Updated News From Kaup
ಸಂಜೆಯ ಸವಿಯಲು ಬನ್ನಿ ಪ್ರವಾಸಿಗರ ಕುತೂಹಲ ಕೆರಳಿಸುವ ಇನ್ನಂಜೆಯ ರೆಂಜಲ ಬಂಡೆಗೆ
Posted On: 21 May 2020, 01:31 PM
ಉಡುಪಿ ಜಿಲ್ಲೆಯು ಧಾರ್ಮಿಕ ತೀರ್ಥಕ್ಷೇತ್ರಗಳಿಗೆ ಬಲು ಪ್ರಸಿದ್ಧಿ. ಧಾರ್ಮಿಕ ನೆಲೆಗಟ್ಟಿನೊಂದಿಗೆ, ತನ್ನ ಸಹಜ ಸೌಂದರ್ಯದಿಂದ ಮೈಮನಗಳನ್ನು ಸೂರೆಗೊಳ್ಳಬಲ್ಲ, ಅಷ್ಟೊಂದು ಜನಪ್ರಿಯವಲ್ಲದ, ಜನಜಂಗುಳಿಯಿಲ್ಲದ ತಾಣವೊಂದಿದೆ!! ಅದೇ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಅಜಿಲಕಾಡು ಬಳಿಯಿರುವ 'ರೆಂಜಲ' ಬಂಡೆ ಅರ್ಥಾತ್ "ಧನುಷ್ ತೀರ್ಥ". ಹಿಂದೆ ಈ ಬಂಡೆಯ ಸುತ್ತ ರಂಜದ ಹೂವಿನ ಮರಗಳು ಹೆಚ್ಚಾಗಿದ್ದ ಕಾರಣ ಜನರು ಆ ಹೆಸರು ಕೊಟ್ಟಿರಬಹುದು. ಸುಮಾರು 60 ರಿಂದ 70 ಅಡಿ ಎತ್ತರ,150 ಮೀಟರ್ ಉದ್ದ, 40-50 ಅಡಿ ಅಗಲವಾಗಿರುವ ಈ ಏಕಶಿಲಾ ರಚನೆ ಭೂಇತಿಹಾಸದ ಆರಂಭದ ಜ್ವಾಲಾಮುಖಿ ತಣಿದು ನಿರ್ಮಾಣವಾಗಿದೆ. ಇದರ ಮೇಲಿರುವ ಎಂದೂ ಬತ್ತದ ನೀರಿನ ಕೊಳ ಪ್ರಮುಖ ಆಕರ್ಷಣೆಯಾಗಿದೆ. ಧನುಷ್ ತೀರ್ಥವು ದಕ್ಷಿಣ, ಪಶ್ಚಿಮ ಹಾಗೂ ಉತ್ತರ ದಿಕ್ಕುಗಳಲ್ಲಿ ಇನ್ನಂಜೆ ಗ್ರಾಮದ ಮಡುಂಬು ಎಂಬ ಜನವಸತಿ ಪ್ರದೇಶದಿಂದಲೂ , ಪೂರ್ವ ಹಾಗೂ ಆಗ್ನೇಯದಲ್ಲಿ ಮಜೂರು ಗ್ರಾಮದ ಕಲ್ಲುಗುಡ್ಡೆಯೆಂಬ ಪ್ರದೇಶದಿಂದ ಸುತ್ತುವರಿಯಲ್ಪಟ್ಟಿದ್ದು , ಎರಡೂ ಗ್ರಾಮಗಳ ಗಡಿಭಾಗವಾಗಿದೆ. ತಾಲೂಕು ಕೇಂದ್ರವಾದ ಕಾಪುವಿನಿಂದ ಕೇವಲ 4.5 ಕಿ.ಮೀ ದೂರದಲ್ಲಿರುವ ಈ ಬಂಡೆ ಪುರಾತನ ಐತಿಹ್ಯಗಳು, ಸುಂದರ ಕೊಳ, ನಿಗೂಢ ಗುಹೆಗಳು, ಮನೊಹರ ಸೂರ್ಯೋದಯ, ಸೂರ್ಯಾಸ್ತ, ಹಸುರು ಕಾಡು,ಗದ್ದೆ,ತೋಟ,ನದಿಗಳ ವಿಹಂಗಮ ನೋಟಕ್ಕೆ ಪ್ರಸಿದ್ಧಿಯಾಗಿದೆ . ಕರಾವಳಿಯ ಪ್ರಾತಿನಿಧಿಕ ಸೊಬಗು ಇಲ್ಲಿ ಮೈಹೊದ್ದು ಮಲಗಿದೆ..! ಹಿನ್ನೆಲೆ/ಐತಿಹ್ಯ:- ಇತಿಹಾಸ ಪ್ರಸಿದ್ಧ ಕುಂಜಾರುಗಿರಿ ಕ್ಷೇತ್ರದೊಂದಿಗೆ ಈ ಸ್ಥಳವು ತಳುಕು ಹಾಕಿಕೊಂಡಿದ್ದು, ಅಲ್ಲಿ ಉಲ್ಲೇಖಗೊಳ್ಳುವ ಚತುರ್ತೀರ್ಥಗಳಾದ ಗಧಾ,ಬಾಣ,ಪರಶುತೀರ್ಥಗಳಲ್ಲಿ ಇದು ನಾಲ್ಕನೆಯದಾಗಿ ಧನುಷ್ ತೀರ್ಥವೆಂದೇ ಪ್ರಖ್ಯಾತ. ಹಿರಿಯರು ಹೇಳುವ ಐತಿಹ್ಯದ ಪ್ರಕಾರ ತುಂಬಾ ಹಿಂದೆ ದುರ್ಗಾದೇವಿಯು ಈ ಬಂಡೆಯ ಗುಡಿಯಲ್ಲಿ ನೆಲೆಸಿದ್ದು, ಮಹಾಪ್ರವಾಹ ಬಂದಾಗ ಒಂದು ಕಾಲನ್ನು ಇಲ್ಲೂ, ಮತ್ತೊಂದು ಕಾಲನ್ನು ಕುಂಜಾರಿನ ಬೆಟ್ಟದ ಮೇಲೂ ಇಟ್ಟು ಊರನ್ನು, ಜನರನ್ನು ಕಾಪಾಡಿದಳಂತೆ.. ! ಹಾಗೂ ಈ ಸ್ಥಳವನ್ನು ಬಿಟ್ಟು ಕುಂಜಾರುಗಿರಿಯಲ್ಲಿ ನೆಲೆಯೂರಿದಳಂತೆ..! ಇದಕ್ಕೆ ಸಾಕ್ಷಿಯಾಗಿ ಪಾದವನ್ನು ಹೋಲುವ ಗುರುತೊಂದನ್ನು ಜನ ತೋರಿಸುತ್ತಾರೆ. ಇದೇ ಕಥೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ಶಿಲಾಗುರುತುಗಳಿದ್ದು, ಒಂದನ್ನು ತುಳಸಿಕಟ್ಟೆಯೆಂದೂ, ಮತ್ತೊಂದನ್ನು 'ಡೋಲು ಸರಿದ ಸ್ಥಳ'ವೆಂದೂ ಹಿಂದೆ ಗುರುತಿಸುತ್ತಿದ್ದರು. ಮಹಾಪ್ರವಾಹದಿಂದ ಪಾರಾಗಲು ಇಲ್ಲಿನ ಮೂಲನಿವಾಸಿ ಪರಿಶಿಷ್ಟ ಕೊರಗ ಸಮುದಾಯದ ಹಿರಿಯರೊಬ್ಬರು ತನ್ನ ಪತ್ನಿಯೊಂದಿಗೆ ಡೋಲಿನೊಳಗೆ ಕುಳಿತು ತೇಲಿದರಂತೆ ! ಇವು ಕಟ್ಟುಕಥೆಗಳೆಂದು ನಕ್ಕು ನಾವು ಸುಮ್ಮನಾಗುವಂತೆ ಇಲ್ಲ...! ಹಿಂದಿನ ಕಾಲದ ಹೆಚ್ಚಿನ ಐತಿಹ್ಯಗಳು ನಮ್ಮ ಪೂರ್ವಿಕರ ಸುಪ್ತಮನಸ್ಸಿನಾಳದಲ್ಲಿ ಗಟ್ಟಿಯಾಗಿ ಕೂತ ಪ್ರಾಚೀನ ಸ್ಮೃತಿಯ ಅನಾವರಣಗಳೇ ಆಗಿರುತ್ತವೆ! ಜಗತ್ತಿನ ಪ್ರತೀ ನಾಗರಿಕತೆಗಳಲ್ಲಿ, ಪುರಾಣಗಳಲ್ಲಿ ನಮಗೆ ಇಂತದ್ದೇ ಮಹಾಪ್ರವಾಹದ ಉಲ್ಲೇಖಗಳು ಮತ್ತೆ, ಮತ್ತೆ ಎದುರಾಗುತ್ತದೆ. ಉದಾಹರಣೆಗೆ ನೋಹ, ಮನು, ವಿಷ್ಣುವಿನ ಮತ್ಸ್ಯಾವತಾರ, ಪರಶುರಾಮರ ತುಳುನಾಡು ಮತ್ತು ಕೇರಳೋತ್ಪತ್ತಿಯ ಪ್ರಸಂಗಗಳು, ಅಟ್ಲಾಂಟಿಸ್ , ದ್ವಾರಕಾ ಮುಳುಗಡೆ, ಸಿಂಧೂ ಸರಸ್ವತಿ ಸಂಸ್ಕ್ರತಿಯ ಅವನತಿ ಇತ್ಯಾದಿ.ಇಲ್ಲಿರುವ ಶಿಲಾಗುರುತುಗಳು ಮಾನವನ ಪ್ರಾಗೈತಿಹಾಸಿಕ ಯುಗದ ಗುರುತುಗಳೂ ಆಗಿರಬಹುದೇನೋ ! ಇಲ್ಲಿಗೆ ಸ್ವಲ್ಪ ದೂರದ ಕಲ್ಲುಗುಡ್ಡೆ ಪ್ರದೇಶದಲ್ಲಿ ,ಅಜ್ಜಿಪಾದೆ' ಎಂಬ ಸ್ಥಳವೊಂದಿದ್ದು ಅಲ್ಲಿ ಕಲ್ಲುಗಳ ಒಂದು ರಾಶಿಯಿದೆ. ಅಲ್ಲಿನ ಹುಡುಗರು ವರ್ಷಕ್ಕೊಮ್ಮೆ ಆ ಕಲ್ಲಿಗೆ ದೋಸೆ ಎಡೆಯಿಟ್ಟು ನಂತರ ಹಂಚಿ ತಿನ್ನುವ ರೂಢಿಯನ್ನು ಪಾಲಿಸುತ್ತಾರೆ. ಆ ಕಲ್ಲುಗಳ ರಾಶಿ ಬೇರೇನೂ ಅಲ್ಲದೆ ಪ್ರಾಚೀನ ಶಿಲಾ ಸಂಸ್ಕೃತಿಯ ಕಾಲದ ಸಮಾಧಿಯಾಗಿರಬಹುದೆಂಬ ಊಹೆ ನನ್ನದು. ಈ ಬಂಡೆಯ ಮೇಲೆ ಹಿಂದೆ ಸಣ್ಣ ಗುಡಿ ಇದ್ದಿರಬೇಕು, ಇದಕ್ಕೆ ಸಾಕ್ಷಿಯಾಗಿ ಸುತ್ತಮುತ್ತ ಕೆಂಪು ಇಟ್ಟಿಗೆ ತುಂಡುಗಳು ಕಾಣ ಸಿಗುತ್ತವೆ. ಈ ಬಂಡೆಯ ಬುಡದಲ್ಲಿ ಸುತ್ತ ಹಲವಾರು ಗುಹೆಗಳಿವೆ. ಇವುಗಳು ಸಾಹಸಿಗಳ ಕುತೂಹಲ ಕೆರಳಿಸಬಲ್ಲವು. ಸಾಮಾನ್ಯವಾಗಿ ಎಲ್ಲರಿಗೂ ಕಾಣ ಸಿಗುವ ಸಣ್ಣಗುಹೆ ಪೂರ್ವ ದಿಕ್ಕಿನಲ್ಲಿ ತಾಳೆಹರುವಿನ ಕೆಳಗಿದೆ. ಇದನ್ನು ಸ್ಥಳೀಯವಾಗಿ "ಪಿಲಿತ ಮಾಟೆ" (ಹುಲಿಯ ಗುಹೆ) ಎಂದೇ ಗುರುತಿಸುತ್ತಾರೆ. ಒಂದು ಕಾಲದಲ್ಲಿ ಈ ಗುಹೆ ವಿಶಾಲವಾಗಿದ್ದಿರಬಹುದು. ಆದರೆ ಈಗ ಮುಳ್ಳುಹಂದಿಯ ಶಿಕಾರಿದಾರರು ಅದನ್ನು ನಿರಂತರ ಅಗೆದು,ಮುಚ್ಚಿ ಒಳಗೆ ಮಣ್ಣು ಸಂಗ್ರಹವಾಗಿದೆ. ಆದರೂ ಹತ್ತು ಜನ ಕೂರಬಹುದಾದಷ್ಟು ಜಾಗವಿದೆ. ಮಳೆಗಾಲದಲ್ಲಿ ಕೆಲವೊಮ್ಮೆ ಇದು ಜುಗಾರಿ ಕಟ್ಟೆಯಾಗಿ ಮಾರ್ಪಾಡಾಗುವುದೂ ಇದೆ. ಆದರೆ ಇದಕ್ಕಿಂತಲೂ ದೊಡ್ಡದಾದ ಎರಡು ಗುಹೆಗಳು ಹಾಗೂ ಅನೇಕ ಕಲ್ಲಾಸರೆಗಳು ಬಂಡೆಯ ಪಶ್ಚಿಮ ಬುಡದಲ್ಕಿ ಕುರುಚಲು ಕಾಡಿನ ಜಿಗ್ಗಿನೊಳಗಿದೆ. ಅವುಗಳಲ್ಲಿ ಆಲದಮರದ ಕೆಳಗಿರುವ ಗುಹೆ ಸುಮಾರು ವಿಶಾಲವಾಗಿದ್ದು 25 ಜನ ಕೂರಬಹುದಾದಷ್ಟು ಜಾಗವಿದೆ. ಈಗ ಇಲ್ಲಿಯೂ ಮಣ್ಣು-ಕಲ್ಲು ರಾಶಿ ಬಿದ್ದಿದೆ. ಇದು ಹಗಲಿನಲ್ಲೂ ಕಗ್ಗತ್ತಲಿನಿಂದ ಕೂಡಿದ್ದು ಅಸಂಖ್ಯಾತ ಸಣ್ಣ ಬಾವಲಿಗಳ ಹಾಗೂ ಮುಳ್ಳುಹಂದಿಗಳ ಆವಾಸವಾಗಿದೆ. ಒಳಗಿನಿಂದಲೇ ಮೇಲೇರಬಹುದಾದ ಎರಡು ಇಕ್ಕಟ್ಟಾದ ಸುರಂಗಗಳು ಕಾಣಸಿಗುತ್ತವೆ. ಇನ್ನೂ ಕೆಲವು ಸಣ್ಣ ಪುಟ್ಟ ಗುಹೆ-ಬಿಲಗಳು ನೈರುತ್ಯ ದಿಕ್ಕಿನಲ್ಲಿವೆ, ಕೇವಲ ಒಬ್ಬ ವ್ಯಕ್ತಿ ತೆವಳಿಕೊಂಡು ಹೋಗಬಹುದಾದಷ್ಟೇ ಇಕ್ಕಟ್ಟು. ಇಲ್ಲಿ ಹೆಬ್ಬಾವು,ನಾಗರಹಾವು,ಮುಳ್ಳುಹಂದಿ, ಕಾಡುಹಂದಿ, ಕಾಡುಬೆಕ್ಕು,ನವಿಲು,ನರಿ,ಮೊಲ,ಉಡಗಳು ಕೆಲವೊಮ್ಮೆ ಕಾಣಸಿಗುತ್ತವೆ. ಇಲ್ಲಿನ ಈಚಲು ಹಾಗೂ ತಾಳೆಮರಗಳಲ್ಲಿ ಪುನುಗುಬೆಕ್ಕು, ಪಾಮ್ ಸಿವೆಟ್ ಗಳು ರಾತ್ರಿ ಗೋಚರಿಸುತ್ತವೆ. ಅಪರೂಪಕ್ಕೆ ಚಿರತೆಗಳೂ ಪ್ರತ್ಯಕ್ಷವಾಗುವುದುಂಟು..! ಇಲ್ಲಿಗೆ ಸಮೀಪದ ಪಾಂಬೂರು,ಪಾದೂರಿನಲ್ಲಿ ಸುಮಾರು ಬಾರಿ ಚಿರತೆಗಳನ್ನು ಸೆರೆಹಿಡಿದುದನ್ನು ಸ್ಮರಿಸಬಹುದು. ಇಲ್ಲೂ ಕಳ್ಳ ಶಿಕಾರಿದಾರರ ಕಾಟ ಇದೆ. ಹಗಲು ಸಂಭಾವಿತರಂತೆ ನಮ್ಮ ನಿಮ್ಮೊಂದಿಗೇ ಇರುವ ಇವರು ಪ್ರಾಣಿಗಳ ದಾರಿ ಪತ್ತೆ ಹಚ್ಚಿ ಉರುಳು ಇಡೋದರಲ್ಲಿ, ಮುಳ್ಳುಹಂದಿಯ ಬಿಲ ಅಗೆಯೋದರಲ್ಲಿ, ಅಪರೂಪಕ್ಕೊಮ್ಮೆ ಅಕ್ರಮ ಕೋವಿಗಳೊಂದಿಗೆ ಗುಂಪಲ್ಲಿ ಕಾಡುಹಂದಿ ಹೊಡೆಯುದರಲ್ಲಿ ನಿಸ್ಸೀಮರು. ನಾವು ಸಣ್ಣವರಿದ್ದಾಗ ಇಲ್ಲಿ ಗಂಧದ ಮರಗಳು ಹೆಚ್ಚಾಗಿದ್ದವು, ಕ್ರಮೇಣ ಅವುಗಳನ್ನು ಯಾವ ರೀತಿ ಖಾಲಿ ಮಾಡಿದ್ರು ಅಂದ್ರೆ! ಇವತ್ತು ಮದ್ದಿಗೆ ಬೇಕೆಂದು ಹುಡುಕಿದರೂ ಒಂದೇ ಒಂದು ಗಂಧದ ಗಿಡ ಸಿಗುವುದಿಲ್ಲ. ನನ್ನ ಅಜ್ಜ,ಅಜ್ಜಿ ಹಾಗೂ ಹಿರಿಯರು ಹೇಳುತ್ತಿದ್ದ ಇಲ್ಲಿಯ ಬೇಟೆ ಹಾಗೂ ಕಳ್ಳ ಭಟ್ಟಿ ಸಾರಾಯಿ ಬೇಯಿಸುವವರ ಕಥೆಗಳು ಇನ್ನೂ ಕಾಡುತ್ತಿವೆ. ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿ ಕಾಡುಪ್ರಾಣಿಗಳು ವ್ಯಾಪಕವಾಗಿದ್ದವಂತೆ..! ಹುಲಿಗಳು ದನಗಳನ್ನು ಮೇಯುವಾಗ ಅಥವಾ ಕೆಲವೊಮ್ಮೆ ನೇರವಾಗಿ ಹಟ್ಟಿಗೇ ನುಗ್ಗಿ ಹಿಡಿಯುತ್ತಿದ್ದುವಂತೆ ! ಚಿರತೆ ಹಾಗೂ ಕತ್ತೆಕಿರುಬಗಳು ಹೆಚ್ಚಾಗಿ ನಾಯಿಗಳನ್ನು, ಕರುಗಳನ್ನು ಹೊತ್ತೊಯ್ಯುತ್ತಿದ್ದುವಂತೆ ! ಇಲ್ಲಿನ ಜನರು ಕಾಡು ಪ್ರಾಣಿಗಳಿಗೆ ಇಟ್ಟ ತುಳು ಹೆಸರುಗಳು ಉಲ್ಲೇಖನೀಯ, ಸಾಮಾನ್ಯ ಹುಲಿಗೆ 'ಪಿಲಿ', ಹೆಬ್ಬುಲಿಗೆ 'ಬಲಿಪೆ', ಚಿರತೆಗೆ 'ಚಿಟ್ಟೆಪಿಲಿ'(ಚುಕ್ಕೆಗಳಿಂದಾಗಿ), ಕತ್ತೆಕಿರುಬನಿಗೆ 'ನಾಯಿಪಿಲಿ'(ಅದರ ಆಕಾರ ನಾಯಿಯಂತೆ), ನಾವು ಸಣ್ಣವರಿದ್ದಾಗ ರಾತ್ರಿ ರಸ್ತೆಯಲ್ಲಿ ಜೋರಾಗಿ ಊಳಿಡುತ್ತಾ ಹೋಗುವ ಒಂಟಿ ಪ್ರಾಣಿಯೊಂದಿತ್ತು, ಅದನ್ನು ಜನರು "ಪಲ್ಲ್ ಕಲ್ಕುನಿ'(ತೋಳ ಊಳಿಡುವುದು) ಎನ್ನುತ್ತಿದ್ದರು. ಆ ಪ್ರಾಣಿ ತೋಳವೇ ಇರಬಹುದು, ಆದರೆ ನಾನು ಎಂದೂ ಅದನ್ನು ನೋಡಿದ್ದಿಲ್ಲ. ಜನರು ಅದನ್ನು ಹುಚ್ಚುಹಿಡಿದ ದೊಡ್ಡ ನರಿಯೆನ್ನುತ್ತಿದ್ದರು. ಕ್ರಮೇಣ ದಟ್ಟಕಾಡು ಕ್ಷೀಣಿಸಿತು, ಜನವಸತಿ ಹೆಚ್ಚಿತು ಮಾನವ-ವನ್ಯ ಪ್ರಾಣಿಗಳ ಸಂಘರ್ಷ ಆರಂಭಗೊಂಡಿತು, ಪ್ರಾಣಿಗಳು ಅರ್ಧ ತಿಂದು ಬಿಟ್ಟ ಆಹಾರಕ್ಕೆ ವಿಷವಿಕ್ಕಿ ಕಾಡು ಪ್ರಾಣಿಗಳ ಸಂಹಾರ ಮಾಡಲಾರಂಭಿಸಿದರು. ಹುಲಿಗಳು, ಕಿರುಬಗಳು ಇಲ್ಲಿಂದ ಶಾಶ್ವತವಾಗಿ ಕಣ್ಮರೆಯಾದವು. ಸ್ವಾತಂತ್ರ್ಯಾನಂತರ ಇಲ್ಲಿನ ಕಾಡುಗಳಲ್ಲಿ ಮಾನವನ ಕಾರುಬಾರು ಆರಂಭವಾಯಿತು. ಅದುವೇ ಕಳ್ಳಭಟ್ಟಿ ಸಾರಾಯಿ ಬೇಯಿಸುವ ಕಾಯಕ. ಆ ಕಾಲದ ಕಳ್ಳ - ಪೊಲೀಸ್ ಕಣ್ಣಮುಚ್ಚಾಲೆಯ ಬಗ್ಗೆ ಅನೇಕ ರಸವತ್ತಾದ ರೋಚಕ ಕಥೆಗಳಿವೆ. ಆದರೆ ಅವುಗಳನ್ನು ಹೇಳಬಲ್ಲ ಒಂದಿಬ್ಬರು ಮಾತ್ರ ಈಗ ಉಳಿದಿದ್ದಾರೆ. ಆಗಿನ ಕಳ್ಳಭಟ್ಟಿ ದಂಧೆಗೆ ಸಾಕ್ಷಿಯಾಗಿ ಇವತ್ತಿಗೂ ಇಲ್ಲಿನ ಗುಹೆಗಳಲ್ಲಿ ಹಳೇ ಮಡಕೆಚೂರುಗಳು, ತಾಮ್ರ ಹಾಗೂ ರಬ್ಬರ್ ಪೈಪಿನ ಅವಶೇಷಗಳು ದೊರೆಯುತ್ತವೆ. ಈ ಬಂಡೆ ಮೇಲಿನ ಪ್ರಮುಖ ಆಕರ್ಷಣೆಯೇ ಸಣ್ಣ ಕೊಳ. ಅದುವೇ ಧನುಷ್ ತೀರ್ಥ. ಪೂರ್ವ ಪಶ್ಚಿಮಕ್ಕೆ ಸುಮಾರು 10 ರಿಂದ 12 ಮೀಟರ್ ಉದ್ದ , 4 .5 ಮೀಟರ್ ಅಗಲ ಹಾಗೂ 10 ಅಡಿಗಳಷ್ಟು ಆಳವಾಗಿದೆ. ಕೊಳದ ಕೆಳಗಿನಿಂದ ಸುರಂಗವಿದೆಯೆಂದು ಹೇಳುತ್ತಾರಾದರೂ , ನಾವು ಚಿಕ್ಕಂದಿನಿಂದಲೂ ಈ ಕೊಳದಲ್ಲಿ ಈಜಾಡಿ ಬೆಳೆದವರು, ಆಳಕ್ಕೆ ಮುಳುಗಿದವರು. ತಳದಲ್ಲಿ ಕೆಸರನ್ನಲ್ಲದೆ ಬೇರೇನೂ ಕಂಡಿಲ್ಲ. ಸುಮಾರು 15 ವರ್ಷಗಳ ಹಿಂದೆ ಒಮ್ಮೆ ಸ್ವಚ್ಛಗೊಳಿಸಲೆಂದು ನೀರು ಖಾಲಿ ಮಾಡಿ ಕೆಸರನ್ನು ಹೊರತೆಗೆದು ಬರಿದು ಮಾಡಿದ್ದರು. ಆಗ ಅಲ್ಲಿ ಯಾವುದೇ ಸುರಂಗ ಕಂಡುಬಂದಿಲ್ಲ. ಸ್ವಚ್ಛಗೊಳಿಸಿದವರಿಗೆ ಏನು ದೊರಕಿತೋ ? ಗೊತ್ತಿಲ್ಲ! ಸುಮಾರು ದಿನಗಳ ನಂತರ ನನಗೆ ಇದರ ಕೆಸರಿನಲ್ಲಿ ಸುಮಾರು ತಾಮ್ರದ ಹಳೆ ಹಾಗೂ ಹೊಸ ನಾಣ್ಯಗಳು ಪತ್ತೆಯಾದವು. ನನಗೆ ದೊರಕಿದ ನಾಣ್ಯಗಳಲ್ಲಿ ಅತ್ಯಂತ ಹಳೆಯದೆಂದರೆ 1836ರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಲಾಂಛನವಿರುವ ನಾಣ್ಯಗಳು, ಇನ್ನು ಕೆಲವು 1858ರ ನಂತರದ ರಾಣಿ ವಿಕ್ಟೋರಿಯಾ ಹಾಗೂ ಕಿಂಗ್ ಜಾರ್ಜ್ ಚಿತ್ರವಿರುವ ಬ್ರಿಟಿಷ್ ಇಂಡಿಯಾದ ನಾಣ್ಯಗಳು, ಮತ್ತೆ ಕೆಲವು ಸ್ವಾತಂತ್ರ್ಯ ಪೂರ್ವದವು ಹಾಗೂ ನಂತರದವು. ನಡು ಹಗಲಲ್ಲಿ ಬಂಡೆ ಕಾಯುವುದರಿಂದ ಕೊಳದ ನೀರು ಬೆಚ್ಚಗಾಗಿ ಮತ್ತೆ ತಣ್ಣಗಾಗುವುದರಿಂದ ಈ ನೀರಿನಲ್ಲಿ ಯಾವುದೇ ಮೀನುಗಳು ಬದುಕುವುದಿಲ್ಲ. ನಾವು ಚಿಕ್ಕಂದಿನಲ್ಲಿ ಇದರ ನೀರಿಗೆ ಮೀನು ತಂದು ಹಾಕುವ ಪ್ರಯತ್ನ ಮಾಡಿ ವಿಫಲರಾಗಿದ್ದೇವೆ. ಆದರೆ ಉಷ್ಣ ಹಾಗೂ ಶೀತಕ್ಕೆ ಹೊಂದಿಕೊಳ್ಳಬಲ್ಲ ಸಣ್ಣ ಹಾಗೂ ದೊಡ್ಡ ಕಪ್ಪೆಗಳು, ಪಾಚಿ, ಕೆಲವೊಮ್ಮೆ ಸಾಂದರ್ಭಿಕವಾಗಿ ನೀರು ಹಾವು ಕಂಡುಬರುತ್ತವೆ. ಕಡುಬೇಸಿಗೆಯಲ್ಲಿ ಮೂರು ನಾಲ್ಕು ಅಡಿ ನೀರು ಕಡಿಮೆಯಾದರೂ ಕೊಳದಲ್ಲಿ ವರ್ಷವಿಡೀ ನೀರು ಬತ್ತುವುದಿಲ್ಲ. ಕೆಸರು ತೆಗೆದ ವರ್ಷ ಮಾತ್ರ ಕೆಲವು ತಿಂಗಳು ಬರಿದಾಗಿತ್ತು. ಹಿಂದೆ ಇಲ್ಲಿಗೆ ಭೇಟಿ ಕೊಟ್ಟವರು ಕೊಳಕ್ಕೆ ನಾಣ್ಯವನ್ನು ಎಸೆಯುತ್ತಿದ್ದರು. ಈಗ ಆ ಪದ್ದತಿ ನಿಂತಿದೆ. ಮಳೆಗಾಲದಿಂದ ಹಿಡಿದು ಡಿಸೆಂಬರ್ ತನಕ ಇದರ ನೀರು ಸ್ನಾನಕ್ಕೆ ಯೋಗ್ಯವಾಗಿರುತ್ತದೆ. ಆನಂತರ ಇದು ಪಾಚಿಗಟ್ಟುವುದರಿಂದ ಬೇಸಿಗೆಯ ಅವಧಿಯಲ್ಲಿ ಸ್ನಾನ ಮಾಡಿದರೆ ಸ್ವಲ್ಪ ಮೈತುರಿಕೆ ಕಾಣಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ನಮಗೆ ಈ ಕೊಳದಲ್ಲಿ ಸ್ನಾನ ಮಾಡುವುದೆಂದರೆ ಖುಷಿಯೋ ಖುಷಿ ! ಶನಿವಾರ ಮಧ್ಯಾಹ್ನ ಶಾಲೆಯಿಂದ ಬಂದು ನೀರಿಗೆ ಸಮ್ಮರ್ ಸಾಲ್ಟ್ ಹೊಡೆಯುವುದೊಂದೇ ಗೊತ್ತು,.. ಹೊತ್ತು ಕಳೆದು ಕತ್ತಲಾಗುತ್ತಾ ಬಂದರೂ ಮನೆಗೆ ಹಿಂದಿರುಗುವ ಯೋಚನೆಯಿಲ್ಲ...ಮನೆಯಿಂದ ಕೋಲು ಹಿಡಿದು ಜನಬರಬೇಕಷ್ಟೇ....! ತದನಂತರವೇ ಸಕಲ ಮರ್ಯಾದೆ ಹಾಗೂ ಮಿಡಿಯುವ ಪಕ್ಕವಾದ್ಯಗಳೊಂದಿಗೆ ಮರಳಿ ಮನೆಗೆ ಬಿಜಯ ಮಾಡಿಸುವುದು..! ಆದರೆ ನೀವು ,ಜಾಗ್ರತೆ ! ಸರಿಯಾಗಿ ಈಜು ಬಾರದವರಿಗೆ ಆಳ ನೀರಿನ ಬಾವಿಯಂತಿರುವ ಈ ಕೊಳ ಬಲು ಅಪಾಯಕಾರಿ ! ಮಳೆಗಾಲದಲ್ಲಂತೂ ಕಾಲು ಜಾರುವುದರಿಂದ ಬಹಳ ಜಾಗ್ರತೆಯಿಂದಿರಬೇಕು. ಜನರ ನಂಬಿಕೆಯ ಪ್ರಕಾರ ಈಗಿರುವ ಕೊಳ ನಿಧಾನವಾಗಿ ಚಿಕ್ಕದಾಗುತ್ತಾ, ಕ್ರಮೇಣ ಮುಚ್ಚಿಹೋಗಿ ಹೊಸ ಕೊಳ ಹುಟ್ಟಿಕೊಳ್ಳುತ್ತಂತೆ! ಈ ನಂಬಿಕೆಗೆ ಕಾರಣವೇನೆಂದರೆ, ಕೊಳದ ಪಶ್ಚಿಮಕ್ಕೆ ಸಾಲು ಬಂಡೆಗಳ ಕೆಳಗೆ ನೀರು ನಿಲ್ಲದ, ಕೊಳವನ್ನೇ ಹೋಲುವ ಗುಂಡಿಯೊಂದಿದೆ. ಮಾತ್ರವಲ್ಲದೆ ಈಗ ನೀರಿರುವ ಕೊಳದ ಪಕ್ಕದಲ್ಲೇ ಇನ್ನೊಂದು ಸಣ್ಣ ಉರುಟಾದ ಗುಂಡಿ ಇರುವುದು ಕಾರಣವಿರಬಹುದು. ಹಿಂದೆ ಬಂಡೆಯ ತುದಿಗೆ ಹತ್ತಲು ಮೆಟ್ಟಿಲುಗಳೇ ಇರಲಿಲ್ಲ. ನಾವೆಲ್ಲರೂ ಚಿಕ್ಕಂದಿನಿಂದಲೂ ಬಲು ಸಾಹಸ ಮಾಡಿ , ಬೇರೆ ಬೇರೆ ದಿಕ್ಕುಗಳಿಂದ ಬಂಡೆ ಹತ್ತುತ್ತಿದ್ದೆವು. ಆದರೆ ಕೆಳಬರುವಾಗ ಹೆಚ್ಚು ಕಡಿಮೆ ಜಾರುಬಂಡಿಯಂತೆ ಜಾರುವುದರಿಂದ ನಮ್ಮ ಚಡ್ಡಿಯ ಹಿಂಭಾಗ ಯಾವಾಗಲೂ ಶ್ರೀಲಂಕಾ ನಕಾಶೆಯೇ! ಕ್ರಮೇಣ ಅಭ್ಯಾಸವಾಗಿ ಯಾವುದೇ ಮಳೆಗಾಲವಾದರೂ,ರಾತ್ರಿಯಲ್ಲೂ ,ಬೆಳಕಿಲ್ಲದೆಯೂ ಮೇಲಕ್ಕೆ ಹತ್ತುತ್ತಿದ್ದೆವು. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ, ಭಕ್ತರಿಗೆ ಹತ್ತಲು ತುಂಬಾ ಕಷ್ಟವಾಗುತ್ತಿತ್ತು. ಹಾಗಾಗಿ ಸುಮಾರು ಹದಿನೈದು ವರ್ಷಗಳ ಹಿಂದೆ ಉಡುಪಿಯ ಮಠಾಧೀಶರ ಹಂಬಲ ಹಾಗೂ ಚೆನ್ನೈನ ಸೇವಾಸಂಸ್ಥೆಯವರ ದೇಣಿಗೆಯಿಂದ ಕಾಂಕ್ರೀಟ್ ಮೆಟ್ಟಿಲುಗಳನ್ನು ಹಾಕಿಸಿಕೊಟ್ಟು ಮಹದುಪಕಾರ ಮಾಡಿದ್ದಾರೆ. ಆದರೆ ನಾವು ಯಾವುದನ್ನೂ ಒಳ್ಳೆಯದಕ್ಕೆ ಬಳಸುವುದಿಲ್ಲ ನೋಡಿ ? ಮೆಟ್ಟಿಲುಗಳಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಯಿತು.. ಜೊತೆಗೆ ಪ್ಲಾಸ್ಟಿಕ್, ಕಸ, ತಂಪು ಪಾನೀಯ , ಮದ್ಯ, ಬಿಯರ್ ಬಾಟಲ್ ಗಳೂ ರಾಶಿ ಬೀಳಲಾರಂಭಿಸಿದವು. ಕೆಳಗೆ ಪಂಚಾಯತಿಯ ಪ್ರಕಟಣೆಯಿದ್ದರೂ ಅದಕ್ಕೆ ಬೆಲೆಯಿಲ್ಲ! ಇಂತಹ ಪೂಜನೀಯ ಕ್ಷೇತ್ರದ ಬಂಡೆಯನ್ನೂ ಒಡೆದು ಹಣ ಮಾಡುವ ಪ್ರಯತ್ನಗಳು 60-70 ವರ್ಷಗಳ ಹಿಂದೆ ನಡೆದಿತ್ತು, ಬಂಡೆಯ ದಕ್ಷಿಣ ತುದಿಯದಲ್ಲಿ ಸ್ಫೋಟಿಸಲು ಮಾಡಿದ ಕುರುಹುಗಳು ಇಂದಿಗೂ ಕಂಡು ಬರುತ್ತವೆ, ಆದರೆ ಅದೇಕೋ ಕೆಲವು ಅಸಾಧಾರಣ ಕಾರಣಗಳಿಂದಾಗ ಈ ಬಂಡೆಯನ್ನು ಒಡೆಯುವುದು ಸಾಧ್ಯವಾಗಲೇ ಇಲ್ಲ! ಬಂಡೆ ಒಡೆಯುವ ಚಟುವಟಿಕೆ ಕೋಟ್ಲ ಬಂಡೆಗೆ ಸ್ಥಳಾಂತರಗೊಂಡು ಅಲ್ಲಿ ಅನೇಕ ವರ್ಷಗಳ ಕಾಲ ಸ್ಥಳೀಯರ ಸಾವು ನೋವುಗಳಿಗೆ ಕಾರಣವಾದುದು ಇನ್ನೊಂದು ಕಥೆ! ಇಲ್ಲಿನ ಬೇರೆ ಆಕರ್ಷಣೆಗಳೆಂದರೆ ಬಂಡೆಯ ತುದಿಯಲ್ಲಿ ಕಂಡುಬರುವ ಚಿತ್ತಾಕರ್ಷಕ ದೃಶ್ಯಗಳು, ಎಲ್ಲಾ ಕಾಲದಲ್ಲೂ ಬೀಸುವ ತಂಗಾಳಿ, ದೈವಿಕ ಅನುಭೂತಿ ನೀಡುವ ಸೂರ್ಯೋದಯ ಹಾಗೂ ಸೂರ್ಯಾಸ್ತಗಳು. ಉತ್ತರ ದಿಕ್ಕಿನಲ್ಲಿ ಕಂಡುಬರುವ ಕೋಟ್ಲು ಬಂಡೆ, ಇನ್ನಂಜೆ-ಶಂಕರಪುರದ ಕಾಡು ಹಾಗೂ ತೋಟಗಳು, ಅರಸೀಕಟ್ಟೆಯ ಶ್ರೀ ಮಾಧ್ವ ಇಂಜಿನಿಯರಿಂಗ್ ಕಾಲೇಜು. ಪೂರ್ವದಲ್ಲಿ ಬಂಡೆ ಕಲ್ಲುಗಳಿಂದಲೇ ಹೆಸರು ಪಡೆದಿರುವ ಕಲ್ಲುಗುಡ್ಡೆ, ಪಾದೂರಿನ ಭೂಗತ ಕಚ್ಛಾ ತೈಲ ಸಂಗ್ರಹಣಾಗಾರ , ಅದರ ಬೃಹತ್ ಕಲ್ಲಿನ ರಾಶಿ, ಇತ್ತೀಚೆಗೆ ತೈಲ ಸಂಗ್ರಹಣಾಗಾರದಲ್ಲಿ ಉತ್ಪತ್ತಿಯಾಗುವ ಅನಿಲವನ್ನು ಚಿಮಿಣಿಯಿಂದ ಹೊರಹಾಕಿ ಆಗ್ಗಾಗ್ಗೆ ಸುಡುತ್ತಾರೆ , ಆಗ ಪೂರ್ವ ದಿಕ್ಕು ರಾತ್ರಿಗಳಲ್ಲೂ ಕೆಂಪಗೆ ,ಇಡೀ ಕಾಡಿಗೆ ಬೆಂಕಿ ಬಿದ್ದಂತೆ ಗೋಚರವಾಗುತ್ತದೆ. ದಕ್ಷಿಣದಲ್ಲಿ ಕರಂದಾಡಿ ಪರಿಸರ, ಜಲಂಚಾರು ದೇವಸ್ಥಾನ, ಕರಾವಳಿಯ ವಿಶಿಷ್ಟ ತೋಟದ ಮನೆಗಳು, ಎಲ್ಲೋ ದೂರದಲ್ಲಿ ಹೊಗೆಯುಗುಳುತ್ತಿರುವ ಯು.ಪಿ.ಸಿ,ಎಲ್ ಉಷ್ಣ ವಿದ್ಯುತ್ ಸ್ಥಾವರದ ಚಿಮಿಣಿ ಹಾಗೂ ಬಾಯ್ಲರ್ ಗಳು, ಪಶ್ಚಿಮಕ್ಕೆ ಮಡುಂಬು ಬೈಲಿನ ವಿಶಾಲ ಭತ್ತದ ಗದ್ದೆಗಳು, ಸುತ್ತಿಸುಳಿದು ಡೊಂಕಾಗಿ ಹರಿಯುವ ಪಾಂಗಾಳ ನದಿ, ಕೊಂಕಣದಿಂದ ಹಾದು ಕೇರಳ ಕಡೆಗೆ ಸಾಗುವ ರೈಲುಮಾರ್ಗ, ನಿರಂತರವಾಗಿ ಓಡಾಡುವ ಪ್ಯಾಸೆಂಜರ್ , ಗೂಡ್ಸ್, ಹಾಗೂ ಲಾರಿ ಹೊತ್ತ ರೋ ರೋ ರೈಲುಗಳು, ದೂರದಲ್ಲಿ ಕಾಪು ಪೇಟೆ, ಅದರಾಚೆ ದೀಪಸ್ತಂಭ, ಸದಾ ಕಾಡುವ ಕಡಲು ! ಮತ್ತಿನ್ನೇನು ಬಯಸುತ್ತೆ ಬಿಡಿ ನಮ್ಮ ಒಡಲು !! ಎಚ್ಚರಿಕೆ:- 1) ಈ ಸ್ಥಳವು ಪೂಜನೀಯ ಧಾರ್ಮಿಕ ಕ್ಷೇತ್ರವಾಗಿದ್ದು ಭಗದ್ಭಕ್ತರು, ನಿಸರ್ಗ ಪ್ರಿಯರು ಯಾವುದೇ ಸಮಯದಲ್ಲೂ ಸಂದರ್ಶಿಸಬಹುದು. ಪ್ರಾತಃ ಹಾಗೂ ಸಂಧ್ಯಾಕಾಲ ಅತ್ಯಂತ ಪ್ರಶಸ್ತ. 2) ಮೋಜು ಮಸ್ತಿ ಮಾಡಲು ಬರುವವರು, ಏಕಾಂತದಲ್ಲಿ ಪೊದೆಗೆ ನುಗ್ಗುವ ಪ್ರೇಮಿಗಳು ದಯವಿಟ್ಟು ದೂರವಿರಿ; ಕಾರಣ ಸ್ಥಳೀಯರಿಂದ ಧರ್ಮದೇಟು ಬೀಳುವ ಎಲ್ಲಾ ಸಂಭವವಿದೆ.(ಈಗಾಗಲೇ ಅನೇಕರು ಏಟು ತಿಂದ ನಿದರ್ಶನಗಳಿವೆ) 3)ಪ್ಲಾಸ್ಟಿಕ್ ಬಳಕೆ, ಮದ್ಯಪಾನ ,ಧೂಮಪಾನ,ತಂಬಾಕು, ಹಾಗೂ ಬಂಡೆಗಳ ಮೇಲೆ ಗೀಚುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. 4)ಕೊಳ ಆಳವಾಗಿದ್ದು, ಸರಿಯಾಗಿ ಈಜು ಬಾರದವರು ಖಂಡಿತ ನೀರಿಗಿಳಿಯಬೇಡಿ. 5) ಬಂಡೆಯ ಕಡಿದಾದ ಇಳಿಜಾರು ತುಂಬಾ ಅಪಾಯಕಾರಿ, ಹಾಗಾಗಿ ಸೆಲ್ಫಿ ಹುಚ್ಚಾಟ ಬೇಡ. ಮಳೆಗಾಲದಲ್ಲಿ ತುಂಬಾ ಜಾಗ್ರತೆಯಾಗಿರಿ. 6) ಗುಹೆಗಳಿಗೆ ಏಕಾಂಗಿಯಾಗಿ ನುಗ್ಗಬೇಡಿ, ಈ ಪ್ರದೇಶದಲ್ಲಿ ವಿಷಪೂರಿತ ಹಾವುಗಳು,ಹೆಬ್ಬಾವು, ಕಾಡುಹಂದಿ, ಮುಳ್ಳುಹಂದಿ ಯಥೇಚ್ಛವಾಗಿವೆ.ಕೆಲವೊಮ್ಮೆ ಚಿರತೆಗಳೂ ಕಾಣಸಿಕ್ಕಿವೆ. 7) ವನ್ಯಜೀವಿಗಳಿಗೆ ತೊಂದರೆ ನೀಡಬೇಡಿ. ಯಾವುದೇ ರೀತಿಯ ಬೇಟೆ ಶಿಕ್ಷಾರ್ಹ ಅಪರಾಧ. ತಲುಪುವುದು ಹೇಗೆ ? *ಧನುಷ್ ತೀರ್ಥವು ತಾಲೂಕು ಕೇಂದ್ರವಾದ ಕಾಪುವಿನಿಂದ 4.5 ಕಿ.ಮೀ ದೂರವಿದ್ದು ಬಂಟಕಲ್ ರಸ್ತೆಯಲ್ಲಿ ಮಡುಂಬು ಅಜಿಲಕಾಡುವಿನಿಂದ ಬಲಕ್ಕೆ 300 ಮೀಟರ್ ಕಚ್ಛಾರಸ್ತೆಯಲ್ಲಿ ಕ್ರಮಿಸಬೇಕು. *ಜಿಲ್ಲಾ ಕೇಂದ್ರವಾದ ಉಡುಪಿಯಿಂದ 14 ಕಿ.ಮೀ ದೂರವಿದ್ದು ಶಂಕರಪುರದಿಂದ ಇನ್ನಂಜೆ ಮಾರ್ಕೆಟ್ ರೋಡ್ ಮೂಲಕ ಮಡುಂಬು ಅಜಿಲಕಾಡು ತಲುಪಬಹುದು. *ಅದೇ ರೀತಿ ಬಂಟಕಲ್-ಕಾಪು ರಸ್ತೆ ಹಾಗೂ ಮಜೂರು-ಕರಂದಾಡಿ-ಕಲ್ಲುಗುಡ್ಡೆ ರಸ್ತೆಗಳ ಮೂಲಕವೂ ಅಜಿಲಕಾಡು ತಲುಪಬಹುದು *ಖಾಸಗಿ ವಾಹನಗಳಲ್ಲೇ ಬಂತರೆ ಉತ್ತಮ. ಟ್ಯಾಕ್ಸಿ,ಆಟೋ ಲಭ್ಯವಿದೆ. ಊಟ ವಸತಿ ವ್ಯವಸ್ಥೆಗೆ ಕಾಪು ಅನುಕೂಲಕರ. ಲೇಖಕರು:-ರಾಜೇಶ್ ಇನ್ನಂಜೆ email: rajeshinnanje58@gmail.com
ಹೋಟೆಲ್ ಕಾರ್ಮಿಕರ ಸಂಕಷ್ಟಕ್ಕೆ ಸರಕಾರ ಇದುವರೆಗೂ ಸ್ಪಂದಿಸಿಲ್ಲ
Posted On: 18 May 2020, 06:21 PM
ಕೊರೋನಾ ಲಾಕ್ ಡೌನ್ ನಡುವೆ ದೊಡ್ಡ ಉದ್ದಿಮೆ ಹಾಗೂ ಸಣ್ಣ ಉದ್ದಿಮೆದಾರರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಹೋಟೆಲ್ ಉದ್ಯಮಿಗಳು ಕೂಡ ಇದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ನಮ್ಮ ಕೈ ಹಿಡಿಯದೇ ಇರುವುದರಿಂದಾಗಿ ಇಂದು ಕಾರ್ಮಿಕರ ರಕ್ಷಣೆಗಾಗಿ ಹೊಸ ನೀತಿಯನ್ನು ಜಾರಿಗೆ ತರಬೇಕಾಗಿದೆ ಎಂದು ಹೋಟೆಲ್ ಉದ್ಯಮಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬೆಂಗಳೂರಿನ ಸಮೀಪದ ಬನ್ನೇರುಘಟ್ಟ ಬಳಿಯ ಜಂಬುಸವಾರಿ ದಿಣ್ಣೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೋಟೆಲ್ ಉದ್ದಿಮೆದಾರರಾದ ಚಂದ್ರಶೇಖರ್ ಹಾಗೂ ಶಾಂತರಾಮ್ ಶೆಟ್ಟಿ ಸೇರಿಂದತೆ ಹಲವು ಹೋಟೆಲ್ ಗಳ ಮಾಲೀಕರು ಮಾತನಾಡಿದರು. ಹೋಟೆಲ್ ಉದ್ಯಮಿದಾರರು ಕೊರೋನಾ ಮಹಾಮಾರಿಯಿಂದ ಸಂಕಷ್ಟಕೀಡಾಗಿದ್ದಾರೆ. ಈ ಸಂಧರ್ಭದಲ್ಲಿ ಸರಕಾರ ಸಹಾಯಕ್ಕೆ ಬರಲಿಲ್ಲ ಎನ್ನುವ ನೋವು ಹೋಟೆಲ್ ಉದ್ಯಮಿಗಳಿಗಿದೆ. ಆದರೆ ಮುಂದಿನ ದಿನಗಳಲ್ಲಿ ನಮ್ಮ ಜವಾಬ್ದಾರಿ ನಮ್ಮದೇ ಎನ್ನುವುದನ್ನು ಈಗಾಗಲೇ ಹೋಟೆಲ್ ಉದ್ಯಮಿಗಳಿಗೆ ಅರಿವಾಗಿದೆ. ಹೋಟೆಲ್ ಉದ್ಯಮಕ್ಕೆ ಸಂಘಗಳು ಸಹಾಯಕ್ಕೆ ಬರದಿರುವುದು ಬಹಳ ನೋವಿನ ಸಂಗತಿಯಾಗಿದ್ದು, ಮೂವತ್ತು ಮೊವತೈದು ವರ್ಷಗಳಿಂದ ಉದ್ಯಮವನ್ನೇ ಅವಲಂಬಿಸಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದು ಹೋಟೆಲ್ ಉದ್ಯಮಿ ಚಂದ್ರಶೇಖರ್ ಹಾಗೂ ಶಾಂತರಾಮ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ರಾಜ್ಯದ SSLC ಪರೀಕ್ಷೆಯ ಮತ್ತು PUC ಯ ಒಂದು ಪರೀಕ್ಷೆಗೆ ದಿನ ನಿಗದಿ
Posted On: 18 May 2020, 03:37 PM
ಕರ್ನಾಟಕ ರಾಜ್ಯ SSLC ಪರೀಕ್ಷಾ ದಿನಾಂಕ ಪ್ರಕಟ. ಪರೀಕ್ಷೆ ಬರೆಯುವ ಎಲ್ಲಾ ವಿಧ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ. ಎಲ್ಲಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಕೆ. ಯಾವುದಾದರೂ ವಿಧ್ಯಾರ್ಥಿಗಳಿಗೆ ಆರೋಗ್ಯದ ಸಮಸ್ಯೆ ಇದ್ದರೆ, ಅಂತಹವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವ ವ್ಯವಸ್ಥೆ. ಪರೀಕ್ಷೆ ಆರಂಭಕ್ಕೆ ಮುನ್ನ ಪರೀಕ್ಷಾ ಕೇಂದ್ರದ ಸ್ಯಾನಿಟೈಸ್. ವಲಸೆ ಕಾರ್ಮಿಕರ, ಹಾಸ್ಟೆಲ್ ವಿದ್ಯಾರ್ಥಿಗಳ ಮಕ್ಕಳಿಗೆ ಪರೀಕ್ಷೆ ಬರೆಯಲಿ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ಡಿಡಿ ಚಂದನದಲ್ಲಿ ಮಾದರಿ ಪ್ರಶ್ನೆ ಪ್ರತ್ರಿಕೆಗೆ ಉತ್ತರ ನೀಡುವ ವಿಶೇಷ ಕಾರ್ಯಕ್ರಮ. ಜೂನ್ 25 ರಿಂದ ಜುಲೈ 5ರ ವರೆಗೆ SSLC ಪರೀಕ್ಷೆ. ಒಟ್ಟು 10 ದಿನದ ಪರೀಕ್ಷೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಪರೀಕ್ಷೆಗೆ ಒಂದೊಂದು ದಿನ ಅಂತರ. ಜೂನ್ 18 ರಂದು ದ್ವಿತೀಯ PUC ಒಂದು ವಿಷಯದ ಪರೀಕ್ಷೆ ದಿನ ನಿಗದಿ. ರಾಜ್ಯ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರಕಟ.
ಮಲ್ಲಾರ್ : ವಿದ್ಯುತ್ ಇಲ್ಲದೆ ಮೂಲಭೂತ ಸೌಕರ್ಯ ವಂಚಿತರಾದ ಕುಟುಂಬ
Posted On: 18 May 2020, 02:37 PM
ದೇಶದ ಪ್ರಧಾನಮಂತ್ರಿಗಳು ವಿವಿಧ ರೀತಿಯ ಯೋಜನೆಗಳನ್ನು ಹೊರಡಿಸಿದ್ದರು ಕೂಡ ಕೆಲವೊಂದು ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಮಜೂರು ಮಲ್ಲಾರ್ ಭಾಗದ ರಾಣೆಕೇರಿಯಲ್ಲಿ ಅನೇಕ ಬಡಕುಟುಂಬಗಳು ವಾಸಿಸುತ್ತಿದ್ದು, ಅನೇಕರಿಗೆ ಸರ್ಕಾರದಿಂದ ದೊರೆಯುವ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲ, ಅಧಿಕಾರಿಗಳು ಜನರಿಗೆ ಸರಕಾರದಿಂದ ದೊರೆಯುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಸೌಲಭ್ಯಗಳನ್ನು ಒದಗಿಸಬೇಕು. ಸ್ಥಳೀಯ ನಿವಾಸಿ ಪ್ರಶಾಂತ್ ಪೂಜಾರಿ ಕಾಪು ಅವರಿಗೆ ನಿನ್ನೆ ಸಂಜೆ ದೊರೆತ ಮಾಹಿತಿ ಪ್ರಕಾರ ಅವರು ರಾಣೆಕೇರಿಗೆ ಹೋಗಿದ್ದು ಕೆಲವೊಂದು ಕುಟುಂಬಗಳು ವಿದ್ಯುತ್ ಸೌಕರ್ಯವಿಲ್ಲದೆ ಇಂದೋ ನಾಳೆಯೋ ಜೋರಾದ ಗಾಳಿ ಮಳೆ ಬಂದರೆ ಬೀಳುವ ಪರಿಸ್ಥಿತಿಯಲ್ಲಿದ್ದು, ಗುಡಿಸಲಿನಲ್ಲಿ ವಾಸವಾಗಿದ್ದಾರೆ, ಈ ವಿಷಯವನ್ನು ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭು ಇವರಿಗೆ ತಿಳಿಸಿದ್ದು, ನೀತಾ ಪ್ರಭು ಅವರು ತಕ್ಷಣ ಸ್ಥಳೀಯ ಜನನಾಯಕ ಶ್ರೀಕಾಂತ್ ನಾಯಕ್ ಇವರಿಗೆ ತಿಳಿಸಿದ್ದಾರೆ. ಸ್ಥಳಕಾಗಮಿಸಿ ಪರಿಶೀಲನೆ ನಡೆಸಿದ ಶ್ರೀಕಾಂತ್ ನಾಯಕ್ ಅವರು ಅಧಿಕಾರಿಗಳಿಗೆ ಕರೆ ಮಾಡಿ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈ ಗೊಳ್ಳುವಂತೆ ಹೇಳಿದರು ಮತ್ತು ಶೀಘ್ರದಲ್ಲಿ ಇದಕ್ಕೆ ಬೇಕಾಗುವ ಕ್ರಮ ಕೈಗೊಳ್ಳುತ್ತೇನೆ ಎಂದು ಶ್ರೀಕಾಂತ್ ನಾಯಕ್ ಭರವಸೆ ನೀಡಿದರು ಈ ಸಂದರ್ಭದಲ್ಲಿ ಸುಧಾಮ್ ಶೆಟ್ಟಿ ಮತ್ತು ಸಚಿನ್ ಸುವರ್ಣ ಉಪಸ್ಥಿತರಿದ್ದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಶಾಂತ್ ಪೂಜಾರಿ ಕಾಪು, ಕಾಪು ತಾಲೂಕಿನಲ್ಲಿ ಇನ್ನು ಅನೇಕ ಇಂತಹ ಮನೆಗಳಿದ್ದು ಮೂಲಭೂತ ಸೌಕರ್ಯಗಳು ದೊರಕದೆ ಬಹಳ ಕಷ್ಟ ಪಡುತ್ತಿದ್ದಾರೆ, ಜನಸಾಮಾನ್ಯರು ಇಂತಹ ವಿಷಯಗಳನ್ನು ಅಧಿಕಾರಿಗಳಿಗೆ ಅಥವಾ ಜನಪ್ರತಿನಿಧಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಮುಂಬೈ ತುಳುವರು ಊರಿನಲ್ಲಿ ಕ್ವಾರಂಟೈನ್ ಆದರೂ ಸಮಾಜಸೇವೆ ಬಿಟ್ಟಿಲ್ಲ
Posted On: 18 May 2020, 12:46 PM
ಮುಂಬೈನಿಂದ ಬಂದು ಕ್ವಾರಂಟೈನ್ನಲ್ಲಿ ಇದ್ದು ಸುಮ್ಮನೆ ಕೂರದೆ ಅಲ್ಲಿಯೂ ಸಮಾಜ ಸೇವೆ ಮಾಡಿದ ತುಳುವರು. ಮುಂಬೈಯವರು ಯಾವತ್ತೂ ತನ್ನ ಊರಿಗೆ, ತಾಲೂಕು, ಜಿಲ್ಲೆಗಾಗಿ ಸೇವೆ ಮಾಡಿದವರು, ಅದನ್ನು ಈಗ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಿನ್ನೆ ಮುಂಬೈನಿಂದ ಬಂದ ಒಂದು ತಂಡವನ್ನು ಮರೋಡಿಯ ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಯಿತು.. ಆದರೆ ಕ್ವಾರಂಟೈನ್ ಇದ್ದ ಸದಸ್ಯರು ಕೂತು,ಮಲಗಿ ಸಮಯ ವ್ಯರ್ಥ ಮಾಡದೆ ಶಾಲೆ ಹೊರಾಂಗಣದ ಸ್ವಚ್ಛತಾ ಕಾರ್ಯಕ್ರಮ ಶುರುಮಾಡಿದ್ದಾರೆ. ಹಾಗೂ ತೆಂಗಿನ ಮರದ ಬುಡ ಸ್ವಚ್ಛ ಮಾಡುವ ಕೆಲಸ ಮಾಡಿದರು. ಸಮಯವನ್ನು ವ್ಯರ್ಥ ಮಾಡದೆ ಸಮಾಜದ ಕೆಲಸಕ್ಕಾಗಿ ತೊಡಗಿದ ಎಲ್ಲರಿಗೂ ಧನ್ಯವಾದಗಳು..
RJ ಮನವಿಗೆ ಸ್ಪಂದಿಸಿದ ಸುಬ್ರಹ್ಮಣ್ಯ ಯುವಕ, ಯುವತಿ ವೃಂದ ಪಾದೆಬೆಟ್ಟು
Posted On: 16 May 2020, 05:54 PM
ಕೊರೊನಾ ಸಂದರ್ಭ ಹಲವಾರು ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದ ಶ್ರೀ ಸುಬ್ರಹ್ಮಣ್ಯ ಯುವಕ,ಯುವತಿ ವೃಂದ ಪಾದೆಬೆಟ್ಟು ಪಡುಬಿದ್ರಿ ಇವರ ವತಿಯಿಂದ ನೀಡಲ್ಪಟ್ಟ ಅಕ್ಕಿಯನ್ನು ವಿಕ್ಕಿ ಮಡುಂಬು ಮತ್ತು ಆರ್ ಜೆ ಎರೋಲ್ ಮೂಲಕ ಹೆಜಮಾಡಿಯ ಅರ್ಹ ಕುಟುಂಬವೊಂದಕ್ಕೆ ನೀಡಲಾಯಿತು.
10 ವರ್ಷಗಳ 120 ಅಮಾವಾಸ್ಯೆಗಳನ್ನು ರಾಮೇಶ್ವರದಲ್ಲಿ ಕಳೆದ ಇನ್ನಂಜೆಯ ಐ ಕೃಷ್ಣಮೂರ್ತಿ
Posted On: 16 May 2020, 07:33 AM
ಆಸ್ತಿಕ ಅಭಿಮಾನಿಗಳಿಗೂಂದು ಸಂತಸದ ಸುದ್ದಿ! ಉಡುಪಿ ಜಿಲ್ಲೆ। ಕಾಪು ತಾಲೂಕು। ಇನ್ನಂಜೆ ಗ್ರಾಮ। ಪಲಿಮಾರು ಮಠದ ಶಿಷ್ಯವರ್ಗದವರಾದ ಐ.ಕೃಷ್ಣಮೂರ್ತಿ ಇವರು, ಇನ್ನಂಜೆಯಿಂದ ತಮಿಳುನಾಡಿನ ರಾಮೇಶ್ವರಕ್ಕೆ ಪ್ರತಿ ತಿಂಗಳ ಅಮಾವಾಸ್ಯೆಯ ಹಿಂದಿನ ದಿನಕ್ಕೆ ಸರಿಯಾಗಿ ಇಷ್ಟರವರೆಗೂ ಚಾಚು ತಪ್ಪದೆ ತೆರಳಿ, ಅಮಾವಾಸ್ಯೆಯಂದು ಅಲ್ಲಿ ಪಿತೃ ಮೋಕ್ಷವೆಂಬ ವೃತವನ್ನು ಕ್ಷೇತ್ರ ವಿಧಿಯ ರೂಪದಲ್ಲಿ ಮಾಡುತ್ತಾ ಬರುತ್ತಿದ್ದು, ಹತ್ತು ವರ್ಷಗಳ ನೂರ ಇಪ್ಪತ್ತು ಅಮಾವಾಸ್ಯೆಗಳನ್ನು ಇದೇ ಮೇ ತಿಂಗಳ 22ನೇ ತಾರೀಕಿನಂದು ಕ್ಷೇತ್ರ ವಿಧಿಯನ್ನು ಪೂರೈಸಿ, ಇನ್ನಂಜೆಗೆ ಮರಳಿ ಬಂದು, ಮುಂದಿನ ಅಮಾವಾಸ್ಯೆಯಿಂದ ಈ ವಿಧಿಯನ್ನು ಕುಂಜಾರು ಗಿರಿಯ ಪಾಜಕ ಕ್ಷೇತ್ರದಲ್ಲಿ ಮುಂದುವರಿಸಲು ನಿರ್ಧರಿಸಿರುತ್ತಾರೆ, ಹಾಗೂ ಈ ವೃತದ ಇನ್ನೊಂದು ಭಾಗವಾದ ಕಾಸರಗೋಡಿನ ಮಧೂರು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕೊಲ್ಲೂರು ಶ್ರೀ ಮೂಕಾಂಬಿಕೆಯ ದೇವಸ್ಥಾನದ ತನಕ, ದಿನಕ್ಕೊಂದು ದೇವಸ್ಥಾನದಲ್ಲಿ ಈ ಪಿತೃ ಮೋಕ್ಷ ಪ್ರಾಪ್ತಿಗೆ ಅನುಗ್ರಹ ರೂಪದ ಅಗ್ರ ಪೂಜೆ ಎಂಬ ಸೇವೆಯನ್ನು ನೂರ ಎಂಟು ದೇವಸ್ಥಾನಗಳಲ್ಲಿ ಸಲ್ಲಿಸಲಿದ್ದಾರೆ. ಆ ಬಳಿಕ ಸಾವಿರದ ಎಂಟು ಬ್ರಾಹ್ಮಣೋತ್ತಮರಿಗೆ ಫಲ ತಾಂಬೂಲ, ದಕ್ಷಿಣೆಯ ಬ್ರಾಹ್ಮಣಾರಾಧನೆ, ಅದರ ನಂತರ ಕನ್ಯಾಕುಮಾರಿಯಿಂದ ಬದರಿಯವರೆಗೆ ತೀರ್ಥಯಾತ್ರೆಯ ಸೇವೆಯನ್ನು ಕೈಗೊಳ್ಳಲಿದ್ದಾರೆ.ಈ ವೃತದ ಕೊನೆಯ ಅಂಗವಾಗಿ ಪ್ರಾಯಶ್ಚಿತ್ತ ಹೋಮಗಳನ್ನು ರಾಮೇಶ್ವರಂನ ದಿವ್ಯ ಸಾನಿಧ್ಯದಲ್ಲಿ ನಡೆಸಲಿದ್ದಾರೆ.. ಈ ಸಂದರ್ಭದಲ್ಲಿ, ಅ ವರ್ಗ ಈ ವರ್ಗ ಎಂಬ ಭೇದವಿಲ್ಲದೆ ಯಾರೇ ಆಗಲಿ ಈ ವೃತದ ಮೇಲೆ ಅಭಿಮಾನವಿಟ್ಟು, ಯಥಾಶಕ್ತಿ ದಕ್ಷಿಣೆಯ ರೂಪದ ದೇಣಿಗೆಯನ್ನು ಈ ವೃತದ ಯಶಸ್ಸಿಗಾಗಿ, ಕೆಳಗೆ ನಮೂದಿಸಿರುವ ಬ್ಯಾಂಕ್ ಖಾತೆಗೆ ಸಲ್ಲಿಸಬಹುದಾಗಿದೆ. M/S :- Shri Padmanandini Home Industries A/C number (Current account): 0822000100006001 IFSC: KARB0000082 Branch: Bantakal Udupi ಇತೀ, ಐ.ಕೃಷ್ಣಮೂರ್ತಿ ಅಭಿಮಾನಿಗಳು
ಚಿತ್ರಕಲೆ, ಅಭಿನಯ 'ಎಲ್ಲದಕ್ಕೂ ಸೈ' ಕಟಪಾಡಿ ಏಣಗುಡ್ಡೆಯ ಪ್ರಥಮ್ ಕಾಮತ್
Posted On: 15 May 2020, 07:40 PM
ಸಮಯವ ವ್ಯರ್ಥ ಮಾಡುವ ಇಂದಿನ ಮಕ್ಕಳಿಗೆ ಮಾದರಿ. ಜಾದು, ಆವೆಮಣ್ಣಿನ ಕಲಾಕೃತಿ, ಚಿತ್ರಕಲೆ, ಅಭಿನಯ ಎಲ್ಲಕ್ಕೂ ಸೈ. ಕಟಪಾಡಿ ಏಣಗುಡ್ಡೆಯ ಪ್ರಥಮ್ ಕಾಮತ್ ಸಾಮಾನ್ಯವಾಗಿ ರಜೆ ಬಂತೆಂದರೆ ಹೆತ್ತವರು ಮಕ್ಕಳ ಬಗೆಗೆ ಚಿಂತಿತರಾಗುತ್ತಾರೆ. ಕೆಲವರು ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ, ಮುಂದಿನ ತರಗತಿಯ ಟ್ಯೂಷನ್, ಅಜ್ಜಿಮನೆಗೆ ಕಳಿಸುತ್ತಾರೆ. ಆದರೆ ಪ್ರಸ್ತುತ ಸನ್ನಿವೇಶ ಹಾಗೆ ಇಲ್ಲ. ಕೊರೋನಾದ ಭೀತಿಯಿಂದ ಮನೆಯ ಹೊರಗೆ ಮಕ್ಕಳನ್ನು ಕಳುಹಿಸುವ ಹಾಗಿಲ್ಲ. ಬಹಳಷ್ಟು ಮಕ್ಕಳು ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಾರೆಂದು ಹೆತ್ತವರ ಚಿಂತೆ. ಆದರೆ ಇಲ್ಲೊಬ್ಬ ಬಾಲಕ ತಾನು ಬಿಡುವಿನ ವೇಳೆಯಲ್ಲಿ ಗುರುಗಳ ಬಳಿ ಕಲಿತ ವಿದ್ಯೆಯನ್ನು ಮನೆಯಲ್ಲಿ ಕಾರ್ಯರೂಪಕ್ಕೆ ತರುವುದಲ್ಲದೆ, ಮೊಬೈಲ್ ಹಿಡಿದುಕೊಂಡು ಸುಮ್ಮನೆ ಕಾಲ ಕಳೆಯುವ ಬದಲು ತನಗೆ ಉಪಯುಕ್ತವಾದಂತಹ ಕ್ಲೇ ಮಾಡೆಲಿಂಗ್, ಚಿತ್ರಕಲೆ, ಕರಕುಶಲ ಕಲೆ, ಅಡುಗೆ ತಯಾರಿ, ಜಾದು ಇತ್ಯಾದಿ ಕಲಿಯುತ್ತಿರುತ್ತಾನೆ. ಬಾಲ್ಯದಲ್ಲೇ ಇಂತಹ ಹಲವಾರು ಹವ್ಯಾಸಗಳನ್ನು ಮೈಗೂಡಿಕೊಂಡ ಈ ಬಾಲಕ ಕಟಪಾಡಿಯ ಏಣಗುಡ್ಡೆ ಗ್ರಾಮದ ಪ್ರಸಿದ್ಧ ನಾಟಕ,ಕಿರುಚಿತ್ರ,ಸಿನಿಮಾ ಕಲಾವಿದರಾದ ಕೆ. ನಾಗೇಶ್ ಕಾಮತ್ ಮತ್ತು ಕೆ. ಸುಜಾತ ಕಾಮತ್ ದಂಪತಿಯ ಪುತ್ರ ಕೆ. ಪ್ರಥಮ್ ಕಾಮತ್. ಕಟಪಾಡಿಯ ಎಸ್.ವಿ.ಕೆ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ಪ್ರಥಮ್ ಕಾಮತ್ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಿತರಾಗಿರುವುದಲ್ಲದೆ ಹಲವಾರು ಕಡೆ ಸನ್ಮಾನಿತರಾಗಿದ್ದಾರೆ. ಓರ್ವ ಬಾಲ ಜಾದುಗಾರನಾಗಿ : ಹಲವಾರು ವೇದಿಕೆಗಳಲ್ಲಿ ಸುಮಾರು 30ಕ್ಕೂ ಅಧಿಕ ಜಾದು ಪ್ರದರ್ಶನ ನೀಡಿದ್ದಾರೆ. ವಿಜಯಕರ್ನಾಟಕ ದಿನಪತ್ರಿಕೆ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಖಾಲಿ ಪಾತ್ರೆಗೆ ಬೆಂಕಿ ಹಾಕಿ ಮೀನುಗಳನ್ನು ತೆಗೆಯುವ ಮೂಲಕ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅಚ್ಚರಿಪಡಿಸಿದ್ದಾರೆ. ಬಾಲ ವೇದಿಕೆ ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ಡ್ರಾಯಿಂಗ್ ವಿತ್ ಮ್ಯಾಜಿಕ್ ಪ್ರದರ್ಶನ, ಉದಯವಾಣಿ ಮತ್ತು ಗೀತಾಂಜಲಿ ಸಿಲ್ಕ್ಸ್ ಉಡುಪಿ ಇವರ ವತಿಯಿಂದ ನಡೆದ ಯಶೋಧಾಕೃಷ್ಣ ಕಾರ್ಯಕ್ರಮ, ಹೊಸ ಬೆಳಕು ಸೇವಾ ಟ್ರಸ್ಟ್ ಮಣಿಪಾಲ ಇವರ ಕಾರ್ಯಕ್ರಮದಲ್ಲಿ ಆಶ್ರಮ ವಾಸಿಗಳ ಜೊತೆ ಜಾದೂ ಪ್ರದರ್ಶನ, ಉಡುಪಿ ಜಿ.ಎಸ್.ಬಿ ಸಮಾಜದ ಘರ್ ಘರ್ ಭಜನಾಂತರಂಗದ 100ನೇ ಕಾರ್ಯಕ್ರಮದಲ್ಲಿ ಪ್ರದರ್ಶನ, ಮಕ್ಕಳ ದಿನಾಚರಣೆಯ ಅಂಗವಾಗಿ ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಜಾದೂ ಪ್ರದರ್ಶನ. ಇದಲ್ಲದೆ ಚಲನಚಿತ್ರ ನಟ ಶ್ರೀನಗರ ಕಿಟ್ಟಿಯವರೊಂದಿಗಿನ ಉದಯ ಟಿ.ವಿಯ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಜಾದು ಪ್ರದರ್ಶನ ನೀಡಿರುತ್ತಾರೆ. ಆವೆ ಮಣ್ಣಿನ ಕಲಾಕೃತಿ ರಚನೆಯಲ್ಲಿ : ಹಲವಾರು ಕಲಾಕೃತಿಗಳನ್ನು ಆವೆಮಣ್ಣಿನಿಂದ ರಚಿಸಿದ್ದು ಇದು ಪ್ರಥಮ್ ಕಾಮತ್ ರ ನೆಚ್ಚಿನ ಹವ್ಯಾಸವಾಗಿದೆ. ಈಗಾಗಲೇ ಪ್ರತಿಭಾಕಾರಂಜಿಯಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರ ಇತ್ತೀಚಿನ ಕೊರೊನ ಲಾಕ್ಡೌನ್ ಸಮಯದಲ್ಲಿ ಬೆಂಕಿಕಡ್ಡಿ, ಸ್ಟ್ರಾ, ಆವೆಮಣ್ಣು ಬಳಸಿ ಮಾಡಿದ ಕೊರೊನ ಸಂಬಂಧಿತ ಜಾಗೃತಿ ಕಲಾಕೃತಿ ಸಾರ್ವಜನಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಕಲೆ, ಕ್ರಾಫ್ಟ್, ಛದ್ಮವೇಷ, ಅಭಿನಯದಲ್ಲಿ ಪ್ರಥಮ್ : ಚಿತ್ರಕಲೆಗೆ ಸಂಬಂಧಿಸಿದಂತೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ 3 ಬಾರಿ ಬಹುಮಾನ ಪಡೆದವರಾಗಿದ್ದಾರೆ. ರಾಜ್ಯಮಟ್ಟದ ಕಲಾಶ್ರೀ ಶಿಬಿರ 2016 ರಲ್ಲಿ ಭಾಗವಹಿಸಿದ್ದಾರೆ. ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಪೆಟ್ರೊಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ ಅಂತಿಮ 100 ಸ್ಪರ್ಧಿಗಳಲ್ಲಿ ಇವರೂ ಒಬ್ಬರಾಗಿ ರಾಷ್ಟ್ರಮಟ್ಟದ ಸಮಾಧಾನಕರ ಬಹುಮಾನ ಗಳಿಸಿದ್ದಾರೆ. ಪೇಪರ್ ಕ್ರಾಫ್ಟ್ ನಲ್ಲಿ ಪರಿಣಿತರಾಗಿರುವ ಇವರು ಅಡುಗೆ ತಯಾರಿಯ ಬಗೆಯೂ ಆಸಕ್ತಿ ಹೊಂದಿದ್ದಾರೆ. ಛದ್ಮವೇಷ ಸ್ಪರ್ಧೆಯಲ್ಲಿ ಮತ್ತು ಕಿರುಚಿತ್ರವೊಂದರಲ್ಲಿಯೂ ನಟಿಸಿರುವ ಇವರು ಅಭಿನಯದತ್ತವೂ ಆಕರ್ಷಿತರಾಗಿದ್ದಾರೆ. ಸಂದ ಪ್ರಶಸ್ತಿ-ಗೌರವಗಳು : ಇವರ ಚಿತ್ರಕಲೆ, ಕ್ರಾಫ್ಟ್, ಕ್ಲೇ ಮಾಡಲಿಂಗ್, ಜಾದು,ಅಭಿನಯದ ಅಸಾಧಾರಣ ಸಾಧನೆಗಾಗಿ 2019-20ನೇ ಸಾಲಿನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ "ಹೊಯ್ಸಳ ಪ್ರಶಸ್ತಿ" ಪಡೆದವರಾಗಿರುತ್ತಾರೆ. ಕಾರ್ಕಳದಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ "ಕರ್ನಾಟಕ ಪ್ರತಿಭಾ ರತ್ನ" ರಾಜ್ಯಮಟ್ಟದ ಗೌರವ ಪ್ರಶಸ್ತಿ ಪಡೆದಿರುತ್ತಾರೆ. ಇವರ ಪ್ರತಿಭೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಮಂಗಳೂರಿನ ಖಾಸಗಿ ವಾಹಿನಿ ದಾಯ್ಜಿ ವಲ್ಡ್೯ನಲ್ಲಿ ದಿನೇಶ್ ಅತ್ತಾವರ ನಡೆಸಿಕೊಡುವ ಸಂದರ್ಶನ ಕಾರ್ಯಕ್ರಮ 'ದಾಯ್ಜಿ ಸ್ಪೆಷಲ್ ಅಜ್ಜಿಡ ಕುಸಲ್' ನಲ್ಲಿ ಭಾಗವಹಿಸಿರುತ್ತಾರೆ. ಪ್ರಥಮ್ ಕಾಮತ್ ಚಿತ್ರಕಲೆ ಹಾಗು ಕ್ರಾಫ್ಟ್ ಕಲಿಕೆಯನ್ನು ರಮೇಶ್ ರಾವ್ ನೇತೃತ್ವದ ಉಡುಪಿ ದೃಶ್ಯ ಸ್ಕೂಲ್ ಆಯ ಆಟ್ಸ್೯ನಲ್ಲಿ , ಕ್ಲೇ ಮಾಡಲಿಂಗ್ ನ್ನು ವೆಂಕಿ ಪಲಿಮಾರ್ ಬಳಿ, ಜಾದೂ ಕಲೆಯನ್ನು ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಸತೀಶ್ ಹೆಮ್ಮಾಡಿ ಬಳಿ ಕಲಿಯುತ್ತಿದ್ದಾರೆ. ಯುವ ಜನಾಂಗಕ್ಕೆ ಮಾದರಿಯಾಗಿ ಇನ್ನಷ್ಟು ಸಾಧನೆಗಳು ಇವರಿಂದಾಗಲಿ. ಆಲ್ ದಿ ಬೆಸ್ಟ್ ಪ್ರಥಮ್ ಕಾಮತ್.. ✍️ ಬರಹ - ದೀಪಕ್ ಕೆ. ಬೀರ ಪಡುಬಿದ್ರಿ
ತುಳುನಾಡ್ದ ಪ್ರತಿಭೆಲು ಆಯೋಜಿಸಿದ 'ನಲಿಪು ನವಿಲೆ' ನೃತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟ
Posted On: 15 May 2020, 07:11 PM
ತುಳುನಾಡ್ದ ಪ್ರತಿಭೆಲು ಫೇಸ್ಬುಕ್ ತಂಡ ಆಯೋಜಿಸಿದ "ನಲಿಪು ನವಿಲೆ" ನೃತ್ಯ ಸ್ಪರ್ಧೆಯಲ್ಲಿ ಅನೇಕ ಸ್ಪರ್ಧಿಗಳು ಭಾಗವಹಿಸಿದ್ದು, ನಾವೆಲ್ಲರೂ ಸಂತಸ ಅನುಭವಿಸಿದ್ದೇವೆ. ಭಾಗವಹಿಸಿದ ಸ್ಪರ್ಧಿಗಳ ಕಲಾ ಉತ್ಸಾಹ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸುವಲ್ಲಿ ತಮ್ಮ ತಯಾರಿ ನಡೆಸಿದ ರೀತಿ ನಮಗೆಲ್ಲರಿಗೂ ಸ್ಫೂರ್ತಿದಾಯಕ. ಕರಾವಳಿಯ ಪ್ರತಿಭೆಗಳಿಗೆ ಉನ್ನತ ಮಟ್ಟದ ವೇದಿಕೆ ನಿರ್ಮಾಣ ನಮ್ಮ ಉದ್ದೇಶವಾಗಿದ್ದು, ಒದಗಿಸಿದ ಅವಕಾಶವನ್ನು ಅತ್ಯುನ್ನತ ಮಟ್ಟಿನಲ್ಲಿ ಸದುಪಯೋಗ ಗೊಳಿಸಿದ ಸ್ಪರ್ಧಿಗಳನ್ನು ಕಂಡ ತುಳುನಾಡ್ದ ಪ್ರತಿಭೆಲು ತಂಡದ ಸದಸ್ಯರು ನಾವೇ ಧನ್ಯರು. ಭಾಗವಹಿಸಿದ ಸ್ಪರ್ಧಿಗಳ ಕಲಾ ಉತ್ಸಾಹ, ಚಾತುರ್ಯಕ್ಕೆ ನಮ್ಮ ತಂಡದ ಪರವಾಗಿ ಸರ್ವರಿಗೂ ಅನಂತಾನಂತ ವಂದನೆಗಳು. ಸ್ಪರ್ಧೆಯ ಫಲಿತಾಂಶ: ತೀರ್ಪುಗಾರರಾದ ಸುಜಯ್ ಶಾನಭಾಗ್ ಇವರು, ಸ್ಪರ್ಧಿಗಳ ನೃತ್ಯವನ್ನು ಕಂಡು ಈ ರೀತಿ ತೀರ್ಪು ನೀಡಿದ್ದಾರೆ: ೧) ವೃಷ್ಟಿ ನಾಯಕ್ Contestant no:೨೯ ೨) ತ್ರಿಶಾ ಪೂಜಾರಿ Contestant no:೪೧ ೩) ತನ್ವಿ ಶೆಟ್ಟಿ Contestant no:೫೫ ೪) ಖುಷಿ ಶೆಟ್ಟಿ Contestant no:೨೩ ೫) ಸಂಪೂರ್ಣ ಮತ್ತು ಸಿದ್ದಿ Contestant no:೩೩ ಸ್ಪರ್ಧೆಯ ವಿಜೇತರಿಗೆ ತುಳುನಾಡ್ದ ಪ್ರತಿಭೆಲು ತಂಡ ಶುಭಕೋರುತ್ತದೆ.
ಕಾಪು ಕರಂದಾಡಿ ನಿವಾಸಿಯ ಕ್ಯಾನ್ಸರ್ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಿರಾ?
Posted On: 14 May 2020, 05:53 PM
ಉಡುಪಿ : ಚಾಲಕರಾಗಿ ದುಡಿಯುತ್ತಿದ್ದ ಕಾಪು ಕರಂದಾಡಿ ನಿವಾಸಿ ಎಂ.ಅಶ್ರಫ್ (35) ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಇವರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡಲಾಗಿದೆ. ಚಾಲಕರಾಗಿ ದುಡಿಯುತ್ತಿದ್ದ ಇವರಿಗೆ ಕಳೆದ ಜನವರಿಯಲ್ಲಿ ಪರೀಕ್ಷೆ ಮಾಡಿದಾಗ ಕ್ಯಾನ್ಸರ್ ಕಾಯಿಲೆ ಇರುವುದು ದೃಢಪಟ್ಟಿತ್ತು. ಇದೀಗ ಅವರು ಆರೋಗ್ಯ ಕ್ಷೀಣಿಸುತ್ತಿದ್ದು, ಎದ್ದು ನಿಂತು ಕೆಲಸ ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಇವರಿಗೆ ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿದ್ದಾರೆ. ತೀರಾ ಬಡ ಕುಟುಂಬ ಇವರದ್ದಾಗಿದ್ದು, ಇವರೇ ಈ ಕುಟುಂಬದ ಆಧಾರ ಸ್ತಂಭ ಆಗಿದ್ದಾರೆ. ಆದರೆ ಈಗ ದುಡಿಯಲು ಸಾಧ್ಯವಾಗದೆ ಕುಟುಂಬ ನಿರ್ವಹಣೆ ಮತ್ತು ಚಿಕಿತ್ಸೆಗೆ ಆದಾಯ ಇಲ್ಲದೆ ಇಡೀ ಕುಟುಂಬ ಸಂಕಷ್ಟ ಪಡುತ್ತಿದೆ. ಇವರ ಚಿಕಿತ್ಸೆಗೆ ತಿಂಗಳಿಗೆ ಸುಮಾರು 40 ರಿಂದ 50 ಸಾವಿರ ರೂ. ವ್ಯಯವಾಗುತ್ತಿದೆ. ಆದುದರಿಂದ ದಾನಿಗಳು ಇವರ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಎಂ.ಅಶ್ರಫ್ ಕೆ., ಕೆನರಾ ಬ್ಯಾಂಕ್ ಕಾಪು ಶಾಖೆಯ ಖಾತೆ ನಂಬರ್ 2409101008846, ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ0002409 ಇಲ್ಲಿಗೆ ಹಣ ಕಳುಹಿಸಬಹುದು. ಇವರ ಮೊಬೈಲ್ ನಂಬರ್- 8970251983. ಇವರ ವಿಳಾಸ- ಹೌಸ್ ನಂಬರ್ 029, ಪಂಜಿತ್ತೂರು, ಕರಂದಾಡಿ, ಮಜೂರು, ಕಾಪು ತಾಲೂಕು, ಉಡುಪಿ ಜಿಲ್ಲೆ. 574106.
