ಅಕ್ರಮ ಮರಳು ಗಣಿಗಾರಿಕೆ ತಡೆಯಲು ಕಾರ್ಯಪ್ರವೃತ್ತರಾಗಿ : ತಹಶೀಲ್ದಾರ್ ರವಿ ಎಸ್ ಅಂಗಡಿ
Thumbnail
ಉಡುಪಿ : ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಮರಳು ಸಾಗಾಣಿಕೆಯನ್ನು ತಡೆಯಲು ಕ್ರಮಕೈಗೊಳ್ಳುವಂತೆ ಉಡುಪಿ ತಾಲೂಕು ತಹಶೀಲ್ದಾರ್ ರವಿ ಎಸ್ ಅಂಗಡಿ ಹೇಳಿದರು. ಅವರು ಶುಕ್ರವಾರ ಉಡುಪಿ ತಾಲೂಕು ಕಚೇರಿಯಲ್ಲಿ ಉಡುಪಿ ತಾಲೂಕು ಮರಳು ಉಪಖನಿಜ ಅಕ್ರಮ ಸಾಗಾಣಿಕೆ, ದಾಸ್ತಾನು ವಿಷಯಗಳ ಕುರಿತು ಟಾಸ್ಕ್ಫೋರ್ಸ್ ಸಮಿತಿ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಸೂಚಿಸಲಾದ ಇಲಾಖೆಗಳು ನಿಗಧಿಪಡಿಸಿದ ದಿನಗಳಂದು ಗಸ್ತು ನಡೆಸಿ, ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ವರದಿ ನೀಡುವಂತೆ ತಿಳಿಸಿದರು. ಸಭೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಕೆ.ಎಂ ರಾಜು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಾಯಕ ಪೂಜಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಿರಿಯ ಭೂ ವಿಜ್ಞಾನಿ ಅಶ್ವಿನಿ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಉಪ ತಹಶೀಲ್ದಾರ್ ಐರಿನ್ ನೊರೋಹ್ನ, ಮಲ್ಪೆ ವೃತ್ತ ನಿರೀಕ್ಷಕ ಸುರೇಶ್, ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
20 May 2023, 06:42 PM
Category: Kaup
Tags: