ಧರ್ಮನಿಷ್ಠೆಯ ಪಕ್ಷಕ್ಕೆ ಬೆಂಬಲ ನೀಡಿ : ವಜ್ರದೇಹಿ
ಮಂಗಳೂರು : ಹಿಂದೂಧರ್ಮನಿಷ್ಠೆಯನ್ನು ಬೆಂಬಲಿಸುವ ಪಕ್ಷಕ್ಕೆ ಮತನೀಡುವುದರ ಮೂಲಕ ಕರ್ನಾಟಕ ರಾಜ್ಯವನ್ನು ಸುಭದ್ರಪಡಿಸಬೇಕು. ವ್ಯಕ್ತಿ ಆಧಾರಿತ ಚಿಂತನೆಯಲ್ಲಿ ಮತ ನೀಡಿದರೆ ಅದು ನಮ್ಮ ಅಭಿವೃದ್ಧಿಯನ್ನು ಹಾಳುಮಾಡಬಹುದು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಜಗತ್ತು ಇಂದು ಸಂಕಟಮಯ ಸ್ಥಿತಿಯಲ್ಲಿದೆ. ಆದರೆ ಭವ್ಯಭಾರತವಿಂದು ಸಧೃಡವಾಗಿದೆ. ಹಿಂದೂ ಧರ್ಮಾಧಾರಿತ ಆಲೋಚನೆಗಳು ಇದಕ್ಕೆ ಮುಖ್ಯ ಕಾರಣವಾಗಿದೆ. ರಾಮಮಂದಿರ ಕಾಶ್ಮೀರ 370 ವಿಧಿರದ್ಧತಿ, ಗೋಹತ್ಯಾ ನಿಷೇಧ, ಹಿಂದೂ ಧರ್ಮ ದೃಢವಾದರೆ ಎಲ್ಲಾ ಮತ, ಸಂಪ್ರದಾಯ, ಆಚರಣೆಗಳು ಸುಲಲಿತವಾಗಿ ಸಾಗುತ್ತವೆ. ಸ್ವಾರ್ಥಪರ ಚಿಂತನೆ ದೇಶ ಯಾ ರಾಜ್ಯಕ್ಕೆ ಒಳಿತು ಮಾಡದು. ಹಿಂದೂ ಧರ್ಮಕ್ಕೆ ನಿಷ್ಠವಾದ ಪಕ್ಷದ ಅಭ್ಯರ್ಥಿಗಳನ್ನು ಹಿಂದೂಧರ್ಮದ ಪುನರುತ್ಥಾನಕ್ಕಾಗಿ ಆಯ್ಕೆ ಮಾಡಿ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಮತವೆಂದೂ ಮೋಸ, ವಂಚನೆಗೊಳಗಾಗಬಾರದು. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ನಮ್ಮ ಮತ ಕರ್ನಾಟಕ ರಾಜ್ಯದ ಭದ್ರ ಬುನಾದಿಗೆ ಅಡಿಗಲ್ಲಾಗಬೇಕು. ದೇಶ ವಿಭಜಿಸುವವರು ನಮ್ಮ ಮಧ್ಯೆ ಬೆಳೆದರೆ ಕರ್ನಾಟಕ ರಾಜ್ಯ ಕಡುಬಡತನದ ಕಡೆಗೆ ಸಾಗುವುದಲ್ಲದೆ ಕೆಲವು ದೇಶಗಳು ಅತಂತ್ರಗೊಂಡ ಹಾಗೆ ನಮ್ಮ ಕರ್ನಾಟಕವೂ ನೆಲೆ ಕಳೆದುಕೊಳ್ಳಬಹುದು. ನಮ್ಮ ಸಂಘಟಿತವಾದ ವಿವೇಚನೆಯ ಮೂಲಕ ಕರ್ನಾಟಕ ರಾಜ್ಯದ ಶಾಂತಿ, ಅಭಿವೃದ್ಧಿ ಐಕ್ಯತೆಗೆ ಮತದಾನ ಕಾರಣವಾಗಬೇಕು. ಹಾಗಾಗಿ ವ್ಯಕ್ತಿಕೇಂದ್ರಿತ ಮನಸ್ಥಿತಿಗೆ ಒಗ್ಗದೆ ರಾಷ್ಟ್ರೀಯತೆಯ ಹಿಂದೂಧರ್ಮದ ಸದೃಢವಾದ ನೆಲೆಗೆ ಅಭಿವೃದ್ಧಿಪರ ಚಿಂತನೆಯ ಒಳಿತಿಗೆ ಈ ಸಲ ಮತದಾನ ಮಾಡಿ. ಹಿಂದುತ್ವದ ನೆಲೆಯನ್ನು ಭದ್ರಗೊಳಿಸಿ ದೇಶ ಹಾಗೂ ಕರ್ನಾಟಕವನ್ನು ಸುಭದ್ರಪಡಿಸಲು ಹಿಂದೂಧರ್ಮದ ಬೆಂಬಲಿತ ಪಕ್ಷವನ್ನು ಚುನಾಯಿಸಿ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಸ್ವಾಮೀಜಿ ತಿಳಿಸಿದ್ದಾರೆ.
