಲೂಕು ಆಸ್ಪತ್ರೆ ಕಾರ್ಕಳದಲ್ಲಿ 75 ಹಾಸಿಗೆಗಳ ಸೌಲಭ್ಯ, ಎಸ್.ಡಿ.ಎಂ ಉದ್ಯಾವರದಲ್ಲಿ 90 ಹಾಸಿಗೆಗಳ ಸೌಲಭ್ಯ, ಭುವನೇಂದ್ರ ಹಾಸ್ಟೆಲ್ ಕಾರ್ಕಳದಲ್ಲಿ 58 ಹಾಸಿಗೆಗಳ ಚಿಕಿತ್ಸಾ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈ ಕೇಂದ್ರಗಳಿಗೆ ಅಗತ್ಯವಿರುವ ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಇತರೆ ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಚಿಕಿತ್ಸೆಗೆ ಅಗತ್ಯವಿರುವ ಪಿಪಿಇ ಕಿಟ್, ಮಾಸ್ಕ್ ಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಪರಿಕರಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಜಿಲ್ಲೆಯಲ್ಲಿ ಪ್ರಸ್ತುತ ಕೆಎಂಸಿ ಯಲ್ಲಿ ಮಾತ್ರ ಪ್ರಯೋಗಾಲಯ ಇದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಮಾದರಿಯನ್ನು ಪರೀಕ್ಷೆ ಮಾಡಬೇಕಿದ್ದು, ಇದಕ್ಕಾಗಿ ಮಂಗಳೂರಿನ ವೆನ್ಲಾಕ್ , ಕೆಎಂಸಿ ಮತ್ತು ಯೆನಪೋಯ ಹಾಗೂ ಶಿವಮೊಗ್ಗ ಲ್ಯಾಬ್ ಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗುತ್ತಿದೆ ಎಂದು ಡಿಸಿ ಹೇಳಿದರು. ಕ್ವಾರಂಟೈನ್ ಗಳಲ್ಲಿ ಇರುವವರು ಕೇಂದ್ರದಿAದ ಹೊರಬರುತ್ತಿರುವ ಬಗ್ಗೆ ಮಾಹಿತಿಯಿದ್ದು, ಅಂತಹವರ ವಿರುದ್ದ ಸೆಕ್ಷನ್ 188 ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು, ಪಾಸ್ ಇಲ್ಲದೇ ಜಿಲ್ಲೆಯನ್ನು ಅಕ್ರಮವಾಗಿ ಪ್ರವೇಶಿಸುವವರ ವಿರುದ್ದ ಎಫ್.ಐ.ಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ , ಕ್ವಾರಂಟೈನ್ ಕೇಂದ್ರಗಳಲ್ಲಿರುವವರಿಗೆ ಮನೆಯಿಂದ ಊಟ ನೀಡಲು ಅವಕಾಶವಿಲ್ಲ ಆದರೆ ತೀರಾ ಅನಿವಾರ್ಯವಿದ್ದಲ್ಲಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಡಿಸ್ಪೋಸಬಲ್ ಕಂಟೇನರ್ ಗಳಲ್ಲಿ ಮಾತ್ರ ಮನೆಯಿಂದ ಊಟ ನೀಡಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಉಪಸ್ಥಿತರಿದ್ದರು.
ಮುಂಗಾರು ವಿಕೋಪ ತಡೆಗೆ ಮುಂಜಾಗ್ರತೆ ವಹಿಸಿ : ಅಪರ ಜಿಲ್ಲಾಧಿಕಾರಿ
Posted On: 22 May 2020, 10:03 PM
ಉಡುಪಿ ಮೇ 23 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯ ಸಮಯದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಮಾನವ ಜೀವ ಹಾನಿ , ಜಾನುವಾರು ಹಾಗೂ ಆಸ್ತಿ ಹಾನಿಗಳನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ವಿಕೋಪ ಸಂಭವಿಸಿದ ಸಮಯದಲ್ಲಿ ಸಾರ್ವಜನಿಕರ ರಕ್ಷಣೆಗೆ ತುರ್ತಾಗಿ ಸ್ಪಂದಿಸುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಸೂಚಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಮುಂಗಾರು ಮಳೆ ವಿಪತ್ತು ನಿರ್ವಹಣೆ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಚರಂಡಿಗಳಲ್ಲಿನ ಹೂಳು ತೆಗೆದು , ಮಳೆ ನೀರು ಸರಾಗವಾಗಿ ಹರಿದು ಹೋಗುಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ತಮ್ಮ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳ ಕುರಿತು ಸಂಬಂದಪಟ್ಟ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅವುಗಳನ್ನು ತೆರವುಗೊಳಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅಪರ ಜಿಲ್ಲಾಧಿಕಾರಿ, ಪ್ರಾಕೃತಿಕ ವಿಕೋಪ ನಿಧಿಯಿಂದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಮರ ಕತ್ತರಿಸುವ ಯಂತ್ರಗಳನ್ನು ಒದಗಿಸಲಾಗುವುದು ಎಂದರು. ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ತಮ್ಮ ತಾಲೂಕು ವ್ಯಾಪ್ತಿಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೂಡಲೇ ಸಭೆ ನಡೆಸಿ, ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಮತ್ತು ಸ್ಥಳೀಯ ನುರಿತ ಈಜುಗಾರರು, ಮುಳುಗು ತಜ್ಞರ ಪಟ್ಟಿಯನ್ನು ಸರಿಯಾದ ಮೊಬೈಲ್ ಸಂಖ್ಯೆಯೊಂದಿಗೆ ಸಿದ್ದವಾಗಿಟ್ಟುಕೊಂಡು, ತುರ್ತು ಸಂದರ್ಭಗಳಿಗಾಗಿ ಬೋಟುಗಳನ್ನು ಸಿದ್ದವಾಗಿಟ್ಟುಕೊಳ್ಳುವಂತೆ ಮತ್ತು ಹಾಗೂ ವಿಕೋಪ ಸಂದರ್ಭದಲ್ಲಿ ಹಾನಿಯಾದ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ, ನಷ್ಠದ ವರದಿ ಸಿದ್ದಪಡಿಸಿ , ಸಂತ್ರಸ್ಥರಿಗೆ ನಿಗಧಿತ ಅವಧಿಯೊಳಗೆ ಆದಷ್ಟು ಶೀಘ್ರದಲ್ಲಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಸೂಚಿಸಿದರು. ಕಡಲಕೊರೆತ ಸಂಭವಿಸುವ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬಂದರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅಪರ ಜಿಲ್ಲಾಧಿಕಾರಿ ಈ ಕುರಿತಂತೆ ನಡೆಯುತ್ತಿರುವ ಕಾಮಗಾರಿಗಳ ಕುರಿತು ಎಡಿಬಿ ಮತ್ತು ಬಂದರು ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಅತ್ಯಗತ್ಯವಾದ ಕ್ರಮ ಕೈಗೊಂಡು ಸಮಸ್ಯೆಗಳು ಬಾರದಂತೆ ಎಚ್ಚರವಹಿಸಿಬೇಕು ಹಾಗೂ ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸಿರುವ ಹಲಗೆಗಳನ್ನು ತೆಗೆಯುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿನ ಸ್ಥಗಿತಗೊಂಡಿರುವ ಮತ್ತು ಕಾರ್ಯ ನಿರ್ವಹಿಸುತ್ತಿರುವ ಕಲ್ಲುಕೋರೆಗಳಿಗೆ ಸೂಕ್ತ ತಡೆ ಬೇಲಿ ಹಾಕಿ , ಸೂಚನಾ ಫಲಕ ಹಾಕಿರುವ ಕುರಿತಂತೆ ಪರಿಶೀಲಿಸುವಂತೆ ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅಪರ ಜಿಲ್ಲಾಧಿಕಾರಿ , ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಕೋರೆಗಳ ಲೈಸೆನ್ಸ್ ರದ್ದುಗೊಳಿಸಿ, ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸುವ ಕುರಿತಂತೆ ಎಲ್ಲಾ ಹೋಬಳಿಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಹಾಗೂ ಗ್ರಾಮ ಮಟ್ಟದಲ್ಲಿ ಸಹ ತುರ್ತು ಕಾರ್ಯಪಡೆ ರಚಿಸಲಾಗುವುದು ಎಂದು ಬಿ.ಸದಾಶಿವ ಪ್ರಭು, ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ವಿಕೋಪ ಸಂದರ್ಭದಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ಅಗತ್ಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದರು. ಕಳೆದ ವರ್ಷ ಜಿಲ್ಲೆಯ ವಾಡಿಕೆ ಮಳೆ 4039 ಮಿಮೀ ಆಗಿದ್ದು, 4637 ಮಿ.ಮೀ ಮಳೆ ಆಗಿದೆ, ಈ ವರ್ಷ ಇಂದಿನವರೆಗೆ 57.8 ಮಿಮೀ ಮಳೆ ಆಗಿದ್ದು, 37 ವಿವಿಧ ಹಾನಿ ಪ್ರಕರಣಗಳಲ್ಲಿ 11.32 ಲಕ್ಷ ಹಾನಿ ಸಂಭವಿಸಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
