ಕೇರಳದ ಬ್ರಾಹ್ಮಣರ ಬೆನ್ನತ್ತಿ ಬಂದು ಇನ್ನಂಜೆ ಗ್ರಾಮದ ಮಂಡೇಡಿಯಲ್ಲಿ ನೆಲೆಯಾದ ಕೊರತಿ ದೈವ
ಸುಮಾರು ನೂರಾರು ವರುಷಗಳ ಹಿಂದೆ ಕೇರಳದ ಬ್ರಾಹ್ಮಣ ಕುಟುಂಬವೊಂದರ ಭಕ್ತಿಗೆ ಬೆನ್ನತಿ ಬಂದ ಕೊರತಿ ದೈವವು ಮಂಡೇಡಿಯ ಬಾಕ್ಯಾರಿನ ಜಾಗವೊಂದರಲ್ಲಿ ಪರಿವಾರ ದೈವಗಳಾದ ಬೊಬ್ಬರ್ಯ, ಪಂಜುರ್ಲಿ, ನೀಚ ಮತ್ತು ಗುಳಿಗ ದೈವದೊಂದಿಗೆ ನೆಲೆಯಾಗಿ ಮುಂದೆ ಆ ಜಾಗವು ಕೊರತಿ ಬಾಕ್ಯಾರು ಎಂಬ ಹೆಸರಿನಿಂದಲೇ ಪ್ರಸಿದ್ದಿಯಾಗಿ ಪಂಚದೈವಗಳ ಸಾನಿಧ್ಯವೆಂದೇ ಹೆಸರಾಯಿತು.
ಕಾಲಕ್ರಮೇಣ 33 ವರ್ಷಗಳ ಹಿಂದೆ ಕೊಂಕಣ ರೈಲ್ವೆಯವರು ಟ್ರ್ಯಾಕ್ ನಿರ್ಮಿಸುವ ಸಂದರ್ಭದಲ್ಲಿ ಗುಡಿಯನ್ನು ಹಿಂದೆ ಇದ್ದ ಜಾಗದಿಂದ ತೆರವುಗೊಳಿಸಬೇಕಾದಾಗ 5,000 ರೂಪಾಯಿಯನ್ನು ನೀಡಿ ಕೈ ತೊಳೆದುಕೊಂಡಿದ್ದರು, ಆಗ ಆ ಕುಟುಂಬ ದೈವವನ್ನು ಬಿಟ್ಟು, ನಾಗನ ಕಲ್ಲನ್ನು ನೀರಿಗೆ ವಿಸರ್ಜಿಸಿ ಅಲ್ಲಿಂದ ಬೇರೆ ಕಡೆಗೆ ತೆರಳಿದ್ದರು.
ಮಂಡೇಡಿ ಗ್ರಾಮಕ್ಕೆ ಸಂಬಂಧಪಟ್ಟ ಅಸುಪಾಸಿನ ಹತ್ತು ಮನೆಯವರು ಸೇರಿ ಬ್ರಾಹ್ಮಣರ ಜಾಗದಲ್ಲಿಯೇ ಚಲನೆ ಮಾಡಿ ದೈವವನ್ನು ತೆಂಗಿನಕಾಯಿಗೆ ಅವಾಹನೆ ಮಾಡಿ ಹಾಲಿನ ಮರಕ್ಕೆ ಕಟ್ಟಿ ಇಟ್ಟಿದ್ದರು, ರೈಲ್ವೆ ಟ್ರ್ಯಾಕ್ನ ಕೆಲಸಕ್ಕೆ ಬಂದಿದ್ದ ಜೇಸಿಬಿಯವರು ಆ ತೆಂಗಿನಕಾಯಿಯನ್ನು ಒಡೆದು ತಿಂದಿದ್ದರು ಪರಿಣಾಮ ಎಷ್ಟೇ ಪ್ರಯತ್ನ ಪಟ್ಟರು ಜೇಸಿಬಿ ಕೆಟ್ಟು ಹೋಗಿ ಕೆಲಸ ಮುಂದೆ ಸಾಗಲಿಲ್ಲ, ದೊಡ್ಡ ದೊಡ್ಡ ಮೆಕ್ಯಾನಿಕ್ಗಳನ್ನು ಕರೆಸಿದರು ಕೂಡಾ ಜೇಸಿಬಿ ಮುಂದೆ ಸಾಗದೇ ಇದ್ದಾಗ ದೇವರ ಮೊರೆ ಹೋಗುವುದೋ, ದೈವಜ್ಞರ ಮೊರೆ ಹೋಗುವುದೋ ಅನಿವಾರ್ಯವಾಯಿತು.
ಅವರಿಗೆ ತಿಳಿದ ಕೇರಳದ ಮಾಂತ್ರಿಕರೊಬ್ಬರನ್ನು ಕರೆಸಿ ಕೇಳಿದಾಗ ಅವರು ಸಾನಿಧ್ಯದ ಬಗ್ಗೆ ಹೇಳಲಾಗಿ ತೆಂಗಿನಕಾಯಿಯನ್ನು ತಿಂದ ಬಗ್ಗೆ ಗೋಚರಕ್ಕೆ ಬಂದು ದೈವವನ್ನು ಪ್ರತಿಷ್ಠೆ ಮಾಡದೇ ಇದ್ದರೆ ಜೇಸಿಬಿ ಯಾವುದೇ ಕಾರಣಕ್ಕೂ ಮುಂದೆ ಹೋಗುವುದಿಲ್ಲ, ಎಂದು ಕಾಣಿಸುತ್ತದೆ.
ಕಲ್ಲು ಹಾಕಿ ದೈವವನ್ನು ನಂಬಿದ ನಂತರ ಜೇಸಿಬಿ ಪುನಃ ಎಂದಿನಂತೆ ಕೆಲಸ ಮಾಡಲಾರಂಭಿಸಿತು.
ಬ್ರಾಹ್ಮಣರೊಬ್ಬರು ಅಲ್ಲಿನ ಕಾಡಿನಲ್ಲಿ ಇದ್ದ ಪಂಜುರ್ಲಿಯ ಕಲ್ಲಿನಲ್ಲಿ ಬಲ ಕಾಲಿನ ಹೆಜ್ಜೆಯ ಗುರುತಿನಂತಿದ್ದು ಆಕಾರವಿಲ್ಲದ ಸುಂದರವಾದ ಕಲ್ಲನ್ನು ತನ್ನ ಮನೆಯ ದನದ ಕೊಟ್ಟಿಗೆಯಲ್ಲಿ ತಂದು ಹಾಕಿದರು ಆ ದಿನ ಹಸುವಿನ ಹಾಲನ್ನು ಕರೆದಾಗ ಹಾಲಿನ ಬದಲಾಗಿ ರಕ್ತ ಸುರಿಯಲಾರಂಭಿಸಿತು, ಭಯಭೀತರಾದ ಅವರು ಎಲ್ಲಿಯೋ ಕೇಳಿ ನೋಡಿದಾಗ ಅದು ಪಂಜುರ್ಲಿಯ ಕಲ್ಲು ಎಂದು ಗೋಚರಕ್ಕೆ ಬಂದು ಇದ್ದ ಜಾಗದಲ್ಲಿಯೇ ಅದನ್ನು ಪ್ರತಿಷ್ಠೆ ಮಾಡಬೇಕೆಂದು ಕಾಣಿಸಿತು ಹೀಗೆ ಪಂಜುರ್ಲಿಯು ಕೂಡಾ ಒಂದು ಕಾಲದಲ್ಲಿ ಕಾರಣಿಕ ಮೆರೆದು ತನ್ನ ಇರುವಿಕೆಯನ್ನು ತೋರ್ಪಡಿಸಿದ್ದ.
ಇನ್ನು ಕ್ಷೇತ್ರದ ಗುಳಿಗನ ಬಗ್ಗೆ ಹೇಳಬೇಕೆಂದರೆ ಸ್ವತಃ ನನಗೆ ನೇಮದ ಸಂದರ್ಭದಲ್ಲಿ ಆಗಿದ್ದ ಅನುಭವ ಎದೆ ಜಲ್ಲೆನ್ನುವ ರೀತಿಯಲ್ಲಿತ್ತು.
ಐದು ವರ್ಷಗಳ ಹಿಂದೆ ಬೇರೆ ಕಡೆಯ ನೇಮಕ್ಕೆಲ್ಲ ಹೋಗುವುದು ಕಡಿಮೆ ಊರಿನ ಬೆರ್ಮೋಟ್ಟಿನ ಗುಳಿಗನ ನೇಮವೋ, ಮತ್ಯಾರದ್ದೋ ಮನೆಯ ನೇಮವನ್ನು ನೋಡಿದ್ದ ನನಗೆ ಗುಳಿಗ ಅಬತರ ಹೇಗಿರಬಹುದು, ಆರ್ಭಟ ಹೇಗಿರಬಹುದೆನ್ನುವ ಕುತೂಹಲ.
ಹತ್ತಿರದಲ್ಲಿ ನೋಡಬೇಕೆನ್ನುವ ಆಸೆಯಿಂದ ನಿಂತಿದ್ದಾಗ ಗುಳಿಗ ರೈಲ್ವೆ ಟ್ರ್ಯಾಕ್ ನ ಕಡೆಗೆ ಓಡುತ್ತಾನೆ ಟ್ರ್ಯಾಕ್ ನ ಮೇಲೆ ಹೋಗಿ ಕೆಳಗೆ ಇಳಿದಾಗಲೇ ಟ್ರ್ಯಾಕ್ನಲ್ಲಿ ರೈಲೊಂದು ಹಾದು ಹೋಗುತ್ತದೆ.
ಗುಳಿಗನ ಮತ್ತು ರೈಲಿನ ಅಂತರ ನೋಡುವಾಗಲೇ ಮೈ ಜುಮ್ಮೆನ್ನುತ್ತದೆ , ದೈವ ನರ್ತನ ನಡೆಸುವ ಸಂದರ್ಭದಲ್ಲೆ ಇಹಲೋಕ ತ್ಯಜಿಸಿರುವ ಒಂದೆರಡು ಘಟನೆಗಳನ್ನು ಕಂಡಿರುವ ನಮಗೆ ಇಂತಹ ಘಟನೆಗಳು ಮತ್ತೆ ಮತ್ತೆ ನೆನಪಿಗೆ ಬಂದು ಗುಳಿಗನ ಕಾರಣಿಕವು ಬಹಳಷ್ಟಿದೆ ಅನ್ನುವುದಕ್ಕೆ ಸಾಕ್ಷಿಯಾಗಿದೆ.
ಹಿಂದೆ ಕಾರಣಾಂತರಗಳಿಂದ ದೈವವನ್ನು ಬಿಟ್ಟುಹೋಗಿದ್ದ ಕುಟುಂಬ ಇದೀಗ ಬಂದಿದ್ದು, ನಿಮ್ಮೊಂದಿಗೆ ನಾವು ಕೂಡಾ ತನು -ಮನ -ಧನಗಳಿಂದ ದೈವದ ಸೇವೆಯನ್ನು ಮಾಡಲು ತಯಾರಿದ್ದೇವೆ ಎಂದು ಹೇಳಿರುವುದು, ಸಮಿತಿಗೆ ಮತ್ತು ಊರವರಿಗೆ ಆನೆಬಲ ಬಂದಂತಾಗಿದೆ.
ಸರ್ವೇ ಜನೋ ಸುಖಿನೋ ಭವಂತು...
(ವಿಶೇಷ ಸೂಚನೆ : 2023ರ ಏಪ್ರಿಲ್ 30ರಂದು ರಾತ್ರಿ 9 ಗಂಟೆಯ ನಂತರ ನೇಮ ನಡೆಯಲಿದ್ದು ತುಳುನಾಡ ಸಂಸ್ಕೃತಿಯ ಬಗ್ಗೆ ವಿಶೇಷವಾದ ಕಾಳಜಿ ಇರುವವರು, ಭಕ್ತಾದಿಗಳು ಇದನ್ನೇ ವೈಯುಕ್ತಿಕ ಆಮಂತ್ರಣ ಎಂದು ಭಾವಿಸಿ ಬರಬಹುದು)
ಬರಹ : ವಿಕ್ಕಿ ಪೂಜಾರಿ ಮಡುಂಬು
