ಪಡುಬಿದ್ರಿ ರೋಟರಿ ಪದಗ್ರಹಣ ಕಾರ್ಯಕ್ರಮ ; ನೂತನ ಅಧ್ಯಕ್ಷರಾಗಿ ಸಂತೋಷ್ ಪಡುಬಿದ್ರಿ
ಪಡುಬಿದ್ರಿ : ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಸಮಾಜಮುಖಿ ಚಿಂತನೆಯ ಜೊತೆಗೆ ಸರ್ವರ ಹಿತ ಬಯಸುವ ಕಾಯಕದೊಂದಿಗೆ,
ಲಿಂಗ ತಾರತಮ್ಯವಿಲ್ಲದೆ ಮಹಿಳೆಯರಿಗೂ ಸಮಾನ ಹಕ್ಕನ್ನು ನೀಡಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ್ ಅದಿರಾಜ್ ಹೇಳಿದರು.
ಅವರು ಪಡುಬಿದ್ರಿಯ ಸುಜಾತಾ ಅಡಿಟೋರಿಯಂನಲ್ಲಿ ಪಡುಬಿದ್ರಿ ರೋಟರಿಯ 2023-24ನೇ ಸಾಲಿನ ಪದಗ್ರಹಣ ಸಮಾರಂಭ ದಲ್ಲಿ ಪದಪ್ರದಾನ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.
ರೋಟರಿ ಜಿಲ್ಲೆ 3182ನ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಕೆ. ರೋಟರಿ ಪಡುಬಿದ್ರಿಯ ಗೃಹಪತ್ರಿಕೆ 'ಸ್ಪಂದನ'ವನ್ನು ಬಿಡುಗಡೆಗೊಳಿಸಿದರು.
ಬಿಎಸ್‌ಎಫ್‌ನ ನಿವೃತ್ತ ಸಹಾಯಕ ಕಮಾಂಡರ್ ಪಿ.ಎ. ಮೊಯ್ದಿನ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಸಾಮಾಜಿಕ ಕಾರ್ಯಕರ್ತ ಮಹೇಶ್ ಅಮೀನ್ ಅವರನ್ನು ಸನ್ಮಾನಿಸಲಾಯಿತು.
ದಿ. ವೈ. ಹಿರಿಯಣ್ಣ ಹಾಗೂ ದಿ. ಮೀರಾ ಹಿರಿಯಣ್ಣ ಸ್ಮರಣಾರ್ಥ ರೋಲಿಂಗ್ ಶೀಲ್ಡನ್ನು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದ ಸಾಗರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಪಡುಬಿದ್ರಿ ರೋಟರಿ ಕ್ಲಬ್‌ನ ಸ್ಥಾಪಕಾಧ್ಯಕ್ಷ ವೈ. ಸುಧೀರ್ ಕುಮಾರ್ ಹಸ್ತಾಂತರಿ ಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಂದನಾ ರೈ, ರೋಟರಿ ವಲಯ ಸೇನಾನಿ ರಿಯಾಜ್ ನಝೀರ್ ಸಾಹೇಬ್, ನಿಕಟ ಪೂರ್ವ ಅಧ್ಯಕ್ಷೆ ಗೀತಾ ಅರುಣ್, ನೂತನ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷೆ ಗೀತಾ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಜ್ಯೋತಿ ಮೆನನ್ ವರದಿ ವಾಚಿಸಿದರು. ಯಶೋದಾ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿದರು.
