ಉದ್ಯಾವರ : ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ
Thumbnail
ಉದ್ಯಾವರ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ (ರಿ) ಪಿತ್ರೋಡಿ, ಉದ್ಯಾವರ ಇವರ ನೇತೃತ್ವದಲ್ಲಿ ಇತ್ತೀಚಿಗೆ ನಿಧನರಾಗಿದ್ದ ಸಂಸ್ಥೆಯ ಮಾಜಿ ಅಧ್ಯಕ್ಷ, ಪ್ರಖ್ಯಾತ ಟೆನ್ನಿಸ್ ಬಾಲ್ ಕ್ರಿಕೆಟಿಗ ಸಿಎ ಮಲ್ಲೇಶ್ ಬಂಗೇರ ಇವರ ಸ್ಮರಣಾರ್ಥ ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ ನಡೆಯಿತು. ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದಿವಂಗತ ಮಲ್ಲೇಶ್ ರವರ ತಾಯಿ ಬೇಬಿ ಬಂಗೇರ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ದಿವಂಗತ ಮಲ್ಲೇಶ್ ಬಂಗೇರರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಚಿಕ್ಕ ಪ್ರಾಯದಲ್ಲಿ ಮಕ್ಕಳಿಗೆ ಹಿರಿಯರು ಸಂಸ್ಕಾರದ ಬಗ್ಗೆ ಪಾಠ ಕಲಿಸಬೇಕು. ಇದರಿಂದ ಮಕ್ಕಳು ತಪ್ಪು ದಾರಿಗೆ ಹೋಗುವುದನ್ನು ತಪ್ಪಿಸಲು ಸಾಧ್ಯ. ಯುವಕರು ಮಧ್ಯವ್ಯಸನಿ ಯಾಗದೆ ಸಮಾಜದ ಅಭಿವೃದ್ಧಿಯತ್ತ ಚಿತ್ತ ವಹಿಸಬೇಕು. ಯುವಕರಾಗಿದ್ದ ಮಲ್ಲೇಶ್ ಎಲ್ಲ ಯುವಕರಿಗೆ ಮಾದರಿ ಎಂದರು. ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ , ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ, ಸರಕಾರಿ ಪ್ರೌಢಶಾಲೆಯ ನಿಕಟ ಪೂರ್ವ ಮುಖ್ಯೋಪಾಧ್ಯಾಯನಿ ಉಮಾ ಕೃಷ್ಣ, ತಂಡದ ಗೌರವಾಧ್ಯಕ್ಷ ಗೋಪಾಲ ಅಮೀನ್, ವೆಂಕಟರಮಣ ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರಾ, ಪ್ರಮುಖರಾದ ದಿವಾಕರ ಕುಂದರ್, ನವೀನ್ ಸಾಲ್ಯಾನ್, ವಿಜಯ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು. ರಾಜ್ಯಮಟ್ಟದ ಟೆನ್ನಿಸ್ ಬಾಲ್ ವೀಕ್ಷಣೆ ವಿವರಣೆಕಾರ ವಿನಯ್ ಉದ್ಯಾವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಉಮೇಶ್ ಕರ್ಕೆರ ವಂದಿಸಿದರು. ಇದೇ ಸಂದರ್ಭದಲ್ಲಿ ಸಮನ್ವಯ ಶಿಕ್ಷಣ ಕೇಂದ್ರ ಉಡುಪಿ ಇಲ್ಲಿಯ ವಿಶೇಷ ಚೇತನ ಮಕ್ಕಳಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು.
Additional image Additional image Additional image
11 Jun 2023, 09:08 PM
Category: Kaup
Tags: