ಬಂಟಕಲ್ಲು : ವಿದ್ಯಾರ್ಥಿಗಳಿಗೆ ಅಭಿನಂದನೆ ; ವನಮಹೋತ್ಸವ ಆಚರಣೆ
Thumbnail
ಬಂಟಕಲ್ಲು : ಶಾಲಾ ಜೀವನದಲ್ಲಿ ಪಾಠದೊಂದಿಗೆ ನಮ್ಮ ಸಂಸ್ಕೃತಿ ಆಚಾರ ವಿಚಾರವನ್ನು ಸಮಗ್ರವಾಗಿ ಅರಿತು ಮುನ್ನಡೆದರೆ ಓರ್ವ ವಿದ್ಯಾರ್ಥಿ ಉತ್ತಮ ಗುಣಮಟ್ಟದ ಪ್ರಜೆಯಾಗಿ ಬೆಳೆಯಬಲ್ಲ ಎಂದು ಹೇರೂರು ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿಯ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿಯವರು ಹೇಳಿದರು. ಅವರು ಬಂಟಕಲ್ಲು ಆಟೋರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ವಿಕಾಸ ಸೇವಾ ಸಮಿತಿ ಮತ್ತು ಮಹಿಳಾ ಬಳಗ ಹೇರೂರು ಹಾಗೂ ಹೇರೂರು ಫ್ರೆಂಡ್ಸ್ ಇದರ ವತಿಯಿಂದ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 16 ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಈ ಸಂದರ್ಭ ಹಿರಿಯ ಕೃಷಿ ಕಾರ್ಮಿಕೆ ಲೀಲಾವತಿ ಅಚ್ಚುತ ಆಚಾರ್ಯ ಇವರನ್ನು ಭಜನಾ ಮಂಡಳಿಯ ಮಹಿಳಾ ಬಳಗದ ಅಧ್ಯಕ್ಷೆ ಸುಂದರಿ ರಾವ್ ಸನ್ಮಾನಿಸಿ, ಹಿರಿಯರನ್ನು ಗುರುತಿಸಿ ಗೌರವಿಸುವುದು ಯುವ ಪೀಳಿಗೆಗೆ ಮಾರ್ಗದರ್ಶಿತ್ವದ ಸಂದೇಶ ಕೊಡುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವನಮಹೋತ್ಸವ ಕಾರ್ಯಕ್ರಮವನ್ನು ಹಿರಿಯ ಉದ್ಯಮಿ ದೇವದಾಸ್ ಜೋಗಿ ಅವರು ಸಸಿ ವಿತರಿಸುವ ಮೂಲಕ ಉದ್ಘಾಟಿಸಿದರು. ಉಮೇಶ್ ಪ್ರಭು ರವರು ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉತ್ತಮವಾಗಿ ಬೆಳೆದು ಮಾತೃಭೂಮಿಗೆ ಉತ್ತಮ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಹೇರೂರು ಫ್ರೆಂಡ್ಸ್ ಕಾರ್ಯದರ್ಶಿ ಕುಮಾರಿ ದೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ವರ್ಷಿಣಿ ಪ್ರಾರ್ಥಿಸಿದರು. ಡೇನಿಸ್ ಡಿಸೋಜಾ ಸ್ವಾಗತಿಸಿದರು. ವಿಕಾಸ ಸೇವಾ ಸಮಿತಿ ಅಧ್ಯಕ್ಷ ಮಾಧವ ಆಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ದಿವ್ಯ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ಗೌರವಾಧ್ಯಕ್ಷ ಮಾಧವ ಕಾಮತ್, ಹೇರೂರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಜೋಗಿ ಸಹಕರಿಸಿದ್ದರು.
25 Jul 2023, 10:21 AM
Category: Kaup
Tags: