ಉಡುಪಿ ಅಂಚೆ ವಿಭಾಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
Thumbnail
ಉಡುಪಿ : ಅವಿಭಕ್ತ ಕುಟುಂಬದಲ್ಲಿದ್ದುಕೊಂಡು ಸರ್ವರ ಜವಾಬ್ದಾರಿಯನ್ನು ವಹಿಸಿಕೊಂಡು ಹಿರಿಯರ ಆರೈಕೆಯೊಂದಿಗೆ ಕಿರಿಯರ ಯೋಗ ಕ್ಷೇಮದ ಕಾಳಜಿ ಮಾಡುತ್ತಾ ತಮ್ಮ ತುಂಬು ಸಂಸಾರವನ್ನು ತೂಗಿಸುತ್ತಿದ್ದ ಆಗಿನ ಕಾಲದ ಹೆಚ್ಚು ಕಲಿಯದ ಅನಕ್ಷರಸ್ಥ ಮಹಿಳೆ ಕೂಡ ಅಭಿನಂದನಾರ್ಹಳು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅಭಿಪ್ರಾಯಪಟ್ಟರು. ಉಡುಪಿ ಅಂಚೆ ವಿಭಾಗ ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮ ದಲ್ಲಿ ಸಭಾಧ್ಯಕ್ಷತೆ ವಹಿಸಿ ಐವರು ಮಹಿಳಾ ಸಾಧಕರನ್ನು ಗುರುತಿಸಿ ಮಾತನಾಡಿದ ಅವರು ದಿನಚರಿಯ ತಮ್ಮ ಕರ್ತವ್ಯದ ಜೊತೆ ಇಲಾಖೆಗೆ ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸಿದ ಐವರ ಮಹಿಳಾ ಸಾಧಕರನ್ನು ಸನ್ಮಾನಿಸಿ, ಶುಭ ಹಾರೈಸಿದರು. ಅಂತರಾಷ್ಟ್ರೀಯ ಮಹಿಳಾ ದಿನವನ್ನು ಹ್ಯಾಪಿ ವುಮೆನ್ಸ್ ಡೇ ಎಂದು ವಿನ್ಯಾಸಗೊಳಿಸಿದ ಕೇಕ್ ಅನ್ನು ಸಾಹಿತಿ ನಿರೂಪಕಿ ಅಮಿತಾಂಜಲಿ ಕಿರಣ್ ರವರು ತುಂಡರಿಸಿ ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಅವರು ಪುರುಷ ಹಾಗೂ ಮಹಿಳಾ ಸಹೋದ್ಯೋಗಿಗಳು ಒಟ್ಟಾಗಿ ಬಲು ಸಡಗರದಿಂದ ಆಚರಿಸುತ್ತಿರುವ ಮಹಿಳಾ ದಿನಾಚರಣೆಯನ್ನು ಕೊಂಡಾಡಿ ಸಂಭ್ರಮಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ವಸಂತ್ ರವರು ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ್ ಭಟ್ ರವರು ಮಹಿಳಾ ದಿನಾಚರಣೆಯ ಬಗ್ಗೆ ಪ್ರಸ್ತಾವನೆಯ ಮಾತುಗಳನ್ನಾಡಿದರು. ಸವಿತಾ ಶೆಟ್ಟಿಗಾರ್ ಪ್ರಾರ್ಥಿಸಿದರು. ಸಹೋದ್ಯೋಗಿಗಳಿಗೆ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ, ಸೀರೆಯಲ್ಲಿ‌ ನೀರೆಯರು ಸ್ಪರ್ಧೆ ಹಾಗೂ ಸಂಗೀತ ಕುರ್ಚಿ ಸ್ಪರ್ಧೆ ನಡೆದು ಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ಚಿತ್ರಾ ದೇವಾಡಿಗ ವಾಚಿಸಿದರು. ಆಶಾಲತಾ ಮಹಿಳಾ ಸಾಧಕರ ವಿವರ ನೀಡಿದರು .ಅಂಚೆ ಇಲಾಖಾ ನಿವೃತ್ತ ಉದ್ಯೋಗಿ ಚಂದ್ರಿಕಾ ಉಪಸ್ಥಿತರಿದ್ದರು. ವಿಭಾಗಿಯ ಅಂಚೆ ಕಚೇರಿಯ ಅನಿತಾ ಕಾರ್ಯಕ್ರಮ ವನ್ನು ಸಂಯೋಜಿಸಿದ್ದರು. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆಪಾಲಕ ಗುರುಪ್ರಸಾದ್ ವಂದಿಸಿದರು.
09 Mar 2023, 01:23 PM
Category: Kaup
Tags: