ಶಿರ್ವ : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ದೃಷ್ಟಿಹೀನರಿಗೆ ಸಹಾಯಕವಾಗುವ ಯಂತ್ರದ ಅಭಿವೃದ್ಧಿ
ಶಿರ್ವ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಶ್ರೇಯ ಉಡುಪ, ಸ್ನೇಹ ಜೆ ಎಸ್, ತುಳಸಿ ಡಿ ಜೆ ಮತ್ತು ಯಶವಂತ ನಾಯಕ್ ಇವರು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಚೇತನ್ ಇವರ ಮಾರ್ಗದರ್ಶನದಲ್ಲಿ “ರೋಬೋಟ್ ಅಸಿಸ್ಟೆನ್ಸ್ ಫಾರ್ ವಿಷುವಲೀ ಇಂಪೇರ್ಡ್” ಎಂಬ ಪ್ರಾಜೆಕ್ಟ್‌ನ್ನು ಅಭಿವೃದ್ಧಿ ಪಡಿಸಿರುತ್ತಾರೆ. ಈ ಪ್ರಾಜೆಕ್ಟ್‌ಗೆ ಕರ್ನಾಟಕ ಸರಕಾರದ ವೈಜ್ಞಾನಿಕ ಮತ್ತು ತಂತ್ರಜ್ಞಾನ ಮಂಡಳಿಯಿಂದ (KSCST) ಆರ್ಥಿಕ ನೆರವು ದೊರೆತಿದೆ.
ಕಣ್ಣುಗಳು ಮಾನವನ ಅತ್ಯಮೂಲ್ಯವಾದ ಅಂಗ. ದೃಷ್ಟಿಯನ್ನು ಕಳೆದುಕೊಂಡವರು ತಮ್ಮ ದಿನನಿತ್ಯದ ಚಟುವಟಿಕೆಯನ್ನು ನಡೆಸಲು ಬಹಳಷ್ಟು ಕಷ್ಟಪಡುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸಲು ವಿದ್ಯಾರ್ಥಿಗಳು ಈ ಪ್ರಾಜೆಕ್ಟ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ಈ ರೋಬೋಟ್ ಮೂಲಕ ದೃಷ್ಟಿಯನ್ನು ಕಳೆದುಕೊಂಡವರು ತಮ್ಮ ದಿನನಿತ್ಯದ ಚಟುವಟಿಕೆಗಳಿಗೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು, ವಸ್ತುಗಳನ್ನು ಗುರುತಿಸಲು ಸಹಾಯಕವಾಗಿದೆ, ಈ ರೋಬೋಟ್ ಧ್ವನಿ ಪ್ರಕ್ರಿಯೆಯನ್ನು ಒಳಗೊಂಡಿದ್ದು ಇದರ ಮೂಲಕ ದೃಷ್ಟಿಯನ್ನು ಕಳೆದುಕೊಂಡವರು ತಮ್ಮ ಕೆಲಸ ಕಾರ್ಯವನ್ನು ನಿರ್ವಹಿಸುತ್ತಾರೆ.
ವಿದ್ಯಾರ್ಥಿಗಳ ಈ ಯೋಜನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರು ಅಭಿನಂದಿಸಿರುತ್ತಾರೆ.
