ಕುಲಾಲ ಚಾವಡಿ ವಾಟ್ಸಪ್ ಬಳಗದಿಂದ ಪುಟ್ಟ ಕಂದ ವರ್ಷಿತ್ ಕುಲಾಲ್ ಗೆ ವೈದಕೀಯ ನೆರವು
ಕಾಪು : ಹೃದಯ ಭಾರವಾದಂತೆ ತೇವಗೊಂಡ ಆ ಕಣ್ಣಂಚಲಿ ಭರವಸೆಯ ಬೆಳಕೊಂದು ಮಿಂಚಿ ಮರೆಯಾಯಿತು. ಭಾವುಕ ಮನಸ್ಸಿನಲ್ಲಿ ಭಾವೋದ್ವೇಗವು ಕಟ್ಟೆಯೊಡೆದು ಸಂತಸ, ದುಃಖ ಏಕಕಾಲಕ್ಕೆ ಪ್ರಕಟಗೊಂಡು ಗಂಟಲು ಗದ್ಗದಿತವಾಗಿ ಮಾತು ತಡವರಿಸಿತು. ಅರೆಕ್ಷಣದ ಮೌನ ಸಾವಿರ ಸಾವಿರ ಕೃತಜ್ಞತೆ ಸಲ್ಲಿಸುವ ಭಾವಕ್ಕೆ ಸಾಕ್ಷಿಯಾಯಿತು. "ಈ ನೋವಿಗಿಂತ ಮಕ್ಕಳಿಲ್ಲದ ಬದುಕೇ ಲೇಸು" ಎನ್ನುವ ಮಾತೃ ಹೃದಯದ ಅಂತರಾಳದ ನುಡಿ ಆ ಮಗುವಿನ ಆರೋಗ್ಯಕ್ಕಾಗಿ ಪಟ್ಟ ಪಡಿಪಾಟಲಿನ ತೆರೆದ ಪುಸ್ತಕವಾಯಿತು.
ಚಾವಡಿ ಬಂಧುಗಳು ಪುಟ್ಟ ಕಂದ ವರ್ಷಿತ್ ನ ಆರೋಗ್ಯಕ್ಕಾಗಿ ನಲ್ಲೂರು ಗ್ರಾಮದ ನೆಲ್ಲಿಕಾರಿನ ಪೇರಳ್ಕೆ ನಿವಾಸಿ ಜಯಶ್ರೀಯವರ ಮನೆಯಂಗಳ ತಲುಪಿದಾಗಿನ ಕ್ಷಣದ ಭಾವನಾತ್ಮಕ ಸನ್ನಿವೇಶದ ತುಣುಕಿದು.
ಆ ತಾಯಿ ಪಟ್ಟ ಬವಣೆಗಳೆಲ್ಲಾ ಪದಗಳಾಗಿ ವೇದನೆಯ ನುಡಿಗಳಾದಾಗ ಮೌನವಾಗಿ ತಲೆ ಅಲ್ಲಾಡಿಸುವ ಸರದಿ ನಮ್ಮದು. ಒಂದು ವರ್ಷ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಚಿಕಿತ್ಸೆಯನ್ನೇ ನಿಲ್ಲಿಸಿದ್ದೆವು ಎನ್ನುವ ಆ ತಾಯಿಯ ಅಸಹಾಯಕತೆಯ ಮಾತಿನಲ್ಲಿ ಸ್ಪಷ್ಟವಾದ ಪಶ್ಚಾತ್ತಾಪದ ಛಾಯೆಯಿತ್ತು. ಗಂಡು ದಿಕ್ಕಿಲ್ಲದ ಸಂಸಾರದ ನೊಗಕ್ಕೆ ಹೆಗಲು ಕೊಟ್ಟು ತನ್ನೆಲ್ಲ ಹರೆಯದ ಆಸೆ ಆಕಾಂಕ್ಷೆಗಳ ಬದಿಗಿರಿಸಿ ದೇವರು ಕೊಟ್ಟ ಕರುಳ ಕುಡಿಯ ಆರೋಗ್ಯಕ್ಕೆ ಸರ್ವವನ್ನೂ ತ್ಯಾಗ ಮಾಡಿದ ಆ ಮಾತೃ ಹೃದಯದ ಕೂಗು ಕೊನೆಗೂ ಆ ಭಗವಂತನ ಬಡಿದೆಬ್ಬಿಸಿದೆ. ಪರಿಣಾಮ ಸತತ ಐದು ವರ್ಷಗಳ ನಿರಂತರವಾದ ಅವರ ಶ್ರಮ ಫಲಿಸಿದೆ. ಸದ್ಯದ ಸ್ಥಿತಿಯಲ್ಲಿ ಮಗುವಿನ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಆಗುತ್ತಿದ್ದು ಗಳಿಗೆಗೊಮ್ಮೆ ಅಪಸ್ಮಾರದ ಪ್ರಭಾವಕ್ಕೆ ಮೈ ಸುರುಟಿ ಕೊಳ್ಳುತ್ತಿದ್ದ ಮಗುವಿನಲ್ಲಿ ಬಹುತೇಕ ಈ ಲಕ್ಷಣಗಳು ಕಾಣುತ್ತಿಲ್ಲ. ಶಬ್ದ ಮತ್ತು ಸ್ಪರ್ಶದ ಅರಿವಿಲ್ಲದೆ ಜಡತ್ವದ ಸ್ಥಿತಿಯಲ್ಲಿದ್ದ ಮಗು ಈಗ ಒಂದೆರಡು ಚಹರೆಗಳ ಗುರುತಿಸಿ ಕಿರುನಗುವ ಬೀರುತ್ತಿದೆ. ಇದನ್ನು ಕಾಣುತ್ತಿರುವ ಆ ತಾಯಿಯಲ್ಲೂ ಭರವಸೆಯ ಧೃಡ ಹೆಜ್ಜೆಗಳು ಮತ್ತಷ್ಟು ಬಲಗೊಳ್ಳತೊಡಗಿವೆ.
ಚಾವಡಿ ಬಂಧುಗಳ ನೂರು,ಇನ್ನೂರಿಂದ ಪ್ರಾರಂಭಗೊಂಡ ಅಂತರಾಳದ ಹಾರೈಕೆ ನೂರು ಪ್ರತಿಶತ ಸಾರ್ಥಕ್ಯ ಪಡೆಯಿತು ಎಂಬ ಭರವಸೆ ತುಂಬಿದ ಆ ಕ್ಷಣಕ್ಕೆ ಸಾಕ್ಷಿಯಾದ ಸಂತೃಪ್ತಿ ಒಂದೆಡೆಯಾದರೆ ಸಂಕಷ್ಟಗಳಿಂದ ಜೀವಕೋಟಿ ಮುಕ್ತವಾಗಲಿ "ಲೋಕಾ ಸಮಸ್ತ ಸುಖಿನೋ ಭವಂತು" ಎನ್ನುವುದೇ ಭಗವಂತನಲ್ಲಿ ನಮ್ಮ ನಿತ್ಯ ಪ್ರಾರ್ಥನೆ. ವರ್ಷಿತ್ ನ ಚಿಕಿತ್ಸಾ ವೆಚ್ಚವಾಗಿ ಒಗ್ಗೂಡಿದ ₹57865/-ರೂ ಗಳಲ್ಲಿ ₹57000/-ವನ್ನು ವರ್ಷಿತ್ ತಾಯಿಗೆ ನೀಡಲಾಗಿದೆ.
ಕುಲಾಲ ಚಾವಡಿಯು "ಅಶಕ್ತರ ಆಶಾದೀಪ ಮಾನವೀಯತೆಯ ವಿಶ್ವರೂಪ" ಎಂಬ ಘೋಷವಾಕ್ಯದಡಿ ಒಂದು ಸಂತುಲಿತ ತಂಡವಾಗಿ ಕಾರ್ಯನಿರ್ವಹಿಸುವ ಮೂಲಕ ಜವಾಬ್ದಾರಿ ಮೆರೆದಿದೆ.
