ಕಾರ್ಕಳ : ಕುಲಾಲ ಸಂಘ ಬೋಳ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ - ವಾರ್ಷಿಕ ಮಹಾಸಭೆ
Thumbnail
ಕಾರ್ಕಳ : ನೂರಾರು ಕುಟುಂಬಗಳ ಸದಸ್ಯರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡುವಾಗ ಒಮ್ಮತವೇರ್ಪಡದಿರುವುದು ಸಹಜ. ಆದರೆ ಉತ್ತಮ ಕಾರ್ಯ ಸಿದ್ಧಿಯಾಗಬೇಕಾದರೆ, ಇಂತಹ ಭಿನ್ನಾಭಿಪ್ರಾಯಗಳನ್ನು ಮೂಲದಲ್ಲಿಯೇ ಸರಿಪಡಿಸಿಕೊಂಡು ಏಕತೆಯಿಂದಿದ್ದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೊಸ್ಮಾರು ಕುಲಾಲ ಸಮಾಜ ಕಲ್ಯಾಣ ಸಂಘದ ಅಧ್ಯಕ್ಷ ಪ್ರಮೋದ್ ಕುಲಾಲ್ ಅಭಿಪ್ರಾಯಪಟ್ಟರು‌. ಅವರು ಕುಲಾಲ ಸಂಘ ಬೋಳದ ವತಿಯಿಂದ ಜೂ.4ರಂದು ನಡೆದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಂಭತ್ತನೇ ವರ್ಷದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು. ದೈವ ದೇವರ ಆರಾಧನೆ ಮಾತ್ರವಲ್ಲದೆ ಸೇವೆಯಲ್ಲಿಯೂ ಕುಲಾಲ ಸಮಾಜದ ಬಂಧುಗಳ ಪಾತ್ರ ಮಹತ್ವವಾದುದು. ಶ್ರದ್ಧಾ ಭಕ್ತಿಯಿಂದ, ಪ್ರಾಮಾಣಿಕತೆಯಿಂದ ದುಡಿಯುವ ಇಂತಹ ಸೇವಕರನ್ನು ಗುರುತಿಸಿ,ಗೌರವಿಸುವ ಕಾರ್ಯ ಸಮಾಜದಲ್ಲಿ ನಡೆಯಬೇಕೆಂದರು. ಸನ್ಮಾನ : ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 94.33% ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಚಿಂತನ್ ಕುಲಾಲ್ ರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕುಲಾಲ ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಮಕ್ಕಳಿಗೆ ವಸಂತಿ ಮಹಾಬಲ ಮೂಲ್ಯರ ವತಿಯಿಂದ ಪುಸ್ತಕ ವಿತರಿಸಲಾಯಿತು. ಸಂಘದ ಅಧ್ಯಕ್ಷ ಗಣೇಶ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಮಹಾಬಲ ಮೂಲ್ಯ, ಗೌರವಾಧ್ಯಕ್ಷ ವಸಂತ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪವನ್ ಕುಮಾರ್ ಸ್ವಾಗತಿಸಿ, ವರದಿ ವಾಚಿಸಿದರು. ಶ್ರೀಶಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಸಂಗೀತಾ ಕುಲಾಲ್ ವಂದಿಸಿದರು.
Additional image
05 Jun 2023, 06:19 PM
Category: Kaup
Tags: