ಕಾಪು : ಪಡು ಕುತ್ಯಾರು ಆನೆಗುಂದಿ ಮಹಾ ಸಂಸ್ಧಾನದಲ್ಲಿ ವಸಂತ ವೇದ ಶಿಬಿರಕ್ಕೆ ಚಾಲನೆ
ಕಾಪು : ಸಂಸ್ಕೃತಿ ಸಂಸ್ಕಾರವನ್ನು ಬೋಧಿಸುವ ವಸಂತ ವೇದ ಶಿಬಿರಗಳಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ, ಸಂಧ್ಯಾವಂದನೆ ವಿಧಿ ವಿಧಾನಗಳ ಶಿಬಿರವು ನಮ್ಮ ಸಮಾಜದ ಸಂಸ್ಕೃತಿಯ ಮಕ್ಕಳಿಗೆ ಪ್ರಾಥಮಿಕ ಬೋಧನೆಯನ್ನು ನೀಡುತ್ತದೆ ಎಂದು
ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಇಲ್ಲಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ವರ್ಷಂಪ್ರತಿ ನಡೆಸಲಾಗುವ ವಸಂತ ವೇದ ಶಿಬಿರವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಕ್ಕಳು ಸುಸಂಸ್ಕೃತರಾದರೆ ಮುಂದೆ ಅವರು ಸಮಾಜದ ಆಸ್ತಿಯಾಗುತ್ತಾರೆ. ಇದಕ್ಕಾಗಿ ಆ ಸಂಸ್ಥಾನದಿಂದ ಸಂಧ್ಯಾವಂದನೆಗೆ ಒತ್ತು ನೀಡಿ. ಶಿಬಿರವನ್ನು ಆಯೋಜಿಸಲಾಗಿದೆ. ಜೊತೆಗೆ ನಮ್ಮ ಸಮಾಜದ ಸಂಸ್ಕೃತಿ, ಹಬ್ಬಗಳು, ಆಚರಣೆಗಳು, ದೇವರು, ಗುರು ಪರಂಪರೆ, ಮಹಾಪುರುಷರು, ಸೇರಿದ ವಿಚಾರಗಳನ್ನು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ನುಡಿದರು.
ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ಒಡೆಯ ಹೋಬಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಬಿರದಲ್ಲಿ ದೊರೆತ ವಿಚಾರಗಳನ್ನು ಹೆತ್ತವರು ಕಾಳಜಿ ವಹಿಸಿ ಮಕ್ಕಳಿಂದ ಆಚರಣೆಗೆ ತರುವಲ್ಲಿ ಸಹಕರಿಸಬೇಕೆಂದು ವಿನಂತಿಸಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಮಂಗಳಾ ಜ್ಯುವೆಲ್ಲರ್ಸ್ ಮಾಲಕರೂ, ಕೊಡಂಕೂರು ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದ ಅಧ್ಯಕ್ಷರಾದ ಶ್ರೀಶ ಆಚಾರ್ಯ ಅಲೆಯೂರು ಮಾತನಾಡಿ ಸಂಸ್ಥಾನದಿಂದ ವರ್ಷಂಪ್ರತಿ ಶಿಬಿರವನ್ನು ನಡೆಸುತ್ತಿರುವುದು ಶ್ಲಾಘನೀಯ, ಪಂಚ ಕುಲಕಸುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವುದು ಸೂಕ್ತ ಎಂದು ಅಭಿಪ್ರಾಯಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಎಸ್ ಕೆ ಜಿ ಐ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಮಾತನಾಡಿ ಮಾನವನಾಗಿ ಜನಿಸಿದ ಮೇಲೆ ಸಂಸ್ಕಾರಯುತ ಜೀವನವನ್ನು ದಲ್ಲಿ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ವಸಂತ ವೇದ ಶಿಬಿರವು ಅತ್ಯಂತ ಸಹಕಾರಿಯಾಗಿದೆ ಎಂದರು.
ಸಮಾರಂಭದಲ್ಲಿ ಅಸೆಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಗೋವು ಪರ್ಯಾವರಣ್ ಟ್ರಸ್ಟ್ ಅಧ್ಯಕ್ಷ ಬಿ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಉಪ ಅಧ್ಯಕ್ಷ ಗುರುರಾಜ್ ಕೆ.ಜೆ ಆಚಾರ್ಯ, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ಶುಭಾ ಶಂಸನೆ ನಡೆಸಿದರು.
ಶ್ರೀ ನಾಗದರ್ಮೇಂದ್ರ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ವಿದ್ಯಾರ್ಥಿಗಳು ವೇದಘೋಷ ನಡೆಸಿದರು.
ಶಿಬಿರಾಧಿಕಾರಿ ಐ ಲೋಲಾಕ್ಷ ಆಚಾರ್ಯ ಕಟಪಾಡಿ, ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು ವಂದಿಸಿದರು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಆಯೋಜಿಸಿರುವ ವಸಂತ ವೇದ ಶಿಬಿರವು ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆ, ಆನೆಗುಂದಿ ಗುರು ಸೇವಾ ಪರಿಷತ್ತು ಕೇಂದ್ರ ಸಮಿತಿ, ಅಸೆಟ್, ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್, ಶ್ರೀ ಸರಸ್ವತೀ ಮಾತೃ ಮಂಡಳಿ ಇವುಗಳ ಸಹಕಾರದೊಂದಿಗೆ ನಡೆಯುತ್ತಿದ್ದು, 130 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ವಸಂತ ವೇದ ಶಿಬಿರದ ಸಮಾರೋಪವು ಮೇ 14 ರ ಜಗದ್ಗುರುಗಳವರ ಪಟ್ಟಾಭಿಷೇಕ ವರ್ಧಂತಿಯಂದು ನಡೆಯಲಿದೆ.
