ಕಾಪು : ಬೃಹತ್ ಉದ್ಯೋಗ ಮೇಳ ; ಕಂಪನಿಗಳು ಉದ್ಯೋಗದ ದಾರಿ ಕಲ್ಪಿಸಿ ಕೊಡಿ - ಕೂರ್ಮಾ ರಾವ್ ಎಂ
ಕಾಪು : ಕೌಶಲ ಕರ್ನಾಟಕ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮ ಬೆಂಗಳೂರು, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಉಡುಪಿ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು ಇದರ ಸಹಯೋಗದೊಂದಿಗೆ ಕಾಪು ಉದ್ಯೋಗ ಮೇಳವನ್ನು ಭಾನುವಾರ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕರ್ನಾಟಕದ ಸುಮಾರು 40 ಕಂಪನಿ ಗಳು ಈ ಮೇಳದಲ್ಲಿ ಭಾಗವಹಿಸಿವೆ. ಉದ್ಯೋಗ ನೀಡುವ ಕಂಪನಿಗಳು ದಾರಿ ಕಲ್ಪಿಸಿ ಕೊಡಿ, ಉತ್ತಮ ರೀತಿಯಲ್ಲಿ ಆಯ್ಕೆ ಮಾಡಿ ಅವರ ಜೀವನಕ್ಕೆ ಅವಕಾಶ ಮಾಡಿ ಕೊಡಿ, ಒಂದುಹಸಿದ ಹೊಟ್ಟೆಗೆ ಅನ್ನ ನೀಡಿದಲ್ಲಿ ಅದು ಕ್ಷಣಿಕ ಹಸಿವನ್ನು ನೀಗಿಸಬಹುದು. ಆದರೆ ಒಂದು ಉದ್ಯೋಗ ನೀಡಿದಲ್ಲಿ ಅದು ಜೀವನ ಪೂರ್ತಿ ಹಸಿವು ನೀಗಿಸಲು ಸಹಕಾರಿಯಾದೀತು. ಇಂದು ಇಲ್ಲಿಗೆ ಬಂದ ಎಲ್ಲರೂ ಉದ್ಯೋಗ ಪಡೆಯಲು ಅಸಾಧ್ಯ ಆದರೆ ಯಾರೂ ನಿರಾಶೆಪಡದಿರಿ. ಇನ್ನೂ ಅವಕಾಶ ದೊರೆಯುತ್ತವೆ ಎಂದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ ದಿನನಿತ್ಯ ಹಲವಾರು ಉದ್ಯೋಗಾಕಾಂಕ್ಷಿಗಳ ಅರ್ಜಿಗಳು ಬರುತ್ತಿದ್ದ ಕಾರಣ ಸಚಿವರಾದ ಅಶ್ವಥ್ ನಾರಾಯಣ್ ಅಭಿಪ್ರಾಯದಂತೆ ಈ ಕಾಪು ಉದ್ಯೋಗ ಮೇಳ ಆಯೋಜಿಸಿದೆ. ಇದರ ಸದುಪಯೋಗವನ್ನು ಉದ್ಯೋಗಾಕಾಂಕ್ಷಿ ಗಳು ಪಡೆಯಲು ಕರೆಕೊಟ್ಟರು. ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಾಕಾಂಕ್ಷಿಗಳು ಹಾಜರಿದ್ದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ನಿರ್ದೇಶಕ ಗಿರಿಧರ್ ರಾವ್ ಇವರನ್ನು ಸನ್ಮಾನಿಸಲಾಯಿತು.
ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಕರ್ಣಿ, ಕಾಪು ಪುರಸಭಾ ಅಧಿಕಾರಿ ವೆಂಕಟೇಶ್ ನಾವಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಹರ್ಷವರ್ಧನ್, ಕಿಶೋರ್ ಆಳ್ವ ಅಶೋಕ್ ಶೆಟ್ಟಿ, ಮಟ್ಟಾರು ರತ್ನಾಕರ್ ಹೆಗ್ಡೆ, ಪ್ರಾಂಶುಪಾಲ ಸ್ಟೀವನ್ ಕ್ವಾರ್ಡಸ್, ಗಿರಿಧರ್ ರಾವ್ ಮುಂತಾದವರು ಉಪಸ್ಥಿತರಿದ್ದರು.
