ಶಿರ್ವ : ಪತ್ರಿಕಾರಂಗದ ಸೇವೆಗಾಗಿ ಉಪಾಧ್ಯಾಯ ಸಮ್ಮಾನ್ ವಿಶೇಷ ಪ್ರಶಸ್ತಿ ಪುರಸ್ಕೃತರಾದ ಬಿ. ಪುಂಡಲೀಕ ಮರಾಠೆ
ಶಿರ್ವ : ಮೂಡುಬೆಳ್ಳೆ ಕಲಾ ಪ್ರತಿಷ್ಠಾನ ವತಿಯಿಂದ ನೀಡಲಾಗುವ ರಾಜ್ಯಮಟ್ಟದ 9ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಾಧ್ಯಾಯ ಸಮ್ಮಾನ್ ವಿಶೇಷ ಪ್ರಶಸ್ತಿಯನ್ನು ಪತ್ರಿಕಾರಂಗದ ಸೇವೆಗಾಗಿ ಪತ್ರಕರ್ತ ಬಿ. ಪುಂಡಲೀಕ ಮರಾಠೆಯವರಿಗೆ ಎಪ್ರಿಲ್ 23 ರಂದು ನೀಡಿ ಗೌರವಿಸಲಾಯಿತು.
ಬಿ. ಪುಂಡಲೀಕ ಮರಾಠೆಯವರು ಪ್ರಸ್ತುತ ಕಾಪು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸಾಹಿತ್ಯ ಕ್ಷೇತ್ರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಉಡುಪಿ ರಥಬೀದಿ ಶ್ರೀರಾಘವೇಂದ್ರ ಮಠದ ಶ್ರೀ ಮಂತ್ರಾಲಯ ಸಭಾಮಂದಿರದಲ್ಲಿ ಜರಗಿತು.
ಅತಿಥಿಗಳಾಗಿ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕರಾದ ಮಿಥುನ್ ಆರ್. ಹೆಗ್ಡೆ, ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಇಲಾಖೆಯ ನಿವೃತ್ತ ಸಹನಿರ್ದೇಶಕರು ಮತ್ತು ಇಸ್ಕಾನ್ ಅಕ್ಷಯ ಪಾತ್ರೆ ಪ್ರತಿಷ್ಠಾನ, ಬೆಂಗಳೂರು ಶೈಕ್ಷಣಿಕ ಸಲಹೆಗಾರರಾದ ಸಿ.ವಿ.ತಿರುಮಲ ರಾವ್ ವಹಿಸಿದ್ದರು.
ಈ ಸಂದರ್ಭ ಮಾಧವ ಉಪಾಧ್ಯಾಯ, ನಾಗರತ್ನ ಉಪಾಧ್ಯಾಯ, ರಮಾಕಾಂತ ಉಪಾಧ್ಯಾಯ, ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನದ ಅಧ್ಯಕ್ಷ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ, ಪ್ರದ್ಯುಮ್ನ ಉಪಾಧ್ಯಾಯ, ಡಾ.ಪ್ರಮೋದನ ಉಪಾಧ್ಯಾಯ, ಸಂಧ್ಯಾ ಉಪಾಧ್ಯಾಯ ಉಪಸ್ಥಿತರಿದ್ದರು.
