ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿಗೆ ಮುಖ್ಯಮಂತ್ರಿಗಳಿಂದ ಹಸಿರು ನಿಶಾನೆ ; ಮುಂದಿನ ಬಜೆಟ್ ನಲ್ಲಿ ಘೋಷಣೆ
ಕಾಪು : ಈಡಿಗ, ಬಿಲ್ಲವ, ನಾಮದಾರಿಗಳು ಸೇರಿದಂತೆ 26 ಉಪಪಂಗಡಗಳ ಬಹಳ ದಿನಗಳ ಬೇಡಿಕೆಯಾದ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದರು.
ಈ ಬಗ್ಗೆ ಮುಖ್ಯಮಂತ್ರಿಗಳು ಮುಂದಿನ ಆಯವ್ಯದಲ್ಲಿ ಸೂಕ್ತ ಅನುದಾನವನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶ ಸ್ಥಾಪಿಸಲಾಗಿದ್ದು, ಅದನ್ನು ಪರಿವರ್ತಿಸಿ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿ ರಚಿಸುವುದಾಗಿ ಹೇಳಿದರು. ಈ ಬಗ್ಗೆ ಮುಂದಿನ ಬಜೆಟ್ ನಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೆ ರಘುಪತಿ ಭಟ್, ಬಿಲ್ಲವ ಸಮಾಜದ ಸ್ವಾಮೀಜಿಗಳು, ಮುಖಂಡರುಗಳ ನಿಯೋಗ ಜನವರಿ 5, ಗುರುವಾರದಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡಿತ್ತು.
ಈ ಬಗ್ಗೆ ನಿಯೋಗದಲ್ಲಿ ಇದ್ದ ಗೀತಾಂಜಲಿ ಸುವರ್ಣ ಮುಖ್ಯಮಂತ್ರಿಗಳ ನಿರ್ಧಾರವನ್ನು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಶ್ರೀ ರೇಣುಕಾಪೀಠದ ಗುರುಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸೋಲೂರು ಮಠದ ಆರ್ಯಶ್ರೀ ರೇಣುಕಾನಂದ ಸ್ವಾಮೀಜಿ, ಸಾಗರ ಶಾಸಕರು ಎಂ.ಎಸ್.ಐ.ಎಲ್.ನಿಗಮ ಮಂಡಳಿ ಅಧ್ಯಕ್ಷರಾದ ಹರತಾಲು ಹಾಲಪ್ಪ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಭಟ್ಕಳ ಶಾಸಕರಾದ ಸುನೀಲ್ ನಾಯ್ಕ್, ಬಿಲ್ಲವ ಸಮಾಜದ ಮುಖಂಡರಾದ ಪ್ರವೀಣ್ ಪೂಜಾರಿ, ಬಿ ಎನ್ ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
