ಕಾಪು : ಈ ಮೀಡಿಯಾ ಕನ್ನಡ ನ್ಯೂಸ್ ವೆಬ್ ಪೋರ್ಟಲ್ ಲೋಕಾರ್ಪಣೆ
ಕಾಪು : ಸುದ್ದಿಯ ಧಾವಂತದ ಈ ಕಾಲಘಟ್ಟದಲ್ಲಿ ನಮ್ಮ ಸುತ್ತಮುತ್ತಲಿನ, ದೇಶ, ವಿದೇಶದ ಸುದ್ದಿಗಳು ನಮ್ಮನ್ನು ಕ್ಷಣ ಮಾತ್ರದಲ್ಲಿ ತಲುಪುತ್ತಿವೆ. ಸುದ್ದಿಯು ಸಾಮಾಜಿಕ ಬದಲಾವಣೆಯ ಜೊತೆಗೆ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮಾಧ್ಯಮವಾದಾಗ ಮಾತ್ರ ಜನರ ಮನಸ್ಸು ಗೆಲ್ಲಲು ಸಾಧ್ಯ. ಮುಂದಿನ ದಿನಗಳಲ್ಲಿ ಈ ಮೀಡಿಯಾ ಕನ್ನಡ ಸಂಸ್ಥೆಯು ಕೂಡ ಜನಮನ ಗೆಲ್ಲಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿದರು.
ಅವರು ಕಾಪುವಿನಲ್ಲಿ ಜರಗಿದ ಈ ಮೀಡಿಯಾ ಕನ್ನಡ ವೆಬ್ ಪೋರ್ಟಲ್ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ, ಸಂಸ್ಥೆಯ ಲೋಗೋ ಅನಾವರಣಗೊಳಿಸಿ ಮಾತನಾಡಿದರು.
ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಊರಿನ ಸುದ್ದಿ ಮಾಧ್ಯಮಗಳ ಜೊತೆಗೆ ಮುಂಬಯಿಯಲ್ಲಿ ಪ್ರಸಾರಿತ ಪತ್ರಿಕೆಯಲ್ಲಿ ದುಡಿಯುತ್ತಿರುವ ಅನುಭವಿ ಹಿರಿಯ ಪತ್ರಕರ್ತ ಬಾಲಕೃಷ್ಣ ಪೂಜಾರಿಯವರು ಅಂತರ್ಜಾಲದಲ್ಲಿಯೂ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಈ ಮೀಡಿಯಾ ಕನ್ನಡ ಸಂಸ್ಥೆಗೆ ಶುಭಹಾರೈಸಿದರು.
ಈ ಸಂದರ್ಭ ಉಡುಪಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಕೋಶಾಧಿಕಾರಿ ಷರೀಫ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯದ ಅಧ್ಯಕ್ಷರಾದ ವಿನೋದ್ ಕಾಂಚನ್, ಗೀತಾ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಈ ಮೀಡಿಯಾ ಕನ್ನಡ ವೆಬ್ ಪೋರ್ಟಲ್ ಆಡಳಿತ ನಿರ್ದೇಶಕರಾದ ಬಾಲಕೃಷ್ಣ ಪೂಜಾರಿ ಉಚ್ಚಿಲ ವಹಿಸಿದ್ದರು.
ಬಾಲಕೃಷ್ಣ ಪೂಜಾರಿ ಉಚ್ಚಿಲ ಸ್ವಾಗತಿಸಿದರು. ವಿಜಯ ಆಚಾರ್ಯ ಉಚ್ಚಿಲ ನಿರೂಪಿಸಿ, ಶ್ರೀನಿವಾಸ್ ಐತಾಳ್ ವಂದಿಸಿದರು.
